ಸರಕಾರಕ್ಕೆ ತೈಲದ ಆಟ, ಜನರಿಗೆ ಜೇಬಿನ ದರೋಡೆ!

ಪೆಟ್ರೋಲ್ ಬಂಕ್‌ನಲ್ಲಿ ಮೀಟರ್ ಓಡುತ್ತಿದೆ… ನಮ್ಮ ಜೇಬಿನಿಂದ ಹಣವೂ ಖರ್ಚಾಗುತ್ತಿದೆ. ಆದರೆ ನಾವು ಕೊಡುವಹಣ ನಿಜವಾಗಿ ಎಲ್ಲಿಗೆ ಹೋಗುತ್ತಿದೆ? ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್‌ನ ಬೆಲೆಯಲ್ಲಿರುವ ಕಚ್ಚಾ ತೈಲದ ಪಾಲು ಎಷ್ಟು? ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಪಾಲು ಎಷ್ಟು? ತೈಲ ಕಂಪನಿಗಳು ಇದರಿಂದ ಎಷ್ಟು ಲಾಭ ಮಾಡುತ್ತಿವೆ? ಭಾರತ ಇರಾನ್‌ನೊಂದಿಗಿನ ಅಗ್ಗದ ತೈಲ ಸಂಬಂಧವನ್ನು ಕಳೆದುಕೊಂಡಿದ್ದರಿಂದ ಇಂದಿನ ಸಮಸ್ಯೆಗಳು ಹೆಚ್ಚಾಗಿವೆಯೇ? ರಷ್ಯಾದಿಂದ ರಿಯಾಯಿತಿ ದರದಲ್ಲಿ ಖರೀದಿಸಿದ ತೈಲದ ಲಾಭ ನಿಜವಾಗಿ ಸಿಕ್ಕಿದ್ದು ಸಾಮಾನ್ಯ ಜನರಿಗಾ, ಖಾಸಗಿ ಕಂಪನಿಗಳಿಗಾ, ಅಥವಾ ಸರ್ಕಾರಕ್ಕಾ? ಪೆಟ್ರೋಲ್-ಡೀಸೆಲ್ ದರ ಏರಿಕೆಯ ಹಿಂದೆ ಇರುವ ರಾಜಕೀಯ, ಆರ್ಥಿಕತೆ ಮತ್ತು ಇಂಧನ ಭದ್ರತೆಯ ಸಂಪೂರ್ಣ ಚಿತ್ರಣವೇನು? ಈ ಲೇಖನದಲ್ಲಿ ಸಂಪೂರ್ಣ ತಿಳಿಯೋಣ. ಸರಕಾರ

– ಗುರುರಾಜ ದೇಸಾಯಿ

ದೇಶದಲ್ಲಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ. ಕೇವಲ ಎರಡು ವಾರಗಳ ಅವಧಿಯಲ್ಲಿ ನಾಲ್ಕನೇ ಬಾರಿ ದರ ಪರಿಷ್ಕರಣೆ ನಡೆದಿದ್ದು, ಪೆಟ್ರೋಲ್ ಮತ್ತು ಡಿಸೈಲ್‌ ಪ್ರತಿ ಲೀಟರ್‌ಗೆ ಹೆಚ್ಚು ಕಡಿಮೆ 9 ರೂ ನಷ್ಟು ಹೆಚ್ಚಳವನ್ನು ಕಂಡಿದೆ. ಯುದ್ಧದಿಂದ ಆರಂಭವಾದ ಬೆಲೆ ಏರಿಕೆ ಭಾರತದ ತೈಲ ಸಂಗ್ರಹ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ. ಸರಕಾರ

ಫೆಬ್ರವರಿ 23, 2026ರಂದು ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 71.28 ಡಾಲರ್ ಇತ್ತು. ಇರಾನ್ ಯುದ್ಧ ಮತ್ತು ಹೋರ್ಮುಜ್ ಜಲಸಂಧಿಯ ಸುತ್ತಲಿನ ಉದ್ವಿಗ್ನತೆ ಹೆಚ್ಚಿದಂತೆ ಏಪ್ರಿಲ್ 6ರಂದು ಅದು 111.73 ಡಾಲರ್‌ಗೆ ಏರಿತು. ನಂತರ ಸ್ವಲ್ಪ ಇಳಿಕೆಯಾದರೂ ಈಗ ಅದು 99.14 ಡಾಲರ್ ಮಟ್ಟದಲ್ಲೇ ಉಳಿದಿದೆ.

