ಹಾಸನ : ಪರಿಸರ ಸಂರಕ್ಷಣೆ ಕೇವಲ ಗಿಡ ನೆಡುವುದು ಅಥವಾ ಪ್ಲಾಸ್ಟಿಕ್ ನಿಷೇಧದಂತಹ ಸಾಂಕೇತಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಸಂಪನ್ಮೂಲಗಳ ಮೇಲಿನ ಜನರ ಹಕ್ಕು ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಯೊಂದಿಗೆ ಸಾಗಬೇಕು ಎಂದು ಶ್ರಮ ಟ್ರಸ್ಟ್ ಅಧ್ಯಕ್ಷ ಧರ್ಮೇಶ್ ಅಭಿಪ್ರಾಯಪಟ್ಟರು. ನಮ್ಮ ನೀರು
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಾಸನದ ಶ್ರಮ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ನಗರದ ‘ಶ್ರಮ’ ಕಚೇರಿಯಲ್ಲಿ “ಪರಿಸರ ಮತ್ತು ಪ್ರಜಾಪ್ರಭುತ್ವ” ವಿಷಯದ ಕುರಿತು ನಡೆದ ಆಪ್ತ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಪರಿಸರ ಬಿಕ್ಕಟ್ಟಿನ ಮೂಲದಲ್ಲಿ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ, ಮಿತಿಮೀರಿದ ಉಪಭೋಗ ಸಂಸ್ಕೃತಿ ಹಾಗೂ ಪ್ರಕೃತಿಯನ್ನು ಕೇವಲ ಲಾಭದ ಮೂಲವಾಗಿ ನೋಡುವ ಮನೋಭಾವ ಅಡಗಿದೆ ಎಂದು ಅವರು ಹೇಳಿದರು. ಡೇಟಾ ಸೆಂಟರ್ಗಳು, ಬೃಹತ್ ಕೈಗಾರಿಕಾ ಯೋಜನೆಗಳು ಮತ್ತು ಪರಿಸರ ನಿಯಮಗಳ ಸಡಿಲಿಕೆ ಭವಿಷ್ಯದಲ್ಲಿ ಗಂಭೀರ ಪರಿಸರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು.
ಪರಿಸರ ಸಂರಕ್ಷಣೆಗೆ ಕೇವಲ ವೈಯಕ್ತಿಕ ಜಾಗೃತಿ ಸಾಕಾಗುವುದಿಲ್ಲ. ಸಂಪನ್ಮೂಲ, ಜ್ಞಾನ ಮತ್ತು ಅಧಿಕಾರದ ವಿಕೇಂದ್ರೀಕರಣದ ಮೂಲಕ ಸ್ಥಳೀಯ ಸಮುದಾಯಗಳಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಬೇಕು. ಗ್ರಾಮಸಭೆಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಜನರ ನೇರ ಪಾಲ್ಗೊಳ್ಳುವಿಕೆಯೇ ಪರಿಸರ ಪ್ರಜಾಪ್ರಭುತ್ವದ ಮೂಲ ತತ್ವವಾಗಿದೆ ಎಂದು ಹೇಳಿದರು. ನಮ್ಮ ನೀರು
ಇದನ್ನೂ ಓದಿ : ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ; ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ
ಕಾರ್ಯಕ್ರಮದಲ್ಲಿ ಚಿಂತಕ ಹಾಗೂ ವಿಜ್ಞಾನ ಬರಹಗಾರ ಕೆ.ಎಸ್. ರವಿಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದ ಜೀವಾಳವೇ ಪ್ರಶ್ನಿಸುವ ಹಕ್ಕು ಎಂದು ಹೇಳಿದರು. ಪರಿಸರಕ್ಕೆ ಹಾನಿಯಾಗುವ ಯೋಜನೆಗಳು ಮತ್ತು ನೀತಿಗಳ ಕುರಿತು ಜನರು ನಿರಂತರವಾಗಿ ಪ್ರಶ್ನೆ ಎತ್ತುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಹಾಗೂ ಎಲ್ನಿನೊ ಪರಿಣಾಮಗಳ ಕುರಿತು ವಿವರಿಸಿದ ಅವರು, ಪರಿಸರ ಬಿಕ್ಕಟ್ಟಿನ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳುವ ವಿಮರ್ಶಾತ್ಮಕ ದೃಷ್ಟಿಕೋನ ಅಗತ್ಯವಿದೆ ಎಂದರು. ಪರಿಸರ ಕಾಳಜಿ ಕೇವಲ ಆಚರಣೆಗಳ ಮಟ್ಟದಲ್ಲಿ ಉಳಿಯದೆ, ಸಾಮಾಜಿಕ ಬದುಕಿನ ಭಾಗವಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪರಿಸರ ಹೋರಾಟಗಳು, ಅಭಿವೃದ್ಧಿ ಮಾದರಿ, ಹವಾಮಾನ ಅನ್ಯಾಯ ಹಾಗೂ ಯುವಜನರ ಪಾತ್ರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು. ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿ ಪರಿಸರ ಸಂರಕ್ಷಣೆಯಲ್ಲಿ ಜನತಾಂತ್ರಿಕ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಒತ್ತಿಹೇಳಿದರು.
ಸಂವಾದದ ಕೊನೆಯಲ್ಲಿ, ಪ್ರಕೃತಿ ಸಂಪನ್ಮೂಲಗಳ ಮೇಲಿನ ನಿರ್ಧಾರಗಳು ಕೆಲವೇ ಉದ್ಯಮಿಗಳ ಕೈಯಲ್ಲಿ ಕೇಂದ್ರೀಕೃತವಾಗದೆ ಸ್ಥಳೀಯ ಸಮುದಾಯಗಳ ಕೈಗೆ ತಲುಪಬೇಕು. “ನಮ್ಮ ನೀರು, ನಮ್ಮ ಕಾಡು, ನಮ್ಮ ಭೂಮಿ” ಕುರಿತ ನಿರ್ಧಾರಗಳನ್ನು ಜನರೇ ತೆಗೆದುಕೊಳ್ಳುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಇದನ್ನೂ ನೋಡಿ : ಬೀದಿಬದಿ ವ್ಯಾಪಾರಿಗಳ ಮೇಲೆ GBA ದಾಳಿ – ಬೀದಿ ವ್ಯಾಪಾರಿಗಳ ಆಕ್ರೋಶ Janashakthi Media
