ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಪರೀಕ್ಷೆಗಳಲ್ಲಿ ಕಳೆದ ಎಂಟು ವರ್ಷಗಳಲ್ಲಿ ಸಂಭವಿಸಿದ ಪ್ರಶ್ನೆಪತ್ರಿಕೆ ಸೋರಿಕೆಗಳು ಮತ್ತು ಅಕ್ರಮಗಳ ಕುರಿತು ಸರ್ಕಾರ ಶ್ವೇತಪತ್ರ (White Paper) ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಡಿಗ್ವಿಜಯ್ ಸಿಂಗ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಪಾರ್ಲಿಮೆಂಟಿನ ಶಿಕ್ಷಣ, ಮಹಿಳೆ, ಮಕ್ಕಳ, ಯುವಜನ ಹಾಗೂ ಕ್ರೀಡೆಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ ಡಿಗ್ವಿಜಯ್ ಸಿಂಗ್ ಜೂನ್ 4ರಂದು ಬರೆದ ಈ ಪತ್ರದಲ್ಲಿ, ವಿದ್ಯಾರ್ಥಿಗಳಲ್ಲಿ ಮತ್ತೆ ವಿಶ್ವಾಸ ಮೂಡಿಸಲು ಪಾರದರ್ಶಕತೆ ಅತ್ಯಗತ್ಯ ಎಂದು ಹೇಳಿದ್ದಾರೆ.
“ಇತ್ತೀಚಿನ ವಾರಗಳಲ್ಲಿ ಹಲವಾರು ವಿದ್ಯಾರ್ಥಿಗಳು ನನ್ನನ್ನು ಸಂಪರ್ಕಿಸಿ ತಮ್ಮ ಆತಂಕಗಳನ್ನು ತಿಳಿಸಿದ್ದಾರೆ,” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಖಾತಿ ಹಂಚಿಕೆ ಅಸಮಾಧಾನ: ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ
NEET-UG 2026 ಪರೀಕ್ಷೆಯ ರದ್ದತಿಯನ್ನು ಉಲ್ಲೇಖಿಸಿದ ಸಿಂಗ್, ಇದು ಲಕ್ಷಾಂತರ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಜೊತೆಗೆ ಹಿಂದಿನ ಅಕ್ರಮಗಳ ತನಿಖೆಗಳ ಕುರಿತು ಸ್ಪಷ್ಟತೆ ಇಲ್ಲದಿರುವುದು ವಿದ್ಯಾರ್ಥಿಗಳ ಒತ್ತಡವನ್ನು ಹೆಚ್ಚಿಸಿದೆ ಎಂದಿದ್ದಾರೆ.
“ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಮತ್ತು ಅವುಗಳ ತನಿಖೆಯ ಸ್ಥಿತಿಯ ಬಗ್ಗೆ ಯಾವುದೇ ಸಮಗ್ರ ಸಾರ್ವಜನಿಕ ದಾಖಲೆ ಇಲ್ಲ,” ಎಂದು ಅವರು ಹೇಳಿದ್ದಾರೆ.
ಉದಾಹರಣೆಗೆ, NEET-UG 2024 ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸಂಜೀವ್ ಕುಮಾರ್ (ಮುಖ್ಯಿಯಾ) ಜಾಮೀನಿನ ಮೇಲೆ ಹೊರಗಿದ್ದಾನೆ ಎಂಬ ಮಾಹಿತಿ ಇದೆ ಎಂದು ಅವರು ತಿಳಿಸಿದ್ದಾರೆ. ಅದೇ ರೀತಿ UGC-NET 2024 ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು CBI ಮುಕ್ತಾಯ ವರದಿ ಸಲ್ಲಿಸಿರುವುದಾಗಿ ವರದಿಯಾಗಿದೆ ಎಂದು ಹೇಳಿದ್ದಾರೆ.
ಆದರೆ ದೆಹಲಿ ನ್ಯಾಯಾಲಯವು ಹೆಚ್ಚುವರಿ ವಿವರಣೆ ಕೇಳಿದ ಹಿನ್ನೆಲೆಯಲ್ಲಿ CBI ಮತ್ತೆ ಕಾಲಾವಕಾಶ ಕೇಳಿರುವುದನ್ನು ಉಲ್ಲೇಖಿಸಿ, ಇದು ವಿದ್ಯಾರ್ಥಿಗಳ ವಿಶ್ವಾಸಕ್ಕೆ ಧಕ್ಕೆ ತರುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರವು ಕಳೆದ ಎಂಟು ವರ್ಷಗಳಲ್ಲಿ NTA ನಡೆಸಿದ ಎಲ್ಲಾ ಪರೀಕ್ಷೆಗಳಲ್ಲಿನ ಅಕ್ರಮ ಪ್ರಕರಣಗಳು, ತನಿಖೆಗಳ ಸ್ಥಿತಿ, ಬಂಧನಗಳು, ಚಾರ್ಜ್ಶೀಟ್ ಅಥವಾ ಕ್ಲೋಸರ್ ರಿಪೋರ್ಟ್ಗಳ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಇಂತಹ ಪಾರದರ್ಶಕತೆ ವಿದ್ಯಾರ್ಥಿಗಳ ವಿಶ್ವಾಸವನ್ನು ಪುನಃ ಸ್ಥಾಪಿಸಲು ಸಹಾಯಕವಾಗುತ್ತದೆ,” ಎಂದು ಸಿಂಗ್ ತಿಳಿಸಿದ್ದಾರೆ.
ಇತ್ತೀಚೆಗೆ NEET (UG) 2026 ಪರೀಕ್ಷೆಯನ್ನು ಮೇ 3ರಂದು ನಡೆಸಲಾಗಿದ್ದು, ಮೇ 12ರಂದು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ ಮತ್ತು ಜೂನ್ 21ರಂದು ಮರುಪರೀಕ್ಷೆ ನಡೆಯಲಿದೆ.
ಈ ಮಧ್ಯೆ ಸಂಸದೀಯ ಸಮಿತಿಯಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ ಹ್ಯಾಕಿಂಗ್ ಅಪಾಯದ ಬಗ್ಗೆ ಕೂಡ ಚರ್ಚೆ ನಡೆದಿದ್ದು, NTA ವಿಶೇಷ ಸಮಿತಿಯನ್ನು ರಚಿಸಿರುವುದಾಗಿ ತಿಳಿಸಿದೆ. ಅದರ ವರದಿ ಮೂರು ತಿಂಗಳಲ್ಲಿ ಬರಲಿದೆ ಎಂದು ಮಾಹಿತಿ ನೀಡಲಾಗಿದೆ.
ಇದನ್ನೂ ನೋಡಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ಎನ್ಟಿಎ ವಿರುದ್ಧ ಎಸ್ಎಫ್ಐ ಪ್ರತಿಭಟನೆ; ಕಾರ್ಯಕರ್ತರ ಬಂಧನ Janashakthi Media