ಇದನ್ನೂ ಓದಿ: ಟಿಎಂಸಿ ನಾಯಕರ ಮೇಲೆ ದಾಳಿ ಆರೋಪ: ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಪ್ರತಿಭಟನೆ

ಭಾರತೀಯ ರೂಪಾಯಿಯಲ್ಲಿ ನೋಡಿದರೆ, ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ ಸುಮಾರು ₹6,100ರಿಂದ ₹9,600ಕ್ಕೆ ಏರಿದಂತಾಗಿದೆ. ಇದೇ ಅವಧಿಯಲ್ಲಿ ಜಾಗತಿಕ ಪೆಟ್ರೋಲ್ ಬೆಲೆ ಲೀಟರ್‌ಗೆ 1.20 ಡಾಲರ್‌ನಿಂದ 1.46 ಡಾಲರ್‌ಗೆ ಹಾಗೂ ಡೀಸೆಲ್ ಬೆಲೆ 1.20 ಡಾಲರ್‌ನಿಂದ 1.54 ಡಾಲರ್‌ಗೆ ಏರಿಕೆಯಾಯಿತು. ಪೆಟ್ರೋಲ್‌ ಡಿಸೈಲ್‌ ದರದ ನೇರ ಪರಿಣಾಮ ಬೀರೋದು ಜನಸಾಮಾನ್ಯರ ಬದಯಕಿನ ಮೇಲೆ. ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 1.2 ಕೋಟಿ ವಾಹನಗಳು ಸಂಚರಿಸುತ್ತವೆ ಎಂಬ ಅಂದಾಜಿದೆ. ಸರಕಾರ

ಇದರಲ್ಲಿ ಬೈಕ್‌ ಮತ್ತು ಸ್ಕೂಟರ್‌ಗಳೇ ದೊಡ್ಡ ಪ್ರಮಾಣದಲ್ಲಿವೆ. ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಾಕಷ್ಟು ವಿಸ್ತರಿಸದಿರುವುದರಿಂದ, ಕೆಲಸಕ್ಕೆ ಹೋಗುವ ಮಧ್ಯಮ ವರ್ಗದ ಜನರು ಹೆಚ್ಚಾಗಿ ಖಾಸಗಿ ವಾಹನಗಳನ್ನೇ ಅವಲಂಬಿಸಿದ್ದಾರೆ. ತಿಂಗಳಿಗೆ ₹3,000ರಿಂದ ₹4,000 ಪೆಟ್ರೋಲ್‌ ಖರ್ಚು ಮಾಡುತ್ತಿದ್ದ ಕುಟುಂಬಗಳು ಈಗ ₹5,000ಕ್ಕೂ ಹೆಚ್ಚು ವೆಚ್ಚ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿವೆ. ಐಟಿ ಉದ್ಯೋಗಿಗಳು, ಡೆಲಿವರಿ ಕಾರ್ಮಿಕರು, ಕ್ಯಾಬ್‌ ಚಾಲಕರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಇದರ ಪರಿಣಾಮ ಹೆಚ್ಚು ಗೋಚರಿಸುತ್ತಿದೆ. ಸರಕಾರ

