ಕೋಚಿಂಗ್ ಕೇಂದ್ರಗಳಿಗೆ ಕಡಿವಾಣ | 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲ; ದಿನಕ್ಕೆ 5 ಗಂಟೆ ಮಾತ್ರ ತರಗತಿ

ಶುಲ್ಕವನ್ನು ನಾಲ್ಕು ಕಂತುಗಳಲ್ಲಿ ಪಾವತಿಸಲು ಅವಕಾಶ, ಮಧ್ಯದಲ್ಲೇ ಶಿಕ್ಷಣ ತೊರೆದರೆ 10 ದಿನಗಳಲ್ಲಿ ಹಣ ಮರುಪಾವತಿ ಕಡ್ಡಾಯ | ನೋಂದಣಿ ಇಲ್ಲದ ಸಂಸ್ಥೆಗಳಿಗೆ ಬೀಗಮುದ್ರೆ, ನಿಯಮ ಉಲ್ಲಂಘಿಸಿದರೆ 5 ಲಕ್ಷ ರೂ.ವರೆಗೆ ದಂಡ

ಬೆಂಗಳೂರು: ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ಶೈಕ್ಷಣಿಕ ಒತ್ತಡ, ಖಾಸಗಿ ಕೋಚಿಂಗ್ ಸಂಸ್ಥೆಗಳ ಶುಲ್ಕ ವಸೂಲಿ, ಆಕರ್ಷಕ ಜಾಹೀರಾತುಗಳ ಮೂಲಕ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಸೆಳೆಯುವ ಪ್ರವೃತ್ತಿ ಹಾಗೂ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಕೋಚಿಂಗ್ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರುವ ಪ್ರಸ್ತಾವನೆ ಮುಂದಿಟ್ಟಿದೆ.

ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ‘ಕರ್ನಾಟಕ ಟ್ಯುಟೋರಿಯಲ್ ಸಂಸ್ಥೆಗಳು ಅಥವಾ ಕೋಚಿಂಗ್ ಕೇಂದ್ರಗಳ (ನೋಂದಣಿ ಮತ್ತು ನಿಯಂತ್ರಣ) ನಿಯಮಗಳು–2026’ರ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಹೊಸ ನಿಯಮಗಳು ಜಾರಿಗೆ ಬಂದರೆ ರಾಜ್ಯದಲ್ಲಿರುವ ಖಾಸಗಿ ಕೋಚಿಂಗ್ ಕೇಂದ್ರಗಳು, ಟ್ಯುಟೋರಿಯಲ್ ಸಂಸ್ಥೆಗಳು, ಅವುಗಳ ಶಾಖೆಗಳು ಮತ್ತು ಆನ್‌ಲೈನ್ ಮೂಲಕ ತರಬೇತಿ ನೀಡುವ ಸಂಸ್ಥೆಗಳು ಕೂಡ ನಿಗದಿತ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಪ್ರಸ್ತಾವಿತ ನಿಯಮಗಳ ಪ್ರಕಾರ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೋಚಿಂಗ್ ಕೇಂದ್ರಗಳಲ್ಲಿ ಪ್ರವೇಶ ನೀಡುವಂತಿಲ್ಲ. ಹತ್ತನೇ ತರಗತಿಯ ಪರೀಕ್ಷೆ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೂ ಪ್ರವೇಶ ನಿರ್ಬಂಧಿಸಲಾಗಿದೆ. ವಿದ್ಯಾರ್ಥಿಗಳು ಶಾಲೆ ಮತ್ತು ಕಾಲೇಜು ಶಿಕ್ಷಣದ ಜತೆಗೆ ನಿರಂತರವಾಗಿ ಕೋಚಿಂಗ್ ತರಗತಿಗಳಿಗೆ ಹಾಜರಾಗುವುದರಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುವುದು ಈ ಕ್ರಮದ ಉದ್ದೇಶವಾಗಿದೆ.

