ಒಂದು ವರ್ಷ ದಿಲ್ಲಿಯ ಗಡಿಗಳಲ್ಲಿ ಸೆಣಸಿದ ರೈತರಂತೆ, ದಿಲ್ಲಿಯ ಮಧ್ಯದಲ್ಲಿ ಸೆಣಸಿ ವಿದ್ಯಾರ್ಥಿಗಳು ಸರಕಾರವನ್ನು ಬಗ್ಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಜ, ರೈತರಿಗೆ ಕೊಟ್ಟ ಲಿಖಿತ ಭರವಸೆಯನ್ನು ಸರಕಾರ ಇನ್ನೂ ಈಡೇರಿಸಿಲ್ಲ, ಬದಲಿಗೆ ಅದನ್ನು ಬುಡಮೇಲು ಮಾಡಲು ಪ್ರಯತ್ನ ನಡೆಯುತ್ತಲೇ ಇದೆ. ವಿದ್ಯಾರ್ಥಿಗಳಿಗೂ ಕೊಟ್ಟಿರುವ ಉಳಿದ ಲಿಖಿತ ಭರವಸೆಗಳು ಈಡೇರಬಹುದೇ, ಕಾದು ನೋಡಬೇಕಾಗಿದೆ. ಅದೇನೇ ಇರಲಿ, ಧರ್ಮೇಂದ್ರ ಪ್ರಧಾನ್ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿರುವ ‘ಯುವಶಕ್ತಿ’ಯನ್ನು ಯಾವ ಭ್ರಮೆಯಲ್ಲಿ ಸಿಲುಕಿಸಲಾಗಿದೆ ಮತ್ತು ಯಾರು ಸಿಲುಕಿಸಿದ್ದಾರೆ ಎಂಬ ಪ್ರಶ್ನೆಗಳಿಗೆ ಸಾಕಷ್ಟು ಯುವಜನರು ಈ ಚಳುವಳಿಯಲ್ಲಿ ಉತ್ತರ ಕಂಡುಕೊಂಡಿರಬಹುದು. ಮೊದಲು
ಸಂಗ್ರಹ: ಕೆ.ವಿ.
ಕೊನೆಗೂ ಮೋದಿ ಸಂಪುಟದ ಶಿಕ್ಷಣ ಮಂತ್ರಿಗಳು ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಬಿಜೆಪಿ/ಎನ್ಡಿಎ ಆಳ್ವಿಕೆಯಲ್ಲಿ ಹೊಸ ‘ದಾಖಲೆ’ ಸೃಷ್ಟಿಸಿದ್ದಾರೆ- ಹಗರಣಕ್ಕಾಗಿ ರಾಜೀನಾಮೆ ನೀಡದಿರುವ ‘ಪರಂಪರೆ’ಯನ್ನು ಮುರಿದವರೆಂಬ ದಾಖಲೆ! ಇದು ನಡೆದಿರುವುದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಪೊಲಿಸ್ ತನಿಖೆಯಿಂದ ಮೇಲ್ನೋಟಕ್ಕೇ ಸಾಬೀತಾದ ಎರಡೂವರೆ ತಿಂಗಳ ನಂತರ.
ಈ ನಡುವೆ ನೀಟ್ ಪರೀಕ್ಷೆ ತಗೊಂಡಿದ್ದ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ದೇಶಾದ್ಯಂತ ವಿದ್ಯಾರ್ಥಿ- ಯುವಜನರು ಆಕ್ರೋಶ ಪ್ರದರ್ಶಿಸುತ್ತಿದ್ದರು. ಅವರಿಗೆ ಸೌಹಾರ್ದ ವ್ಯಕ್ತಪಡಿಸಿ ಮೂರು ವಾರಗಳಿಂದ ಉಪವಾಸ ಮುಷ್ಕರದಲ್ಲಿದ್ದ ಪರಿಸರ ತಜ್ಞ ಸೋನಂ ವಾಗ್ಚುಕ್ರನ್ನು ಬಿಳಿ ಬೆಡ್ಷೀಟುಗಳ ಮರೆಯಲ್ಲಿ ಬಲವಂತವಾಗಿ ಮಫ್ತಿಯಲ್ಲಿದ್ದ ದಿಲ್ಲಿ ಪೊಲಿಸ್ನವರು ಆಸ್ಪತ್ರೆಗೆ ಸಾಗಿಸಿದರು.
