ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ 84 ಲಕ್ಷ ಮತದಾರರಲ್ಲಿ ಕೇವಲ 6.5 ಲಕ್ಷ ಮಂದಿ ಮಾತ್ರ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ನಮೂನೆ-6 ಮತ್ತು 6A ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅಂದರೆ, ಮರು ಸೇರ್ಪಡೆಗೆ ಅರ್ಹರೆಂದು ಪರಿಗಣಿಸಲಾದ ಮತದಾರರ ಪೈಕಿ ಸುಮಾರು ಶೇ.2ರಷ್ಟು ಮಂದಿ ಮಾತ್ರ ಇದುವರೆಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಎಸ್ಐಆರ್
ಜೂನ್ 16ರ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 5.54 ಕೋಟಿ ಮತದಾರರಿದ್ದರು. ಮನೆ-ಮನೆ ಸಮೀಕ್ಷೆ ಹಾಗೂ ಎಸ್ಐಆರ್ ಪ್ರಕ್ರಿಯೆಯ ಬಳಿಕ 1.08 ಕೋಟಿ ಹೆಸರುಗಳನ್ನು ಗೈರುಹಾಜರು, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಹೆಸರುಗಳು ಹಾಗೂ ಗಣತಿಪತ್ರಕ್ಕೆ ಸಹಿ ಹಾಕದವರು ಸೇರಿದಂತೆ ASDDO ವರ್ಗದಲ್ಲಿ ಗುರುತಿಸಲಾಯಿತು. ಆಗಸ್ಟ್ 24ರಂದು ಪ್ರಕಟವಾದ ಕರಡು ಪಟ್ಟಿಯಲ್ಲಿ ರಾಜ್ಯದ ಒಟ್ಟು ಮತದಾರರ ಸಂಖ್ಯೆ ಸುಮಾರು 4.47 ಕೋಟಿಗೆ ಇಳಿಕೆಯಾಗಿದೆ.
ಆದರೆ ಮೃತಪಟ್ಟವರು ಮತ್ತು ನಕಲಿ ಮತದಾರರು ಎಂದು ಗುರುತಿಸಲಾದವರನ್ನು ಹೊರತುಪಡಿಸಿದರೆ, ಗೈರುಹಾಜರು, ಸ್ಥಳಾಂತರಗೊಂಡವರು ಹಾಗೂ ಗಣತಿಪತ್ರಕ್ಕೆ ಸಹಿ ಹಾಕದವರು ಸೇರಿದಂತೆ ಸುಮಾರು 84 ಲಕ್ಷ ಮಂದಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶ ಹೊಂದಿದ್ದಾರೆ. ಇವರಿಗೆ ಮರು ಸೇರ್ಪಡೆಯಾಗಲು ನಮೂನೆ-6 ಸಲ್ಲಿಸಬೇಕು. ವಿದೇಶದಲ್ಲಿರುವ ಅರ್ಹ ಭಾರತೀಯ ಮತದಾರರು ನಮೂನೆ-6A ಮೂಲಕ ಅರ್ಜಿ ಸಲ್ಲಿಸಬಹುದು.
ಜೂನ್ 16ರಿಂದ ಸೆಪ್ಟೆಂಬರ್ 18ರವರೆಗೆ 6.4 ಲಕ್ಷಕ್ಕೂ ಹೆಚ್ಚು ಮಂದಿ ನಮೂನೆ-6 ಮೂಲಕ ಅರ್ಜಿ ಸಲ್ಲಿಸಿದ್ದು, 4,302 ಮಂದಿ NRI ಮತದಾರರು ನಮೂನೆ-6A ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಆದರೆ ಆಗಸ್ಟ್ 23ರಂದು ASDDO ಪಟ್ಟಿಯನ್ನು ಸಾರ್ವಜನಿಕಗೊಳಿಸಿದ ಬಳಿಕ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ ಕೇವಲ 1.07 ಲಕ್ಷ. ಅಂದರೆ, ಹೆಸರು ಪಟ್ಟಿಯಿಂದ ಹೊರಗುಳಿದಿರುವುದು ಬಹಿರಂಗವಾದ ನಂತರವೂ ಮರು ಸೇರ್ಪಡೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಸೀಮಿತವಾಗಿದೆ. ಎಸ್ಐಆರ್
ಇದನ್ನೂ ಓದಿ : SIR ಪ್ರಕ್ರಿಯೆ | 18.84 ಲಕ್ಷ ಮತದಾರರಿಗೆ ನೋಟಿಸ್ ಇನ್ನೂ ತಲುಪಿಲ್ಲ