ದಿನಕ್ಕೆ ಐದು ಗಂಟೆ ಮಾತ್ರ ಕೋಚಿಂಗ್

ಕೋಚಿಂಗ್ ಕೇಂದ್ರಗಳು ದಿನವೊಂದಕ್ಕೆ ಗರಿಷ್ಠ ಐದು ಗಂಟೆಗಳ ಕಾಲ ಮಾತ್ರ ತರಗತಿಗಳನ್ನು ನಡೆಸಲು ಅವಕಾಶವಿರುತ್ತದೆ. ಪರೀಕ್ಷೆಗಳು, ಪುನರಾವರ್ತನಾ ತರಗತಿಗಳು ಮತ್ತು ವಿದ್ಯಾರ್ಥಿಗಳ ಸಂದೇಹ ನಿವಾರಣೆಯ ಅವಧಿಯೂ ಈ ಐದು ಗಂಟೆಗಳ ಮಿತಿಯಲ್ಲೇ ಸೇರಿರುತ್ತದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಸಂಸ್ಥೆಗಳು ಕಾರ್ಯನಿರ್ವಹಿಸಬಹುದು.

ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆ ಅಥವಾ ಕಾಲೇಜಿನ ನಿಯಮಿತ ತರಗತಿ ಸಮಯದಲ್ಲಿ ಕೋಚಿಂಗ್ ತರಗತಿಗಳನ್ನು ನಡೆಸುವಂತಿಲ್ಲ. ಶಾಲಾ-ಕಾಲೇಜುಗಳ ಹಾಜರಾತಿಯನ್ನು ಕಡೆಗಣಿಸಿ ವಿದ್ಯಾರ್ಥಿಗಳು ದಿನದ ಬಹುಪಾಲು ಸಮಯವನ್ನು ಕೋಚಿಂಗ್ ಕೇಂದ್ರಗಳಲ್ಲಿ ಕಳೆಯುವ ಪ್ರವೃತ್ತಿಗೆ ತಡೆ ಹಾಕುವುದು ಇದರ ಉದ್ದೇಶವಾಗಿದೆ.

ಕಡ್ಡಾಯ ನೋಂದಣಿ; ಪ್ರತಿ ಶಾಖೆಗೂ ಪ್ರತ್ಯೇಕ ಅನುಮತಿ

20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೋಚಿಂಗ್ ಕೇಂದ್ರಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಪ್ರಸ್ತಾವನೆಯಿದೆ.

ನೋಂದಣಿಗಾಗಿ 15 ಸಾವಿರ ರೂ. ಶುಲ್ಕ ಮತ್ತು ಪ್ರತಿ ಕೋರ್ಸ್‌ಗೆ ಹೆಚ್ಚುವರಿಯಾಗಿ 5 ಸಾವಿರ ರೂ. ಪಾವತಿಸಬೇಕಾಗುತ್ತದೆ. ನೋಂದಣಿ ಪ್ರಮಾಣಪತ್ರದ ಅವಧಿ ಮೂರು ವರ್ಷಗಳಾಗಿರುತ್ತದೆ. ಒಂದು ಸಂಸ್ಥೆಯ ವಿವಿಧ ಶಾಖೆಗಳಿಗೂ ಪ್ರತ್ಯೇಕ ನೋಂದಣಿ ಕಡ್ಡಾಯವಾಗಲಿದೆ.

ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ನೋಂದಣಿ ಪ್ರಾಧಿಕಾರಿಗಳಾಗಿರುತ್ತಾರೆ. ಅರ್ಜಿ ಸಲ್ಲಿಸಿದ 45 ದಿನಗಳೊಳಗೆ ಅನುಮೋದನೆ ಅಥವಾ ತಿರಸ್ಕಾರದ ನಿರ್ಧಾರ ಕೈಗೊಳ್ಳಬೇಕು. ಅರ್ಜಿ ಸಲ್ಲಿಸುವ ಸಂಸ್ಥೆಗಳು ಕಟ್ಟಡ ಮತ್ತು ಅಗ್ನಿ ಸುರಕ್ಷತಾ ಪ್ರಮಾಣಪತ್ರ, ಸ್ಥಳದ ಭೌಗೋಳಿಕ ಗುರುತು ಹಾಗೂ ಛಾಯಾಚಿತ್ರಗಳನ್ನು ಒದಗಿಸಬೇಕಾಗುತ್ತದೆ.

ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೋಚಿಂಗ್ ಕೇಂದ್ರಗಳು ನಿಯಮಗಳು ಜಾರಿಗೆ ಬಂದ 90 ದಿನಗಳೊಳಗೆ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ವಿಳಂಬವಾದರೆ ದಿನಕ್ಕೆ 100 ರೂ. ದಂಡ ವಿಧಿಸುವ ಪ್ರಸ್ತಾವನೆಯಿದೆ. ನಿಯಮಗಳು ಜಾರಿಗೆ ಬಂದ ಆರು ತಿಂಗಳ ನಂತರವೂ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ಬೀಗಮುದ್ರೆ ಹಾಕುವ ಅಧಿಕಾರವನ್ನು ಪ್ರಾಧಿಕಾರ ಹೊಂದಿರುತ್ತದೆ.

ಇದನ್ನೂ ಓದಿ : ನೇತನ್ಯಾಹು ಸರಕಾರ ಇಳಿಸಲು ವಿರೋಧ ಕೂಟ ಮತ್ತು ಅರಬ್ ಪಕ್ಷಗಳ ಕೂಟದ ಜಂಟಿ ಸರಕಾರ ರಚನೆಗೆ  ಇಸ್ರೇಲಿನ ಜನಾದೇಶ ಜಾರಿಯಾಗುತ್ತಾ?

ಶುಲ್ಕ ನಾಲ್ಕು ಕಂತುಗಳಲ್ಲಿ ಪಾವತಿಸಲು ಅವಕಾಶ

ಕೋಚಿಂಗ್ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಸಂಪೂರ್ಣ ಕೋರ್ಸ್ ಶುಲ್ಕವನ್ನು ಒಂದೇ ಬಾರಿಗೆ ವಸೂಲಿ ಮಾಡುವಂತಿಲ್ಲ. ಪೋಷಕರು ಅಥವಾ ವಿದ್ಯಾರ್ಥಿಗಳಿಗೆ ಕನಿಷ್ಠ ನಾಲ್ಕು ಸಮಾನ ಕಂತುಗಳಲ್ಲಿ ಶುಲ್ಕ ಪಾವತಿಸುವ ಅವಕಾಶ ನೀಡಬೇಕು ಎಂದು ಕರಡು ನಿಯಮಗಳು ಹೇಳುತ್ತವೆ.

ಕೋರ್ಸ್ ಪೂರ್ಣಗೊಳ್ಳುವ ಮೊದಲೇ ವಿದ್ಯಾರ್ಥಿ ತರಬೇತಿಯನ್ನು ಅರ್ಧಕ್ಕೆ ನಿಲ್ಲಿಸಿದರೆ, ಉಳಿದ ಅವಧಿಗೆ ಸಂಬಂಧಿಸಿದ ಶುಲ್ಕವನ್ನು ಅನುಪಾತದ ಆಧಾರದಲ್ಲಿ ಹಿಂದಿರುಗಿಸಬೇಕು. ವಿದ್ಯಾರ್ಥಿ ತರಬೇತಿ ತೊರೆದ ದಿನದಿಂದ 10 ದಿನಗಳೊಳಗೆ ಈ ಹಣವನ್ನು ಮರುಪಾವತಿಸಬೇಕು. ಸಂಸ್ಥೆಯಲ್ಲೇ ವಸತಿ ಮತ್ತು ಊಟದ ವ್ಯವಸ್ಥೆ ಪಡೆದಿರುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಉಳಿದ ವಸತಿ ಹಾಗೂ ಊಟದ ಶುಲ್ಕವೂ ಈ ಮರುಪಾವತಿ ವ್ಯಾಪ್ತಿಗೆ ಬರಲಿದೆ.

