ಛತ್ತೀಸ್‌ಗಢದಲ್ಲಿ ಕಿರಿಯ ವೈದ್ಯರ ಪ್ರತಿಭಟನೆ: 17 ಬೇಡಿಕೆ ಈಡೇರಿಕೆಗೆ ಆಗ್ರಹ

ರಾಯ್‌ಪುರ: 17 ಅಂಶಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಛತ್ತೀಸ್‌ಗಢದ ಕಿರಿಯ ವೈದ್ಯರು ಹಂತ ಹಂತವಾಗಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬೇಡಿಕೆಗಳ ಕುರಿತು ರಾಜ್ಯ ಸರ್ಕಾರದಿಂದ ಸ್ಪಷ್ಟ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 21ರಿಂದ ಪ್ರತಿಭಟನೆ ಆರಂಭಿಸುವುದಾಗಿ ಜೂನಿಯರ್‌ ಡಾಕ್ಟರ್ಸ್‌ ಅಸೋಸಿಯೇಷನ್‌ (JDA) ತಿಳಿಸಿದೆ. ಛತ್ತೀಸ್‌ಗಢ

ರಾಜ್ಯದ ವಿವಿಧ ಸರ್ಕಾರಿ ಆರೋಗ್ಯ ಕೇಂದ್ರಗಳು ಹಾಗೂ ವೈದ್ಯಕೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರೆಸಿಡೆಂಟ್‌ ವೈದ್ಯರು, ಇಂಟರ್ನ್‌ಗಳು ಹಾಗೂ ಬಾಂಡೆಡ್‌ ವೈದ್ಯರು ಸೇರಿದಂತೆ ಸುಮಾರು 5,000 ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಛತ್ತೀಸ್‌ಗಢ ಇನ್‌-ಸರ್ವಿಸ್‌ ಡಾಕ್ಟರ್ಸ್‌ ಅಸೋಸಿಯೇಷನ್‌ ಮತ್ತು ಛತ್ತೀಸ್‌ಗಢ ಡಾಕ್ಟರ್ಸ್‌ ಫೆಡರೇಷನ್‌ ಸೇರಿದಂತೆ ಇತರ ವೈದ್ಯಕೀಯ ಸಂಘಟನೆಗಳೂ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.

ಮೊದಲ ಹಂತದಲ್ಲಿ ಸೆಪ್ಟೆಂಬರ್‌ 21ರಿಂದ ಹೊರರೋಗಿ ವಿಭಾಗ (OPD) ಸೇವೆ, ನಿಯಮಿತ ಒಳರೋಗಿ ವಿಭಾಗದ (IPD) ಕರ್ತವ್ಯ, ಆಯ್ದ ಶಸ್ತ್ರಚಿಕಿತ್ಸೆಗಳು ಹಾಗೂ ಇತರ ತುರ್ತು ಅಲ್ಲದ ವೈದ್ಯಕೀಯ ಸೇವೆಗಳನ್ನು ಬಹಿಷ್ಕರಿಸಲು ವೈದ್ಯರು ನಿರ್ಧರಿಸಿದ್ದಾರೆ. ಸರ್ಕಾರ ಬೇಡಿಕೆಗಳ ಕುರಿತು ಸ್ಪಷ್ಟ ಕ್ರಮ ಕೈಗೊಳ್ಳದಿದ್ದರೆ ಸೆಪ್ಟೆಂಬರ್‌ 23ರಿಂದ ಪ್ರತಿಭಟನೆಯನ್ನು ಮತ್ತಷ್ಟು ವಿಸ್ತರಿಸುವ ಎಚ್ಚರಿಕೆಯನ್ನು ಸಂಘಟನೆ ನೀಡಿದೆ. ತುರ್ತು ವೈದ್ಯಕೀಯ ಸೇವೆಗಳು ಹಾಗೂ ರೋಗಿಗಳ ಸುರಕ್ಷತೆಯನ್ನು ಪರಿಗಣಿಸಿ ಕ್ರಮ ಕೈಗೊಳ್ಳುವುದಾಗಿ JDA ತಿಳಿಸಿದೆ. ಛತ್ತೀಸ್‌ಗಢ

ಇದನ್ನೂ ಓದಿ : UPI ಶುಲ್ಕಕ್ಕೆ ವಿರೋಧ | ‘ಇದು ನೇರ ದರೋಡೆ’ ಎಂದ ಅಭಿಜೀತ್ ದಿಪ್ಕೆ

ವೈದ್ಯರ ಪ್ರಮುಖ ಬೇಡಿಕೆಗಳಲ್ಲಿ MBBS ಇಂಟರ್ನ್‌ಗಳ ಸ್ಟೈಪೆಂಡ್‌ ಹೆಚ್ಚಳ, ಸ್ನಾತಕೋತ್ತರ ರೆಸಿಡೆಂಟ್‌ ವೈದ್ಯರು, ಬಾಂಡೆಡ್‌ ಜೂನಿಯರ್‌ ರೆಸಿಡೆಂಟ್‌ಗಳು ಹಾಗೂ ಸೀನಿಯರ್‌ ರೆಸಿಡೆಂಟ್‌ಗಳ ವೇತನ ಮತ್ತು ಗೌರವಧನ ಪರಿಷ್ಕರಣೆ ಸೇರಿದಂತೆ ವೈದ್ಯರ ಸೇವಾ ಪರಿಸ್ಥಿತಿಗೆ ಸಂಬಂಧಿಸಿದ ಹಲವು ಬೇಡಿಕೆಗಳು ಸೇರಿವೆ.

ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರವು MBBS ಇಂಟರ್ನ್‌ಗಳ ಮಾಸಿಕ ಸ್ಟೈಪೆಂಡ್‌ ಅನ್ನು ₹15,900ರಿಂದ ₹25,000ಕ್ಕೆ ಹೆಚ್ಚಿಸುವ ಭರವಸೆ ನೀಡಿತ್ತು ಎಂದು ವರದಿಯಾಗಿದೆ. ಆದರೆ ಪರಿಷ್ಕೃತ ಸ್ಟೈಪೆಂಡ್‌ ಜಾರಿಗೆ ಸಂಬಂಧಿಸಿದಂತೆ ಸ್ಪಷ್ಟ ಆದೇಶ ಹೊರಬಿದ್ದಿಲ್ಲ ಎಂದು ವೈದ್ಯರು ಆಕ್ಷೇಪಿಸಿದ್ದಾರೆ. 2023ರಿಂದ ಇಂಟರ್ನ್‌ಗಳ ಸ್ಟೈಪೆಂಡ್‌ನಲ್ಲಿ ಬದಲಾವಣೆ ಆಗಿಲ್ಲ ಎಂಬುದು ವೈದ್ಯಕೀಯ ವಿದ್ಯಾರ್ಥಿಗಳ ಸಂಘಟನೆಗಳ ವಾದವಾಗಿದೆ.

JDA ಪ್ರಕಾರ, ಕಳೆದ ಆರು ತಿಂಗಳಿನಿಂದ ಮನವಿ, ಪತ್ರ ವ್ಯವಹಾರ ಮತ್ತು ಸರ್ಕಾರದೊಂದಿಗೆ ಮಾತುಕತೆಗಳ ಮೂಲಕ ಬೇಡಿಕೆಗಳನ್ನು ಮುಂದಿಟ್ಟಿದ್ದರೂ ನಿರೀಕ್ಷಿತ ಕ್ರಮ ಕೈಗೊಳ್ಳಲಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಕೊನೆಯ ಹಂತದ ಕ್ರಮವಾಗಿದೆ ಎಂದು ಸಂಘಟನೆ ಹೇಳಿದೆ. ಯಾವುದೇ ನಿರ್ದಿಷ್ಟ ಅಧಿಕಾರಿ ಅಥವಾ ವೈದ್ಯಕೀಯ ಕಾಲೇಜಿನ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ; ಬದಲಾಗಿ ವೈದ್ಯರ ಸೇವಾ ಪರಿಸ್ಥಿತಿ, ವೃತ್ತಿಪರ ಹಕ್ಕುಗಳು ಮತ್ತು ದೀರ್ಘಕಾಲೀನ ವೃತ್ತಿ ಭದ್ರತೆಗೆ ಸಂಬಂಧಿಸಿದ ನೀತಿ ಮಟ್ಟದ ಬದಲಾವಣೆಗಳನ್ನು ಸಂಘಟನೆ ಒತ್ತಾಯಿಸುತ್ತಿದೆ.

ರಾಜ್ಯ ಸರ್ಕಾರ ತಕ್ಷಣವೇ ಉನ್ನತ ಮಟ್ಟದ ಸಭೆ ಕರೆದು 17 ಬೇಡಿಕೆಗಳ ಕುರಿತು ಸಮಯಬದ್ಧ ಪರಿಹಾರದ ರೂಪುರೇಷೆ ರೂಪಿಸಬೇಕು ಎಂದು JDA ಆಗ್ರಹಿಸಿದೆ. ಸರ್ಕಾರ ಸ್ಪಷ್ಟ ಮತ್ತು ಕಾರ್ಯಗತಗೊಳಿಸಬಹುದಾದ ಕ್ರಮಕ್ಕೆ ಮುಂದಾದರೆ ಮಾತುಕತೆಗೆ ಸಿದ್ಧವಿರುವುದಾಗಿ ಸಂಘಟನೆ ತಿಳಿಸಿದೆ. ಪ್ರತಿಭಟನೆ ಮುಂದುವರಿದರೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ OPD ಹಾಗೂ ಆಯ್ದ ಚಿಕಿತ್ಸಾ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಛತ್ತೀಸ್‌ಗಢ

ಇದನ್ನೂ ನೋಡಿ : SIR | 14 ಕೋಟಿ ಮತದಾರರ ಹೆಸರು ಡಿಲೀಟ್‌? ಮತದಾನದ ಹಕ್ಕಿಗೇ ಕತ್ತರಿ! | Janashakthi Media

Donate Janashakthi Media

Leave a Reply

Your email address will not be published. Required fields are marked *