ಬಳ್ಳಾರಿಯಲ್ಲಿ ರೈತರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ; ಪಹಣಿಯಲ್ಲಿ ‘ಸರ್ಕಾರ’ ಎಂದು ನಮೂದು

ಬಳ್ಳಾರಿ: ಸಿರುಗುಪ್ಪ ತಾಲೂಕಿನ ಹಳೇಕೋಟೆ, ದೇವಲಾಪುರ, ಸಿರಿಗೇರಿ ಸೇರಿದಂತೆ ಆರು ಗ್ರಾಮಗಳ ಬಡ ರೈತರ ಭೂಮಿ ಹಕ್ಕು ಹಾಗೂ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನಡೆದ ಎರಡು ದಿನಗಳ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ. ಅಕ್ರಮವಾಗಿ ಪಹಣಿಯಲ್ಲಿ ಸೇರ್ಪಡೆಯಾಗಿದ್ದ ಭೂಗಳ್ಳರ ಹೆಸರನ್ನು ತೆಗೆದು, ಸಂಬಂಧಿತ ಜಮೀನುಗಳ ದಾಖಲೆಗಳಲ್ಲಿ ‘ಸರ್ಕಾರ’ ಎಂದು ನಮೂದಿಸಲಾಗಿದೆ ಎಂದು ರೈತ ಸಂಘಟನೆ ತಿಳಿಸಿದೆ.ಬಳ್ಳಾರಿ

ಸಿರುಗುಪ್ಪ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಿತ್ರಾರ್ಜಿತವಾಗಿ ಜಮೀನು ಸಾಗುವಳಿ ಮಾಡಿಕೊಂಡು ಬರುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಬಡ ರೈತರನ್ನು ಜಮೀನಿನಿಂದ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ರೈತ ಸಂಘ ಆರೋಪಿಸಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರೈತರ ಮೇಲೆ ಹಲ್ಲೆ ನಡೆಸಿ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಂಘಟನೆ ದೂರಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಬಳ್ಳಾರಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಆಗಸ್ಟ್ 19 ಮತ್ತು 20ರಂದು ಎರಡು ದಿನಗಳ ಕಾಲ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಯಿತು. ಹೋರಾಟದಲ್ಲಿ ರೈತರು ಹಾಗೂ ರೈತ ಮುಖಂಡರು ಭಾಗವಹಿಸಿ, ಬಡ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸಬೇಕು ಹಾಗೂ ಜಮೀನು ಸಾಗುವಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಹ ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿ, ಆರು ಗ್ರಾಮಗಳಲ್ಲಿನ ಜಮೀನುಗಳಿಗೆ ಅಕ್ರಮವಾಗಿ ಬೇರೆಯವರ ಹೆಸರಿಗೆ ಪಟ್ಟಾ ಮಾಡಲಾಗಿದೆ ಎಂದು ಆರೋಪಿಸಿದರು. ಮೂಲ ಸಾಗುವಳಿದಾರರನ್ನು ಗೈರುಪಟ್ಟದಾರರೆಂದು ತೋರಿಸಿ, ನಕಲಿ ದಾಖಲೆಗಳ ಮೂಲಕ 300ಕ್ಕೂ ಹೆಚ್ಚು ಎಕರೆ ಜಮೀನನ್ನು ಸಂಬಂಧಿಕರು ಹಾಗೂ ಇತರರ ಹೆಸರಿಗೆ ನೋಂದಾಯಿಸಲಾಗಿದೆ ಎಂದು ಅವರು ದೂರಿದರು.

ಭೂ ವಿವಾದಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಬಾರದು ಎಂಬ ಸರ್ಕಾರದ ಸ್ಪಷ್ಟ ಆದೇಶವಿದ್ದರೂ, ಭೂಗಳ್ಳರು ಎಂದು ಆರೋಪಿಸಲಾದವರ ದೂರಿನ ಆಧಾರದ ಮೇಲೆ ಬಡ ರೈತರು ಮತ್ತು ರೈತ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ನರಸಣ್ಣ ನಾಯಕ ಆಕ್ರೋಶ ವ್ಯಕ್ತಪಡಿಸಿದರು. ಅನ್ಯಾಯದ ವಿರುದ್ಧ ಹೋರಾಟ ನಡೆಸುವ ರೈತರ ಮೇಲೆಯೇ ಪ್ರಕರಣ ದಾಖಲಿಸುವ ಕ್ರಮ ಖಂಡನೀಯ ಎಂದರು.

