ತಬ್ಲೀಗಿ ಜಮಾಅತ್ ಗುರಿಯಾಗಿಸಿ ಧಾರ್ಮಿಕ ದ್ವೇಷ ಪ್ರಚೋದನೆಗಾಗಿ ʼನ್ಯೂಸ್ 18 ಕನ್ನಡʼ, ʼಸುವರ್ಣ ನ್ಯೂಸ್ʼಗೆ ದಂಡ

ಹೊಸದಿಲ್ಲಿ : ತಬ್ಲೀಗಿ ಜಮಾಅತ್‌ ಘಟನೆಯ ಆಕ್ಷೇಪಾರ್ಹ ವರದಿಗಾಗಿ ʼನ್ಯೂಸ್ 18 ಕನ್ನಡʼ, ʼಸುವರ್ಣ ನ್ಯೂಸ್‌ʼಗೆ ರಾಷ್ಟ್ರೀಯ ವಾರ್ತಾ ಪ್ರಸಾರ ನಿಯಮಗಳ ಪ್ರಾಧಿಕಾರ (ಎನ್‌ಬಿಎಸ್‌ಎ) ಕ್ರಮವಾಗಿ 1 ಲಕ್ಷ ಮತ್ತು ರೂ 50,000 ದಂಡ ವಿಧಿಸಿದೆ. ಅಲ್ಲದೆ ಘಟನೆ ವರದಿ ಮಾಡಿದ್ದಕ್ಕಾಗಿ ʼಟೈಮ್ಸ್‌ ನೌʼ ಇಂಗ್ಲಿಷ್‌ ಸುದ್ದಿ ವಾಹಿನಿಗೆ ಅದು ಛೀಮಾರಿ ಹಾಕಿದೆ.

ಈ ಸುದ್ದಿ ವಾಹಿನಿಗಳು ಕೆಲವು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ವಿಧಾನ ಹೆಚ್ಚು ಆಕ್ಷೇಪಾರ್ಹ ಹಾಗೂ ಕಪೋಲಕಲ್ಪಿತವಾಗಿದ್ದವು ಎಂದು ಎನ್‌ಬಿಎಸ್‌ಎ ತೀರ್ಪು ನೀಡಿದೆ. ʻಕಾರ್ಯಕ್ರಮಗಳ ಧ್ವನಿ, ಧಾಟಿ ಹಾಗೂ ಭಾಷೆಯು ಮೌಢ್ಯ, ಪೂರ್ವಾಗ್ರಹ ಮತ್ತು ಅಗೌರವದಿಂದ ಕೂಡಿತ್ತು.ಕಾರ್ಯಕ್ರಮಗಳು ಪೂರ್ವಾಗ್ರಹ ಪೀಡಿತ, ಪ್ರಚೋದನಕಾರಿ ಮತ್ತು ಧಾರ್ಮಿಕ ಗುಂಪಿನ ಭಾವನೆಗಳ ಬಗ್ಗೆ ಕಾಳಜಿ ವಹಿಸದೆ ಉತ್ತಮ ಅಭಿರುಚಿಯ ಎಲ್ಲಾ ಗಡಿಗಳನ್ನು ದಾಟಿದವು. ಇದು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಮತ್ತು ಪ್ರಚೋದಿಸುವ ಗುರಿಹೊಂದಿತ್ತುʼ ಎಂದು ಎನ್‌ಬಿಎಸ್‌ಎ ತನ್ನ ಆದೇಶದಲ್ಲಿ ತಿಳಿಸಿದೆ.

ತಬ್ಲೀಗಿ ಘಟನೆ 2020ರ ಮಾರ್ಚ್‌ನಲ್ಲಿ ನಡೆದಿತ್ತು. ಕೋವಿಡ್‌ ಕಾರಣದಿಂದಾಗಿ ನಿರ್ಬಂಧ ವಿಧಿಸಲಾಗಿದ್ದ ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ಮಾರ್ಚ್ 30ರಂದು ಮುಸ್ಲಿಂ ಸಂಘಟನೆಯಾದ ತಬ್ಲೀಗಿ ಜಮಾಅತ್‌ ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವರಿಗೆ ಕೊರೊನಾ ಸೋಂಕು ಹರಡಿರುವುದು ಪತ್ತೆಯಾಗಿತ್ತು. ಮಾರ್ಚ್ 13 ಮತ್ತು 24ರ ನಡುವೆ ಕನಿಷ್ಠ 16,500 ಜನರು ನಿಜಾಮುದ್ದೀನ್‌ನಲ್ಲಿರುವ ತಬ್ಲೀಗಿ ಜಮಾಅತ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ಕೋವಿಡ್‌ ಹರಡಲು ಮುಸ್ಲಿಂ ಸಮುದಾಯ ಕಾರಣ ಎಂಬ ಆರೋಪ ಹೊರಿಸುವ ವಿವಿಧ ಸುದ್ದಿ ವರದಿಗಳು ಪ್ರಸಾರವಾಗಲು ಇದು ಕಾರಣವಾಯಿತು.

