ನೇತನ್ಯಾಹು ಸರಕಾರ ಇಳಿಸಲು ವಿರೋಧ ಕೂಟ ಮತ್ತು ಅರಬ್ ಪಕ್ಷಗಳ ಕೂಟದ ಜಂಟಿ ಸರಕಾರ ರಚನೆಗೆ  ಇಸ್ರೇಲಿನ ಜನಾದೇಶ ಜಾರಿಯಾಗುತ್ತಾ?

ವಸಂತರಾಜ ಎನ್.ಕೆ

ಇಸ್ರೇಲಿನ ಚುನಾವಣಾ ಫಲಿತಾಂಶ ಗಮನಿಸಿದರೆ ನೆತನ್ಯಾಹು ಸರಕಾರವನ್ನು ಜನ ತಿರಸ್ಕರಿಸಿದ್ದಾರೆ.  ನೇತನ್ಯಾಹು ಅವರ ಉಗ್ರ-ಬಲಪಂಥೀಯ  ಕೂಟ ಅಥವಾ ವಿರೋಧ ಪಕ್ಷದ ಕೂಟ ಎರಡಕ್ಕೂನಿಚ್ಚಳ  ಬಹುಮತವಿಲ್ಲ. ವಿರೋಧ ಪಕ್ಷದ ಕೂಟ ಮತ್ತು ಎರಡು ಅರಬ್ ಕೂಟಗಳ ಜಂಟಿ ಸರಕಾರ ರಚನೆಗೆ  ಬಹುಮತದ ಜನಾದೇಶ ಇದೆ. ಅಂತ್ಯವಿಲ್ಲದ ಯುದ್ಧಕ್ಕಿಂತ ಹಂಚಿಕೊಂಡ ಪ್ರಜಾಸತ್ತಾತ್ಮಕ ಭವಿಷ್ಯದ ಭರವಸೆ ನೀಡುವ ಪಕ್ಷಗಳನ್ನು ಜನ ಬೆಂಬಲಿಸಿದ್ದಾರೆ.  ಆದರೆ ಸರಕಾರ ರಚಿಸಲು ಅರಬ್ ಪಕ್ಷಗಳ ಕೂಟದ ಬೆಂಬಲ ತೆಗೆದುಕೊಳ್ಳುವುದಿಲ್ಲ  ಎಂದು ಚುನಾವಣಾ ಪ್ರಚಾರದಲ್ಲಿ ವಿರೋಧ ಪಕ್ಷದ ಕೂಟದ ನಾಯಕ ಐಸೆನ್ಕೋಟ್  ಘೋಷಿಸಿದ್ದರು. ಅವರು ಜನಾದೇಶವನ್ನು ಮನ್ನಿಸಿ ತಮ್ಮ  ನಿಲುವು ಬದಲಾಯಿಸುತ್ತಾರಾ ಎಂಬುದು ಇದಕ್ಕಾಗಿ ಎಷ್ಟು ಒತ್ತಡವನ್ನು ಜನತೆ ತರುತ್ತದೆ ಎಂಬುದರ ಮೇಲೆ ಅವಲಂಬಿಸಿದೆ.

ಇಸ್ರೇಲಿನ ಅಕ್ಟೋಬರ್ 27ರ ಚುನಾವಣೆಯ ಫಲಿತಾಂಶವು  ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ತೀವ್ರ-ಬಲಪಂಥೀಯ ಕೂಟ ಮತ್ತು ಪ್ರಮುಖ ಝಿಯೋನಿಸ್ಟ್ ವಿರೋಧ ಪಕ್ಷಗಳ ಕೂಟ – ಎರಡನ್ನೂ ತ್ರಿಶಂಕು ಸ್ಥಿತಿಯಲ್ಲಿಟ್ಟಿದೆ. ಎರಡೂ ಕೂಟಗಳು ನಿಚ್ಚಳ ಬಹುಮತ ಪಡೆದಿಲ್ಲ, ಹಾಗಾಗಿ ಸ್ವತಂತ್ರವಾಗಿ ಸರಕಾರ ರಚಿಸುವ ಸ್ಥಿತಿಯಲ್ಲಿಲ್ಲ. ಆದರೆ ಈ ಫಲಿತಾಂಶದ ಒಂದು ಅಂಶ ಬಹಳ ನಿರ್ಣಾಯಕವಾಗಿ ಮೂಡಿದೆ.  ಇಸ್ರೆಲಿನ ಮೂಲ ಪ್ಯಾಲೆಸ್ಟೀನಿಯನ್ ಪ್ರಜೆಗಳು ಭಾರೀ ಸಂಖ್ಯೆಯಲ್ಲಿ ಮತದಾನ ಮಾಡಿ ಅರಬ್-ಬಹುಸಂಖ್ಯಾತ ಪಕ್ಷಗಳಿಗೆ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ.  ಮಾತ್ರವಲ್ಲ ವಿರೋಧ ಪಕ್ಷಗಳ ಕೂಟ  ಅದಕ್ಕೆ ಸಿದ್ಧವಿದ್ದರೆ, ನೇತನ್ಯಾಹು ಸರಕಾರವನ್ನು ಉರುಳಿಸಲು ಮತ್ತು ಯಾರು ರಚಿಸುತ್ತಾರೆ ಎಂಬುದನ್ನು ನಿರ್ಧರಿಸಲು ಅವರು ಸಾಕಷ್ಟು ಸ್ಥಾನಗಳನ್ನು ಗಳಿಸಿದ್ದಾರೆ.