ಸಿರುಗುಪ್ಪದ ಉಪ ನೊಂದಣಾಧಿಕಾರಿ ಯಲ್ಲಾರೆಡ್ಡೆಪ್ಪ ಸೇರಿದಂತೆ ಆರೋಪಿತರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ, ಇದುವರೆಗೆ ಬಂಧನ ಸೇರಿದಂತೆ ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ರೈತ ಸಂಘ ಆರೋಪಿಸಿದೆ. ಸರ್ಕಾರ

ಇದನ್ನೂ ಓದಿ : ವಿದ್ಯುತ್ ಕಾರ್ಮಿಕರ ಆಕ್ರೋಶ: ಕನಿಷ್ಠ ವೇತನ ಜಾರಿ, ಗುತ್ತಿಗೆ ಪದ್ಧತಿ ರದ್ದುಪಡಿಸಲು ಆಗ್ರಹ

ಪ್ರಮುಖ ಬೇಡಿಕೆಗಳು 

ಹೋರಾಟಗಾರರು ಬಡ ರೈತರು ಮತ್ತು ರೈತ ಮುಖಂಡರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಜಮೀನು ಉಳುಮೆ ಮಾಡುತ್ತಿರುವ ರೈತರಿಗೆ ಫಾರಂ-01 ಸಲ್ಲಿಸಲು ಅವಕಾಶ ನೀಡಬೇಕು ಹಾಗೂ ಸಾಗುವಳಿ ಜಮೀನಿಗೆ ಹಕ್ಕುಪತ್ರ ನೀಡುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಲ್ಲದೆ, ಬಡ ರೈತರ ಮೇಲಿನ ದೌರ್ಜನ್ಯಕ್ಕೆ ಕಾರಣರಾದವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಎರಡು ದಿನಗಳ ಹೋರಾಟದ ಬಳಿಕ ಅಕ್ರಮವಾಗಿ ಪಹಣಿಯಲ್ಲಿ ಸೇರ್ಪಡೆಯಾಗಿದ್ದ ಭೂಗಳ್ಳರ ಹೆಸರನ್ನು ತೆಗೆದು, ಜಿಲ್ಲಾಡಳಿತವು ಸಂಬಂಧಿತ ಜಮೀನುಗಳ ದಾಖಲೆಗಳಲ್ಲಿ ‘ಸರ್ಕಾರ’ ಎಂದು ನಮೂದಿಸಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ಸ್ವಾಗತಿಸಿ ಅಭಿನಂದಿಸಿದೆ.

ಆದರೆ, ಈ ಕ್ರಮ ಮಾತ್ರ ಸಾಕಾಗುವುದಿಲ್ಲ ಎಂದು ಸಂಘಟನೆ ಹೇಳಿದ್ದು, ವಾಸ್ತವವಾಗಿ ಜಮೀನು ಉಳುಮೆ ಮಾಡುತ್ತಿರುವ ಬಡ ರೈತರಿಗೆ ಫಾರಂ-01 ಸಲ್ಲಿಸಿ ಭೂ ಹಕ್ಕು ಪಡೆಯಲು ಅವಕಾಶ ನೀಡಬೇಕು, ರೈತರ ಮೇಲಿನ ಸುಳ್ಳು ಪ್ರಕರಣಗಳನ್ನು ರದ್ದುಗೊಳಿಸಬೇಕು ಹಾಗೂ ದೌರ್ಜನ್ಯ ಪ್ರಕರಣದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ಈ ಬೇಡಿಕೆಗಳು ಈಡೇರುವವರೆಗೆ ರೈತರ ಹಕ್ಕಿಗಾಗಿ ಹೋರಾಟ ಮುಂದುವರಿಯಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಬಳ್ಳಾರಿ ಜಿಲ್ಲಾ ಸಮಿತಿ ತಿಳಿಸಿದೆ. ಸರ್ಕಾರ

ಇದನ್ನೂ ನೋಡಿ : ಬೆಳಕು ನೀಡುವ ಕೈಗಳಿಗೆ ಕತ್ತಲೆಯ ಬದುಕು: ವಿದ್ಯುತ್ ಕಾರ್ಮಿಕರ ಆಕ್ರೋಶದ ಹೋರಾಟ Janashakthi Media

Donate Janashakthi Media

Leave a Reply

Your email address will not be published. Required fields are marked *