ಇದನ್ನೂ ಓದಿ : ಕೊರೊನಾ ಹರಡುವಿಕೆಯಲ್ಲಿ ಮುಸ್ಲಿಮರ ಮೇಲಿನ ಆರೋಪ ಆಧಾರರಹಿತ

ʼನ್ಯೂಸ್ 18 ಕನ್ನಡʼದ ಕೆಲವು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ವಿಧಾನ ಹೆಚ್ಚು ಆಕ್ಷೇಪಾರ್ಹ ಹಾಗೂ ಕಪೋಲಕಲ್ಪಿತವಾಗಿದ್ದವು ಎಂದು ಎನ್‌ಬಿಎಸ್‌ಎ ತೀರ್ಪು ನೀಡಿದೆ. ʼದೆಹಲಿಯ ನಿಜಾಮುದ್ದೀನ್‌ ಮರ್ಕಜ್‌ ಹೇಗೆ ರಾಷ್ಟ್ರಕ್ಕೆ ಕೊರೊನಾ ವೈರಸ್‌ ಹರಡುತ್ತಿದೆ ಎಂಬುದು ನಿಮಗೆ ತಿಳಿದಿದೆಯೇ?ʼ, ‘ಕರ್ನಾಟಕದಿಂದ ದೆಹಲಿಯ ಜಮಾತ್ ಸಭೆಗೆ ಎಷ್ಟು ಮಂದಿ ಹೋಗಿದ್ದಾರೆ?’ ಎಂಬ ಶೀರ್ಷಿಕೆಯಡಿಯಲ್ಲಿ ವಾಹಿನಿ, 2020ರ ಏಪ್ರಿಲ್ 1ರಂದು ಕಾರ್ಯಕ್ರಮ ಪ್ರಸಾರ ಮಾಡಿತ್ತು.

“ಕಾರ್ಯಕ್ರಮಗಳ ಧ್ವನಿ, ಧಾಟಿ ಹಾಗೂ ಭಾಷೆಯು ಮೌಢ್ಯ, ಪೂರ್ವಾಗ್ರಹ ಮತ್ತು ಅಗೌರವದಿಂದ ಕೂಡಿತ್ತು. ಕಾರ್ಯಕ್ರಮಗಳು ಪೂರ್ವಾಗ್ರಹ ಪೀಡಿತ, ಪ್ರಚೋದನಕಾರಿ ಮತ್ತು ಧಾರ್ಮಿಕ ಗುಂಪಿನ ಭಾವನೆಗಳ ಬಗ್ಗೆ ಕಾಳಜಿ ವಹಿಸದೆ ಉತ್ತಮ ಅಭಿರುಚಿಯ ಎಲ್ಲಾ ಗಡಿಗಳನ್ನು ದಾಟಿದವು. ಇದು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಮತ್ತು ಪ್ರಚೋದಿಸುವ ಗುರಿಹೊಂದಿತ್ತು” ಎಂದು ಎನ್‌ಬಿಎಸ್ಎ ತನ್ನ ಆದೇಶದಲ್ಲಿ ತಿಳಿಸಿದೆ. ವಾಹಿನಿಗೆ ರೂ 1 ಲಕ್ಷ ದಂಡ ವಿಧಿಸಿರುವುದಷ್ಟೇ ಅಲ್ಲದೆ ಪ್ರಾಧಿಕಾರ ಜೂನ್ 23ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗುವ ಸುದ್ದಿಗೆ ಮುಂಚಿತವಾಗಿ ಕ್ಷಮಾಪಣೆಯನ್ನು ಪ್ರಸಾರ ಮಾಡುವಂತೆ ನಿರ್ದೇಶನ ನೀಡಿದೆ.

ಸುವರ್ಣ ನ್ಯೂಸ್‌ಗೆ ಸಂಬಂಧಿಸಿದಂತೆ ಆದೇಶ ನೀಡುವಾಗ ಪ್ರಾಧಿಕಾರ “2020ರ ಮಾರ್ಚ್ 31 ಮತ್ತು ಏಪ್ರಿಲ್ 4ರ ನಡುವೆ ಪ್ರಸಾರವಾದ ಆರು ಕಾರ್ಯಕ್ರಮಗಳಲ್ಲಿ ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತತೆ ಕಂಡುಬಂದಿಲ್ಲ ಮತ್ತು ಧರ್ಮವೊಂದರ ವಿರುದ್ಧ ಅದು ಪೂರ್ವಾಗ್ರಹ ಪೀಡಿತವಾಗಿದೆ” ಎಂದು ಹೇಳಿದೆ.

“ಕಾರ್ಯಕ್ರಮ ಶೀರ್ಷಿಕೆಗಳು ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಕೃತ್ರಿಮ ಪರಿಣಾಮ ಹೊಂದಿವೆ” ಎಂದು ಎನ್‌ಬಿಎಸ್‌ಎ ಅಭಿಪ್ರಾಯಪಟ್ಟಿದೆ. ʼಟೈಮ್ಸ್‌ ನೌʼ ವರದಿಗೆ ಸಂಬಂಧಿಸಿದಂತೆ ಪ್ರಾಧಿಕಾರ “ಸುದ್ದಿವಾಹಿನಿ ಪ್ರಸಾರ ಮಾಡಿದ ʼಈಸ್‌ ತಬ್ಲೀಗಿ ಜಮಾತ್‌ ವಿಲ್‌ಫುಲೀ ಸಬೋಟಾಜಿಂಗ್‌ ಇಂಡಿಯಾ?” ಕಾರ್ಯಕ್ರಮದ ಅನೇಕ ದೃಶ್ಯಗಳು ನಿರೂಪಕರು ನೀಡಿದ ಹೇಳಿಕೆಗಳನ್ನು ದೃಢೀಕರಿಸಿಲ್ಲ ಎಂದಿತು. “ನಿರೂಪಕರ ಧಾಟಿ ಮತ್ತು ಪದಗಳನ್ನು ತಪ್ಪಿಸಬಹುದಿತ್ತು” ಎಂದು ಅದು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *