ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಜೊತೆ ಗುರುತಿಸಿಕೊಂಡಿರುವ 20 ಲೋಕಸಭಾ ಸಂಸದರು ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಡೆದ ‘ಮಂಗಲ್ ಮಿಲನ್’ ಸಭೆಯಲ್ಲಿ ಎನ್‌ಸಿಪಿಐ ಸಂಸದರು ಪಾಲ್ಗೊಂಡಿರುವುದು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಎನ್‌ಡಿಎ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಮೊದಲ ಸಭೆ ಇದಾಗಿದ್ದು, ಸಭೆಗೆ ಎನ್‌ಸಿಪಿಐಯ 20 ಸಂಸದರನ್ನು ಆಹ್ವಾನಿಸಲಾಗಿತ್ತು. ಈ ಮೂಲಕ ಟಿಎಂಸಿಯಿಂದ ಬಂಡಾಯವೆದ್ದು ಹೊಸ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಸಂಸದರು ಎನ್‌ಡಿಎ ವೇದಿಕೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.
ಸಭೆಯ ಬಳಿಕ ಎನ್‌ಸಿಪಿಐ ಸಂಸದೆ ಸಯೋನಿ ಘೋಷ್ ಸುದ್ದಿಗಾರರೊಂದಿಗೆ ಮಾತನಾಡಿ, ಮುಕ್ತ ವ್ಯಾಪಾರ ಒಪ್ಪಂದಗಳು (ಎಫ್‌ಟಿಎ), ದೇಶದ ಪ್ರಗತಿ ಹಾಗೂ ಇತರ ಪ್ರಮುಖ ವಿಚಾರಗಳ ಕುರಿತು ಸಕಾರಾತ್ಮಕ ಮತ್ತು ಅರ್ಥಪೂರ್ಣ ಚರ್ಚೆ ನಡೆದಿದೆ ಎಂದು ಹೇಳಿದರು.
ಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವ ನಿಟ್ಟಿನಲ್ಲಿ ತರಲಾಗಿರುವ ‘ಸಾರ್ವಜನಿಕ ಪರೀಕ್ಷೆ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ–2026’ ಕುರಿತೂ ಚರ್ಚೆ ನಡೆದಿದೆ.
ಎಲ್ಲ ಸಂಸದರೂ ಈ ಮಸೂದೆಯನ್ನು ಬೆಂಬಲಿಸಬೇಕು ಎಂದು ಸಯೋನಿ ಘೋಷ್ ಕರೆ ನೀಡಿದರು. ದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರಶ್ನೆಪತ್ರಿಕೆ ಸೋರಿಕೆ ದೊಡ್ಡ ಸವಾಲಾಗಿರುವ ಸಂದರ್ಭದಲ್ಲಿ, ಈ ಮಸೂದೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : ಕೆನ್-ಬೆಟ್ವಾ ಯೋಜನೆ ವಿರುದ್ಧ ಆದಿವಾಸಿಗಳ ಹೋರಾಟ: ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಆರೋಪ
ಟಿಎಂಸಿಗೆ ರಾಜಕೀಯ ಹೊಡೆತ?
ಟಿಎಂಸಿಯ 20 ಲೋಕಸಭಾ ಸಂಸದರು ಪಕ್ಷದಿಂದ ದೂರ ಸರಿದು ಎನ್‌ಸಿಪಿಐ ಜೊತೆ ಗುರುತಿಸಿಕೊಂಡಿರುವುದು ಈಗಾಗಲೇ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ದೊಡ್ಡ ರಾಜಕೀಯ ಸವಾಲಾಗಿ ಪರಿಣಮಿಸಿದೆ. ಇದೀಗ ಇದೇ ಸಂಸದರು ಎನ್‌ಡಿಎ ಸಭೆಯಲ್ಲಿ ಅಧಿಕೃತವಾಗಿ ಭಾಗವಹಿಸಿರುವುದು ಈ ಬೆಳವಣಿಗೆಗೆ ಮತ್ತಷ್ಟು ರಾಜಕೀಯ ಮಹತ್ವ ನೀಡಿದೆ.
ಟಿಎಂಸಿ ಬಂಡಾಯ ಸಂಸದರ ವಿರುದ್ಧ ಪಕ್ಷಾಂತರ ವಿರೋಧಿ ಕಾನೂನಿನಡಿ ಕ್ರಮಕ್ಕೆ ಮುಂದಾಗಿದ್ದು, ಅವರ ಅನರ್ಹತೆ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಸಲ್ಲಿಸಿದೆ.
ಆದರೆ ಮತ್ತೊಂದೆಡೆ ಎನ್‌ಸಿಪಿಐ ಸಂಸದರು ಎನ್‌ಡಿಎ ಸಭೆಯಲ್ಲಿ ಭಾಗವಹಿಸಿರುವುದು ಹೊಸ ಪಕ್ಷದ ರಾಜಕೀಯ ದಿಕ್ಕು ಯಾವತ್ತಿರಲಿದೆ ಎಂಬ ಪ್ರಶ್ನೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಮುಂದಿನ ರಾಜಕೀಯ ಸಮೀಕರಣಗಳ ಮೇಲೆ ಈ ಬೆಳವಣಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ನೋಡಿ : NEET ಹೋರಾಟದ ಒಳನೋಟ | ದಮನದ ಪ್ರತಿಯೊಂದು ಹೆಜ್ಜೆಗೂ ವಿದ್ಯಾರ್ಥಿಗಳ ಪ್ರತಿರೋಧ | ಗುರುರಾಜ ದೇಸಾಯಿ Janashakthi