ಆದರೂ ಏನೂ ಆಗೇ ಇಲ್ಲ ಎಂಬಂತೆ ದಿವ್ಯ ಮೌನವನ್ನು ಮುಂದುವರೆಸಬಹುದು ಎಂದು ಭಾವಿಸಿದಂತಿದ್ದ ಪ್ರಧಾನಿಗಳು ನಂತರ ಎರಡೇ ದಿನಗಳೊಳಗೆ ಜುಲೈ 21ರಂದು ತಮ್ಮ ಮೌನ ಮುರಿದರು! ಬಹುಶಃ ಜುಲೈ20ರ ವಿದ್ಯಾರ್ಥಿ-ಯುವಜನರ ‘ಸಂಸತ್ ಚಲೋ’ವನ್ನು ವಿಫಲಗೊಳಿಸಲು ಅವರ ಗೃಹಮಂತ್ರಿಗಳ ಅಡಿಯಲ್ಲಿರುವ ದಿಲ್ಲಿ ಪೊಲಿಸ್, ವರದಿಗಳಿಂದ ಈಗ ತಿಳಿದು ಬಂದಿರುವಂತೆ, ಅಶ್ರುವಾಯು, ಮೊಳೆ ಜಡಿದ ಲಾಠಿ, ಪೆಲೆಟ್ ಗನ್ಗಳ ಮೂಲಕ ‘ಸರ್ವಪ್ರಯತ್ನ’ ನಡೆಸಿದರೂ ಸಾಧ್ಯವಾಗದೆ, ವಿದ್ಯಾರ್ಥಿ-ಯುವಜನರು ಮತ್ತು ಅವರ ಬೆಂಬಲಕ್ಕೆ ನಿಂತ ಪ್ರಜಾಪ್ರಭುತ್ವವಾದಿಗಳು ಇನ್ನಷ್ಟು ಆಕ್ರೋಶದಿಂದ ಚಳುವಳಿಯನ್ನು ಮುಂದೊಯ್ಯುವ ಲಕ್ಷಣಗಳು ಸ್ಪಷ್ಟವಾದ ನಂತರ!
ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಒಂದು ಘೋರ ಪಾಪ, ಅದನ್ನು ಎಸಗಿದವರ ಮೇಲೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲಾಗಿದೆ, ಅವರಿಗೆ ಕಠಿಣ ಶಿಕ್ಷೆಯಾಗುವಂತೆ “ಧುರಂದರ” ವಕೀಲರನ್ನು ಸಂಪರ್ಕಿಲಾಗಿದೆ ಎಂದು ಪ್ರಧಾನಿಗಳು ಎನ್ಡಿಎ ಸಂಸದರ ‘ಮಂಗಲ ಮಿಲನ’ ಸಭೆಯಲ್ಲಿ ಹೇಳಿದರು ಎಂದು ಕೇಂದ್ರ ಸಂಸದೀಯ ವ್ಯವಹಾರ ಮಂತ್ರಿಗಳು ಹೇಳಿದರು! ಪ್ರಧಾನಿಗಳಿಂದ ಸಾಮಾನ್ಯವಾಗಿ ನಿರೀಕ್ಷಿಸುವಂತೆ ದೇಶವನ್ನುದ್ದೇಶಿಸಿ ಅಥವ ಚಳುವಳಿ ನಡೆಸುತ್ತಿದ್ದ ವಿದ್ಯಾರ್ಥಿ-ಯುವಜನರನ್ನು ನೇರವಾಗಿಯೇ ಉದ್ದೇಶಿಸಿ ಇದನ್ನು ಹೇಳಬೇಕೆಂದು ಈಗಲೂ ಅವರಿಗೆ ಅನಿಸಿರಲಿಲ್ಲ
ಮೊದಲ ʼರೀಲುʼ!