ಮತ ಎಣಿಕೆ ಮುಗಿದಿದ್ದು, ಅಕ್ಟೋಬರ್ 30ರ ಬೆಳಿಗ್ಗೆ (ಭಾರತೀಯ ಸಮಯ) ಲಭ್ಯವಿದ್ದ ಅನಧಿಕೃತ ಫಲಿತಾಂಶಗಳ  (ನವೆಂಬರ್ 4ರಂದು ಅಧಿಕೃತ ಘೋಷಣೆ) ಪ್ರಕಾರ, ನೆತನ್ಯಾಹು ಅವರ ಕೂಟವು ಇಸ್ರೇಲಿನ ಸಂಸತ್ತಾದ 120 ಸ್ಥಾನಗಳ ನೆಸೆಟ್  ನಲ್ಲಿ 53 ಸ್ಥಾನಗಳನ್ನು ಪಡೆದಿದೆ. ಮಾಜಿ ಮಿಲಿಟರಿ ಮುಖ್ಯಸ್ಥ ಗಡಿ ಐಸೆನ್ಕೋಟ್ ನೇತೃತ್ವದ ಕೂಟವು 48 ಸ್ಥಾನಗಳನ್ನು ಗಳಿಸಿದೆ.  ಸರ್ಕಾರ ರಚನೆಗೆ ಅಗತ್ಯವಿರುವ 61 ಸ್ಥಾನಗಳನ್ನು ಪಡೆದಿಲ್ಲ.

ಎರಡು ಪ್ಯಾಲೆಸ್ಟೀನಿಯನ್ ನೇತೃತ್ವದ ಕೂಟಗಳು (ಇಸ್ರೇಲಿ ಕಮ್ಯುನಿಸ್ಟ್ ಪಕ್ಷದ ನಾಯಕತ್ವದ ‘ಜಂಟಿ ಪಟ್ಟಿ’ 11 ಮತ್ತು ರಾಮ್ ಗೆ 8) ಉಳಿದ 19 ಸ್ಥಾನಗಳನ್ನು ಗೆದ್ದುಕೊಂಡಿವೆ.   ಇದು ಅವುಗಳ 2020ರ 15 ಸ್ಥಾನಗಳ ಹಿಂದಿನ ದಾಖಲೆಯನ್ನು ಮೀರಿಸುತ್ತದೆ ಮತ್ತು ಇಸ್ರೇಲಿನ ರಾಜಕೀಯ ಚಿತ್ರವನ್ನು ಮರುರೂಪಿಸಲಿದೆ.

ಮುಂದಿನ ಇಸ್ರೇಲಿ ಸರಕಾರದ ರಚನೆಯ ಸಾಧ್ಯತೆಗಳು

ನೆತನ್ಯಾಹು ಅವರನ್ನು ಅಧಿಕಾರದಿಂದ ಇಳಿಸುವ ಗಣಿತ ಸರಳವಾಗಿದೆ: ಐಸೆನ್ಕೋಟ್ ಅವರ ಬಣ ಮತ್ತು ಅರಬ್ ಪಕ್ಷಗಳು ಸೇರಿ 67 ಸ್ಥಾನಗಳಾಗುತ್ತವೆ, ಇದು ಟ್ರಂಪ್-ಮಿತ್ರ ಪ್ರಧಾನಿಯ ದೀರ್ಘ ಆಳ್ವಿಕೆಯನ್ನು ಕೊನೆಗೊಳಿಸಲು ಸಾಕು. ನಡು-ಎಡಪಂಥೀಯ ಡೆಮೊಕ್ರಾಟ್ಸ್ ನಾಯಕ ಯಾಯಿರ್ ಗೋಲಾನ್  ಫಲಿತಾಂಶ ಬರುತ್ತಿದ್ದಂತೆ ಈ  ಅಂಶವನ್ನು ಎತ್ತಿ ಹೇಳಿದರು. ಐಸೆನ್ಕೋಟ್ ನೇತೃತ್ವದ ವಿರೋಧ ಕೂಟವು ತನ್ನ ಪ್ರಚಾರದ ಭರವಸೆಗಳನ್ನು ಬಿಟ್ಟು “ಇಸ್ರೇಲ್-ಅರಬ್ ಪ್ರಜೆಗಳೊಂದಿಗೆ ಪಾಲುದಾರಿಕೆಯಲ್ಲಿ” ಸರ್ಕಾರವನ್ನು ರಚಿಸುವಂತೆ ಒತ್ತಾಯಿಸಿದರು.

ಇಸ್ರೇಲಿ ಪಾರ್ಲಿಮೆಂಟಿನಲ್ಲಿ ಪಕ್ಷಗಳ ಈಗಿನ ಬಲಾಬಲಗಳನ್ನು ನೋಡಿದರೆ ಸರಕಾರ ರಚನೆಯ ಮೂರು ಮುಖ್ಯ ಸಾಧ್ಯತೆಗಳು ಇವೆ ಮೊದಲನೆಯದು ಐಸೆನ್ಕೋಟ್ ನಾಯಕತ್ವದ ವಿರೋಧ ಕೂಟದ ಸರಕಾರ (ಎರಡು ಅರಬ್ ಕೂಟಗಳ ಜತೆ ಸಮ್ಮಿಶ್ರ ಸರಕಾರ ಅಥವಾ ಅರಬ್ ಕೂಟಗಳ  ಬಾಹ್ಯ ಬೆಂಬಲದ ಅಲ್ಪಸಂಖ್ಯಾತ ಸರಕಾರ). ಎರಡನೆಯದು  ಐಸೆನ್ಕೋಟ್ ನಾಯಕತ್ವದ ವಿರೋಧ ಕೂಟ ಮತ್ತು ನೇತನ್ಯಾಹು ನಾಯಕತ್ವದ  ಕೂಟದ (ಎರಡು ಅರಬ್ ಕೂಟಗಳನ್ನು ಹೊರಗಿಟ್ಟ) ‘‘ರಾಷ್ಟ್ರೀಯ ಐಕ್ಯತೆಯ’  ಸರಕಾರ. ಮೂರನೇಯದು  ನೇತನ್ಯಾಹು ನಾಯಕತ್ವದ  ಕೂಟದ ಸರಕಾರ (ಐಸೆನ್ಕೋಟ್ ನಾಯಕತ್ವದ ವಿರೋಧ ಕೂಟದಿಂದ ಕೆಲವು ಪಕ್ಷಗಳನ್ನು ಸೆಳೆದುಕೊಂಡು ಸೃಷ್ಟಿಸಿದ ಬಹುಮತದ ಸರಕಾರ ಅಥವಾ ಹಿಂದಿನ ಎಲ್ಲಾ ಸಾಧ್ಯತೆಗಳು ಕೈಗೂಡದಿದ್ದರೆ ಅಲ್ಪಸಂಖ್ಯಾತ ಸರಕಾರ).  ಇವು ಯಾವುದೂ ಕೈಗೂಡದಿದ್ದರೆ ಮತ್ತೆ ಚುನಾವಣೆ ಮಾಢಬೇಕಾಗುತ್ತದೆ.

