ನವದೆಹಲಿ : ಜುಲೈ ೧೮ರ ಬೆಳಿಗ್ಯೆ ಮಫ್ತಿಯಲ್ಲಿದ್ದ ದಿಲ್ಲಿ ಪೋಲೀಸರು ಜಂತರ್ ಮಂತರ್ ನಲ್ಲಿ ಸೋನಂ ವಾಗ್ಚುಕ್ ಮತ್ತು ನಾಲ್ಕು ವಿದ್ಯಾರ್ಥಿಗಳು ಉಪವಾಸ ಮುಷ್ಕರ ನಡೆಸುತ್ತಿದ್ದ ವೇದಿಕೆಗೆ ಬಲವಾಗಿ ನುಗ್ಗಿ ಅವರ ಸುತ್ತ ಬಿಳಿ ಬಟ್ಟೆಯನ್ನು ಅಡ್ಡಹಿಡಿದು, ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಬಲವಂತವಾಗಿ ಆಂಬುಲೆನ್ಸ್ಗೆ ಕರೆದೊಯ್ದು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಅತ್ತ ಶಿಕ್ಷಣ ಮಂತ್ರಿಗಳ ರಾಜೀನಾಮೆ ಆಗ್ರಹಿಸಿ ನಡೆಯುತ್ತಿರುವ ವಿದ್ಯಾರ್ಥಿ ಚಳುವಳಿಯ ಮುಖಂಡ ಅಭಿಜಿತ್ ದೀಪ್ಕೆಯವರನ್ನೂ ಜಂತರ್ ಮಂತರ್ಗೆ ಹೋಗದಂತೆ ತಡೆದು ದಿಲ್ಲಿ ಪೊಲಿಸ್ ನಂತರ ಅವರನ್ನು ಬಿಡುಗಡೆ ಮಾಡಿದರು, ಜಂತರ್ ಮಂತರ್ ತಲುಪಿದ ದೀಪ್ಕೆ, “ದಿಲ್ಲಿ ಪೊಲಿಸ್ ಇಂದು ಇಷ್ಟೊಂದು ನೀಚ ಕೃತ್ಯಕ್ಕೆ ಇಳಿದಿದ್ದಾರೆ” ಎಂದು ಖಂಡಿಸುತ್ತ ಈಗ ಅನಿರ್ದಿಷ್ಟ ಉಪವಾಸ ಮುಷ್ಕರ ಆರಂಭಿಸಿದ್ದಾರೆ ಎಂದೂ ವರದಿಯಾಗಿದೆ.
ಸುದ್ದಿ ಕೇಳಿ ಜಂತರ್ಮಂತರ್ಗೆ ಧಾವಿಸಿದ ಬೃಂದಾ ಕಾರಟ್ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳಿಗೆ ಸೌಹಾರ್ದ ವ್ಯಕ್ತಪಡಿಸುತ್ತ ಈ ದಸ್ತಗಿರಿ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಮೌಲ್ಯಗಳ ಮೇಲೆ ಗೃಹ ಮಂತ್ರಿ ಅಮಿತ್ ಷಾ ನಿರ್ದೇಶನದಲ್ಲಿ ಬುಲ್ಡೋಜರ್ ಹತ್ತಿಸುವ ಕೃತ್ಯ ಎಂದು ಖಂಡಿಸಿದ್ದಾರೆ. ಇದು ದೇಶದಲ್ಲಿ ಸರ್ವಾಧಿಕಾರಶಾಹಿಯ ಸ್ಪಷ್ಟ ಸಂಕೇತ. ಈ ಸರಕಾರ ಉತ್ತರದಾಯಿತ್ವದ ತತ್ವದ ಮೇಲೆ ಬುಲ್ಡೋಜರ್ ಹತ್ತಿಸುತ್ತಿದೆ. ಇಲ್ಲಿರುವ ಮುಖ್ಯ ಪ್ರಶ್ನೆಯೆಂದರೆ ಸರಕಾರದ ಉತ್ತರದಾಯಿತ್ವ, ಅದಕ್ಕಾಗಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಎಂದು ಬೃಂದಾ ಕಾರಟ್ ಮುಂದುವರೆದು ಹೇಳಿದರು.
