ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸುವ ಅಗತ್ಯವಿಲ್ಲ. ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಬದಲು ಪ್ರತಿಯೊಬ್ಬ ಮತದಾರನನ್ನೂ ಒಳಗೊಳ್ಳುವ ರೀತಿಯಲ್ಲಿ ಪ್ರಕ್ರಿಯೆ ನಡೆಸಬೇಕು. ‘ಮತದಾರರ ಪಟ್ಟಿಯಿಂದ ಹೊರಗುಳಿದ ಎರಡು ಕೋಟಿ ಜನರು ಮತ್ತೆ ಬಂದು ತಮ್ಮ ಮತಹಕ್ಕು ವಾಪಸ್ ಕೊಡಿ ಎಂದು ಕೇಳುವ ಪರಿಸ್ಥಿತಿ ಯಾಕೆ ತರಬೇಕು?’ ಎಂದು ನಟ ಪ್ರಕಾಶ್ ರಾಜ್ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ. ಎರಡು
ಎಸ್ಐಆರ್ ಪ್ರಕ್ರಿಯೆಗೆ ಸಾಕಷ್ಟು ಕಾಲಾವಕಾಶ ನೀಡಬೇಕು. ಗಣತಿ ನಮೂನೆ ಸಲ್ಲಿಕೆ ಪ್ರಕ್ರಿಯೆಯನ್ನು ಕನಿಷ್ಠ ಮೂರು ತಿಂಗಳು ವಿಸ್ತರಿಸಿ, ಒಟ್ಟಾರೆ ಪರಿಷ್ಕರಣೆಗೆ ಒಂದು ವರ್ಷದ ಅವಧಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಂಗಳವಾರ ನಾಗರಿಕ ಸಂಘಟನೆಗಳ ಮುಖಂಡರೊಂದಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರನ್ನು ಭೇಟಿ ಮಾಡಿದ ಪ್ರಕಾಶ್ ರಾಜ್, ಎಸ್ಐಆರ್ನಿಂದ ಅರ್ಹ ಮತದಾರರಿಗೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು.
‘ಮತದಾರರಿಗೆ ಎಸ್ಐಆರ್ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ’
‘ಕರ್ನಾಟಕದಲ್ಲಿ 5.54 ಕೋಟಿ ಮತದಾರರಿದ್ದಾರೆ. ಇಷ್ಟೊಂದು ಪ್ರಜ್ಞಾವಂತ ಸಮಾಜದಲ್ಲೂ ಕೊನೆಯ ಮತದಾರನಿಗೂ ಎಸ್ಐಆರ್ ಎಂದರೇನು ಎಂಬುದನ್ನು ಚುನಾವಣಾ ಆಯೋಗ ತಲುಪಿಸಿಲ್ಲ’ ಎಂದು ಪ್ರಕಾಶ್ ರಾಜ್ ಅಸಮಾಧಾನ ವ್ಯಕ್ತಪಡಿಸಿದರು. ಎರಡು
ಕೆಲವು ಪ್ರಕಟಣೆಗಳು, ಸಾಮಾಜಿಕ ಮಾಧ್ಯಮದ ಸಂದೇಶಗಳು ಅಥವಾ ಪತ್ರಿಕಾಗೋಷ್ಠಿಗಳ ಮೂಲಕ ಮಾಹಿತಿ ನೀಡಿದರೆ ಅದು ಪ್ರತಿಯೊಬ್ಬ ಮತದಾರನಿಗೂ ತಲುಪುವುದಿಲ್ಲ. ಇಂತಹ ದೊಡ್ಡ ಪ್ರಮಾಣದ ಪ್ರಕ್ರಿಯೆ ಆರಂಭಿಸುವ ಮುನ್ನ ವ್ಯಾಪಕ ಜನಜಾಗೃತಿ ಮೂಡಿಸಬೇಕಿತ್ತು ಎಂದು ಅವರು ಹೇಳಿದರು.
‘ಮನೆಗೆ ಬಂದಾಗ ಇರಲಿಲ್ಲ ಎಂದರೆ ಹೇಗೆ ಹೆಸರು ಡಿಲೀಟ್?’
