ಎಸ್ಐಆರ್ ವಿರುದ್ಧ ಮಂಗಳೂರಿನಲ್ಲಿ ಜಾತ್ಯತೀತ ಪಕ್ಷಗಳು, ಸಂಘಟನೆಗಳಿಂದ ‘ಜನತಾ ನಡಿಗೆ’ | ಮತದಾನದ ಹಕ್ಕು ಕಸಿಯುವ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ ಎಂದ ನಟ
ಮಂಗಳೂರು: ಮತದಾನದ ಹಕ್ಕನ್ನು ಕಸಿಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ವಿರುದ್ಧದ ಹೋರಾಟ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದೂ ನಮ್ಮ ಹೋರಾಟದ ಗುರಿಯಾಗಿದೆ ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಹೇಳಿದ್ದಾರೆ. ಬಿಜೆಪಿ
ಎಸ್ಐಆರ್ ರದ್ದುಗೊಳಿಸುವಂತೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲೆಯ ಜಾತ್ಯತೀತ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ಜಂಟಿ ವೇದಿಕೆಯ ವತಿಯಿಂದ ಶನಿವಾರ ಮಂಗಳೂರಿನಲ್ಲಿ ಆಯೋಜಿಸಿದ್ದ ‘ಜನತಾ ನಡಿಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ವರೆಗೆ ನಡೆದ ಮೆರವಣಿಗೆಯಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಪ್ರಧಾನಿ ಮೋದಿ ಅವರು ನಮ್ಮ ಹೋರಾಟ ಸರ್ಕಾರವನ್ನು ಉರುಳಿಸುವ ಉದ್ದೇಶ ಹೊಂದಿದೆ ಎಂದು ಹೇಳುತ್ತಿದ್ದಾರೆ. ಹೌದು, ನಾವು ನಿಮ್ಮ ಸರ್ಕಾರವನ್ನು ಉರುಳಿಸಲು ಬಂದಿದ್ದೇವೆ. ಆದರೆ ನೇಪಾಳ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದ ರೀತಿಯಲ್ಲಿ ಅಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿರುವ ಮತದಾನದ ಹಕ್ಕನ್ನು ಬಳಸಿಕೊಂಡು ಪ್ರಜಾಸತ್ತಾತ್ಮಕವಾಗಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ. ಮೋದಿ ಮತ್ತು ಅಮಿತ್ ಶಾ ಅವರನ್ನು ಟೀಕಿಸಿದ ಅವರು, ಸಾಕ್ಷ್ಯಗಳನ್ನು ನಾಶಪಡಿಸಲು ಹೋಗಿ ರಂಗ-ಬಿಲ್ಲಾ ಜೋಡಿ ಸಿಕ್ಕಿಬಿದ್ದಿದೆ ಎಂದು ವ್ಯಂಗ್ಯವಾಡಿದರು. ಬಿಜೆಪಿ
ಇದನ್ನೂ ಓದಿ : ಕೋಚಿಂಗ್ ಕೇಂದ್ರಗಳಿಗೆ ಕಡಿವಾಣ | 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲ; ದಿನಕ್ಕೆ 5 ಗಂಟೆ ಮಾತ್ರ ತರಗತಿ
ಎಸ್ಐಆರ್ ಕೇವಲ ಮತಗಳ್ಳತನದ ಪ್ರಶ್ನೆಯಲ್ಲ. ಇತ್ತೀಚಿನ ಚುನಾವಣೆಗಳಲ್ಲಿ ಹೆಚ್ಚಾಗಿರುವ ಮತಗಳನ್ನು ಅಳಿಸಿಹಾಕುವ ಉದ್ದೇಶವೂ ಇದರ ಹಿಂದಿದೆ ಎಂಬುದು ನಮ್ಮ ಆತಂಕ. ಈ ಕಾರಣಕ್ಕಾಗಿಯೇ ಎಸ್ಐಆರ್ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಈ ಹೋರಾಟವನ್ನು ಗೆಲ್ಲಲು ಜನರ ಒಗ್ಗಟ್ಟು ಮುಖ್ಯ. ರಾಜಕೀಯ ಪಕ್ಷಗಳಿಂದ ಮಾತ್ರ ಈ ಹೋರಾಟವನ್ನು ಗೆಲ್ಲಲು ಸಾಧ್ಯವಿಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಜನರನ್ನು ಕೇವಲ ಮತಯಂತ್ರಗಳಂತೆ ನೋಡುತ್ತಿವೆ. ಜನರೇ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಮೋದಿ ಅವರೇ, ನೀವು ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ. ನಿಮ್ಮ ಪಾಪದ ಕೊಡ ತುಂಬಿದೆ ಎಂದು ಟೀಕಿಸಿದ ಅವರು, ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಆ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಎಚ್ಚರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿಯ ಬಗ್ಗೆಯೂ ಪ್ರಸ್ತಾಪಿಸಿದ ಪ್ರಕಾಶ್ ರಾಜ್, ಕರಾವಳಿ ಭಾಗದ ಜನರನ್ನು ತಪ್ಪು ಮಾಹಿತಿಗಳ ಮೂಲಕ ದಾರಿ ತಪ್ಪಿಸಲಾಗುತ್ತಿದೆ. ಜಿಲ್ಲೆಯ ಆರೋಗ್ಯ ಕ್ಷೇತ್ರದ ಸ್ಥಿತಿ ಏನಾಗಿದೆ? ಆರ್ಥಿಕ ಪರಿಸ್ಥಿತಿ ಹೇಗಿದೆ? ಯುವಕರಿಗೆ ಉದ್ಯೋಗಾವಕಾಶಗಳು ಎಷ್ಟಿವೆ? ಕರಾವಳಿಯ ಸೌಹಾರ್ದ ಮತ್ತು ಶಾಂತಿಯ ಪರಿಸ್ಥಿತಿ ಏನಾಗಿದೆ? ಇಂತಹ ಪ್ರಶ್ನೆಗಳನ್ನು ಜನರು ಕೇಳಬೇಕಿದೆ. ಈ ಸಮಸ್ಯೆಗಳು ಮುಂದೊಂದು ದಿನ ಎಲ್ಲರನ್ನೂ ಬಾಧಿಸಲಿವೆ. ಜೈಲಿನಲ್ಲಿರುವವರು ನಮ್ಮ ಯುವಕರೇ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಎಸ್ಐಆರ್ ವಿರುದ್ಧದ ಹೋರಾಟದಲ್ಲಿ ಎಲ್ಲ ಜನರೂ ಭಾಗವಹಿಸಬೇಕು. ಮತದಾನದ ಹಕ್ಕು ಮತ್ತು ಸಂವಿಧಾನ ನೀಡಿರುವ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ಅವರು ನೀಡಿದರು.
ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಪಕ್ಷಗಳು ಮತ್ತು ಸಂಘಟನೆಗಳ ಮುಖಂಡರಾದ ಪದ್ಮರಾಜ್ ಆರ್., ಎಂ.ಜಿ. ಹೆಗಡೆ, ದಿನೇಶ್ ಹೆಗ್ಡೆ ಉಳೇಪಾಡಿ, ಲಕ್ಷ್ಮೀಶ ದಬ್ಬನಡ್ಕ, ಅಶ್ರಫ್, ವಿ. ಕುಕ್ಯಾನ್, ಜಯಂತಿ ಬಿ. ಶೆಟ್ಟಿ, ಶೇಖರ್ ವಾಮಂಜೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಮನೋಜ್ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು. ಸಂತೋಷ್ ಬಜಾಲ್ ವಂದಿಸಿದರು. ಬಿಜೆಪಿ
ಇದನ್ನೂ ನೋಡಿ : SIR ಕರ್ನಾಟಕ | ಬೆಂಗಳೂರಿನಲ್ಲಿ ಇಬ್ಬರು ಮತದಾರರಲ್ಲಿ ಒಬ್ಬರ ಹೆಸರು ಡಿಲೀಟ್! ಸಿಕ್ಕ ನುಸುಳುಕೋರರು ಎಷ್ಟು?
