ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ: 15 ಜಿಲ್ಲೆಗಳಲ್ಲಿ 47 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ

ಪಾಟ್ನಾ: ಬಿಹಾರದಲ್ಲಿ ಪ್ರವಾಹದ ಪರಿಸ್ಥಿತಿ ಇನ್ನೂ ಗಂಭೀರವಾಗಿದ್ದು, ರಾಜ್ಯದ 15 ಜಿಲ್ಲೆಗಳ 47.33 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. ಗಂಗಾ ಹಾಗೂ ಅದರ ಉಪನದಿಗಳು ಹಲವು ಕಡೆ ಅಪಾಯದ ಮಟ್ಟಕ್ಕಿಂತ ಮೇಲೆಯೇ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಲ್ಲಿ ಆತಂಕ ಮುಂದುವರಿದಿದೆ. ಬಿಹಾರದಲ್ಲಿ

ಭಾಗಲ್ಪುರ ಜಿಲ್ಲೆಯಲ್ಲಿ ಹಲವು ಕಡೆ ತಡೆಗೋಡೆಗಳು ಕುಸಿದಿದ್ದು, ಕೆಲವು ಭಾಗಗಳಲ್ಲಿ ಪ್ರವಾಹದ ನೀರು ನುಗ್ಗಿದೆ. ಬ್ರಹ್ಮೋತ್ತರ ಅಣೆಕಟ್ಟಿನ ಬಳಿ ಉಂಟಾಗಿದ್ದ ತಡೆಗೋಡೆ ಹಾನಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಉಳಿದ ಪ್ರದೇಶಗಳಲ್ಲಿ ದುರಸ್ತಿ ಕಾರ್ಯ ಮುಂದುವರಿದಿದೆ. ಧೋಬಾನಿಯಾ ಜಮೀನ್ದಾರಿ ಅಣೆಕಟ್ಟಿನ ಸುಮಾರು 20 ಅಡಿ ಭಾಗ ಕೊಚ್ಚಿಹೋಗಿದ್ದು, ನೀರು ಪಿಡಬ್ಲ್ಯುಡಿ ರಸ್ತೆಯತ್ತ ಹರಿದಿದೆ.

ಗಂಗಾ ನದಿಯ ನೀರಿನ ಮಟ್ಟ ಪಾಟ್ನಾದ ಗಾಂಧಿ ಘಾಟ್‌ನಲ್ಲಿ 2016ರ ಹಿಂದಿನ ಗರಿಷ್ಠ ದಾಖಲೆ ಮಟ್ಟವನ್ನೂ ಮೀರಿದೆ. ಸೋನ್ ಮತ್ತು ಘಾಘ್ರಾ ನದಿಗಳಿಂದ ಹೆಚ್ಚಿನ ಪ್ರಮಾಣದ ನೀರು ಹರಿದುಬಂದಿರುವುದು ಗಂಗಾ ನೀರಿನ ಏರಿಕೆಗೆ ಪ್ರಮುಖ ಕಾರಣವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋನ್‌ನಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೆ, ಘಾಘ್ರಾ ಸ್ಥಿರವಾಗುತ್ತಿದೆ ಎಂದು ಜಲಸಂಪನ್ಮೂಲ ಇಲಾಖೆ ಮಾಹಿತಿ ನೀಡಿದೆ. ಬಿಹಾರದಲ್ಲಿ

ಇದನ್ನೂ ಓದಿ : ಜೈಲಿನಲ್ಲಿದ್ದ ಪ್ರಜ್ವಲ್‌ ರೇವಣ್ಣ ಬಳಿಯಿದ್ದ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ

ಗಂಡಕ್, ಕೋಸಿ, ಬುರ್ಹಿ ಗಂಡಕ್, ಪುನ್ಪುನ್, ಬಾಗ್ಮತಿ ಹಾಗೂ ಘಾಘ್ರಾ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟಕ್ಕಿಂತ ಮೇಲೆಯೇ ಹರಿಯುತ್ತಿವೆ. ಬಿಹಾರ ಸರ್ಕಾರದ ಪ್ರವಾಹ ಮುನ್ಸೂಚನೆ ವ್ಯವಸ್ಥೆಯಲ್ಲೂ ಹಲವು ನದಿ ಮಾಪನ ಕೇಂದ್ರಗಳಲ್ಲಿ ನೀರಿನ ಮಟ್ಟ ಅಪಾಯದ ಗಡಿಗಿಂತ ಮೇಲಿರುವುದು ದಾಖಲಾಗಿದೆ.

ಪ್ರವಾಹ ಪೀಡಿತರಿಗೆ ನೆರವು ನೀಡಲು ರಾಜ್ಯದಲ್ಲಿ 1,221 ಸಮುದಾಯ ಅಡುಗೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 15 ಪರಿಹಾರ ಶಿಬಿರಗಳಲ್ಲಿ ಆಹಾರ, ವಸತಿ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಸುಮಾರು 1,876 ದೋಣಿಗಳನ್ನು ಜನರ ಸ್ಥಳಾಂತರ ಹಾಗೂ ಅಗತ್ಯ ವಸ್ತುಗಳ ಸಾಗಣೆಗೆ ಬಳಸಲಾಗುತ್ತಿದೆ.

ರಕ್ಷಣಾ ಕಾರ್ಯಾಚರಣೆಗಾಗಿ 27 ಎಸ್‌ಡಿಆರ್‌ಎಫ್‌ ಮತ್ತು 10 ಎನ್‌ಡಿಆರ್‌ಎಫ್‌ ತಂಡಗಳನ್ನು ವಿವಿಧ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ಜಾನುವಾರುಗಳಿಗೆ ಮೇವು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನೂ ಪೂರೈಸಲಾಗುತ್ತಿದೆ.

ಮುಂದಿನ ಎರಡು ದಿನಗಳಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಒಂದೆರಡು ಕಡೆ ಭಾರಿ ಮಳೆಯ ಸಾಧ್ಯತೆಯನ್ನೂ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಆಡಳಿತವು ಕಟ್ಟೆಚ್ಚರ ವಹಿಸಿದೆ.

ಇದನ್ನೂ ನೋಡಿ :“ಆಪರೇಷನ್‌ ನಂತರ ಗಂಭೀರ ಸಮಸ್ಯೆ! ವೈದ್ಯರ ನಿರ್ಲಕ್ಷ್ಯವೇ?” Janashakthi Media

Donate Janashakthi Media

Leave a Reply

Your email address will not be published. Required fields are marked *