SIR ಪ್ರಕ್ರಿಯೆ | 18.84 ಲಕ್ಷ ಮತದಾರರಿಗೆ ನೋಟಿಸ್‌ ಇನ್ನೂ ತಲುಪಿಲ್ಲ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ರಾಜ್ಯದ ರಾಜಕೀಯ ಪಕ್ಷಗಳಿಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಆಯೋಗದ ಅಂಕಿಅಂಶಗಳ ಪ್ರಕಾರ, ರಾಜ್ಯಾದ್ಯಂತ ಒಟ್ಟು 43,81,760 ನೋಟಿಸ್‌ಗಳನ್ನು ಸಿದ್ಧಪಡಿಸಲಾಗಿದ್ದು, ಈ ಪೈಕಿ 24,97,075 ನೋಟಿಸ್‌ಗಳನ್ನು ಮತದಾರರಿಗೆ ವಿತರಿಸಲಾಗಿದೆ. ಇನ್ನೂ 18,84,685 ನೋಟಿಸ್‌ಗಳ ವಿತರಣೆ ಬಾಕಿಯಿದೆ. ಅಂದರೆ ಒಟ್ಟು ಸಿದ್ಧಪಡಿಸಿದ ನೋಟಿಸ್‌ಗಳಲ್ಲಿ ಶೇ.56.99ರಷ್ಟು ಮಾತ್ರ ವಿತರಣೆ ಪೂರ್ಣಗೊಂಡಿದೆ. SIR 

ನೋಟಿಸ್‌ ವಿತರಣೆ ಮತ್ತು ವಿಚಾರಣೆಯ ಪ್ರಕ್ರಿಯೆಯಲ್ಲೂ ಜಿಲ್ಲಾವಾರು ಭಾರೀ ವ್ಯತ್ಯಾಸ ಕಂಡುಬರುತ್ತಿದೆ. ರಾಮನಗರದಲ್ಲಿ ಸಿದ್ಧಪಡಿಸಿದ 19,696 ನೋಟಿಸ್‌ಗಳ ಪೈಕಿ 19,680 ನೋಟಿಸ್‌ಗಳನ್ನು ವಿತರಿಸಲಾಗಿದ್ದು, ಶೇ.99.92ರಷ್ಟು ವಿತರಣೆ ಪೂರ್ಣಗೊಂಡಿದೆ. ಶಿವಮೊಗ್ಗದಲ್ಲಿ ಶೇ.98.69, ಬಳ್ಳಾರಿಯಲ್ಲಿ ಶೇ.97.81, ಹಾಸನದಲ್ಲಿ ಶೇ.97.81ರಷ್ಟು ನೋಟಿಸ್‌ ವಿತರಣೆ ನಡೆದಿದೆ. ಮತ್ತೊಂದೆಡೆ, ಬೆಂಗಳೂರು ನಗರದಲ್ಲಿ 9,45,732 ನೋಟಿಸ್‌ಗಳ ಪೈಕಿ 3,39,322 ಮಾತ್ರ ವಿತರಿಸಲಾಗಿದ್ದು, 6,06,410 ನೋಟಿಸ್‌ಗಳು ಇನ್ನೂ ಬಾಕಿಯಿವೆ. ಬಿಬಿಎಂಪಿ ಉತ್ತರದಲ್ಲಿ 6,13,454 ನೋಟಿಸ್‌ಗಳಲ್ಲಿ 2,98,833 ವಿತರಣೆಗೊಂಡಿದ್ದು, 3,14,621 ಬಾಕಿಯಿದೆ. ಬಿಬಿಎಂಪಿ ದಕ್ಷಿಣದಲ್ಲಿ 4,18,101 ನೋಟಿಸ್‌ಗಳಲ್ಲಿ 1,54,121 ವಿತರಣೆಗೊಂಡಿದ್ದು, 2,63,980 ಬಾಕಿಯಿದೆ. ಬಿಬಿಎಂಪಿ ಕೇಂದ್ರದಲ್ಲಿ 4,29,316 ನೋಟಿಸ್‌ಗಳಲ್ಲಿ 1,51,549 ವಿತರಣೆಗೊಂಡಿದ್ದು, 2,77,767 ಬಾಕಿಯಿದೆ.

ನೋಟಿಸ್‌ ವಿತರಣೆಗೊಂಡವರ ಪೈಕಿ ವಿಚಾರಣೆಯೂ ನಡೆಯುತ್ತಿದೆ. ರಾಜ್ಯದಲ್ಲಿ ವಿತರಿಸಲಾದ 24,97,075 ನೋಟಿಸ್‌ಗಳಲ್ಲಿ 7,03,710 ವಿಚಾರಣೆಗಳು ಪೂರ್ಣಗೊಂಡಿದ್ದು, 17,93,365 ವಿಚಾರಣೆಗಳು ಬಾಕಿಯಿವೆ. ಒಟ್ಟಾರೆ ವಿತರಿಸಲಾದ ನೋಟಿಸ್‌ಗಳಿಗೆ ಹೋಲಿಸಿದರೆ ಪೂರ್ಣಗೊಂಡ ವಿಚಾರಣೆಗಳ ಪ್ರಮಾಣ ಶೇ.28.18ರಷ್ಟಿದೆ. ಬೆಂಗಳೂರು ನಗರದಲ್ಲಿ ವಿತರಿಸಲಾದ 3,39,322 ನೋಟಿಸ್‌ಗಳ ಪೈಕಿ 1,29,372 ವಿಚಾರಣೆಗಳು ನಡೆದಿದ್ದು, 2,09,950 ಬಾಕಿಯಿವೆ. ಬಿಬಿಎಂಪಿ ಉತ್ತರದಲ್ಲಿ 1,12,587 ಹಾಗೂ ಬಿಬಿಎಂಪಿ ದಕ್ಷಿಣದಲ್ಲಿ 45,651 ವಿಚಾರಣೆಗಳು ಪೂರ್ಣಗೊಂಡಿವೆ.

ಇದೇ ವೇಳೆ, 2026ರ ಜೂನ್‌ 16ರಿಂದ ಸೆಪ್ಟೆಂಬರ್‌ 9ರವರೆಗೆ ರಾಜ್ಯದಲ್ಲಿ ಒಟ್ಟು 16,02,372 ಅರ್ಜಿಗಳು ಸ್ವೀಕರಿಸಲ್ಪಟ್ಟಿವೆ. ಇದರಲ್ಲಿ Form-6 ಮೂಲಕ ಹೊಸ ಮತದಾರರ ಸೇರ್ಪಡೆಗೆ 5,80,431 ಅರ್ಜಿಗಳು, Form-6A ಮೂಲಕ 4,131 ಅರ್ಜಿಗಳು, Form-7 ಮೂಲಕ 34,631 ಅರ್ಜಿಗಳು ಹಾಗೂ Form-8 ಮೂಲಕ 9,83,179 ಅರ್ಜಿಗಳು ಬಂದಿವೆ. SIR 

ಇದನ್ನೂ ಓದಿ :ಸಿನಿಮಾ ಟಿಕೆಟ್‌ಗೆ ಮತ್ತೊಂದು ಹೊರೆ | ಶೇ.2ರ ಸೆಸ್‌ ಮರುಪರಿಶೀಲನೆಗೆ ಮನವಿ

ಜಿಲ್ಲಾವಾರು ನೋಡಿದರೆ ಬೆಂಗಳೂರು ನಗರದಲ್ಲಿ ಒಟ್ಟು 2,11,060 ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದು, ಅವುಗಳಲ್ಲಿ 1,23,119 Form-8 ಅರ್ಜಿಗಳಾಗಿವೆ. ಬಿಬಿಎಂಪಿ ಉತ್ತರದಲ್ಲಿ 1,14,435, ಬಿಬಿಎಂಪಿ ದಕ್ಷಿಣದಲ್ಲಿ 86,229 ಹಾಗೂ ಬಿಬಿಎಂಪಿ ಕೇಂದ್ರದಲ್ಲಿ 81,963 ಅರ್ಜಿಗಳು ಬಂದಿವೆ. ದಕ್ಷಿಣ ಕನ್ನಡದಲ್ಲಿ 69,541, ಮೈಸೂರು 86,796, ಬೆಳಗಾವಿ 81,960 ಮತ್ತು ಕಲಬುರಗಿ 74,855 ಅರ್ಜಿಗಳು ಸ್ವೀಕರಿಸಲ್ಪಟ್ಟಿವೆ.

ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, 2026ರ ಆಗಸ್ಟ್‌ 17ರಿಂದ ಸೆಪ್ಟೆಂಬರ್‌ 16ರವರೆಗೆ Claims and Objections ಅವಧಿಯಲ್ಲಿ Form-6 ಸಲ್ಲಿಸಿದ ಅರ್ಹ ವ್ಯಕ್ತಿಗಳ ಹೆಸರುಗಳು, ERO ಪರಿಶೀಲನೆಯಲ್ಲಿ ಅರ್ಹತೆ ಕಂಡುಬಂದರೆ, ಅಕ್ಟೋಬರ್‌ 19, 2026ರಂದು ಪ್ರಕಟವಾಗಲಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲಿವೆ. ಅರ್ಹರು Voters’ Portal, ECINET ಮೊಬೈಲ್‌ ಅಪ್ಲಿಕೇಶನ್‌, ಸಂಬಂಧಿತ ERO ಕಚೇರಿ ಅಥವಾ BLO ಮೂಲಕ Form-6 ಸಲ್ಲಿಸಬಹುದು.

Form-7 ಮೂಲಕ ಈಗಿರುವ ಮತದಾರರ ಪಟ್ಟಿಯಲ್ಲಿನ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ ಸಲ್ಲಿಸುವುದು ಅಥವಾ ಹೆಸರು ಅಳಿಸುವಂತೆ ಮನವಿ ಮಾಡಬಹುದು. ಮರಣ, ವಯಸ್ಸಿನ ಅರ್ಹತೆ ಇಲ್ಲದಿರುವುದು, ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, ಈಗಾಗಲೇ ಬೇರೆಡೆ ನೋಂದಣಿಯಾಗಿರುವುದು ಅಥವಾ ಭಾರತೀಯ ನಾಗರಿಕರಲ್ಲದಿರುವುದು ಮುಂತಾದ ಕಾರಣಗಳನ್ನು Form-7ರಲ್ಲಿ ನಮೂದಿಸಲು ಅವಕಾಶವಿದೆ.

Form-8 ಮೂಲಕ ಮತದಾರರು ವಿಳಾಸ ಬದಲಾವಣೆ, ಮತದಾರರ ಪಟ್ಟಿಯಲ್ಲಿನ ಮಾಹಿತಿಯ ತಿದ್ದುಪಡಿ, ಬದಲಿ EPIC ಕಾರ್ಡ್‌ ಹಾಗೂ ಅಂಗವಿಕಲ ವ್ಯಕ್ತಿ ಎಂದು ಗುರುತಿಸುವಿಕೆ ಸೇರಿದಂತೆ ವಿವಿಧ ಮನವಿಗಳನ್ನು ಸಲ್ಲಿಸಬಹುದು. ಹೆಸರು, ಲಿಂಗ, ಜನ್ಮದಿನಾಂಕ/ವಯಸ್ಸು, ಸಂಬಂಧದ ವಿವರ, ವಿಳಾಸ, ಮೊಬೈಲ್‌ ಸಂಖ್ಯೆ ಮತ್ತು ಫೋಟೊ ಸೇರಿದಂತೆ ನಮೂದಾದ ಮಾಹಿತಿಯಲ್ಲಿ ತಿದ್ದುಪಡಿ ಕೇಳಲು ಅವಕಾಶವಿದೆ.

ಹೀಗಾಗಿ, ರಾಜ್ಯದಲ್ಲಿ 43.81 ಲಕ್ಷ ನೋಟಿಸ್‌ಗಳ ಪೈಕಿ ಇನ್ನೂ 18.84 ಲಕ್ಷ ನೋಟಿಸ್‌ಗಳು ವಿತರಣೆಯಾಗಬೇಕಿದ್ದು, ಈಗಾಗಲೇ ವಿತರಿಸಲಾದ ನೋಟಿಸ್‌ಗಳ ಪೈಕಿ 17.93 ಲಕ್ಷ ವಿಚಾರಣೆಗಳು ಬಾಕಿಯಿರುವುದು ಎಸ್‌ಐಆರ್‌ ಪ್ರಕ್ರಿಯೆಯ ಮುಂದಿನ ಹಂತದಲ್ಲಿ ದೊಡ್ಡ ಪ್ರಮಾಣದ ಪರಿಶೀಲನಾ ಕಾರ್ಯ ಉಳಿದಿರುವುದನ್ನು ತೋರಿಸುತ್ತದೆ. ವಿಶೇಷವಾಗಿ ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ನೋಟಿಸ್‌ ವಿತರಣೆ ಹಾಗೂ ವಿಚಾರಣೆ ಬಾಕಿಯಿರುವ ಪ್ರಮಾಣ ಗಮನಾರ್ಹವಾಗಿದೆ. SIR 

ಇದನ್ನೂ ಓದಿ : “20 ವರ್ಷದಿಂದ ಓಟ್‌ ಹಾಕೀನಿ… ಈಗ ನೋಟೀಸ್‌ ಯಾಕೆ?” | SIR ಸಂತ್ರಸ್ತರ ಸಂಕಟಗಳು Janashakthi Media

Donate Janashakthi Media

Leave a Reply

Your email address will not be published. Required fields are marked *