“ ದಿಲ್ಲಿ ಪೊಲಿಸ್ ಸೋನಮ್ ವಾಂಗ್ಚುಕ್ ಮತ್ತು ಅಭಿಜಿತ್ ದಿಪ್ಕೆಯವರನ್ನು ದಸ್ತಗಿರಿ ಮಾಡಿರುವುದನ್ನು ಬಲವಾಗಿ ಖಂಡಿಸುತ್ತೇನೆ. ಯಾವ ಶಿಕ್ಷಣ ಮಂತ್ರಿಯ ಮೂಗಿನ ಕೆಳಗೇ ಪ್ರಶ್ನೆ ಪತ್ರಿಕೆಗಳ ಸೋರಿಕೆಯ ಹಗರಣ ನಡೆಯುತ್ತಿದೆಯೋ ಆತನನ್ನು ವಜಾ ಮಾಡುವ ಬದಲು ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಗೆಡವುತ್ತಿರುವ ವ್ಯವಸ್ಥೆಯನ್ನು ಕಳಚಿ ಹಾಕುವ ಬದಲು ಈ ಸರಕಾರ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಬ್ಬಾಳಿಕೆ ನಡೆಸುತ್ತಿದೆ. ಇದು ಮೋದಿ ಸರಕಾರದ ಸರ್ವಾಧಿಕಾರಶಾಹಿ ನಿಲುವನ್ನು ಪ್ರದರ್ಶಿಸುತ್ತದೆ” ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಮೊದಲು, ಜುಲೈ ೧೭ರಂದು ಸೋನಮ್ ವಾಂಗ್ಚುಕ್ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್ಬ್ಯುರೊ ಕಳವಳ ವ್ಯಕ್ತಪಡಿಸುತ್ತ ಜುಲೈ ೨೦ರಂದು ದೇಶವ್ಯಾಪಿ ಸೌಹಾರ್ದ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ತನ್ನ ಘಟಕಗಳಿಗೆ ಮತ್ತು ಕಾಳಜಿಯಿರುವ ನಾಗರಿಕರಿಗೆ ಕರೆ ನೀಡಿತ್ತು.
ಪ್ರತಿಭಟನಾ ನಿರತ ನಾಯಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಕೇಂದ್ರ ಸರ್ಕಾರ ನಿರಾಕರಿಸಿರುವುದು ಅದರ ಸಂವೇದನಾಶೂನ್ಯತೆ ಮತ್ತು ಸರ್ವಾಧಿಕಾರಶಾಹೀ ಸ್ವಭಾವವನ್ನು ಎತ್ತಿ ತೋರಿಸುತ್ತದೆ. ಸೋರಿಕೆಯಿಲ್ಲದ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಸರ್ಕಾರದ ವಿಫಲತೆಯ ಬೇರುಗಳು ಅದರ ರಾಷ್ಟ್ರೀಯ ಶಿಕ್ಷಣ ನೀತಿ, ಎನ್ಇಪಿ 2020 ರಲ್ಲಿವೆ. ಎನ್ಇಪಿ ಉತ್ತೇಜಿಸುವ ಶಿಕ್ಷಣ ವ್ಯವಸ್ಥೆಯ ಕೇಂದ್ರೀಕರಣ ಮತ್ತು ವ್ಯಾಪಾರೀಕರಣವು ಪರೀಕ್ಷಾ ತರಬೇತಿ ಉದ್ಯಮವು ನಾಯಿಕೊಡೆಯಂತೆ ಬೆಳೆಯಲು ಕಾರಣವಾಗುತ್ತಿದೆ. ಕೋಮುವಾದೀಕರಣದ ಜೊತೆಗೆ, ಇದು ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಎಲ್ಲಾ ರೀತಿಗಳ ಅಕ್ರಮಗಳಿಗೆ ಮೂಲ ಕಾರಣವಾಗಿದೆ ಎಂದಿರುವ ಸಿಪಿಐ(ಎಂ) ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಬೇಕು, ಎನ್ಟಿಎ ಮತ್ತು ಎನ್ಇಪಿ 2020 ಅನ್ನು ರದ್ದುಗೊಳಿಸಬೇಕು ಎಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿತ್ತು..