ಬ್ಲಿಂಕ್‌ಇಟ್‌, ಜಮ್ಯಾಟೋ ಮತ್ತು ಸ್ವಿಗ್ಗಿಯಲ್ಲಿ ಕೆಲಸ ಮಾಡ್ತಾ ಇದ್ದ ಗೆಳೆಯರನ್ನ ವಿಚಾರಿಸಿದೆ. ಈ ಮುಂಚೆ ದಿನಕ್ಕೆ ಪೆಟ್ರೋಲ್‌ ಖರ್ಚೆಲ್ಲ ತೆಗೆದು 500 ಉಳಸ್ತಾ ಇದ್ರಂತೆ ಈಗ ಅದು 350 ರೂ ಬಂದಿದೆ. ಆ 350 ರೂ ನಲ್ಲಿ ಮಕ್ಕಳಿಗೆ ಸಿಹಿತಿಂಡಿ ತೆಗೆದುಕೊಂಡು ಹೋಗೋದನ್ನ ಕಡಿಮೆ ಮಾಡಬೇಕಾ, ಹೆಂಡತಿಗೆ ತೆಗೆದುಕೊಂಡು ಹೋಕ್ತಾ ಇದ್ದ ಪ್ರೀತಿಯ ವಸ್ತುಗಳಿಗೆ ಕಡಿಮೆ ಮಾಡಬೇಕಾ? ಅಥವಾ ನನಗಾಗಿ ಖರ್ಚು ಮಾಡಿಕೊಳ್ಳುವ ಹಣದಲ್ಲಿ ಕಡಿತ ಮಾಡಿಕೊಳ್ಳಲಾ? ಹೇಳಿ.. ಎಂದು ಪ್ರಶ್ನಿಸುತ್ತಾರೆ? ಸರಕಾರ

ಡಿಸೇಲ್‌ ದರ ಹೆಚ್ಚಳ ಆಗಿರುವುದರಿಂದ ದೊಡ್ಡ ಅಪಾಯವನ್ನು ನಾವು ಎದುರಿಸಬೇಕಾಗಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ಪ್ರತಿದಿನ ಸಾವಿರಾರು ಟನ್ ತರಕಾರಿ, ಹಣ್ಣು, ಹಾಲು, ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳು ಡೀಸೆಲ್ ವಾಹನಗಳ ಮೂಲಕವೇ ಬರುತ್ತವೆ. ಡೀಸೆಲ್ ದುಬಾರಿಯಾದಾಗ ಸಾರಿಗೆ ವೆಚ್ಚ ಹೆಚ್ಚುತ್ತದೆ. ಅದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು, ಹಾಲು ಮತ್ತು ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ.

ಪೆಟ್ರೋಲ್‌ನ ನಿಜವಾದ ಬೆಲೆ ಎಷ್ಟು? ಎಂಬ ಅಂದಾಜನ್ನು ನೋಡುವುದಾದರೆ..

ಜೂನ್ 2, 2026ರ ಸರಾಸರಿ ಪೆಟ್ರೋಲ್ ದರ ₹110.89 ಎಂದು ಪರಿಗಣಿಸಿದರೆ ಅದರ ಅಂದಾಜು ವೆಚ್ಚ ಹೀಗಿದೆ:

 