ರಾಜ್ಯದಲ್ಲಿ ಈಗಾಗಲೇ 1.08 ಕೋಟಿ ಮತದಾರರನ್ನು ಎಎಸ್ಡಿಡಿಒ ವರ್ಗದಲ್ಲಿ ಗುರುತಿಸಲಾಗಿದೆ. ಮೃತಪಟ್ಟವರು ಅಥವಾ ನಕಲಿ ಮತದಾರರ ಹೆಸರುಗಳನ್ನು ಪರಿಶೀಲಿಸಿ ತೆಗೆದುಹಾಕುವುದು ಸಮರ್ಥನೀಯ. ಆದರೆ ಬಿಎಲ್ಒ ಗಣತಿ ನಮೂನೆ ನೀಡಲು ಮನೆಗೆ ಬಂದಾಗ ವ್ಯಕ್ತಿ ಮನೆಯಲ್ಲಿ ಇರಲಿಲ್ಲ ಅಥವಾ ಅವರು ವಿಳಾಸ ಬದಲಾಯಿಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಮತದಾರರ ಪಟ್ಟಿಯಿಂದಲೇ ಹೊರಗಿಡುವುದು ಹೇಗೆ ಸರಿಯಾಗುತ್ತದೆ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.
‘ಮನೆಗೆ ಬಂದಾಗ ಇರಲಿಲ್ಲ ಎಂದರೆ ಹೇಗೆ ಡಿಲೀಟ್ ಮಾಡುತ್ತೀರಿ? ವಿಳಾಸ ಬದಲಾಗಿದ್ದರೆ ಅವರನ್ನು ಮತ್ತೆ ಹೇಗೆ ಕರೆತರುತ್ತೀರಿ?’ ಎಂದು ಅವರು ಪ್ರಶ್ನಿಸಿದರು.
ಸ್ಥಳಾಂತರಗೊಂಡಿರುವ ಮತದಾರರಿಗೆ ನಮೂನೆ-8 ಮೂಲಕ ವಿಳಾಸ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಅವರನ್ನು ಹೊಸ ಮತದಾರರಂತೆ ಪರಿಗಣಿಸಿ ನಮೂನೆ-6 ಭರ್ತಿ ಮಾಡುವಂತೆ ಹೇಳುವುದು ಸರಿಯಾದ ವಿಧಾನವಲ್ಲ ಎಂದು ಅವರು ಹೇಳಿದರು. ಎರಡು
ಇದನ್ನೂ ಓದಿ : ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ: ಸಮಗ್ರ ವರದಿ ಸಲ್ಲಿಸಲು ಜಿಬಿಎಗೆ ಹೈಕೋರ್ಟ್ ಸೂಚನೆ
‘ನಾನು ಯಾಕೆ ಹೊಸ ಮತದಾರನಾಗಬೇಕು?’
ಮತದಾರರ ಪಟ್ಟಿಯಲ್ಲಿ ಈಗಾಗಲೇ ಇರುವ ನಾಗರಿಕರನ್ನು ಸಣ್ಣಪುಟ್ಟ ತಾಂತ್ರಿಕ ವ್ಯತ್ಯಾಸಗಳ ಕಾರಣಕ್ಕೆ ಹೊರಗಿಟ್ಟು, ಮತ್ತೆ ನಮೂನೆ-6 ಮೂಲಕ ಹೊಸದಾಗಿ ನೋಂದಣಿ ಮಾಡಿಕೊಳ್ಳುವಂತೆ ಮಾಡುತ್ತಿರುವುದರ ವಿರುದ್ಧ ಪ್ರಕಾಶ್ ರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
‘ನಾನು ಯಾಕೆ ಹೊಸ ಮತದಾರನಾಗಲಿ? ಈ ದೇಶದಲ್ಲಿ ಒಬ್ಬ ಪ್ರಜೆ ಮತ್ತೆ ಹೊಸ ಪ್ರಜೆ ಆಗಲು ಸಾಧ್ಯವೇ? ತಾಯಿಗೆ ಮಗ ಹೊಸ ಮಗ ಆಗುತ್ತಾನಾ?’ ಎಂದು ಅವರು ಪ್ರಶ್ನಿಸಿದರು.
