ಬೆಂಗಳೂರು: ಬಿಜೆಪಿ ನಾಯಕ ಸಿ.ಟಿ ರವಿ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿ, “ಕಾನೂನಿಗೆ ಸವಾಲು ಹಾಕುತ್ತೇನೆ ಎನ್ನುವ ನಿಮ್ಮ ಧಾರ್ಷ್ಟ್ಯ ನಡೆಯುವುದಿಲ್ಲ. ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ತಯಾರಾಗಿರಿ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಿ.ಟಿ ರವಿ ತಮ್ಮ ದ್ವೇಷಪೂರಿತ ಹೇಳಿಕೆಗಳನ್ನು ಸಮರ್ಥಿಸಲು ಒಂದರ ಮೇಲೊಂದು ಸುಳ್ಳುಗಳನ್ನು ಹೇಳುತ್ತಿದ್ದು, ರಾಜಕೀಯ ವ್ಯವಸ್ಥೆಗೆ ಕಳಂಕವಾಗಿದ್ದಾರೆ ಎಂದು ಖರ್ಗೆ ಕಿಡಿಕಾರಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿಯವರು ಸಮಾಜದಲ್ಲಿ ವಿಭಜನೆ ಸೃಷ್ಟಿಸುವ ರಾಜಕೀಯವನ್ನೇ ಅನುಸರಿಸುತ್ತಿದ್ದು, ಯಾವುದೇ ವಿಷಯಕ್ಕೂ ಪಾಕಿಸ್ತಾನ ಅಥವಾ ಹಿಂದೂ–ಮುಸ್ಲಿಂ ವಿಚಾರಗಳನ್ನು ಎಳೆದು ತರುವುದು ಅವರ ಹುಟ್ಟುಗುಣ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಭಾರಿ ಭಾರಿ ಮೊತ್ತದ ಸಾಲಗಾರರಿಂದ ತಲೆ ಬೋಳಿಸಿಕೊಂಡ ನಮ್ಮ ಬ್ಯಾಂಕುಗಳು!
ಕಳೆದ ಮೂರು ವರ್ಷಗಳಲ್ಲಿ ದೊಡ್ಡ ಮಟ್ಟದ ಕೋಮು ಕಲಹ ಸೃಷ್ಟಿಸಲು ಸಾಧ್ಯವಾಗದ ಕಾರಣ ಬಿಜೆಪಿಯವರು ಅಸಹನೀಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
NEET ವಿದ್ಯಾರ್ಥಿಗಳ ಹೋರಾಟದ ವಿಚಾರದಲ್ಲೂ ಧರ್ಮವನ್ನು ಎಳೆದು ತಂದು, ಸಂಬಂಧವಿಲ್ಲದ ವಿಡಿಯೋಗಳನ್ನು ತೋರಿಸಿ ಜನರನ್ನು ದಿಕ್ಕು ತಪ್ಪಿಸುವ ವಿಫಲ ಯತ್ನ ನಡೆದಿದೆ ಎಂದು ಖರ್ಗೆ ಹೇಳಿದ್ದಾರೆ.
ಇದೇ ವೇಳೆ, ಸದನದಲ್ಲಿ ನೀಡಿದ್ದ ಹೇಳಿಕೆ ಕುರಿತ ತನಿಖೆಗೆ ಧ್ವನಿ ಮಾದರಿ ನೀಡದಿರುವುದು ಸಿ.ಟಿ ರವಿಯ ಪಲಾಯನ ಮತ್ತು ಅನೈತಿಕತೆಯನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.
“ಸತ್ಯ ಹೇಳಲು ಧೈರ್ಯ ಬೇಕು; ಸುಳ್ಳು ಹೇಳಲು ನೈತಿಕ ಭಯ ಇರಬೇಕು. ಅದು ನಿಮ್ಮಲ್ಲಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ” ಎಂದು ಖರ್ಗೆ ವಾಗ್ದಾಳಿ ನಡೆಸಿದ್ದೂ, “ಕಾನೂನಿಗೆ ಸವಾಲು ಹಾಕುವ ಧಾರ್ಷ್ಟ್ಯ ಸಹಿಸಲಾಗುವುದಿಲ್ಲ” ಎಂದು ಪುನರುಚ್ಚರಿಸಿದರು.
ಇದನ್ನೂ ನೋಡಿ: ನೀಟ್ ಹಗರಣ: ದೆಹಲಿ ಹೋರಾಟಕ್ಕೆ ಮತ್ತಷ್ಟು ಬಲ! ಎನ್ಡಿಎ ಮಿತ್ರಪಕ್ಷಗಳ ಮೌನ ಏಕೆ? Janashakthi Media