ಐಸೆನ್ಕೋಟ್ ಚುನಾವಣೆ ಫಲಿತಾಂಶದ ಮೊದಲು ಅರಬ್ ಕೂಟಗಳೊಂದಿಗೆ ಸರಕಾರ ನಡೆಸುವುದಿಲ್ಲವೆಂದು ಹೇಳಿದ್ದರು.  ಇಸ್ರೇಲಿನ ಅಧ್ಯಕ್ಷರು ಅತಿ ದೊಡ್ಡ ಕೂಟವನ್ನು ಸರಕಾರ ರಚನೆಗೆ ಕರೆಯಬೇಕಾಗುತ್ತದೆ. ಐಸೆನ್ಕೋಟ್ ನಾಯಕತ್ವದ ವಿರೋಧ ಕೂಟ ನೇತನ್ಯಾಹು ಕೂಟದ ಜತೆ ‘ರಾಷ್ಟ್ರೀಯ ಸರಕಾರ’ದ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ಆದರೆ ಐಸೆನ್ಕೋಟ್ ಅಧ್ಯಕ್ಷರ ಮುಂದೆ ಅರಬ್ ಕೂಟಗಳ ಜತೆ ಸಮ್ಮಿಶ್ರ ಸರಕಾರದ  ದಾವೆ ಹೂಡದಿದ್ದರೆ, ನೇತನ್ಯಾಹು ಗೆ ಬೆಳ್ಳಿ ತಟ್ಟೆಯಲ್ಲಿಟ್ಟು ಅಧಿಕಾರ ಕೊಟ್ಟ ಹಾಗಾಗುತ್ತದೆ.  ಏನೇ ಆದರೂ, ಪಕ್ಷಗಳ ನಡುವಿನ ಜಗಳ ಮುಂದುವರಿಯುತ್ತಿರುವಾಗ ಅವರು ಸದ್ಯಕ್ಕೆ ಕಾರ್ಯನಿರ್ವಾಹಕ ಪಾತ್ರದಲ್ಲಿ ಪ್ರಧಾನಿಯಾಗಿ ಮುಂದುವರಿಯುತ್ತಾರೆ. ಇಸ್ರೇಲಿನ ಅಧ್ಯಕ್ಷರು ಮರು ಚುನಾವಣೆಯ ಅಗತ್ಯವಿಲ್ಲವೆಂದು ಹೇಳಿದ್ದು ಸಹ ಗಮನಾರ್ಹ.

ಚುನಾವಣೆಯ ಮೊದಲು ಬೃಹತ್ ನೇತನ್ಯಾಹು-ವಿರೋಧಿ ಪ್ರದರ್ಶನಗಳು
ಚುನಾವಣೆಯ ಮೊದಲು ಬೃಹತ್ ನೇತನ್ಯಾಹು-ವಿರೋಧಿ ಪ್ರದರ್ಶನಗಳು

ಹಲವು ಪಕ್ಷಗಳ  ಮೂರು ಕೂಟಗಳ ಗೋಜಲು ದೃಶ್ಯ

ಅತಿದೊಡ್ಡ ಪಕ್ಷವಾದ ನೆತನ್ಯಾಹು ಅವರ ಲಿಕುಡ್, ಪ್ರಸ್ತುತ ಇತಮಾರ್ ಬೆನ್-ಗ್ವಿರ್ ಮತ್ತು ಬೆಜಲೆಲ್ ಸ್ಮೋಟ್ರಿಚ್ ಅವರ ತೀವ್ರ-ಬಲಪಂಥೀಯ ವಸಾಹತುಗಾರ ಪಕ್ಷಗಳು ಮತ್ತು ಉಗ್ರ-ಸಂಪ್ರದಾಯವಾದಿ ಪಕ್ಷಗಳಾದ ಶಾಸ್ ಮತ್ತು ಯುನೈಟೆಡ್ ತೋರಾ ಜುದಾಯಿಸಂ ಜೊತೆಗೂಡಿ ಈಗ ಅಧಿಕಾರ ನಡೆಸುತ್ತಿವೆ. ಈ ಕೂಟ 42% ಮತ ಗಳಿಸಿದ್ದು ಕಳೆದ ಬಾರಿಗೆ ಹೋಲಿಸಿದರೆ 11 ಸೀಟುಗಳನ್ನು ಕಳೆದುಕೊಂಡಿದೆ. ನೆತನ್ಯಾಹು ಅವರ ಲಿಕುಡ್ ಪಕ್ಷವೊಂದೇ 9 ಸೀಟುಗಳನ್ನು ಕಳೆದುಕೊಂಡಿದೆ. ಹೀಗಾಗಿ ನೇತನ್ಯಾಹು ಕೂಟ ದೊಡ್ಡ ಕೂಟವಾಗಿ ಹೊಮ್ಮಿದರೂ, ಅದನ್ನು ಆಡಳಿತ ಕೂಟವಾಗಿ ಮತ್ತು ಅವರನ್ನು ವೈಯಕ್ತಿಕವಾಗಿ ಜನ ತಿರಸ್ಕರಿಸಿದ್ದಾರೆ ಎಂದೇ ಹೇಳಬಹುದು.