ಆದರೆ ಬೇಗನೇ ಅದೂ ಆಳುವವರ ಅರಿವಿಗೆ ಬಂದಂತೆ ಕಾಣುತ್ತದೆ. ಜುಲೈ 23 ರ ಮಧ್ಯರಾತ್ರಿ ಪ್ರಧಾನ ಮಂತ್ರಿಗಳ ವೀಡಿಯೋ ಸಂದೇಶ ಪ್ರಸಾರವಾಯಿತು. ಅವರ ಎಂದಿನ ‘ಮಿತ್ರೊಂ’ ಈ ವೀಡಿಯೋದಲ್ಲಿ ‘ಫ್ರೆಂಡ್ಸ್’ ಆಗಿತ್ತು-ಬಹಶಃ ‘ಜೆನ್-ಝೀ’ ಪೀಳಿಗೆಯನ್ನು ಖುಶಿಪಡಿಸಲು ಎಂದು ಕೆಲವು ವೀಕ್ಷಕರ ಅನುಮಾನ.
“ನನಗೆ ಗೊತ್ತು, ಪೇಪರ್ ಸೋರಿಕೆ ಒಂದು ಕ್ಷುಲ್ಲಕ ವಿಷಯವಲ್ಲ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅತ್ಯಂತ ನೋವಿನ ವಿಷಯ” ಎನ್ನುತ್ತ ಕಳೆದ ಎರಡೂವರೆ ತಿಂಗಳುಗಳಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ, ಅಪರಾಧಿಗಳನ್ನು ಹಿಡಿಯಲಾಗಿದೆ, ಅವರೀಗ ಕಂಬಿ ಎಣಿಸುತ್ತಿದ್ದಾರೆ, ಆದರೂ ತಮ್ಮ ಸರಕಾರಕ್ಕೆ ತೃಪ್ತಿಯಿಲ್ಲ, ಫಾಸ್ಟ್-ಟ್ರಾಕ್ ಕೋರ್ಟುಗಳ ರಚನೆಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. ತೃಪ್ತಿಯಾಗದ್ದರಿಂದ ಮೌನ ಧರಿಸಿದ್ದೆ ಎಂದೇನೂ ಹೇಳಲಿಲ್ಲ.
ಈ ಎರಡೂ ಹೇಳಿಕೆಗಳಲ್ಲಿ ಶಿಕ್ಷಣ ಮಂತ್ರಿಗಳ ರಾಜೀನಾಮೆಯ ಬೇಡಿಕೆಯ ಬಗ್ಗೆಯಾಗಲೀ, ವಿದ್ಯಾರ್ಥಿ-ಯುವಜನರ ‘ಸಂಸತ್ ಚಲೋ’ದಲ್ಲಿ ದಿಲ್ಲಿ ಪೋಲೀಸರ ದುರ್ವರ್ತನೆಯ ಬಗ್ಗೆಯಾಗಲೀ ಚಕಾರವಿರಲಿಲ್ಲ. ಎರಡೂವರೆ ತಿಂಗಳ ಮೌನದ ಬಗ್ಗೆಯಂತೂ ಏನೂ ನಿರೀಕ್ಷಿಸುವಂತಿರಲಿಲ್ಲ.
“ನಮ್ಮ ಸಮಯ ವ್ಯರ್ಥ ಮಾಡಬೇಡಿ”

ಪ್ರಧಾನಿ ಮೋದಿಯವರ ನೇರ ಮನವಿಗೆ ಪ್ರತಿಭಟನಾಕಾರರ ಪ್ರತ್ಯುತ್ತರ
ವ್ಯಂಗ್ಯಚಿತ್ರ: ಸಂದೀಪ ಅಧ್ವರ್ಯು @ ಫೇಸ್ಬುಕ್
ಇದನ್ನೂ ಓದಿ : ಭಯ ಕರಗುತ್ತಿದೆ – ಸಾಮೂಹಿಕ ಧೈರ್ಯ ಸ್ಫೋಟಗೊಂಡಿದೆ