ಈ ಅಂಕಿಅಂಶಗಳಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ, 43.81 ಲಕ್ಷ ಮತದಾರರಿಗೆ ನೋಟಿಸ್ಗಳನ್ನು ನೀಡಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಇದರಲ್ಲಿ ಸುಮಾರು 79.8% ನೋಟಿಸ್ಗಳು ವಿತರಿಸಲಾಗಿದ್ದು, ವಿತರಿಸಲಾದ ನೋಟಿಸ್ಗಳ ಪೈಕಿ ಶೇ.50.4ರಷ್ಟು ಪ್ರಕರಣಗಳಲ್ಲಿ ವಿಚಾರಣೆ ನಡೆದಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ನೋಟಿಸ್ ವಿತರಣೆಯಲ್ಲಿಯೂ ಜಿಲ್ಲಾವಾರು ವ್ಯತ್ಯಾಸ ಕಂಡುಬಂದಿದೆ. ಹಾಸನದಲ್ಲಿ 79,774 ನೋಟಿಸ್ಗಳಲ್ಲಿ ಶೇ.47.2ರಷ್ಟು ಪ್ರಕರಣಗಳ ವಿಚಾರಣೆ ನಡೆದಿದ್ದರೆ, ರಾಮನಗರದಲ್ಲಿ 19,696 ನೋಟಿಸ್ಗಳಲ್ಲಿ ಶೇ.83.1ರಷ್ಟು ವಿಚಾರಣೆ ನಡೆದಿದೆ. ದಾವಣಗೆರೆಯಲ್ಲಿ 7,086 ನೋಟಿಸ್ಗಳಲ್ಲಿ ಶೇ.67.6ರಷ್ಟು ವಿಚಾರಣೆ ನಡೆದಿದೆ. ಮತ್ತೊಂದೆಡೆ, BBMP ದಕ್ಷಿಣ ವಲಯದಲ್ಲಿ ನೋಟಿಸ್ ವಿತರಣೆಯ ಪ್ರಮಾಣ ಶೇ.60.5ರಷ್ಟಿದ್ದು, ಬೆಂಗಳೂರು ನಗರದಲ್ಲಿ ಶೇ.64.2ರಷ್ಟಿದೆ.
ಚುನಾವಣಾ ಆಯೋಗದ ಪ್ರಕಾರ, ಸೆಪ್ಟೆಂಬರ್ 23ರೊಳಗೆ ನಮೂನೆ-6 ಸಲ್ಲಿಸುವವರಿಗೆ ಅಕ್ಟೋಬರ್ 27ರಂದು ಪ್ರಕಟವಾಗಲಿರುವ ಅಂತಿಮ ಎಸ್ಐಆರ್ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ. ಸೆಪ್ಟೆಂಬರ್ 23ರ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಶೀಲನೆಯ ಬಳಿಕ ಪೂರಕ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.
ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ನಮೂನೆ-6 ಸಲ್ಲಿಸಲು ಪ್ರತ್ಯೇಕವಾಗಿ ನಿಗದಿತ ಅಂತಿಮ ದಿನಾಂಕವಿಲ್ಲ ಎಂದು ತಿಳಿಸಿದ್ದಾರೆ. ಆದರೆ ಸೆಪ್ಟೆಂಬರ್ 23ರೊಳಗೆ ಅರ್ಜಿ ಸಲ್ಲಿಸಿದರೆ ಅಂತಿಮ ಎಸ್ಐಆರ್ ಪಟ್ಟಿಯಲ್ಲಿ ಹೆಸರು ಸೇರುವ ಸಾಧ್ಯತೆ ಇರುತ್ತದೆ ಎಂದು ಚುನಾವಣಾ ಇಲಾಖೆ ತಿಳಿಸಿದೆ. ಮತದಾರರ ಸೇರ್ಪಡೆಗೆ ಸಹಾಯವಾಗಲು ಆಗಸ್ಟ್ 29–30ರಂದು ವಿಶೇಷ ಶಿಬಿರಗಳನ್ನು ನಡೆಸಲಾಗಿದ್ದು, ಈ ವಾರಾಂತ್ಯದಲ್ಲೂ ಅಂತಹ ಶಿಬಿರಗಳನ್ನು ಆಯೋಜಿಸಲಾಗಿದೆ.
ಹೀಗಾಗಿ, ಎಸ್ಐಆರ್ನಲ್ಲಿ ಹೊರಗುಳಿದ 84 ಲಕ್ಷ ಮತದಾರರ ಪೈಕಿ ಕೇವಲ ಶೇ.2ರಷ್ಟು ಮಂದಿ ಮಾತ್ರ ಮರು ಸೇರ್ಪಡೆಗೆ ಅರ್ಜಿ ಸಲ್ಲಿಸಿರುವುದು, ಉಳಿದ ದೊಡ್ಡ ಸಂಖ್ಯೆಯ ಮತದಾರರು ತಮ್ಮ ಹೆಸರುಗಳನ್ನು ಮರಳಿ ಪಟ್ಟಿಗೆ ಸೇರಿಸಲು ಮುಂದಾಗದಿರುವುದರ ಕಾರಣವೇನು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಅಂಕಿಅಂಶಗಳು ಸೆಪ್ಟೆಂಬರ್ 18ರವರೆಗಿನ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿದ್ದು, ಸೆಪ್ಟೆಂಬರ್ 23ರ ಗಡುವಿನೊಳಗೆ ಅರ್ಜಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಎಸ್ಐಆರ್
ಇದನ್ನೂ ನೋಡಿ : SIR | 14 ಕೋಟಿ ಮತದಾರರ ಹೆಸರು ಡಿಲೀಟ್? ಮತದಾನದ ಹಕ್ಕಿಗೇ ಕತ್ತರಿ! | Janashakthi Media