ಹಾಗಾಗಿಯೇ ನೇತನ್ಯಾಹು ಚುನಾವಣಾ ಪ್ರಕ್ರಿಯೆ ನಡೆದಿದೆ ಎಂದು ಚುನಾವಣಾ ಫಲಿತಾಂಶವನ್ನೇ ಪ್ರಶ್ನಿಸುವ ಕತೆ ಕಟ್ಟುತ್ತಿರುವುದು. ಅರಬ್ ಇಸ್ರೇಲಿ ನಾಗರಿಕರಿಗೆ ಭಾರೀ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕಟಾರ್ ಮತ್ತು ಇರಾನ್ ಹಣ ಪೂರೈಕೆ ಮಾಡಿ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದೆ ಎಂಬ ಆಪಾದನೆ ಮಾಡಿದೆ. ಈ ಆರೋಪಗಳನ್ನು ಕಟಾರ್ ಮತ್ತು ಇರಾನ್ ಕಟುವಾಗಿ ಖಂಡಿಸಿವೆ. ಚುನಾವಣಾ ಕಮಿಶನ್ ಸಹ ಈ ಆಪಾದನೆಯನ್ನು ತಿರಸ್ಕರಿಸಿದೆ. ಈ ಬಾರಿ ಅರಬ್ ಇಸ್ರೇಲಿಗಳು ಭಾರೀ ಸಂಖ್ಯೆಯಲ್ಲಿ ಮತದಾನ ಮಾಡಿರುವುದು ನಿಜ. ಒಟ್ಟಾರೆಯಾಗಿಯೂ ಅಂದರೆ ಯಹೂದಿ ಇಸ್ರೇಲಿಗಳೂ ಸಹ ಭಾರೀ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಅವರಿಗೆ ಯು.ಎಸ್ ಹಣ ಪೂರೈಕೆ ಮಾಡಿರುವುದರಿಂದ ಎಂದರೆ ನಂಬಬಹುದೇ? ಗಾಜಾ ಯುದ್ಧ, ಇರಾಕ್ ಮೇಲೆ ಯುದ್ಧ, ಅದರಿಂದ ಉಂಟಾದ ಆರ್ಥಿಕ ದುಸ್ಥಿತಿಯಿಂದಾಗಿ ರಾಜಕೀಯ ತುರ್ತು ಈ ಭಾರೀ ಮತದಾನಕ್ಕೆ ಕಾರಣವೆಂಬುದು ಸ್ಪಷ್ಟ. ಆದರೂ ಪಾಶ್ಚಿಮಾತ್ಯ ಮತ್ತು ಅವುಗಳದ್ದೇ ತುತ್ತೂರಿ ಊದುವ ನಮ್ಮ ಮಡಿಲ ಮಾಧ್ಯಮಗಳು ಈ ಕಟ್ಟುಕತೆಗಳನ್ನು ಬಿತ್ತರಿಸುತ್ತಿವೆ.

ಇದನ್ನೂ ಓದಿ :ದೆಹಲಿಯಲ್ಲಿ ಧಾರಾಕಾರ ಮಳೆ: 24 ಗಂಟೆಗಳಲ್ಲಿ 61.4 ಮಿ.ಮೀ. ಮಳೆ, ಹಲವು ಪ್ರದೇಶಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್

ವಿರೋಧಿ ಕೂಟದ ನಾಯಕ ಮಾಜಿ ಮಿಲಿಟರಿ ಮುಖ್ಯಸ್ಥ ಐಸೆನ್ಕೋಟ್

ವಿರೋಧ ಪಕ್ಷದ “ಚೇಂಜ್ ಬ್ಲಾಕ್” (ಬದಲಾವಣೆಯ ಕೂಟ) ಐಸೆನ್ಕೋಟ್ ಅವರ ನಡುಪಂಥೀಯ ಯಶರ್! ಪಕ್ಷದ ಮೇಲೆ ಆಧಾರಿತವಾಗಿದೆ ಮತ್ತು ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಅವರ ಬಿ’ಯಾಚದ್, ಅವಿಗ್ಡೋರ್ ಲೀಬರ್ಮನ್ ಅವರ ಮಿಲಿಟರಿವಾದಿ ಯಿಸ್ರೇಲ್ ಬೆಯ್ಟೆನು, ಮತ್ತು ಗೋಲಾನ್ ಅವರ ಡೆಮೊಕ್ರಾಟ್ಸ್(ಹಳೆಯ ಲೇಬರ್ ಮತ್ತು ಮೆರೆಟ್ಜ್ ಪಕ್ಷಗಳ ವಿಲೀನ) ಅನ್ನು ಒಳಗೊಂಡಿದೆ. ಎಲ್ಲವೂ ಇಸ್ರೇಲ್ ಅನ್ನು ಯಹೂದಿ ಜನಾಂಗೀಯ ರಾಷ್ಟ್ರಕ್ಕೆ ಬದ್ಧವಾಗಿಸುವ ಝಿಯೋನಿಸ್ಟ್ ಪಕ್ಷಗಳು.   ಐಸೆನ್ಕೋಟ್ ಕೂಟ ಸೀಟುಗಳಲ್ಲಿ ಎರಡನೇ ಸ್ಥಾನದಲ್ಲಿದ್ದು 37.7 % ಮತ ಗಳಿಸಿದ್ದು, ಕಳೆದ ಬಾರಿಗಿಂತ 2 ಸೀಟು ಮಾತ್ರ ಹೆಚ್ಚಳವಾಗಿ ಪಡೆದಿದೆ. ಐಸೆನ್ಕೋಟ್ ಅವರ ನಡುಪಂಥೀಯ ಯಶರ್! ಪಕ್ಷ ಸಹ 21 ಸೀಟು ಗಳಿಸಿದ್ದು ಲಿಕುಡ್ ನಂತರ ಪಕ್ಷವಾಗಿ ಎರಡನೇ ಸ್ಥಾನದಲ್ಲಿದೆ. ಹಾಗಾಗಿ ಈ ಕೂಟವನ್ನು ಸಹ ಜನತೆ ಆಡಳಿತ ಕೂಟವಾಗಿ ಮನ್ನಿಸಿಲ್ಲವೆಂದೇ ಹೇಳಬಹುದು.

‘ಜಂಟಿ ಪಟ್ಟಿ’ ಹದಾಶ್, ತಾಲ್, ಮತ್ತು ಬಾಲದ್ ಎಂಬ ಮೂರು ಪಕ್ಷಗಳ ಕೂಟವಾಗಿದೆ. ಈ ಕೂಟದ ಪ್ರಮುಖ ಶಕ್ತಿಯಾದ ಹದಾಶ್ (‘ಶಾಂತಿ ಮತ್ತು ಸಮಾನತೆಗಾಗಿ ಪ್ರಜಾಸತ್ತಾತ್ಮಕ ರಂಗ’) ಇಸ್ರೇಲಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಯಹೂದಿ-ಅರಬ್ ಒಕ್ಕೂಟವಾಗಿದೆ. ‘ಜಂಟಿ ಪಟ್ಟಿ’ 8.8% ಮತ ಗಳಿಸಿ, ಕಳೆದ ಬಾರಿಗಿಂತ 6 ಹೆಚ್ಚು ಸೀಟುಗಳನ್ನು ಗಳಿಸಿದೆ.