ಈ ಲೆಕ್ಕದ ಪ್ರಕಾರ ಒಂದು ಲೀಟರ್ ಪೆಟ್ರೋಲ್‌ನಲ್ಲಿ ಕಚ್ಚಾ ತೈಲದ ಬೆಲೆ ಸುಮಾರು ₹45 ಮಾತ್ರ. ಉಳಿದ ₹65.89 ಶುದ್ಧೀಕರಣ, ಸಾಗಣೆ, ಕಂಪನಿಗಳ ಮಾರ್ಜಿನ್ ಮತ್ತು ಕೇಂದ್ರ-ರಾಜ್ಯ ಸರ್ಕಾರಗಳ ತೆರಿಗೆಗಳಿಗೆ ಹೋಗುತ್ತದೆ. ಅಂದರೆ ಗ್ರಾಹಕರು ಪಾವತಿಸುವ ಪ್ರತಿ ₹100ರಲ್ಲಿ ಸುಮಾರು ₹48 ತೆರಿಗೆಗಳೇ ಆಗಿವೆ. ಎಷ್ಟೆಲ್ಲ ತೆರಿಗೆ ಹಾಕುವ ಸರಕಾರಗಳು ಎಷ್ಟು ದಿನಗಳ ಕಾಲ ತೈಲವನ್ನು ಸಂಗ್ರಹಿಸುವ ಸಾಮರ್ಥವ್ಯವನ್ನು ಹೊಂದಿವೆ ಎಂಬುದನ್ನು ಗಮನಿಸುವುದಾದರೆ.. ಭಾರತದ ಕಾರ್ಯತಂತ್ರದ ತೈಲ ಸಂಗ್ರಹ ಸಾಮರ್ಥ್ಯ ಸುಮಾರು 5.33 ಮಿಲಿಯನ್ ಮೆಟ್ರಿಕ್ ಟನ್ ಆಗಿದ್ದು, ಇದು ದೇಶದ ಅಗತ್ಯಕ್ಕೆ ಸುಮಾರು 10 ದಿನಗಳಷ್ಟು ಮಾತ್ರ ಸಾಕಾಗುತ್ತದೆ. ಸರಕಾರ

ತೈಲ ಕಂಪನಿಗಳ ವಾಣಿಜ್ಯ ಸಂಗ್ರಹ ಸೇರಿಸಿದರೆ ದೇಶಕ್ಕೆ ಒಟ್ಟಾರೆ ಸುಮಾರು 60 ರಿಂದ 74 ದಿನಗಳಷ್ಟು ತೈಲ ಸಂಗ್ರಹ ಮಾಡಬಹುದು ಅಂತಾ ಹೇಳುತ್ತೆ. ಆದರೆ ಸರಕಾರಿ ಅಂಕಿ ಅಂಶದ ಪ್ರಕಾರ ಈಗ ಭಾರತದಲ್ಲಿ 60 ದಿನಗಳಿಗೆ ಮಾತ್ರ ಸಂಗ್ರಹ ಮಾಡಿಡುವ ಸಾಮರ್ಥ್ಯ ಇದೆ. ಆದರೆ ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಕನಿಷ್ಠ 90 ದಿನಗಳ ತೈಲ ಸಂಗ್ರಹವನ್ನು ಶಿಫಾರಸು ಮಾಡುತ್ತದೆ. ಸರಕಾರ

ಒಂದು ವರದಿಯ ಪ್ರಕಾರ… ವಿಶ್ವದ ಅಗ್ರ 10 ಆರ್ಥಿಕಶಕ್ತಿ ರಾಷ್ಟ್ರಗಳ ಪೈಕಿ ಭಾರತೀಯನಿಗೆ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮಾಡುವುದು ಅತ್ಯಂತ ದುಬಾರಿ ಅಂತ ಈ ವರದಿ ಹೇಳುತ್ತದೆ. ಒಬ್ಬ ಸರಾಸರಿ ಭಾರತೀಯನು ತನ್ನ ಒಂದು ದಿನದ ಆದಾಯದಿಂದ ಕೇವಲ 8 ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಬಲ್ಲನು. ಆದರೆ ಅಮೆರಿಕದಲ್ಲಿ ಒಬ್ಬ ವ್ಯಕ್ತಿ ತನ್ನ ಒಂದು ದಿನದ ಆದಾಯದಿಂದ 199 ಲೀಟರ್ ಪೆಟ್ರೋಲ್ ಅಥವಾ 171 ಲೀಟರ್ ಡೀಸೆಲ್ ಖರೀದಿಸಬಹುದು. ಬೇರೆ ರಾಷ್ಟ್ರಗಳು ಎಷ್ಟು ಖರೀದಿಸುವ ಸಾಮರ್ಥ್ಯ ಹೊಂದಿದೆ ಎಂಬುದು ನಿಮಗೆ ಚಿತ್ರದಲ್ಲಿ ಕಾಣಸ್ತಾ ಇದೆ. ನಾನು ಆವಿವರಗಳಿಗೆ ಹೋಗುವುದಿಲ್ಲ.

ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯೆಂದು ಭಾರತ ಗುರುತಿಸಿಕೊಂಡಿದ್ದರೂ, ಸಾಮಾನ್ಯ ನಾಗರಿಕನ ಖರೀದಿ ಸಾಮರ್ಥ್ಯಕ್ಕೆ ಹೋಲಿಸಿದರೆ ಇಂಧನದ ವೆಚ್ಚವು ವಿಶ್ವದ ಪ್ರಮುಖ ಆರ್ಥಿಕ ರಾಷ್ಟ್ರಗಳ ಪೈಕಿ ಅತ್ಯಂತ ಹೆಚ್ಚಿನ ಹೊರೆಯಾಗಿ ಕಾಣಸ್ತಾ ಇದೆ.

ಭಾರತ ಯಾಕೆ ಪದೆ ಪದೆ ಈ ತೈಲ ಸಮಸ್ಯೆ, ತೈಲ ಬೆಲೆ ಏರಿಕೆ ಸಮಸ್ಯೆ ಎದುರಿಸುತ್ತಿದೆ? ಎಂಬುದನ್ನು ತಿಳಿಯೋದು ಅತೀ ಮುಖ್ಯ. ಭಾರತ ತನ್ನ ಅಗತ್ಯದ ಸುಮಾರು 85 ರಿಂದ 90 ಶೇಕಡಾ ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಭಾರತ ದಿನಕ್ಕೆ ಸುಮಾರು 55 ಲಕ್ಷ ಬ್ಯಾರೆಲ್ ತೈಲ ಬಳಸಿದರೆ, ದೇಶೀಯ ಉತ್ಪಾದನೆ ಕೇವಲ 5 ರಿಂದ 6 ಲಕ್ಷ ಬ್ಯಾರೆಲ್ ಮಾತ್ರ.

ಹೀಗಾಗಿ:

1.  ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆದರೂ, ನಡೆಯದಿದ್ದರೂ

2.  ಡಾಲರ್ ಬಿದ್ರೂ, ಎದ್ರೂ

3.  ಹೋರ್ಮುಜ್ ಜಲಸಂಧಿಯಲ್ಲಿ ಬಿಕ್ಕಟ್ಟು ಉಂಟಾದರೂ, ಉಂಟಾಗದಿದ್ದರೂ

ಅದರ ಪರಿಣಾಮ ನೇರವಾಗಿ ಭಾರತದ ಮೇಲೆ ಬೀಳುತ್ತದೆ. ಈಗ ನಾವು ಅದನ್ನು ಅನುಭವಸ್ತಾ ಇದ್ದೇವೆ. ಕೋವಿಡ್‌ ಸಂದರ್ಭದಲ್ಲಿ ಹೇಗೆ ಆರೋಗ್ಯ ವ್ಯವಸ್ಥೆ ಎಷ್ಟು ದುರ್ಬಲ ಇದೆ ಎಂಬುದು ಸಾಬೀತಾಯಿತೋ ಅದೇ ರೀತಿ ಈಗ ತೈಲ ಸಂಗ್ರಹಣೆ ವಿಚಾರದಲ್ಲಿ ಭಾರತದ ಸಾಮರ್ಥ್ಯ ಎಷ್ಟಿದೆ ಎಂಬುದು ಜಗಜ್ಜಾಹೀರಾಗಿದೆ. ಹಾಗಿದ್ರೆ ಇನ್ಮುಂದೆ ನಮಗೆ ಕಡಿಮೆ ಬೆಲೆಗೆ ಪೆಟ್ರೋಲ್‌, ಡಿಸೈಲ್‌ ಸಿಗೋದೆ ಇಲ್ವಾ? ಎಂಬ ಪ್ರಶ್ನೆ ಸಹಜವಾಗಿ ಬರುತ್ತೆ. ಆ ವಿಚಾರ ತಿಳಿಯೋಕ್ಕಿತ ಮುಚ್ಚೆ ಈ ತೈಲ ಬೆಲೆ ಹೆಚ್ಚಳದ ಹಿಂದೆ ಇರುವ ಲೆಕ್ಕಾಚಾರವನ್ನು ನಾವು ಅರ್ಥ ಮಾಡ್ಕೊಬೇಕಿದೆ.