ಕೋರ್ಸ್‌ಗಳ ವಿವರ, ಅವಧಿ, ಬೋಧಕರ ವಿದ್ಯಾರ್ಹತೆ, ಶುಲ್ಕ, ಹಣ ಮರುಪಾವತಿ ನೀತಿ ಮತ್ತು ವಿದ್ಯಾರ್ಥಿಗಳ ಸಾಧನೆಯ ವಿವರಗಳನ್ನು ಸಂಸ್ಥೆಗಳು ತಮ್ಮ ಜಾಲತಾಣ, ಸೂಚನಾ ಫಲಕ ಮತ್ತು ಮಾಹಿತಿ ಪುಸ್ತಕಗಳಲ್ಲಿ ಪ್ರಕಟಿಸಬೇಕು. ಪುಸ್ತಕಗಳು, ಟಿಪ್ಪಣಿಗಳು ಅಥವಾ ಇತರ ಅಧ್ಯಯನ ಸಾಮಗ್ರಿಗಳನ್ನು ಸಂಸ್ಥೆಯಿಂದಲೇ ಖರೀದಿಸುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸುವಂತಿಲ್ಲ.

ಸುಳ್ಳು ಜಾಹೀರಾತು ಮತ್ತು ರ್ಯಾಂಕ್ ಭರವಸೆಗೆ ನಿರ್ಬಂಧ

ಕೋಚಿಂಗ್ ಕೇಂದ್ರಗಳು ವಿದ್ಯಾರ್ಥಿಗಳಿಗೆ ನಿರ್ದಿಷ್ಟ ರ್ಯಾಂಕ್, ಅಂಕಗಳು ಅಥವಾ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಖಚಿತಪಡಿಸುವ ಭರವಸೆ ನೀಡುವಂತಿಲ್ಲ. ಪರೀಕ್ಷಾ ಫಲಿತಾಂಶಗಳ ಕುರಿತು ತಪ್ಪು ಮಾಹಿತಿ ನೀಡುವ ಅಥವಾ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ತಪ್ಪುದಾರಿಗೆ ಎಳೆಯುವ ಜಾಹೀರಾತುಗಳನ್ನೂ ನಿಷೇಧಿಸುವ ಪ್ರಸ್ತಾವನೆಯಿದೆ.

ಸಂಸ್ಥೆಗಳು ನಡೆಸುವ ಆಂತರಿಕ ಮೌಲ್ಯಮಾಪನ ಪರೀಕ್ಷೆಗಳ ಫಲಿತಾಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ. ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಪರಿಶೀಲಿಸಲು ಮತ್ತು ಅಗತ್ಯ ನೆರವು ನೀಡಲು ಮಾತ್ರ ಈ ಫಲಿತಾಂಶಗಳನ್ನು ಬಳಸಬೇಕು. ಕಲಿಕೆಯಲ್ಲಿ ಹಿನ್ನಡೆ ಕಾಣುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಾಲೋಚನೆ ಒದಗಿಸಬೇಕು.

ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದ ಆಯ್ಕೆಗಳಷ್ಟೇ ಅಲ್ಲದೆ ಇತರ ವೃತ್ತಿ ಅವಕಾಶಗಳ ಬಗ್ಗೆಯೂ ಮಾಹಿತಿ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ದೊರೆಯದಿದ್ದರೆ ಜೀವನದಲ್ಲಿ ಬೇರೆ ಅವಕಾಶಗಳಿಲ್ಲ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡದಂತೆ ನೋಡಿಕೊಳ್ಳಬೇಕು ಎಂದು ಕರಡು ನಿಯಮಗಳು ಸೂಚಿಸುತ್ತವೆ.

‘ಕೋಚಿಂಗ್‌ ಕೇಂದ್ರಗಳ ನೋಂದಣಿ ಮತ್ತು ನಿಯಂತ್ರಣ ನಿಯಮಗಳು–2026’ ಕರಡನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಮಾನಸಿಕ ಆರೋಗ್ಯ ಸಲಹೆಗಾರರು ಕಡ್ಡಾಯ

ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ಓದಿನ ಒತ್ತಡ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಆತಂಕವನ್ನು ಗಮನದಲ್ಲಿಟ್ಟುಕೊಂಡು ಕೋಚಿಂಗ್ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಸಲಹೆಗಾರರ ನೆರವು ಲಭ್ಯವಾಗುವಂತೆ ಮಾಡಬೇಕು. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾನಸಿಕ ಆರೋಗ್ಯದ ಕುರಿತು ಕಾಲಕಾಲಕ್ಕೆ ಜಾಗೃತಿ ಕಾರ್ಯಾಗಾರಗಳನ್ನು ಆಯೋಜಿಸಬೇಕು.

ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡದ ಲಕ್ಷಣಗಳು ಕಂಡುಬಂದರೆ ತಕ್ಷಣ ಮಧ್ಯಪ್ರವೇಶಿಸಿ ಅಗತ್ಯ ನೆರವು ನೀಡುವ ವ್ಯವಸ್ಥೆ ಇರಬೇಕು. ಬೋಧಕರು ಕೂಡ ಮಾನಸಿಕ ಆರೋಗ್ಯದ ಸಮಸ್ಯೆಗಳ ಕುರಿತು ತರಬೇತಿ ಪಡೆಯಬೇಕು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ಅವರಿಗೆ ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿದೆ.

ಆತ್ಮಹತ್ಯೆ ತಡೆ ಸಹಾಯವಾಣಿ, ಮಹಿಳಾ ಸಹಾಯವಾಣಿ ಮತ್ತು ರ‍್ಯಾಗಿಂಗ್ ವಿರೋಧಿ ಸಹಾಯವಾಣಿ ಸೇರಿದಂತೆ ತುರ್ತು ಸಂಪರ್ಕ ಸಂಖ್ಯೆಗಳನ್ನೂ ಸಂಸ್ಥೆಗಳ ಆವರಣದಲ್ಲಿ ಪ್ರದರ್ಶಿಸಬೇಕು. ವಿದ್ಯಾರ್ಥಿಗಳ ದೂರುಗಳನ್ನು ಸ್ವೀಕರಿಸಿ ಪರಿಹರಿಸಲು ಕುಂದುಕೊರತೆ ಸಮಿತಿಗಳನ್ನು ರಚಿಸಬೇಕು. ದೂರುಗಳನ್ನು 15 ದಿನಗಳೊಳಗೆ ಪರಿಹರಿಸುವ ವ್ಯವಸ್ಥೆ ಇರಬೇಕು.

ಸರ್ಕಾರಿ ಶಿಕ್ಷಕರು ಕೋಚಿಂಗ್ ಕೇಂದ್ರಗಳಲ್ಲಿ ಕೆಲಸ ಮಾಡುವಂತಿಲ್ಲ

ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು, ಪ್ರಾಂಶುಪಾಲರು ಹಾಗೂ ಬೋಧಕೇತರ ಸಿಬ್ಬಂದಿ ಖಾಸಗಿ ಕೋಚಿಂಗ್ ಕೇಂದ್ರಗಳಲ್ಲಿ ಕೆಲಸ ಮಾಡುವಂತಿಲ್ಲ ಎಂಬ ನಿರ್ಬಂಧವನ್ನೂ ಕರಡು ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ.

ಕೋಚಿಂಗ್ ಕೇಂದ್ರಗಳಲ್ಲಿ ಬೋಧಕರಾಗಿ ನೇಮಕವಾಗುವವರು ಕನಿಷ್ಠ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಸಂಬಂಧಪಟ್ಟ ವಿಷಯದಲ್ಲಿ ಅಗತ್ಯ ಅನುಭವವನ್ನೂ ಹೊಂದಿರಬೇಕು. ನೈತಿಕ ಅಧಃಪತನಕ್ಕೆ ಸಂಬಂಧಿಸಿದ ಅಪರಾಧದಲ್ಲಿ ಶಿಕ್ಷೆಗೆ ಒಳಗಾದವರನ್ನು ಬೋಧಕರಾಗಿ ನೇಮಿಸುವಂತಿಲ್ಲ.

ಸಿಸಿಟಿವಿ, ಅಗ್ನಿ ಸುರಕ್ಷತೆ ಮತ್ತು ಪ್ರತ್ಯೇಕ ಶೌಚಾಲಯ

ಕೋಚಿಂಗ್ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಾಕಷ್ಟು ಸ್ಥಳಾವಕಾಶ ಇರಬೇಕು. ಪ್ರತಿ ವಿದ್ಯಾರ್ಥಿಗೆ ಕನಿಷ್ಠ ಒಂದು ಚದರ ಮೀಟರ್ ತರಗತಿ ಕೊಠಡಿ ಜಾಗ ಕಲ್ಪಿಸಬೇಕು. ಪ್ರತ್ಯೇಕ ಶೌಚಾಲಯ, ಕುಡಿಯುವ ನೀರು, ಗಾಳಿಯಾಡುವ ವ್ಯವಸ್ಥೆ ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು.

ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಕಟ್ಟಡ ಸುರಕ್ಷತಾ ಪ್ರಮಾಣಪತ್ರ, ಅಗ್ನಿ ಸುರಕ್ಷತಾ ವ್ಯವಸ್ಥೆ ಮತ್ತು ನೈರ್ಮಲ್ಯ ಪ್ರಮಾಣಪತ್ರ ಕಡ್ಡಾಯವಾಗಲಿದೆ. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ವಿಪತ್ತು ನಿರ್ವಹಣಾ ಯೋಜನೆ ರೂಪಿಸಿ ಕಾಲಕಾಲಕ್ಕೆ ಸುರಕ್ಷತಾ ಅಣಕು ಕಾರ್ಯಾಚರಣೆಗಳನ್ನು ನಡೆಸಬೇಕು. ವಿದ್ಯಾರ್ಥಿಗಳನ್ನು ಸಾಗಿಸುವ ವಾಹನಗಳ ಚಾಲಕರು ಮತ್ತು ಸಹಾಯಕರ ಹಿನ್ನೆಲೆಯನ್ನೂ ಪರಿಶೀಲಿಸಬೇಕು.

ವಿದ್ಯಾರ್ಥಿಗಳ ಹಾಜರಾತಿಯನ್ನು ಜೈವಿಕ ಗುರುತಿನ ವ್ಯವಸ್ಥೆಯ ಮೂಲಕ ದಾಖಲಿಸುವುದು ಹಾಗೂ ಅಗತ್ಯ ಮಾಹಿತಿಯನ್ನು ಸರ್ಕಾರದ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವುದು ಕೂಡ ಕರಡು ನಿಯಮಗಳಲ್ಲಿದೆ. ವಿದ್ಯಾರ್ಥಿಗಳ ಪ್ರವೇಶ, ಶುಲ್ಕ, ಸಿಬ್ಬಂದಿ, ಮೂಲಸೌಕರ್ಯ ಮತ್ತು ಶೈಕ್ಷಣಿಕ ಸಾಧನೆ ಕುರಿತು ವಾರ್ಷಿಕ ವರದಿ ಸಲ್ಲಿಸಬೇಕಾಗುತ್ತದೆ.

ಉಲ್ಲಂಘಿಸಿದರೆ 5 ಲಕ್ಷ ರೂ.ವರೆಗೆ ದಂಡ

ನಿಯಮಗಳ ಅನುಷ್ಠಾನ ಮೇಲ್ವಿಚಾರಣೆಗಾಗಿ ಎರಡು ಸಮಿತಿಗಳನ್ನು ರಚಿಸುವ ಪ್ರಸ್ತಾವನೆಯಿದೆ. ಬೆಂಗಳೂರು ನಗರ ಜಿಲ್ಲೆಗೆ ಪ್ರತ್ಯೇಕ ಸಮಿತಿ ಹಾಗೂ ರಾಜ್ಯದ ಉಳಿದ ಜಿಲ್ಲೆಗಳಿಗೆ ಮತ್ತೊಂದು ಸಮಿತಿ ಕಾರ್ಯನಿರ್ವಹಿಸಲಿದೆ.