ಇದು ದೀರ್ಘಕಾಲದಿಂದ ಆಕ್ರಮಣದ ಕೊನೆ, 1967ರ ಗಡಿಗಳನ್ನು ಹೊಂದಿರುವ ಇಸ್ರೇಲ್ ಮತ್ತು  ಪ್ಯಾಲೆಸ್ಟೀನಿಯನ್ ಎಂಬ ಎರಡು ದೇಶಗಳ ರಚನೆ  ಮತ್ತು ಇಸ್ರೇಲಿನ ಜನಸಂಖ್ಯೆಯ ಸುಮಾರು ಐದನೇ ಒಂದು ಭಾಗವನ್ನು ಹೊಂದಿರುವ ಅರಬ್ ಪ್ರಜೆಗಳಿಗೆ ಪೂರ್ಣ ಸಮಾನತೆಗಾಗಿ ಹೋರಾಡಿದೆ.

ಹದಶ್ ನಾಯಕ ಮತ್ತು ಕಾನೂನು ಪ್ರಾಧ್ಯಾಪಕ ಯೂಸುಫ್ ಜಬರೀನ್ ‘ಜಂಟಿ ಪಟ್ಟಿ’ಯ  ನೇತೃತ್ವವನ್ನು ವಹಿಸಿದ್ದಾರೆ, ಮತ್ತು ಅದರ ಪಟ್ಟಿಯಲ್ಲಿ ಯಹೂದಿ ಕಮ್ಯುನಿಸ್ಟ್ ಶಾಸಕ ಓಫರ್ ಕಸೀಫ್ ಸೇರಿದ್ದಾರೆ.

ರಾಮ್, (ಅಥವಾ ಅರಬ್ ಐಕ್ಯತೆಯ ಪಟ್ಟಿ)  ಸಾಮಾಜಿಕವಾಗಿ ಸಂಪ್ರದಾಯವಾದಿ ಪಕ್ಷವಾಗಿದ್ದು ಇಸ್ಲಾಮಿಕ್ ಚಳುವಳಿ ಆಧಾರಿತವಾಗಿದೆ ಮತ್ತು ಮನ್ಸೂರ್ ಅಬ್ಬಾಸ್ ಅದರ ನೇತೃತ್ವ ವಹಿಸಿದ್ದಾರೆ. 2021ರಲ್ಲಿ, ಇದು ಇಸ್ರೇಲಿನ  ಆಡಳಿತ ಕೂಟಕ್ಕೆ ಸೇರಿದ ಮೊದಲ ಅರಬ್ ಪಕ್ಷವಾಯಿತು.  ರಾಮ್ 5.9% ಮತ ಪಡೆದು (ಕಳೆದ ಬಾರಿಗಿಂತ 3 ಹೆಚ್ಚು ಅಂದರೆ) 8 ಸೀಟುಗಳನ್ನು ಗಳಿಸಿದೆ.

ಎರಡೂ ಅರಬ್ ಪಟ್ಟಿಗಳು ಒಟ್ಟಿಗೆ 14.8% ಮತ ಗಳಿಸಿ (ಕಳೆದ ಬಾರಿಗಿಂತ 9 ಹೆಚ್ಚು ಅಂದರೆ) 19 ಸೀಟುಗಳನ್ನು ಗಳಿಸಿವೆ. ಪಾರ್ಲಿಮೆಂಟಿನಲ್ಲಿ ಒಂದು ನಿರ್ಣಾಯಕ ಗುಂಪಾಗಿದೆ.

ಚುನಾವಣಾ ಫಲಿತಾಂಶ ಗಮನಿಸಿದರೆ ವಿರೋಧ ಪಕ್ಷದ ಕೂಟ ಮತ್ತು ಎರಡು ಅರಬ್ ಕೂಟಗಳ ಸಮ್ಮಿಶ್ರ ಸರಕಾರ ರಚನೆಗೆ ಜನಾದೇಶ ಇರುವುದು ಸ್ಪಷ್ಟವಾಗುತ್ತದೆ.

ಎರಡೂ ಪಟ್ಟಿಗಳು ತಮ್ಮನ್ನು ಮತಪತ್ರದಿಂದ ಹೊರಗಿಡುವ ಪ್ರಯತ್ನಗಳ ವಿರುದ್ಧ ಹೋರಾಢಿ ಜಯಿಸಿದವು. ಸೆಪ್ಟೆಂಬರ್ ನಲ್ಲಿ, ಸರ್ಕಾರದ ನಿಯಂತ್ರಣದಲ್ಲಿರುವ ಕೇಂದ್ರ ಚುನಾವಣಾ ಸಮಿತಿ ಅವುಗಳನ್ನು ಅನರ್ಹಗೊಳಿಸಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯವು ಅಕ್ಟೋಬರ್ 2ರಂದು ಆ ನಿರ್ಣಯವನ್ನು ಸರ್ವಾನುಮತದಿಂದ ರದ್ದು ಮಾಡಿತು.  ಆದಾಗ್ಯೂ, ದಮನ ಪ್ರಯತ್ನ ಅಲ್ಲಿಗೆ ನಿಲ್ಲಲಿಲ್ಲ. ಚುನಾವಣಾ ದಿನದಂದು, ಅರಬ್ ಪಟ್ಟಣಗಳಲ್ಲಿನ ಮತದಾನ ಕೇಂದ್ರಗಳಲ್ಲಿ ಪೊಲೀಸರು ಮತದಾರರನ್ನು ವಿಳಂಬಗೊಳಿಸಿದರು ಮತ್ತು ಅರಬ್ ಭಾಷೆಯ ಮತಪತ್ರಗಳ ಕೊರತೆ ಇತ್ತು ಎಂದು ವರದಿಯಾಗಿತ್ತು.