ಆದರೂ, ಬಹುಶಃ ನಿಜವಾಗಿಯೂ ಸರಕಾರವು ಈ ವಿಷಯದಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲಾರಂಭಿಸಿದೆ ಎಂದು ಬಿಂಬಿಸಲೋ ಏನೋ, ಮರುದಿನವೇ ಸಂಪುಟ ನೇಮಕಾತಿ ಸಮಿತಿ (ಎಸಿಸಿ) ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸೇರಿದಂತೆ ಹಲವು ಪ್ರಮುಖ ಸಚಿವಾಲಯಗಳಲ್ಲಿ ಹಲವಾರು ಕಾರ್ಯದರ್ಶಿ ಮಟ್ಟದ ನೇಮಕಾತಿಗಳು, ವರ್ಗಾವಣೆಗಳು ಮತ್ತು ಸ್ಥಳದಲ್ಲೇ ಬಡ್ತಿಗಳನ್ನು ಘೋಷಿಸಿತು. ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ವಿನೀತ್ ಜೋಷಿಯವರ ಜಾಗದಲ್ಲಿ ರಾಜಸ್ಥಾನ ಕೇಡರ್ನ 1994 ರ ಬ್ಯಾಚ್ನ ಐಎಎಸ್ ಅಧಿಕಾರಿ ನರೇಶ್ ಪಾಲ್ ಗಂಗ್ವಾರ್ರನ್ನು ಶಿಕ್ಷಣ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ. ಗಂಗ್ವಾರ್ ಪ್ರಸ್ತುತ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಮುಖ್ಯಸ್ಥರಾಗಿದ್ದಾರೆ. ವಿನೀತ್ ಜೋಷಿಯವರನ್ನು ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿಯಾಗಿ ಕಳಿಸಲಾಗಿದೆ. ಜೋಷಿ ಕೆಲವು ಸಮಯದಿಂದ ಶಿಕ್ಷಣ ರಂಗದ ಆಡಳಿತದಲ್ಲಿ ಚುಕ್ಕಾಣಿ ಹಿಡಿದಿರುವುದರಿಂದ, ಅವರ ವರ್ಗಾವಣೆಯೊಂದಿಗೆ ಬದಲಾವಣೆ ಆರಂಬವಾಗಿದೆ ಎಂದು ವಿದ್ಯಾರ್ಥಿಗಳು ಭಾವಿಸುವಂತೆ ಪ್ರೇರೇಪಿಸುವುದು ಇದರ ಉದ್ದೇಶವಿರಬಹುದು. ಅವರು ಇದುವರೆಗೆ ಸಿಬಿಎಸ್ಇ ಅಧ್ಯಕ್ಷರು, ಎನ್ಟಿಎ ಮಹಾನಿರ್ದೇಶಕರು, ಯುಜಿಸಿ ಯ ಹಂಗಾಮಿ ಅಧ್ಯಕ್ಷರು ಮತ್ತು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಾಗಿದ್ದರು. ಆದರೆ ಈಗ ಈ ಸ್ಥಾನಕ್ಕೆ ಬಂದಿರುವ, ಹಿಂದೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಕಾರ್ಯದರ್ಶಿಯಾಗಿದ್ದ ಗಂಗ್ವಾರ್ ಈಗಾಗಲೇ , ಈತನ ತಾಯಿ, ಹೆಂಡತಿ ಮತ್ತು ಮಗ ಒಟ್ಟಾಗಿ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ‘ವಾಣಿಜ್ಯ ಬೆಳೆಗಳ ಉತ್ತೇಜನೆಗಾಗಿ’ ಇರುವ ಯೋಜನೆಯ ಅಡಿಯಲ್ಲಿ 1.16 ಕೋಟಿ ರೂ.ಗಳನ್ನು ಪಡೆದಿರುವ ‘ಖ್ಯಾತಿ’ಯ ಐಎಎಸ್ ಅಧಿಕಾರಿ! ಇದು ನಮ್ಮ ಪ್ರಧಾನಿಗಳು ಉತ್ತರದಾಯಿತ್ವವನ್ನು ಖಚಿತಪಡಿಸುವ ಹಾದಿ ಎಂದು ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ವ್ಯಂಗ್ಯವಾಡಿದ್ದಾರೆ. ಮೊದಲು