ಜೂನ್ ೨೯ ರಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ ಮತ್ತು ಹಿರಿಯ ಮುಖಂಡರಾದ ಬೃಂದಾ ಕಾರಟ್ ಜಂತರ್ಮಂತರ್ ಗೆ ಭೇಟಿ ನIಡಿ ಉಪವಾಸ ಮುಷ್ಕರದಲ್ಲಿರುವ ಸೋನಮ್ ವಾಂಗ್ಚುಕ್ ರನ್ನು ಮತ್ತು ಕಾಕ್ರೋಚ್ ಜನತಾ ಪಾರ್ಟಿಯ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾರನ್ನು ಭೇಟಿ ಮಾಡಿ ಕೇಂದ್ರ ಶಿಕ್ಷಣ ಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿತ್ತಿರುವ ವಿದ್ಯಾರ್ಥಿ-ಯುವಜನ ಚಳುವಳಿಗೆ ಸಿಪಿಐ(ಎಂ)ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ಸೋನಂ ವಾಂಗ್ಚುಕ್ ಉಪವಾಸ : ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದ ದಿಲ್ಲಿ ಪೊಲಿಸ್- ಕೇಂದ್ರದ ವಿರುದ್ಧ ವಿಪಕ್ಷಗಳ ಆಕ್ರೋಶ
“ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಗೌರವದ ದಾರಿ”
ಕೇಂದ್ರ ಶಿಕ್ಷಣ ಮಂತ್ರಿಗಳಿಗೆ ಪ್ರತಿಷ್ಠಿತ ವಿದ್ವಾಂಸರ ಬಹಿರಂಗ ಪತ್ರ
ನೀಟ್ ಮತ್ತು ಇತರ ಪರೀಕ್ಷೆಗಳ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯಗಳಿಗೆ ನೈತಿಕ ಜವಾಬ್ದಾರಿಯನ್ನು ಹೊತ್ತುಕೊಂಡು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅದು ಗೌರವಾನ್ವಿತ ಕೃತ್ಯವಾಗಿರುತ್ತದೆ, ಇಲ್ಲವಾದರೆ ಅಮೂಲ್ಯವಾದ ಜೀವಗಳನ್ನು ಬಲಿಕೊಟ್ಟು ಹುದ್ದೆಗೆ ಅಂಟಿಕೊಂಡವರೆಂಬ ಅಗೌರವ ತಟ್ಟುತ್ತದೆ ಎಂದು ಹಲವು ಪ್ರತಿಷ್ಠಿತ ವಿದ್ವಾಂಸರು ಮತ್ತು ಸಾಮಾಜಿಕ ಕಾರ್ಯಕರ್ತರು ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ.
“ನಿಮಗೆ ಚಿರಪರಿಚಿತರಾಗಿರುವ ಶಿಕ್ಷಣ ಮತ್ತು ಪರಿಸರ ಕಾರ್ಯಕರ್ತ ಶ್ರೀ ಸೋನಮ್ ವಾಂಗ್ಚುಕ್, ನೀಟ್ ಮತ್ತು ಇತರ ಪರೀಕ್ಷೆಗಳ ನಿರ್ವಹಣೆಯಲ್ಲಿನ ಅವ್ಯವಸ್ಥೆಗಳಿಗೆ ಸರ್ಕಾರದಿಂದ ಉತ್ತರದಾಯಿತ್ವವನ್ನು ಕೋರಿ ಕಳೆದ ಇಪ್ಪತ್ತು ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ ಮತ್ತು ಈ ಉತ್ತರದಾಯಿತ್ವದ ಸಂಕೇತವಾಗಿ ಶಿಕ್ಷಣ ಸಚಿವ ಸ್ಥಾನಕ್ಕೆ ನಿಮ್ಮ ರಾಜೀನಾಮೆ ಕೇಳಿದ್ದಾರೆ. ಅವರು ಸುಮಾರು ಹತ್ತು ಪೌಂಡ್ಗಳನ್ನು ಕಳೆದುಕೊಂಡಿದ್ದಾರೆ ಮತ್ತು ದೇಶಕ್ಕೆ ಅತ್ಯಂತ ಅಮೂಲ್ಯವಾದ ಅವರ ಜೀವವು ಅಪಾಯದಲ್ಲಿದೆ. ಅನೇಕ ವಿದ್ಯಾರ್ಥಿಗಳೂ ಉಪವಾಸ ಮುಷ್ಕರದಲ್ಲಿದ್ದಾರೆ.ಅವರ ಜೀವಗಳೂ ಅಪಾಯದಲ್ಲಿವೆ” ಎಂದು ಅವರು ತಮ್ಮ ಪತ್ರದಲ್ಲಿ ಗಮನ ಸೆಳೆದಿದ್ದಾರೆ.