ಅರಬ್-ಯೆಹೂದಿ ‘ಜಂಟಿ ಪಟ್ಟಿ’ಯ ನಾಯಕ ಜಬರೀನ್
ಅರಬ್-ಯೆಹೂದಿ ‘ಜಂಟಿ ಪಟ್ಟಿ’ಯ ನಾಯಕ ಜಬರೀನ್

‘ನೆತನ್ಯಾಹು ವನ್ನು ಕೆಳಗಿಳಿಸಲು ದಾರಿ ಮಾಡಿ’

ಇಸ್ರೇಲಿನ ಮುಂದಿನ ಸರಕಾರದ ರಚನೆಯಲ್ಲಿ ‘ಜಂಟಿ ಪಟ್ಟಿ’ ನಾಯಕ ಜಬರೀನ್ ತನ್ನ ಹೊಸ ಶಕ್ತಿಯನ್ನು ಬಳಸುತ್ತದೆ ಎಂಬ ಸಂಕೇತ ನೀಡಿದ್ದಾರೆ. “ಇದು ಜನಾಂಗಬೇಧ, ಹೊರಗಿಡುವಿಕೆ, ಮತ್ತು ಯಜಮಾನಿಕೆಗಳ ಮುಂದುವರಿಕೆ ಅಥವಾ ನಿಜವಾದ ಯಹೂದಿ-ಅರಬ್ ಪಾಲುದಾರಿಕೆ ಗಳ ನಡುವಿನ ಆಯ್ಕೆ. ನೇತನ್ಯಾಹು ಅವರ ರಕ್ತಸಿಕ್ತ ಸರ್ಕಾರಕ್ಕೆ ನಿಜವಾದ ಪರ್ಯಾಯವನ್ನು ನೀಡಲು ಬಯಸುವವರು ನಮ್ಮೊಂದಿಗೆ ಮಾತನಾಡಬೇಕಾಗುತ್ತದೆ… ಹೌದು, ನೆತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೆ ದಾರಿ ಮಾಡಲು ನಾವು ಸಿದ್ಧರಿದ್ದೇವೆ.” ಎಂದು ಅವರು ಹೇಳಿದ್ದಾರೆ.

ಲಿಕುಡ್ ನ ನೆಸೆಟ್ ಸ್ಪೀಕರ್ ಅಮೀರ್ ಓಹಾನಾ ಅವರನ್ನು ಬದಲಾಯಿಸುವುದು ಮತ್ತು ಭ್ರಷ್ಟಾಚಾರದ ಆರೋಪ ಹೊಂದಿರುವ ಮತ್ತು ವಿಚಾರಣೆ ಎದುರಿಸುತ್ತಿರುವ ನೆತನ್ಯಾಹು ಮತ್ತಿತರ ರಾಜಕಾರಣಿಗಳು ಸರ್ಕಾರ ರಚಿಸದಂತೆ ತಡೆಯುವ ಕಾನೂನನ್ನು ಅಂಗೀಕರಿಸುವುದು – ಹೊಸ ಪಾರ್ಲಿಮೆಂಟಿನ ಮೊದಲ ಹೆಜ್ಜೆಗಳಾಗಬೇಕು ಎಂದು ಮತದಾನಕ್ಕೆ ಮೊದಲೇ ಜಬರೀನ್ ವಿವರಿಸಿದ್ದರು.

ಅರಬ್ ಸಮುದಾಯಗಳಲ್ಲಿ ಸಂಘಟಿತ ಅಪರಾಧದ ವಿರುದ್ಧ ಕ್ರಮ, ಮನೆ ಧ್ವಂಸಗಳ ನಿಲುಗಡೆ, ಮತ್ತು ಪ್ಯಾಲೆಸ್ಟೀನಿಯನ್ ಜನರ ಭವಿಷ್ಯಕ್ಕಾಗಿ ಅವರ ಸಾರ್ವಭೌಮತೆಯನ್ನು ಗುರುತಿಸುವ ಗಂಭೀರ ಯೋಜನೆ – ಇವುಗಳನ್ನು ಒಪ್ಪುವ ಹೊಸ ಸರ್ಕಾರವನ್ನು ಬೆಂಬಲಿಸಲು ‘ಜಂಟಿ ಪಟ್ಟಿ’ ಮಾತುಕತೆ ನಡೆಸುತ್ತದೆ ಎಂದೂ ಜಬರೀನ್ ಮತದಾನದ ಮೊದಲೇ ಹೇಳಿದ್ದರು.

ಜಬರೀನ್ ಕೇವಲ ಮೇಲ್ಭಾಗದಲ್ಲಿ ಹೊಸ ಮುಖವನ್ನು ಬಯಸುವುದಿಲ್ಲ. “ಮುಖ್ಯಸ್ಥರನ್ನು ಮಾತ್ರ ಬದಲಾಯಿಸಿ ನೀತಿಯನ್ನು ಹಾಗೆ ಉಳಿಸುವುದರಲ್ಲಿ ನಮಗೆ ಆಸಕ್ತಿ ಇಲ್ಲ. ..ನಾವು ನಿಜವಾದ ಬದಲಾವಣೆಯನ್ನು ಬಯಸುತ್ತಿದ್ದೇವೆ.” ,” ಎಂದು ಅವರು ಚುನಾವಣೆಯ  ಬೆಳಗ್ಗೆ ಬರೆದರು