ಇನ್ನೊಂದು ʼರೀಲುʼ
ಅದೇನೇ ಇರಲಿ, ವಿದ್ಯಾರ್ಥಿ-ಯುವಜನರು ಮತ್ತು ಪ್ರಜ್ಞಾವಂತ ನಾಗರಿಕರು ಇವೆಲ್ಲ ತೇಪೆಹಾಕುವ ರೀಲು ಎಂದು ಹಿಂದೆ-ಮುಂದೆ ನೋಡದೆ ತಿರಸ್ಕರಿಸಿದರು. ಆದರೂ ಜಲೈ 24ರಂದು ಪ್ರಧಾನಿಗಳ 40 ಸೆಕೆಂಡುಗಳ ಮತ್ತೊಂದು ‘ಮಧ್ಯರಾತ್ರಿ ವೀಡಿಯೋ’ ಪ್ರಸಾರವಾಯಿತು-ಅದರಲ್ಲಿ ಅವರು “ಥ್ಯಾಂಕ್ಯು ಫ್ರೆಂಡ್ಸ್,……ಥ್ಯಾಂಕ್ ಯು, ಥ್ಯಾಂಕ್ ಯು ಫ್ರೆಂಡ್ಸ್” ಎಂದರು. ಸಂಸತ್ತಿನ ಎದುರು ತಮ್ಮನ್ನು ಭೇಟಿಯಾಗಲು ಬರಲು ಬಿಡದಿದ್ದವರು, “ನಿನ್ನೆ ನಡುರಾತ್ರಿಯಲ್ಲಿ ನಿಮ್ಮನ್ನು ಭೇಟಿಯಾಗುವ ಒಂದು ಅವಕಾಶ ಸಿಕ್ಕಿತು” ಎಂದರು! “ನಮ್ಮ ಸಂಬಂಧ ಸಕ್ರಿಯವಾಗಿ ಮುಂದುವರೆಯುತ್ತಲೇ ಇರುತ್ತದೆ” ಎಂದರು!!
“ಮೋದೀಜಿ ರೀಲುಗಳು ಕೋಪಗೊಂಡಿರುವ ವಿದ್ಯಾರ್ಥಿಗಳನ್ನು ತಡೆಯಲಾರವು. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡುವ ವರೆಗೆ ನಾವು ವಿರಮಿಸುವುದಿಲ್ಲ” ಎಂದರು ಪ್ರತಿಭಟನಾಕಾರರು.
‘ನಡುರಾತ್ರಿ ಭೇಟಿಯ ಬಗ್ಗೆ ಧನ್ಯವಾದ’ ಅರ್ಪಿಸಿದ ಪ್ರಧಾನ ಮಂತ್ರಿಗಳ ಸರಕಾರ ದಿಲ್ಲಿಯ ಕೇಂದ್ರ ಪ್ರದೇಶದ 18 ಮೆಟ್ರೋ ಸ್ಟೇಷನ್ಗಳನ್ನು ಮುಚ್ಚಿದ್ದಲ್ಲದೆ, ಇಂಟರ್ನೇಟ್ ಸಂಪರ್ಕವನ್ನು ಮುಚ್ಚಿದ್ದಲ್ಲದೆ, ಯುವಜನರ ದನಿಯೆನಿಸಿರುವ ಬಿಟ್ಚಾಟ್ನ ಓಪನ್ ಸೋರ್ಸ್ ಕೋಡ್ನ್ನು ಕೂಡ ಬ್ಲಾಕ್ ಮಾಡಿತು. ಜತೆಗೆ ವಿವಿಧ ಅರೆಸೇನಾಪಡೆಗಳ ಸಂಖ್ಯೆಯನ್ನು ಹೆಚ್ಚಿಸುವ ತಯಾರಿಗೆ ಮುಂದಾಯಿತು ಎಂದು ವರದಿಯಾಗಿದೆ. ಜಂತರ್ ಮಂತರ್ಗೆ ಆಹಾರ ಡೆಲಿವರಿಯನ್ನೂ ತಡೆಯಲಾಯಿತು ಎಂದೂ ವರದಿಯಾಗಿದೆ.