ಯು.ಎಸ್‌ ಮಾತು ಕೇಳಿ ಇರಾನ್ ಜೊತೆಗಿನ ಸಂಬಂಧ ಕಡಿತಮಾಡಿಕ್ಕೊಂಡಿದ್ದರ ಪರಿಣಾಮದ ಫಲವನ್ನು ನಾವೀಗ ಊಟ ಮಾಡ್ತಾ ಇದ್ದೇವೆ. 2019ರವರೆಗೆ ಇರಾನ್ ಭಾರತದ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾಗಿತ್ತು. ಕಡಿಮೆ ಬೆಲೆಗೆ ತೈಲ ಕೊಡ್ತಾ ಇದ್ರು. 60 ದಿನಗಳ ಸಾಲ ಸೌಲಭ್ಯ ಮತ್ತು ಕಡಿಮೆ ಸಾಗಣೆ ವೆಚ್ಚದಂತಹ ವಿಶೇಷ ಅನುಕೂಲಗಳನ್ನು ಭಾರತ ಪಡೆಯುತ್ತಿತ್ತು.

ಆದರೆ ಅಮೆರಿಕದ ನಿರ್ಬಂಧಗಳ ನಂತರ ಭಾರತ ಇರಾನ್‌ನಿಂದ ತೈಲ ಆಮದು ನಿಲ್ಲಿಸಿತು. ಇದರಿಂದ ಭಾರತ ಒಂದು ಅಗ್ಗದ ತೈಲ ಮೂಲವನ್ನು ಕಳೆದುಕೊಂಡಿತು ಎಂಬುದು ಸತ್ಯ. ಭಾರತ ಇರಾನ್ ಜೊತೆಗಿನ ಇಂಧನ ಸಂಬಂಧವನ್ನು ಉಳಿಸಿಕೊಂಡಿದ್ದರೆ ಇಂದಿನ ಬೆಲೆ ಏರಿಕೆಯ ಹೊಡೆತ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದಿತ್ತು ಅನ್ನೊಂದತು ಸತ್ಯ.

ಇರಾನ್‌ನ ಸಂಬಂಧವನ್ನ ಕಡಿದುಕೊಂಡ ಮೇಲೆ ಅಂದ್ರೆ ರಷ್ಯಾ-ಉಕ್ರೇನ್ ಯುದ್ಧದ ನಂತರ ಭಾರತವು ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಸಿತು. ಇದರ ಲಾಭ ಯಾರಿಗೆ ಸಿಕ್ಕಿತು ಅನ್ನೋದು ಬಹಳ ಮುಖ್ಯ. 2023 ಮತ್ತು 2024ರಲ್ಲಿ ಭಾರತಕ್ಕೆ ಶತಕೋಟಿ ಡಾಲರ್‌ಗಳಷ್ಟು ಉಳಿತಾಯವಾಯಿತು. ಅಂತ ಹೇಳಿ ಸರಕಾರ ಹೇಳಿದೆ.