ತಮ್ಮ ಒಕ್ಕೂಟದ ಪಾಲುದಾರ ಆಗಬಯಸುವವರು ಇಸ್ರೇಲ್ ಅನ್ನು ಯಹೂದಿ ದೇಶವಾಗಿ ಗುರುತಿಸಬೇಕು, ಕಡ್ಡಾಯ ಮಿಲಿಟರಿ ಸೇವೆಯನ್ನು ಬೆಂಬಲಿಸಬೇಕು, ಮತ್ತು ಹಮಾಸ್ ಅನ್ನು ನಾಶಮಾಡಲು ಪ್ರತಿಜ್ಞೆ ಮಾಡಬೇಕು ಎಂದು ಚುನಾವಣಾ ಪ್ರಚಾರದ ಸಮಯದಲ್ಲಿ, ವಿರೋಧ ಕೂಟದ ನಾಯಕ ಐಸೆನ್ಕೋಟ್ ಒತ್ತಾಯಿಸಿದ್ದರು.  ಈ ಷರತ್ತುಗಳನ್ನು ಅರಬ್ ಪಕ್ಷಗಳನ್ನು ಹೊರಗಿಡಲು ಹಾಕಲಾಗಿದೆ.  ಅರಬ್ ಪಕ್ಷಗಳೊಂದಿಗೆ ಪಾಲುದಾರಿಕೆ ಮಾಡುವುದು “ನನ್ನ ತತ್ವಗಳಿಗೆ ವಿರುದ್ಧ” ಎಂದು ಅವರು ಹೇಳಿದ್ದರು. ಕೂಟದ ಇತರ ನಾಯಕರಾದ ಬೆನೆಟ್ ಮತ್ತು ಲೀಬರ್ಮನ್ ಇದೇ ರೀತಿಯ ಪ್ರತಿಜ್ಞೆಗಳನ್ನು ಮಾಡಿದರು. ಇದು ಸಮ್ಮಿಶ್ರ ಮಾತುಕತೆಗಳಿಗೆ ದೊಡ್ಡ ಅಡ್ಡಿಯಾಗಲಿದೆ.

ಜನಸಂಖ್ಯೆಯ ದೊಡ್ಡ ಭಾಗಗಳು ಅವರ ನಿಲುವುಗಳನ್ನು ಒಪ್ಪುವುದಿಲ್ಲ. ವಿರೋಧ ಪಕ್ಷವು ಅರಬ್ ಪಕ್ಷಗಳ ಬಹಿಷ್ಕಾರವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಸುಮಾರು 35,000 ಇಸ್ರೇಲಿಗಳು ಅರ್ಜಿಗೆ ಸಹಿ ಹಾಕಿದ್ದಾರೆ.

‘ಜಂಟಿ ಪಟ್ಟಿ’ಯ ಅಭ್ಯರ್ಥಿಗಳ ಪೋಸ್ಟರ್
‘ಜಂಟಿ ಪಟ್ಟಿ’ಯ ಅಭ್ಯರ್ಥಿಗಳ ಪೋಸ್ಟರ್

ಶಾಂತಿಗಾಗಿ ಯಹೂದಿ-ಅರಬ್ ಜನವಿಭಾಗದ ದೊಡ್ಡ ಭಾಗ

ಇಸ್ರೇಲಿ ಕಮ್ಯುನಿಸ್ಟ್ ಪಕ್ಷದ ಹೀಬ್ರೂ ಭಾಷೆಯ ಪತ್ರಿಕೆ ‘ಜೋ ಹದರೆಖ್’ ಮತದಾನಕ್ಕೆ ಮೊದಲು ಸಮೀಕ್ಷೆಗಳು ‘ವಿರೋಧಿ ಕೂಟ ಒಂಟಿಯಾಗಿ 61 ತಲುಪಿದ್ದನ್ನು ಎಂದಿಗೂ ತೋರಿಸಿಲ್ಲ, ಆದ್ದರಿಂದ ಹೊಸ ಸರ್ಕಾರಕ್ಕೆ ಯಾವುದೇ ದಾರಿ ‘ಜಂಟಿ ಪಟ್ಟಿ’ ಮತ್ತು ‘ರಾಮ್’  ಮೂಲಕವೇ ಹೋಗುತ್ತದೆ ಎಂದು ವಾದಿಸಿತು. ನಿಜವಾದ ಪ್ರಶ್ನೆಯೆಂದರೆ ವಿರೋಧ ಪಕ್ಷದ ನಾಯಕರು ಅರಬ್ ಪಕ್ಷಗಳ ತಮ್ಮ “ಜನಾಂಗ-ದ್ವೇಷದ ಬಹಿಷ್ಕಾರ”ವನ್ನು ಮುರಿಯುತ್ತಾರೆಯೇ ಎಂಬುದು.

‘ಮುಖ್ಯವಾಹಿನಿ’ಯನ್ನು ಆಕರ್ಷಿಸುವ ಬದಲು,”ಬರಿ ಲೆಕ್ಕಭರ್ತಿಯ  ಬಣವಾಗಿ ಅಥವಾ ಬಜೆಟ್ ನಿಯಂತ್ರಿಸುವ ಸಾಧನವಾಗಿ ಅಲ್ಲ, ಬದಲಿಗೆ ಶಾಂತಿ, ಸಮಾನತೆ, ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನೈತಿಕ ದಿಕ್ಸೂಚಿಯಾಗಿರುವ” ಯಹೂದಿ-ಅರಬ್ ಪಾಲುದಾರಿಕೆಯ ಮೇಲೆ ಆಧಾರಿತವಾದ ತತ್ವಬದ್ಧ ಪರ್ಯಾಯವನ್ನು ‘ಜಂಟಿ ಪಟ್ಟಿ’ನೀಡಿತು ಎಂದು ಪತ್ರಿಕೆಯ ಸಂಪಾದಕ ಅಸಾಫ್ ತಲ್ಗಾಮ್, ಬರೆದರು.

ಹದಾಶ್ ಉಪಾಧ್ಯಕ್ಷೆ ಮತ್ತು ‘ಜಂಟಿ ಪಟ್ಟಿ’ಯ ಹೀಬ್ರೂ ಭಾಷೆಯ ಪ್ರಚಾರದ ನಿರ್ದೇಶಕಿ ನೋವಾ ಲೆವಿ, ಗಾಜಾದ ವಿನಾಶದಿಂದ ಬೆಚ್ಚಿಬಿದ್ದ ಯಹೂದಿ ಮತದಾರರನ್ನು ‘ಜಂಟಿ ಪಟ್ಟಿ’ ಗೆಲ್ಲುತ್ತಿದೆ ..ನಾವು ನಿಜವಾದ ಯಹೂದಿ-ಅರಬ್ ಪಾಲುದಾರಿಕೆಗಾಗಿ ಹೋರಾಡುತ್ತಿದ್ದೇವೆ, ಕುದುರೆ ಮತ್ತು ಸವಾರನ ಪಾಲುದಾರಿಕೆಗಾಗಿ ಅಲ್ಲ” ಎಂದು ಅವರು ಹೇಳಿದರು.”

