ಕೊಪ್ಪಳ: ವಿಶೇಷ ಚೇತನರನ್ನು ಉತ್ತಮ ಕ್ರೀಡಾಪಟುಗಳಾಗಿ ರೂಪಿಸುವ ಉದ್ದೇಶದಿಂದ ಆಗು ನೀ ಅನಿಕೇತನ ಫೌಂಡೇಶನ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಂಗವಿಕಲರ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಮೂರು ದಿನಗಳ ಕ್ರೀಡಾ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ವಿಶೇಷ
ಆಗಸ್ಟ್ 27ರಿಂದ 29ರವರೆಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ. ವಿಶೇಷ ಚೇತನ ಕ್ರೀಡಾಪಟುಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಅಗತ್ಯವಾದ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ಕ್ರೀಡಾಪಟುಗಳಾಗಿ ರೂಪಿಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ.
ಆಗಸ್ಟ್ 27ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಲಿದ್ದಾರೆ.
ಇದನ್ನೂ ನೋಡಿ : 1 ಕೋಟಿ ಮತದಾರರ ಮೇಲೆ SIR ತೂಗುಕತ್ತಿ: Form-8 ಬದಲು Form-6 ಏಕೆ? ವಿಶ್ಲೇಷಣೆ : ಗುರುರಾಜ ದೇಸಾಯಿ
ಕಾರ್ಯಾಗಾರದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ರಾಘವೇಂದ್ರ ಅನ್ವೇಕರ್, ಶ್ರೀಧರ ಮಾಳಗಿ, ಎಸ್.ಆರ್. ಶಿಂದೇ, ರಾಘವೇಂದ್ರ ಪಿ., ಬಿ. ಆನಂದಕುಮಾರ ಹಾಗೂ ಆರ್. ರಾಮಚಂದ್ರ ಅವರು ತರಬೇತುದಾರರಾಗಿ ಭಾಗವಹಿಸಿ ವಿಶೇಷ ಚೇತನ ಕ್ರೀಡಾಪಟುಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲಿದ್ದಾರೆ.
ಕಾರ್ಯಾಗಾರವನ್ನು ಆಯೋಜಿಸಿರುವ ಫೌಂಡೇಶನ್‌ನ ಸಂಸ್ಥಾಪಕಿ ಕು. ಧರಣಿ ಸಸಿ ಅವರು ಮೂಲತಃ ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದವರಾಗಿದ್ದಾರೆ. ಜಿಲ್ಲೆಯ ವಿಶೇಷ ಚೇತನ ಕ್ರೀಡಾಪಟುಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಾಗಾರ ಮಹತ್ವ ಪಡೆದಿದೆ.