ಶಿಕ್ಷಣ, ಪೊಲೀಸ್, ಆರೋಗ್ಯ, ಸಮಾಜ ಕಲ್ಯಾಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಈ ಸಮಿತಿಗಳಲ್ಲಿ ಇರಲಿದ್ದಾರೆ. ನಿಯಮ ಉಲ್ಲಂಘನೆಗಳ ಕುರಿತು ತನಿಖೆ ನಡೆಸಲು, ದಾಖಲೆಗಳನ್ನು ಪರಿಶೀಲಿಸಲು ಮತ್ತು ಸಂಬಂಧಪಟ್ಟವರನ್ನು ವಿಚಾರಣೆಗೆ ಕರೆಯಲು ಸಮಿತಿಗಳಿಗೆ ಅಧಿಕಾರ ನೀಡುವ ಪ್ರಸ್ತಾವನೆಯಿದೆ.

ನಿಯಮ ಉಲ್ಲಂಘಿಸಿದ ಸಂಸ್ಥೆಗಳ ನೋಂದಣಿಯನ್ನು ರದ್ದುಪಡಿಸುವ ಅಥವಾ ಗರಿಷ್ಠ ಐದು ಲಕ್ಷ ರೂ.ವರೆಗೆ ದಂಡ ವಿಧಿಸುವ ಅಧಿಕಾರ ಮೇಲ್ಮನವಿ ಪ್ರಾಧಿಕಾರಕ್ಕೆ ಇರಲಿದೆ. ಕ್ರಮ ಕೈಗೊಳ್ಳುವ ಮೊದಲು ಸಂಬಂಧಪಟ್ಟ ಸಂಸ್ಥೆಗೆ ತನ್ನ ವಾದ ಮಂಡಿಸಲು ಅವಕಾಶ ನೀಡಬೇಕು.

ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆಗಳಿಗೆ ಆಹ್ವಾನ

ಪ್ರಸ್ತುತ ಜಾರಿಯಲ್ಲಿರುವ 2001ರ ಕರ್ನಾಟಕ ಟ್ಯುಟೋರಿಯಲ್ ಸಂಸ್ಥೆಗಳ ನೋಂದಣಿ ಮತ್ತು ನಿಯಂತ್ರಣ ನಿಯಮಗಳ ಬದಲಿಗೆ ಹೊಸ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ. 2026ರ ಅಕ್ಟೋಬರ್ 28ರಂದು ಕರಡು ನಿಯಮಗಳನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು, ಪೋಷಕರು, ವಿದ್ಯಾರ್ಥಿಗಳು ಮತ್ತು ಕೋಚಿಂಗ್ ಸಂಸ್ಥೆಗಳು ತಮ್ಮ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಅಂದರೆ ನವೆಂಬರ್ 12, 2026. ಕೊನೆಯ ದಿನವಾಗಿದೆ.

ಸಲಹೆ ಮತ್ತು ಆಕ್ಷೇಪಣೆಗಳನ್ನು ಬೆಂಗಳೂರಿನ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ಸಲ್ಲಿಸಬಹುದು. ಸಾರ್ವಜನಿಕರಿಂದ ಬರುವ ಅಭಿಪ್ರಾಯಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರ ಅಂತಿಮ ನಿಯಮಗಳನ್ನು ರೂಪಿಸಬೇಕಿದೆ. ಈ ನಿಯಮಗಳು ಇನ್ನೂ ಕರಡು ಹಂತದಲ್ಲಿದ್ದು, ಅಂತಿಮ ಅಧಿಸೂಚನೆ ಹೊರಬಂದ ನಂತರವೇ ಅವು ಜಾರಿಗೆ ಬರಲಿವೆ.

ಇದನ್ನೂ ನೋಡಿ : SIR ಕರ್ನಾಟಕ | ಬೆಂಗಳೂರಿನಲ್ಲಿ ಇಬ್ಬರು ಮತದಾರರಲ್ಲಿ ಒಬ್ಬರ ಹೆಸರು ಡಿಲೀಟ್‌! ಸಿಕ್ಕ ನುಸುಳುಕೋರರು ಎಷ್ಟು?

Donate Janashakthi Media

Leave a Reply

Your email address will not be published. Required fields are marked *