ಇಸ್ರೇಲಿ ಯುದ್ಧಗಳು ಕೊನೆಯಾಗುವುದೇ?

ನೆತನ್ಯಾಹು ಬಿದ್ದರೂ, ಗಾಜಾ ಯುದ್ಧ ಮುಗಿಯುವುದಿಲ್ಲ. ಅಧಿಕಾರ ವಹಿಸಿಕೊಂಡ 18 ತಿಂಗಳೊಳಗೆ ಹಮಾಸ್ ಇನ್ನು ಗಾಜಾವನ್ನು ಆಳುವುದಿಲ್ಲ ಮತ್ತು ಅದರ ಮಿಲಿಟರಿ ವಿಭಾಗವನ್ನು ನಾಶಮಾಡಲಾಗುತ್ತದೆ ಎಂದು ವಿರೋಧ ಕೂಟದ ನಾಯಕ ಐಸೆನ್ಕೋಟ್ ಪ್ರತಿಜ್ಞೆ ಮಾಡಿದ್ದರು.  ವಿರೋಧ ಕೂಟದ ನಾಯಕರಾದ ಬೆನೆಟ್ ಅವರ ಕಾರ್ಯಸೂಚಿ ಇರಾನ್ ಮೇಲೆ ಮತ್ತೆ ದಾಳಿ ಮಾಡುವಂತೆ ಕರೆ ನೀಡುತ್ತದೆ ಮತ್ತು ಗೋಲಾನ್ ಕೂಡ ಪ್ಯಾಲೆಸ್ಟೀನಿಯನ್ ದೇಶದ ರಚನೆಯನ್ನು ನಿರಾಕರಿಸುತ್ತಾರೆ

ನೆತನ್ಯಾಹು ಈಗಾಗಲೇ ಮುಂದಿನ ಯುದ್ಧದತ್ತ ಕಣ್ಣಿಟ್ಟಿದ್ದಾರೆ. ಇಸ್ರೇಲಿ ಮತ್ತು ಅಮೆರಿಕನ್ ಮಿಲಿಟರಿ ಯೋಜಕರು ಇರಾನ್ ಮೇಲೆ ಹೊಸ ಜಂಟಿ ದಾಳಿಗಳನ್ನು ಸಿದ್ಧಪಡಿಸುತ್ತಿದ್ದಾರೆ, ಇದು ನವೆಂಬರ್ 3ರ ಅಮೆರಿಕದ ಮಧ್ಯಂತರ ಚುನಾವಣೆಗಳ ನಂತರ ಬಹುತೇಕ ಖಚಿತ ಎಂದು ಬಲ್ಲ ಮೂಲಗಳು ಹೇಳುತ್ತವೆ. ಎರಡೂ ದೇಶಗಳಲ್ಲಿ ಚುನಾವಣೆಯ ಮೊದಲು ಮತ್ತೆ ದಾಳಿ ಮಾಡುವಂತೆ ನೆತನ್ಯಾಹು ಟ್ರಂಪ್ ಅವರನ್ನು ಒತ್ತಾಯಿಸಿದರು, ಆದರೆ ಅಮೆರಿಕನ್ ಮತದಾರರು ಮಧ್ಯಂತರ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೊದಲು ತೈಲ ಮಾರುಕಟ್ಟೆಗಳಿಗೆ ಇನ್ನೊಂದು ಆಘಾತ ಉಂಟುಮಾಡುವ ಬಗ್ಗೆ ಚಿಂತಿತರಾದ ಟ್ರಂಪ್ ನಿರಾಕರಿಸಿದರು ಎಂದು ವರದಿಯಾಗಿದೆ.

ಐಸೆನ್ಕೋಟ್ ತನ್ನ ಷರತ್ತುಗಳನ್ನು ಬಿಡುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಮತದಾರರು ಈಗಾಗಲೇ ಸಂದೇಶ ಕಳುಹಿಸಿದ್ದಾರೆ: ಅರಬ್ ಮತ್ತು ಯಹೂದಿ ಎರಡೂ ಇಸ್ರೇಲಿ ಜನವಿಭಾಗಗಳ ದೊಡ್ಡ ಭಾಗ, ಅಂತ್ಯವಿಲ್ಲದ ಯುದ್ಧಕ್ಕಿಂತ ಹಂಚಿಕೊಂಡ ಪ್ರಜಾಸತ್ತಾತ್ಮಕ ಭವಿಷ್ಯದ ಭರವಸೆ ನೀಡುವ ಪಕ್ಷಗಳನ್ನು ಬೆಂಬಲಿಸಿದರು.  ಐಸೆನ್ಕೋಟ್ ತನ್ನ ಷರತ್ತುಗಳನ್ನು ಬಿಡಲು ಇಸ್ರೇಲಿ ಜನತೆ ಎಷ್ಟು ಒತ್ತಡ ಹಾಕುತ್ತಾರೆ? ಮತ್ತು ಯು.ಎಸ್ ಅಧ್ಯಕ್ಷ ಟ್ರಂಪ್ ತಮ್ಮ ಮಿತ್ರ ನೇತನ್ಯಾಹು ಬೆಂಬಲಕ್ಕೆ ಏನು ಮಾಡುತ್ತಾರೆ ? – ಎಂಬುದರ ಮೇಲೆ ಅದು ನಿರ್ಧರಿತವಾಗಲಿದೆ

****************************

ಇದನ್ನೂ ನೋಡಿ : SIR ಕರ್ನಾಟಕ | ಬೆಂಗಳೂರಿನಲ್ಲಿ ಇಬ್ಬರು ಮತದಾರರಲ್ಲಿ ಒಬ್ಬರ ಹೆಸರು ಡಿಲೀಟ್‌! ಸಿಕ್ಕ ನುಸುಳುಕೋರರು ಎಷ್ಟು?

Donate Janashakthi Media

Leave a Reply

Your email address will not be published. Required fields are marked *