ಆದರೆ ಹೆಚ್ಚು ವಾಣಿಜ್ಯ ಲಾಭ ಪಡೆದವರು ಯಾರು ಅಂದ್ರೆ ಖಾಸಗಿ ತೈಲ ಕಂಪನಿಗಳು ಅದರಲ್ಲೂ ಪ್ರಮುಖವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರಾ ಎನರ್ಜಿ ಕಂಪನಿಗಳು 2023–25ರ ಅವಧಿಯಲ್ಲಿ ದಿನಕ್ಕೆ ಸುಮಾರು 6 ಲಕ್ಷ ಬ್ಯಾರೆಲ್ ರಷ್ಯಾದ ತೈಲ ಆಮದು ರಿಲಯನ್ಸ್‌ಗೆ ಸಿಕ್ಕರೆ, ನಯರಾಗೆ 4.6 ಲಕ್ಷ ಬ್ಯಾರೆಲ್‌, ಸರಕಾರಿ ಕಂಪನಿಗಳಾದ ಇಂಡಿಯನ್ ಆಯಿಲ್‌ಗೆ ನಾಲ್ಕ ಲಕ್ಷ ಬ್ಯಾರೆಲ್‌, ಭಾರತ್‌ ಪೆಟ್ರೋಲಿಯಂಗೆ 1 ಲಕ್ಷ ಬ್ಯಾರೆಲ್‌, ಹಿಂದುಸ್ಥಾನ ಪೆಟ್ರೋಲಿಯಂಗೆ ಖರೀದಿ ಮಾಡಲು ಸಿಕ್ಕದ್ದು ಸ್ವಲ್ಪ ಮಾತ್ರ.

ರಷ್ಯಾದ ತೈಲದಿಂದ ಭಾರತಕ್ಕೆ ಇಂಧನ ಲಾಭ ದೊರೆತರೂ, ಅತಿ ಹೆಚ್ಚಿನ ಲಾಭವನ್ನು ಪಡೆದವರು ಖಾಸಗೀ ಕಂಪನಿಗಳು. ರಿಲಯನ್ಸ್‌ ಯಾರದ್ದು , ನಯರಾ ಯಾರದ್ದು. ಆ ಕಂಪನಿಗಳ ಒಡೆಯರಿಗೂ ಪ್ರಧಾನಿಯವರಿಗೆ ಗಳಸ್ಯ ಗಂಟಸ್ಯ ಸಂಬಂಧ ಇರೋದು ನಿಮಗೆಲ್ಲ ಗೊತ್ತೆ ಅದೆ.

 

ಹಾಗಾದ್ರೆ ಈಗ ಭಾರತ ಏನು ಮಾಡಬೇಕು?

 

ಇಂಧನ ಭದ್ರತೆಗಾಗಿ ಭಾರತ ಕೇವಲ ಒಂದು ಅಥವಾ ಎರಡು ರಾಷ್ಟ್ರಗಳ ಮೇಲೆ ಅವಲಂಬಿತವಾಗಿರುವುದನ್ನು ಕಡಿಮೆ ಮಾಡಬೇಕು. ರಷ್ಯಾ, ಇರಾನ್, ಇರಾಕ್, ಸೌದಿ ಅರೇಬಿಯಾ, ಯುಎಇ, ಬ್ರೆಜಿಲ್, ಗಯಾನಾ ಮತ್ತು ಆಫ್ರಿಕಾ ರಾಷ್ಟ್ರಗಳೊಂದಿಗೆ ದೀರ್ಘಾವಧಿಯ ಇಂಧನ ಸಂಬಂಧಗಳನ್ನು ಬೆಳೆಸಬೇಕು.

90 ದಿನಗಳ ಕಾಲ ತೈಲ ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಪ್ರಸ್ತುತ 60–74 ದಿನಗಳ ಸಂಗ್ರಹವನ್ನು 90 ದಿನಗಳಿಗೆ ಹೆಚ್ಚಿಸಬೇಕು. ಇದರಿಂದ ಯುದ್ಧ ಅಥವಾ ನಿರ್ಬಂಧದ ಸಂದರ್ಭಗಳಲ್ಲಿ ಬೆಲೆ ಆಘಾತ ಕಡಿಮೆಯಾಗುತ್ತದೆ. ರೂಪಾಯಿಯಲ್ಲಿ ತೈಲ ವ್ಯಾಪಾರವನ್ನು ಆರಂಭ ಮಾಡಬೇಕು. ಡಾಲರ್ ಅವಲಂಬನೆಯನ್ನು ಕಡಿಮೆ ಮಾಡಲು ರೂಪಾಯಿ ಅಥವಾ ದ್ವಿಪಕ್ಷೀಯ ಕರೆನ್ಸಿಗಳಲ್ಲಿ ವ್ಯಾಪಾರ ನಡೆಸುವ ಪ್ರಯತ್ನಗಳನ್ನು ಹೆಚ್ಚಿಸಬೇಕು.

