ಬೆಂಗಳೂರು: ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ತನ್ನ ಪ್ರಮುಖ ಆದ್ಯತೆಯಾಗಿದೆ ಎಂದು ನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.
ಮುಂದಿನ 25 ವರ್ಷಗಳ ಅವಧಿಯನ್ನು ಗಮನದಲ್ಲಿಟ್ಟು ಭೂಮೇಲ್ಮೈ ನೀರಿನ ಮೂಲಗಳನ್ನು ಬಳಸಿಕೊಂಡು ಗ್ರಾಮೀಣ ಭಾಗಗಳಿಗೆ ನಿರಂತರ ನೀರು ಪೂರೈಕೆ ಮಾಡುವ ದೀರ್ಘಕಾಲೀನ ಯೋಜನೆ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿಯ ಕುರಿತು ಮಹಾತ್ಮಾ ಗಾಂಧೀ ಅವರ “ಭಾರತದ ಆತ್ಮ ಹಳ್ಳಿಗಳಲ್ಲಿದೆ” ಎಂಬ ಚಿಂತನೆ ಹಾಗೂ ಅಧಿಕಾರ ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ರಾಜೀವ್ ಗಾಂಧೀ ಅವರು ತಂದ ಸಾಂವಿಧಾನಿಕ ತಿದ್ದುಪಡಿ ಮಹತ್ವದ ದಾರಿ ತೋರಿದವು ಎಂದು ಅವರು ಸ್ಮರಿಸಿದರು. ಆ ದೃಷ್ಟಿಕೋನವನ್ನು ಮುಂದುವರಿಸುವುದು ತಮ್ಮ ಗುರಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ರಾಷ್ಟ್ರೀಯ ನೀತಿ ಅಗತ್ಯ: ಕಾರ್ಯಪಡೆ ಸಮಿತಿ ಒತ್ತಾಯ
ಗ್ರಾಮಗಳ ಸ್ವಚ್ಛತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ತಿಳಿಸಿದ ಅವರು, ಗ್ರಾಮೀಣ ಭಾಗಗಳಲ್ಲಿ ಗುಣಮಟ್ಟದ ಸೌಲಭ್ಯಗಳನ್ನು ನಿರ್ಮಿಸುವತ್ತ ಇಲಾಖೆಯು ಗಮನ ಹರಿಸಲಿದೆ ಎಂದರು.
ನಾಳೆ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಾಥಮಿಕ ಸಭೆ ನಡೆಸಿ ಮುಂದಿನ ಯೋಜನೆಗಳ ಕುರಿತು ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು. ಗ್ರಾಮೀಣ ಪ್ರದೇಶದ ಕೆರೆಗಳು ಹಾಗೂ ಇತರೆ ಜಲಮೂಲಗಳ ಸಂರಕ್ಷಣೆಗೂ ಆದ್ಯತೆ ನೀಡಲಾಗುವುದು ಎಂದು ಸಚಿವರು ಹೇಳಿದರು.
ಹಿಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯಗಳನ್ನು ಶ್ಲಾಘಿಸಿದ ಖಂಡ್ರೆ, ಅವರ ಕೆಲವು ಯೋಜನೆಗಳು ಮತ್ತು ಕಲ್ಪನೆಗಳನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದನ್ನೂ ನೋಡಿ: ನಳ ಇದೆ, ಪೈಪ್ ಇದೆ… ಆದರೆ ನೀರೇ ಇಲ್ಲ! ಕೊಡಗಿನ ಆದಿವಾಸಿಗಳ ಕಣ್ಣೀರಿನ ಕಥೆ Janashakthi Media