“ಅವರಿಗೆ ಏನಾದರೂ ಸಂಭವಿಸಿದರೆ, ಮುಂದಿನ ಪೀಳಿಗೆಯು ನಿಮ್ಮನ್ನು ಅದಕ್ಕೆ ನೇರ ಹೊಣೆಗಾರರನ್ನಾಗಿ ಮಾಡುತ್ತದೆ ಮತ್ತು ಅಮೂಲ್ಯವಾದ ಜೀವಗಳನ್ನು ಬಲಿಕೊಡುವ ಮೂಲಕ ಹುದ್ದೆಗೆ ಅಂಟಿಕೊಂಡ ನಿಮ್ಮ ನಡವಳಿಕೆ ಸಂಪೂರ್ಣವಾಗಿ ಅಗೌರವದ ಸಂಗತಿ ಎಂದು ಪರಿಗಣಿಸುತ್ತದೆ. ಮತ್ತೊಂದೆಡೆ, ಸರ್ಕಾರದ ವೈಫಲ್ಯಗಳಿಗೆ ನೈತಿಕ ಜವಾಬ್ದಾರಿಯನ್ನು ಹೊತ್ತುಕೊಂಡು ನೀವು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅದು ಗೌರವಾನ್ವಿತ ಕೃತ್ಯವಾಗುತ್ತದೆ. ನೀವು ರಾಜೀನಾಮೆ ನೀಡದೆ ನಿಮ್ಮ ಪಕ್ಷ ಮತ್ತು ಸರ್ಕಾರದ ನಿರ್ದೇಶನವನ್ನು ಅನುಸರಿಸುತ್ತಿದ್ದೀರಿ ಎಂದು ನಂಬಿರಬಹುದು, ಆದರೆ ಅಂತಿಮವಾಗಿ, ಯಾರೂ ತಮ್ಮ ಸ್ವಂತ ಕ್ರಿಯೆಗಳಿಗೆ ನೈತಿಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಗೌರವಾರ್ಹ ದಾರಿಯನ್ನು ಅನುಸರಿಸಬೇಕು, ಸರ್ಕಾರದ ವೈಫಲ್ಯಗಳಿಗೆ ನೈತಿಕ ಹೊಣೆ ಹೊತ್ತುಕೊಂಡು ನಿಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಶ್ರೀ ವಾಂಗ್ಚುಕ್ ಮತ್ತು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಆದರ್ಶವಾದಿ ವಿದ್ಯಾರ್ಥಿಗಳ ಜೀವಗಳನ್ನು ಉಳಿಸಬೇಕು ಎಂದು ನಾವು ನಿಮ್ಮನ್ನು ಆಗ್ರಹಿಸುತ್ತೇವೆ” ಎಂದು ಈ ಪ್ರತಿಷ್ಠಿತ ವ್ಯಕ್ತಿಗಳು ತಮ್ಮ ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ.
ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು ಮತ್ತು ಪ್ರಸಿದ್ಧ ಇತಿಹಾಸಕಾರರಾದ ಪ್ರೊ. ರೊಮಿಲಾ ಥಾಪರ್, ಪ್ರಸಿದ್ಧ ಅರ್ಥಶಾಸ್ತ್ರಜ್ಞ ಪ್ರೊ. ಪ್ರಭಾತ್ ಪಟ್ನಾಯಕ್, ಜಾನ್ ದಯಾಳ್, ಬರಹಗಾರರು ಮತ್ತು ಕಾರ್ಯಕರ್ತರು, ಜೆಎನ್ಯು ನ ನಿವೃತ್ತ ಪ್ರಾಧ್ಯಾಪಕರುಗಳಾದ ಪ್ರೊ.ಸುನಂದ ಸೇನ್, ಪ್ರೊ.ಉತ್ಸಾ ಪಟ್ನಾಯಕ್, ಪ್ರೊ.ಜೋಯಾ ಹಸನ್, ,ಡಾ.ಸಿ.ಪಿ. ಚಂದ್ರಶೇಖರ್, ಪ್ರೊ.ನೀರಾ ಚಾಂದೋಕ್, ನಿವೃತ್ತ ಪ್ರೊಫೆಸರ್, ದೆಹಲಿ ವಿಶ್ವವಿದ್ಯಾಲಯ ಮತ್ತು ಹರ್ಷ್ ಮಂದರ್, ಬರಹಗಾರರು ಮತ್ತು ಕಾರ್ಯಕರ್ತರು ಈ ಬಹಿರಂಗ ಪತ್ರವನ್ನು ಬರೆದಿದ್ದಾರೆ.
ಇದನ್ನೂ ನೋಡಿ : ಮಫ್ತಿ ಪೊಲೀಸರ ಕಾರ್ಯಾಚರಣೆ! ಸೋನಂ ವಾಂಗ್ಚುಕ್ರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ ಕೇಂದ್ರದ ವಿರುದ್ಧ ಆಕ್ರೋಶ