ಆದರೂ ಜಗ್ಗದ ಪ್ರತಿಭಟನಾಕಾರರು, ಇನ್ನೊಂದೆರಡು ದಿನಗಳಲ್ಲಿ ಪ್ರಧಾನ್ ರಾಜೀನಾಮೆ ಕೊಡದಿದ್ದರೆ, ನಾವು ಪ್ರಧಾನಿಗಳ ರಾಜೀನಾಮೆಯನ್ನೇ ಆಗ್ರಹಿಸುತ್ತೇವೆ ಎಂದು ಎಚ್ಚರಿಸಿದರು. ಮೊದಲು
ʼವಿದ್ಯಾರ್ಥಿಗಳ ನೋವಿನಿಂದ ನನಗೆ ಪೆಟ್ಟಾಗಿದೆʼ ʼಪೆಟ್ಟಾಗಿದೆʼ

ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ, ಸೌತ್ ಫಸ್ಟ್
ರಾಜೀನಾಮೆ ಪತ್ರ
ಜುಲೈ 25 ರ ಸಂಜೆ 3.30ರಿಂದ 4 ಗಂಟೆಯ ನಡುವೆ ಮೋದಿ ಸಂಪುಟದ ಇಬ್ಬರು ಮಂತ್ರಿಗಳೊಂದಿಗೆ ಸಿಜೆಪಿ ಪ್ರತಿನಿಧಿಗಳ ಮಾತುಕತೆ ಮುಂದುವರೆಯುತ್ತದೆ ಎನ್ನಲಾಯಿತು. ಆದರೆ ಇದಕ್ಕೆ ಒಂದು ಗಂಟೆಯ ಮೊದಲೇ, ಶಿಕ್ಷಣ ಮಂತ್ರಿಗಳು ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನ ಮಂತ್ರಿಗಳಿಗೆ ಕಳಿಸಿರುವುದಾಗಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರಕಟಿಸಿದರು. ಈ ಮೊದಲು ಮಂತ್ರಿಗಳು ತಮ್ಮ ರಾಜೀನಾಮೆ ಪತ್ರ ಬರೆದಿದ್ದರು, ಆದರೆ ಅದೂ ಲೀಕ್ ಆದುದರಿಂದ ಕಳಿಸಲಿಲ್ಲ ಎಂಬ ಜೋಕ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆದರೆ ಈ ಬಾರಿ ಇದು ಜೋಕಾಗಿರಲಿಲ್ಲ.
“ದೇಶದ ಯುವಶಕ್ತಿಯನ್ನು ಭ್ರಮೆಯ ಕುಚಕ್ರದಲ್ಲಿ ಸಿಲುಕಿಸಲು ನಾವು ಬಿಡುವುದಿಲ್ಲ ಎಂಬುದು ನನ್ನ ಸಂಕಲ್ಪ” ಎಂದು ಪ್ರಧಾನ್ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರಂತೆ. ನಿಜ, ಆ ಭ್ರಮೆ ಯಾವುದು, ಅದರಲ್ಲಿ ಸಿಲುಕಿಸುವವರು ಯಾರು ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಬಹುಶಃ ಈ ಚಳುವಳಿಯಲ್ಲಿ ಅನೇಕ ವಿದ್ಯಾರ್ಥಿ-ಯುವಜನರು ಕಂಡು ಕೊಂಡಿದ್ದಾರೆ ಎಂದು ಪೊಲಿಸ್ ದಮನವನ್ನು ಅವರಲ್ಲಿ ಹಲವರು ಎದುರಿಸಿದ ರೀತಿಯಲ್ಲಿ ಕಾಣಬಹುದು. ಮೊದಲು

ಚಿತ್ರ ಕೃಪೆ:ಎಂಅಲಿ @ ಫೇಸ್ಬುಕ್
ಜಂತರ್ ಮಂತರ್ನಲ್ಲಿ ಪ್ರತಿಭಟನಾಕಾರರ ಇತರ ಎರಡು ಬೇಡಿಕೆಗಳನ್ನೂ, ಅಂದರೆ ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಮೇಲೆ ಎಲ್ಲ ಎಫ್ಐಆರ್ಗಳನ್ನು ವಾಪಾಸು ಪಡೆಯಬೇಕು ಮತ್ತು ಹೊಸ ಕೇಸುಗಳನ್ನು ಹಾಕಬಾರದು ಮತ್ತು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ಕೊಡಬೇಕು ಎಂಬುದಕ್ಕೂ ಸರಕಾರ ಬಹುಮಟ್ಟಿಗೆ ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ. ‘ಬಹುಮಟ್ಟಿಗೆ’ ಎಂದರೆ, ಪರಿಹಾರವನ್ನು “ಕಾನೂನು ನಿಬಂಧನೆಗಳ ಪ್ರಕಾರ” ಕೊಡಲಾಗುವುದು ಎಂದು ಮಾತುಕತೆ ನಡೆಸಿದ ಮೋದಿ ಸರಕಾರದ ಇಬ್ಬರು ಮಂತ್ರಿಗಳು ಭರವಸೆ ಕೊಟ್ಟಿದ್ದಾರಂತೆ.