ಮತದಾರರಿಗೆ ಗೌರವವಿದೆ. ಬಿಎಲ್ಒ ಮನೆಗೆ ಬಂದಾಗ ವ್ಯಕ್ತಿ ಗೈರಾಗಿದ್ದರೆ ಅಥವಾ ಸ್ಥಳಾಂತರಗೊಂಡಿದ್ದರೆ ಅವರನ್ನು ಡಿಲೀಟ್ ಮಾಡದೆ, ಅಗತ್ಯ ನಮೂನೆ ನೀಡಿ ತಮ್ಮ ವಿವರಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
‘ಇದು ಮತದಾರರನ್ನು ಸಾಲಿನಲ್ಲಿ ನಿಲ್ಲಿಸುವ ಪ್ರಕ್ರಿಯೆಯಾಗಬಾರದು’
ತಾರ್ಕಿಕ ವ್ಯತ್ಯಾಸಗಳಿರುವ ಮತದಾರರಿಗೆ ನೋಟಿಸ್ ನೀಡಿ, ಮತ್ತೆ ತಮ್ಮ ಮತದಾನದ ಹಕ್ಕಿಗಾಗಿ ದಾಖಲೆಗಳೊಂದಿಗೆ ಕಚೇರಿಗಳ ಮುಂದೆ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ‘ಎರಡು ಕೋಟಿ ಜನರು ಮತ್ತೆ ಸಾಲಿನಲ್ಲಿ ನಿಂತು, ನಮಗೆ ಮತಹಕ್ಕು ವಾಪಸ್ ಕೊಡಿ ಎಂದು ಬೇಡಿಕೊಳ್ಳುವ ಪರಿಸ್ಥಿತಿ ಯಾಕೆ ತರಬೇಕು?’ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.
ಕರ್ನಾಟಕದಲ್ಲಿ ತಕ್ಷಣ ಚುನಾವಣೆ ನಡೆಯುತ್ತಿಲ್ಲ. ಹೀಗಿರುವಾಗ ಇಷ್ಟೊಂದು ತರಾತುರಿಯಲ್ಲಿ ಎಸ್ಐಆರ್ ನಡೆಸುವ ಅಗತ್ಯವೇನು ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದರು. ಎರಡು
ಸರ್ಕಾರಕ್ಕೂ ಮಧ್ಯಪ್ರವೇಶಕ್ಕೆ ಒತ್ತಾಯ
ಎಸ್ಐಆರ್ನಿಂದ ಮತದಾರರಿಗೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ವಿಧಾನಮಂಡಲದ ಅಧಿವೇಶನದಲ್ಲೂ ಚರ್ಚೆಯಾಗಬೇಕು. ಮುಖ್ಯಮಂತ್ರಿ ಹಾಗೂ ಸಚಿವರು ಜನರ ಅಹವಾಲುಗಳನ್ನು ಆಲಿಸಿ, ಚುನಾವಣಾ ಆಯೋಗದೊಂದಿಗೆ ಚರ್ಚಿಸಿ ಎಸ್ಐಆರ್ ಪ್ರಕ್ರಿಯೆಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಒತ್ತಾಯಿಸಬೇಕು ಎಂದು ಪ್ರಕಾಶ್ ರಾಜ್ ಆಗ್ರಹಿಸಿದರು.
ಅರ್ಹ ಮತದಾರರನ್ನು ಹೊರಗಿಡುವುದಕ್ಕಿಂತ ಅವರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳುವುದೇ ಎಸ್ಐಆರ್ನ ಉದ್ದೇಶವಾಗಬೇಕು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾಗರಿಕ ಸಂಘಟನೆಗಳ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದರು.ಎರಡು
ಇದನ್ನೂ ನೋಡಿ : SIR ಕರ್ನಾಟಕ | ಮತದಾನದ ಹಕ್ಕಿಗಾಗಿ ಭಿಕ್ಷೆ ಬೇಡುವಂತೆ ಮಾಡಬೇಡಿ: ನಟ ಪ್ರಕಾಶ್ ರಾಜ್ Janashakthi Media
