ಪೆಲೆಟ್‌ ದಾಳಿಯ ಗಾಯಾಳು ವಿದ್ಯಾರ್ಥಿಯೊಂದಿಗೆ ರಾಹುಲ್‌ ಗಾಂಧಿ ಧರಣಿ: ಎಫ್‌ಐಆರ್‌ ದಾಖಲಿಸಲು ಆಗ್ರಹ

ನವದೆಹಲಿ: ಜಂತರ್‌ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೆಲೆಟ್‌ ಗುಂಡಿನಿಂದ ಗಾಯಗೊಂಡಿದ್ದಾರೆ ಎನ್ನಲಾದ 19 ವರ್ಷದ ಸಾಹಿಲ್‌ ಲೋಚಬ್‌ ಅವರೊಂದಿಗೆ ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಸಂಸತ್‌ ಮಾರ್ಗ ಪೊಲೀಸ್‌ ಠಾಣೆಯಲ್ಲಿ ಧರಣಿ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಜುಲೈ 20ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸಾಹಿಲ್‌ ಅವರ ಕಣ್ಣು ಹಾಗೂ ಹೊಟ್ಟೆ ಭಾಗಕ್ಕೆ ಪೆಲೆಟ್‌ ಗಾಯಗಳಾಗಿದ್ದವು ಎಂದು ಆರೋಪಿಸಲಾಗಿದೆ. ಬಳಿಕ ಅವರನ್ನು ಏಮ್ಸ್‌ ಟ್ರಾಮಾ ಸೆಂಟರ್‌ಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ವೈದ್ಯಕೀಯ ವರದಿಯಲ್ಲಿ ಒಂದು ಕಣ್ಣಿನಲ್ಲಿ ಮೂರು ಪೆಲೆಟ್‌ಗಳು ಪತ್ತೆಯಾಗಿವೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಸಾಹಿಲ್‌ ಮತ್ತು ಅವರ ತಾಯಿ ಹಾಗೂ ಕಾಂಗ್ರೆಸ್‌ ನಾಯಕರು ಮೊದಲು ಮಂದಿರ್‌ ಮಾರ್ಗ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಲು ಮುಂದಾಗಿದ್ದರು. ಅಲ್ಲಿ ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಸಂಸತ್‌ ಮಾರ್ಗ ಪೊಲೀಸ್‌ ಠಾಣೆಗೆ ತೆರಳಿದರು. ಅಲ್ಲಿ ನವದೆಹಲಿ ಜಿಲ್ಲಾ ಉಪ ಪೊಲೀಸ್‌ ಆಯುಕ್ತ ಸಚಿನ್‌ ಶರ್ಮಾ ಅವರನ್ನು ರಾಹುಲ್‌ ಗಾಂಧಿ ಭೇಟಿ ಮಾಡಿ ಮಾತುಕತೆ ನಡೆಸಿದರೂ ಯಾವುದೇ ಪರಿಹಾರ ಕಂಡುಬರಲಿಲ್ಲ. ಬಳಿಕ ಠಾಣೆಯಲ್ಲೇ ಧರಣಿ ಆರಂಭಿಸಿದರು.

“ನಮ್ಮ ಏಕೈಕ ಬೇಡಿಕೆ ಎಫ್‌ಐಆರ್‌ ದಾಖಲಿಸಬೇಕು ಮತ್ತು ತನಿಖಾಧಿಕಾರಿಯ ಹೆಸರನ್ನು ತಿಳಿಸಬೇಕು. ಈ ಕುಟುಂಬಕ್ಕೆ ನ್ಯಾಯ ಬೇಕು. ಎಫ್‌ಐಆರ್‌ ದಾಖಲಾಗುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ” ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.

ಇದನ್ನೂ ಓದಿ : ಬಳ್ಳಾರಿಯಲ್ಲಿ ರೈತರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ; ಪಹಣಿಯಲ್ಲಿ ‘ಸರ್ಕಾರ’ ಎಂದು ನಮೂದು

ಪೊಲೀಸ್‌ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ಇದಕ್ಕೆ “ಮೇಲಿನಿಂದ ಆದೇಶ”ವಿದೆ ಎಂದು ತಿಳಿಸಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಆದರೆ ಪೊಲೀಸ್‌ ಮೂಲಗಳ ಪ್ರಕಾರ, ಸಾಹಿಲ್‌ ಅವರ ದೂರನ್ನು ಜುಲೈ 20ರ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸ್‌ ಅಪರಾಧ ವಿಭಾಗಕ್ಕೆ ಕಳುಹಿಸಲಾಗುವುದು ಎಂದು ತಿಳಿಸಲಾಗಿದೆ.

ರಾಹುಲ್‌ ಗಾಂಧಿ ಧರಣಿಗೆ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಬಳಿಕ ಸೇರ್ಪಡೆಯಾದರು. ಧರಣಿ ಹಿನ್ನೆಲೆಯಲ್ಲಿ ಪೊಲೀಸ್‌ ಮತ್ತು ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಯನ್ನು ಠಾಣೆಯ ಸುತ್ತ ನಿಯೋಜಿಸಲಾಗಿತ್ತು.

ಕಾಂಗ್ರೆಸ್‌ ಪ್ರಕಾರ, ಸಾಹಿಲ್‌ ಮತ್ತು ಅವರ ವಕೀಲರು ಆಗಸ್ಟ್‌ 14ರಂದು ದೆಹಲಿ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದರು. ಆದರೆ ದೂರಿನ ಸ್ವೀಕೃತಿ ಅಥವಾ ತನಿಖಾಧಿಕಾರಿಯ ವಿವರ ನೀಡಿರಲಿಲ್ಲ. ಆಗಸ್ಟ್‌ 17ರಂದು ಇ-ಮೇಲ್‌ ಮತ್ತು ದೂರವಾಣಿ ಮೂಲಕವೂ ವಿಚಾರಿಸಿದರೂ ಪ್ರತಿಕ್ರಿಯೆ ಬಂದಿಲ್ಲ ಎಂದು ಪಕ್ಷ ಹೇಳಿದೆ.

ಜುಲೈ 20ರಂದು ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ನಡೆದಿತ್ತು. ಪ್ರತಿಭಟನೆಯ ಸಂದರ್ಭದಲ್ಲಿ ಪೆಲೆಟ್‌ ಬಳಕೆ ನಡೆದಿದೆ ಎಂಬ ಆರೋಪವನ್ನು ದೆಹಲಿ ಪೊಲೀಸರು ನಿರಾಕರಿಸಿರುವ ಹಿನ್ನೆಲೆಯಲ್ಲಿ, ಗಾಯಗೊಂಡ ವಿದ್ಯಾರ್ಥಿಯ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಬೇಕೆಂಬ ರಾಹುಲ್‌ ಗಾಂಧಿ ಅವರ ಆಗ್ರಹ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಇದನ್ನೂ ನೋಡಿ : “ಕನಿಷ್ಠ ವೇತನವೂ ಇಲ್ಲ, ಜೀವಕ್ಕೆ ಗ್ಯಾರಂಟಿಯೂ ಇಲ್ಲ! ಬೇಯುತ್ತಿದೆ ವಿದ್ಯುತ್ ಕಾರ್ಮಿಕರ ಬದುಕು” | ಎಸ್‌ ವರಲಕ್ಷ್ಮಿ

Donate Janashakthi Media

Leave a Reply

Your email address will not be published. Required fields are marked *