ಪರೀಕ್ಷಾ ಸುಧಾರಣೆಗಳು ಮತ್ತು ಶಿಕ್ಷಣರಂಗದಲ್ಲಿನ ಸುಧಾರMನೆಗಳನ್ನು ಕುರಿತ ವಿದ್ಯಾರ್ಥಿಗಳ ೫-ಅಂಶಗಳ ಬೇಡಿಕೆಗೆ ಸ್ಪಂದಿಸಲು ಸರಕಾರ ನಾಲ್ಕು ವಾರಗಳ ಸಮಯ ಕೇಳಿದ್ದು, ಅದಕ್ಕೆ ಸಿಜೆಪಿ ಒಪ್ಪಿಕೊಂಡಿದೆಯಂತೆ. ಜೂನ್ ೨೬ರಂದು ಪ್ರಧಾನಿಗಳು ಪರೀಕ್ಷಾ ಸುಧಾರಣೆಗಳನ್ನು ಕುರಿತಂತೆ ಒಂದು ಉನ್ನತ ಮಟ್ಟದ ಕಾರ್ಯಪಡೆಯನ್ನು ನೇಮಿಸಲಾಗಿದೆ ಎಂದು ಪ್ರಕಟಿಸಿದ್ದಾರೆ. ನಂದನ್ ನೀಲೆಕಣಿಯವರ ನೇತೃತ್ವದ ಈ ಕಾರ್ಯಪಡೆಯ ಆರು ಸದಸ್ಯರಲ್ಲಿ ಒಬ್ಬರು ಮಾತ್ರ ಶಿಕ್ಷಣ ರಂಗದಲ್ಲಿರುವವರು. ಅಲ್ಲದೆ ಇಂತಹ ಕಾರ್ಯಪಡೆಗಳು/ಸಮಿತಿಗಳನ್ನು ಈ ಹಿಂದೆಯೂ ರಚಿಸಲಾಗಿತ್ತು ಎಂದು ಈ ಬಗ್ಗೆ ಹಲವರು ಟಿಪ್ಪಣಿ ಮಾಡಿದ್ದಾರೆ.
ಆದರೂ, ಒಂದು ವರ್ಷ ದಿಲ್ಲಿಯ ಗಡಿಗಳಲ್ಲಿ ಸೆಣಸಿದ ರೈತರಂತೆ, ದಿಲ್ಲಿಯ ಮಧ್ಯದಲ್ಲಿ ಸೆಣಸಿ ವಿದ್ಯಾರ್ಥಿಗಳು ಸರಕಾರವನ್ನು ಬಗ್ಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಜ, ರೈತರಿಗೆ ಕೊಟ್ಟ ಲಿಖಿತ ಭರವಸೆಯನ್ನು ಈ ಸರಕಾರ ಇನ್ನೂ ಈಡೇರಿಸಿಲ್ಲ, ಬದಲಿಗೆ ಅದನ್ನು ಬುಡಮೇಲು ಮಾಡಲು ಪ್ರಯತ್ನ ನಡೆಯುತ್ತಲೇ ಇದೆ. ವಿದ್ಯಾರ್ಥಿಗಳಿಗೂ ಕೊಟ್ಟಿರುವ ಉಳಿದ ಲಿಖಿತ ಭರವಸೆಗಳು ಈಡೇರಬಹುದೇ, ಕಾದು ನೋಡಬೇಕಾಗಿದೆ. ಮೊದಲು
ಇದನ್ನೂ ನೋಡಿ : ಧರ್ಮೇಂದ್ರ ಪ್ರಧಾನ ರಾಜೀನಾಮೆ: ವಿದ್ಯಾರ್ಥಿಗಳ ಐಕ್ಯ ಹೋರಾಟಕ್ಕೆ ಗೆಲುವು; ಸಂಘಟನೆಗಳಿಂದ ಸಂಭ್ರಮಾಚರಣೆ