ಮುಖ್ಯವಾಗಿ ದೇಶೀಯ ಉತ್ಪಾದನೆ ಹೆಚ್ಚಿಸಬೇಕು ಇದು ನಮಗಿರುವ ಪ್ರಮುಖ ಮಾರ್ಗ. ಇದು ಸಾಧ್ಯ ಎದೆ ಅಂತೆ ಅನೇಕರು ಹೇಳ್ತಾ ಇದ್ದಾರೆ. ಹಾಗಾಗಿ ಹೊಸ ತೈಲ ಮತ್ತು ಅನಿಲ ನಿಕ್ಷೇಪಗಳ ಅನ್ವೇಷಣೆಗೆ ಹೆಚ್ಚಿನ ಹೂಡಿಕೆ ಮಾಡಬೇಕು. ವಿದ್ಯುತ್ ಚಾಲಿತ ವಾಹನಗಳನ್ನು ಬಲಪಡಿಸಬೇಕು, ಅವುಗಳ ಗುಣಮಟ್ಟ, ಓಡುವ ಸಾಮರ್ಥವ್ಯನ್ನು ಸರಿ ಮಾಡಬೇಕು.

ಇವುಗಳ ಜೊತೆಗೆ ಇಂಧನ ರಾಜತಾಂತ್ರಿಕತೆ ಬಲಪಡಿಸಬೇಕು. ಅಮೆರಿಕ, ರಷ್ಯಾ, ಇರಾನ್, ಮಧ್ಯಪ್ರಾಚ್ಯ ರಾಷ್ಟ್ರಗಳು ಹಾಗೂ ಯುರೋಪ್ ಎಲ್ಲರೊಂದಿಗೂ ಸಮತೋಲನದ ಸಂಬಂಧ ಉಳಿಸಿಕೊಂಡು ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾದ ಇಂಧನ ನೀತಿಯನ್ನು ಅನುಸರಿಸಬೇಕು.

ಇಂದು ಪೆಟ್ರೋಲ್ ಬಂಕ್‌ನಲ್ಲಿ ಕಾಣುತ್ತಿರುವ ₹110ರ ಅಂಕಿ ಕೇವಲ ಒಂದು ಬೆಲೆಯಲ್ಲ; ಅದು ಭಾರತದ ಆಮದು ಅವಲಂಬನೆ, ಜಾಗತಿಕ ರಾಜಕೀಯ ಪರಿಣಾಮ, ಅಪೂರ್ಣ ತೈಲ ಸಂಗ್ರಹ ವ್ಯವಸ್ಥೆ ಮತ್ತು ದೀರ್ಘಕಾಲೀನ ಇಂಧನ ನೀತಿಯ ಸವಾಲುಗಳ ಪ್ರತಿಬಿಂಬವಾಗಿದೆ. ಭಾರತದ ಮುಂದಿನ ಗುರಿ ಭದ್ರ, ವೈವಿಧ್ಯಮಯ ಮತ್ತು ಸ್ವತಂತ್ರ ಇಂಧನ ವ್ಯವಸ್ಥೆಯನ್ನು ನಿರ್ಮಿಸುವುದಾಗಿರಬೇಕು.

ಇದನ್ನೂ ನೋಡಿ: ಸರಕಾರಕ್ಕೆ ತೈಲದ ಆಟ, ಜನರಿಗೆ ಜೇಬಿನ ದರೋಡೆ! | ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *