ಅಡ್ಡಾದಿಡ್ಡಿ ಅಯೋಗ್ಯ ಮತ್ತೇ ಬತ್ತಾನೆ ಕಣ್ಲಾ!

ಎಂಟು ವರ್ಷಗಳ ಹಿಂದೆ ತೆರೆ ಮೇಲೆ ಬಂದು ರಂಜಿಸಿದ್ದ ಅಯೋಗ್ಯ, ಈಗ ಮತ್ತೇ ಬಂದು ಹಳೇ ವರಸೆ ತೋರಿಸವ್ನೆ. ಆದರೆ ಈ ಎರಡನೇ ಅಯೋಗ್ಯನಿಗಿಂತ ಮೊದಲನೇ ಅಯೋಗ್ಯನೇ ಶ್ಯಾನೇ ಚನ್ನಾಗವ್ನೆ. ಈ ಅಯೋಗ್ಯ ಆಗಾಗ ಹಳಿ ತಪ್ಪವ್ನೆ. ನಿಧಾನಕ್ಕೆ ಮತ್ತೇ ಸರಿ ದಾರಿಗೆ ಬಂದವ್ನೆ.

– ಬಸವರಾಜ ಕರುಗಲ್

ಗ್ರಾಪಂ ಸದಸ್ಯನಾಗಿ ಮೊದಲನೇ ಭಾಗದಲ್ಲಿ ಗೆದ್ದಿದ್ದ ಅಯೋಗ್ಯ, ಈ ಸಲ ಅಧ್ಯಕ್ಷ ಗಾದಿ ಮೇಲೆ ಕಣ್ಣು ಹಾಕಿ ಕೈ ಸುಟ್ಕೊಳ್ಳೊ ಕಥೆನಾ ಹೊತ್ತು ತಂದವ್ನೆ. ಮಧ್ಯಂತರದವರೆಗೆ ಬೋರು ಅನಿಸೋ ಇವ್ನು ಆಮ್ಯಾಕೆ ಚೂರು ಚೂರೇ ಇಷ್ಟ ಆಯ್ತಾ ಹೋಯ್ತವ್ನೆ. ಪ್ರೀತಿಸಿದ ಹುಡುಗಿನ ಮದುವೆಯಾದರೂ, ಗ್ರಾಪಂ ಸದಸ್ಯನಾಗಿದ್ರೂವೆ ಕಿಂಚಿತ್ತೂ ಜವಾಬ್ದಾರಿ ಇಲ್ದಿರೊ ಸಿದ್ದೇಗೌಡನ್ನ (ನೀನಾಸಂ ಸತೀಶ) ದಾರಿಗೆ ತರೊಕೆ ಮೊದಲ ರಾತ್ರಿಯ ಕ್ಷಣಾನೇ ಹೇಂಡ್ರು ನಂದಿನಿ (ರಚಿತಾ ರಾಮ್) ಕೆಲಸದ ವಿಷಯಕ್ಕೆ ಮುನಿಸಿಕೊಂಡು ಮನೆ ಬಿಟ್ಟು ಹೋಯ್ತಾಳೆ.

ಸಿದ್ದೇಗೌಡ‌ನ ಗೆಳೆಯರಾದ ಬೆಣ್ಣೆ ಮತ್ತು ಮುದ್ದೆ (ಗಿರಿ ಮತ್ತು ಶಿವರಾಜ್ ಕೆ‌.ಆರ್.ಪೇಟೆ) ಸದಾ ಸಾಥ್ ಕೊಟ್ರು ಸಿದ್ದೆಗೌಡ ಗ್ರಾಪಂ ಅಧ್ಯಕ್ಷ ಆಗಾಕಿಲ್ಲ‌. ಗೆಳೆಯನ ಮನೆಯವ್ರು ಸಿದ್ದೆಗೌಡನಿಂದ ಬ್ಯಾರೆ ಮಾಡಿ, ಒಂಟಿಯಾಗಿಸ್ತಾರೆ. ಗೆಳೆಯನ ಪರಿಸ್ಥಿತಿ ನೋಡಕಾಯ್ದೆ ಮತ್ತೇ ಮೂವರು ಒಟ್ಟಾಗಿ, ಕಡುವೈರಿ ಬಚ್ಚೇಗೌಡಂಗೆ (ರವಿಶಂಕರ್) ಕ್ವಾಟ್ಲೆ ಕೊಡೊಕೆ ಶುರು ಮಾಡ್ತಾರೆ. ಸಿದ್ದೆಗೌಡನ್ನ ಸೋಲಸ್ಲೇಬೇಕು ಅಂತ ಜಿದ್ದಿಗೆ ಬಿದ್ದ ಬಚ್ಚೇಗೌಡ ಮೊದ ಮೊದಲು ಗೆದ್ದು ಬೀಗ್ತಾನೆ. ಆಮ್ಯಾಕೆ ಸೋತು ಸುಣ್ಣಾ ಆಯ್ತಾನೆ.

ಇದನ್ನೂ ಓದಿ: SI ವೇತನ ಮಿತಿ ಪರಿಷ್ಕರಣೆ ಮನವಿಗಳನ್ನು 6 ವಾರಗಳಲ್ಲಿ ಪರಿಗಣಿಸಿ: ಕೇಂದ್ರ, ESICಗೆ ಹೈಕೋರ್ಟ್ ನಿರ್ದೇಶನ

ಊರೊಳಗೆ ರಸ್ತೆ ಬಂದು ಅದಕ್ಕೆ ಇಡೀ ಊರೇ ಖಾಲಿ ಮಾಡುವ ಪ್ರಸಂಗ ಜಾಗತೀಕರಣದ ಕರಿನೆರಳಿನ ಪರಿಚಯದಂತೆ ಕಾಣುತ್ತದೆ. ಚಿತ್ರದ ಕೊನೆಗೆ ಬಯಲು ಶೌಚ ಬಿಡಿ ಎನ್ನುವ ಸಂದೇಶವನ್ನು ಕಾಮಿಡಿ ರೂಪದಲ್ಲಿ ಹೇಳಿದ್ದು ಅಭಾಸ ಎನಿಸುತ್ತದೆ. ಒಟ್ಟಾರೆ ಅಯೋಗ್ಯ-2 ಆರಂಭದಲ್ಲಿ ಬೇಸರ, ಆನಂತರ ಸಡಗರ ತರುತ್ತಾನೆ.
ಚಿತ್ರದ ಓಟಕ್ಕೆ ಕೈ ಜೋಡಿಸಲು ಡೈನಾಮಿಕ್ ಸ್ಟಾರ್ ದೇವರಾಜ್ ರಾಜಕಾರಣಿಯಾಗಿ ಕಾಣಿಸಿಕೊಂಡು ನಿಜಕ್ಕೂ ವೇಗ ತರುತ್ತಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ತಿರುವು ನೀಡುವ ಪಾತ್ರದಲ್ಲಿ ಕಾಣಿಸಿಕೊಂಡು ಖುಷಿ ಕೊಡುತ್ತಾರೆ. ಆದರೆ ಆ ಪಾತ್ರ ಯಾವುದು ಎಂಬುದನ್ನು ಸಿನಿಮಾ ನೋಡಿಯೇ ಅರಿತರೆ ಚಂದ.

ಕಥೆಯನ್ನು ನೇರವಾಗಿ ಪ್ರೇಕ್ಷಕರಿಗೆ ಹೇಳಿದ್ದರೂ ಅಭಾಸ ಎನಿಸುತ್ತಿರಲಿಲ್ಲ. ಕಾಡಿನಲ್ಲಿ ಸಿಂಹ ತನ್ನ. ಮರಿಗಳಿಗೆ ಹಳೇ ಅಯೋಗ್ಯನ ಕಥೆ ಹೇಳಿ, ಈಗಿನ ಎರಡನೇ ಅಯೋಗ್ಯನ ಕಥೆಯನ್ನು ಹೇಳುವ ಗ್ರಾಫಿಕ್ಸ್ ಯೋಚನೆ ಅಗತ್ಯ ಇರಲಿಲ್ಲ. ನಿರ್ದೇಶನದ ವಿಷಯದಲ್ಲಿ ಮಹೇಶ್ ಮೊದಲಿನ ಉತ್ಸಾಹ ತೋರಿಸಿದಂತೆ ಕಾಣಲ್ಲ. ನಿರ್ಮಾಪಕ ಮುನೇಗೌಡ ಚಿತ್ರಕ್ಕೆ ಕೊರತೆ ಮಾಡಿಲ್ಲ ಎಂಬುದು ಸಿನಿಮಾ ನೋಡಿದರೆ ಗೊತ್ತಾಗುತ್ತದೆ. ಅರ್ಜುನ್ ಜನ್ಯ ಹಿಂದಿನ ಹಿನ್ನೆಲೆ ಸಂಗೀತವನ್ನು ಇಲ್ಲೂ ಮುಂದುವರಿಸಿದ್ದಾರೆ. ಎರಡು ಹಾಡುಗಳು ಗುನುಗುವಂತಿವೆ. ವಿಶ್ವಜಿತ್‌ರಾವ್ ಕ್ಯಾಮೆರಾ ವರ್ಕ್ ಫೈಟಿಂಗ್ ಮತ್ತು ಸಾಂಗ್ ಶೂಟ್‌ನಲ್ಲಿ ಮಿಂಚುತ್ತದೆ. ಇನ್ನುಳಿದಂತೆ ಪರ್ವಾಗಿಲ್ಲ. ಮಾಸ್ತಿ ಉಪಾರಹಳ್ಳಿ ಬರೆದ ಸಂಭಾಷಣೆ ಚುರುಕಾಗಿದೆ, ಖುಷಿ ನೀಡುತ್ತದೆ.

ಸತೀಶ್ ನೀನಾಸಂ ಮತ್ತದೇ ಮಂಡ್ಯ ಬ್ಯಾಕ್‌ಡ್ರಾಪ್ ಸಿನಿಮಾದಲ್ಲಿ ಸ್ಕೋರ್ ಮಾಡಿದ್ದಾರೆ. ರಚಿತಾ ರಾಮ್ ಪಾತ್ರ ಆರಂಭದಲ್ಲಿ ಸೊರಗಿದಂತೆ ಕಂಡು, ಬಳಿಕ ಚೇತರಿಕೆ ಕಾಣುತ್ತದೆ. ಪಾತ್ರಕ್ಕೆ ರಚ್ಚು ನ್ಯಾಯ ಒದಗಿಸಿದ್ದಾರೆ. ರವಿಶಂಕರ್ ಹಳ್ಳಿಯ ಖಳನಾಗಿ ಅಬ್ಬರಿಸಿದ್ದಾರೆ. ತಬಲಾ ನಾಣಿ ಶಕುನಿ ರೀತಿಯ ಪಾತ್ರ ನಿರ್ವಹಿಸಿ, ಮೆಚ್ಚುಗೆ ಗಳಿಸುತ್ತಾರೆ. ಗಿರಿ, ಶಿವರಾಜ್ ಚಿತ್ರದ ಬಹುತೇಕ ಫ್ರೇಂಗಳಲ್ಲಿ ಕಾಣಿಸಿಕೊಂಡು ಹೀರೋ ರೇಂಜ್‌ಗೆ ಮಿಂಚಿದ್ದಾರೆ. ಸುಂದರ ರಾಜ್ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡು ಇಷ್ಟವಾಗುತ್ತಾರೆ. ಚಿತ್ರದ ಕೊನೆಗೆ ಸಾಧು ಕೋಕಿಲಾ ಭೈರತಿ ವೇಷದಿಂದ ರಾಗಿಭಾಯ್ ಆಗಿ ಕಾಮಿಡಿಯ ಮೋಡಿ ಮಾಡಿದ್ದಾರೆ.

ಬಹಳ ದಿನಗಳ ನಂತರ ಮತ್ತೊಮ್ಮೆ ಗ್ರಾಮೀಣ ಪರಿಸರದ ಅದರಲ್ಲೂ ಮಂಡ್ಯ ವಾತಾವರಣವನ್ನ ತೆರೆಯ ಮೇಲೆ ನೋಡಲು ಇಷ್ಟಪಡುವವರಿಗೆ ಅಯೋಗ್ಯ-2 ಬೋನಸ್. ಯಾವುದೇ ಮುಜುಗರ ಇಲ್ಲದೇ ಮನೆ ಮಂದಿ ಒಟ್ಟಿಗೆ ಕುಳಿತು ನೋಡಬಹುದಾದ ಸಿನಿಮಾ ಅಯೋಗ್ಯ-2. ಕ್ಲೈಮ್ಯಾಕ್ಸ್‌ನಲ್ಲಿ ಈ ಸಿನಿಮಾದ 3ನೇ ಭಾಗ ತೆರೆಗೆ ಬರುವ ಸುಳಿವು ನೀಡಲಾಗಿದೆ. ಅದು ಬಹುಶಃ ಈ ಸಿನಿಮಾದ ಸೋಲು-ಗೆಲುವಿನ ಮೇಲೆ ನಿರ್ಧಾರ ಆಗಲಿದೆ.

ಪ್ರದರ್ಶನ: ಶಾರದಾ ಚಿತ್ರಮಂದಿರ, ಕೊಪ್ಪಳ, ರೇಟಿಂಗ್: *** (5ಕ್ಕೆ 3)

ಇದನ್ನೂ ನೋಡಿ: ‘ಶ್ರಮಿಕರ ದೈವ – ಯಕ್ಷಗಾನ ಮತ್ತು ಅಳವು ಅರಿಯದ ಭಾಷೆ: ತುಳು ಮತ್ತು ಬ್ಯಾರಿ’ | ಡಾ. ಗಣನಾಥ ಎಕ್ಕಾರು

Donate Janashakthi Media

Leave a Reply

Your email address will not be published. Required fields are marked *