ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗಬಹುದೆಂದು ವರಿಷ್ಠರ ಗಮನಕ್ಕೆ ತಂದಿರುವೆ: ಹೆಚ್‌ ವಿಶ್ವನಾಥ್‌

ಬೆಂಗಳೂರು: ಬಿ ಎಸ್ ಯಡಿಯೂರಪ್ಪನವರು ಸರಕಾರದಲ್ಲಿ ಕುಟುಂಬದವರ ಹಸ್ತಕ್ಷೇಪದಿಂದಾಗಿ ಮತ್ತೆ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಲಿದೆ. ಈ ಹಿಂದೆಯೂ ಭ್ರಷ್ಟಾಚಾರದಿಂದಲೇ ಜೈಲಿಗೆ ಹೋಗಿದ್ದರು. ಅದಕ್ಕಾಗಿ ಪಕ್ಷದ ಮತ್ತು ರಾಜ್ಯದ ಜನರ ಹಿತದೃಷ್ಠಿಯಿಂದ ಸರಕಾರದ ಆಗುಹೋಗುಗಳ ಬಗ್ಗೆ ವರಿಷ್ಠರ ಗಮನಕ್ಕೆ ತಂದಿರುವೆ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ಹಿರಿಯ ನಾಯಕ ಹೆಚ್ ವಿಶ್ವನಾಥ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್‌ ವಿಶ್ವನಾಥ್‌ ಅವರು ʻʻನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ರೂಪಾಯಿ ಟೆಂಡರ್ ಕರೆದು ತರಾತುರಿಯಲ್ಲಿ ಅಂಗೀಕರಿಸಿದ್ದಾರೆ, ವಿವಿಧ ಇಲಾಖೆಗಳಲ್ಲಿ, ಸಚಿವರ ಕೆಲಸಗಳಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸಚಿವರ ಖಾತೆಗಳಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಿತಿಮೀರಿದೆ. ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಕಾವೇರಿ ನೀರಾವರಿ ನಿಗಮದಲ್ಲಿ ಅಕ್ರಮ ನಡೆದಿದೆ, ಇದೇನು ಕಾಂಟ್ರಾಕ್ಟ್ ಓರಿಯೆಂಟೆಡ್ ಸರ್ಕಾರನಾʼʼ ಎಂದು ಪ್ರಶ್ನಿಸಿದರು.

ಇದನ್ನು ಓದಿ: ಯಡಿಯೂರಪ್ಪಗೆ ವಯಸ್ಸಾಯ್ತು, ಸಿಎಂ ಚೇಂಜ್ ಮಾಡಿ, ಬೇಕಾದರೆ ಲಿಂಗಾಯತರನ್ನೆ ಸಿಎಂ ಮಾಡೋಣ – ಎಚ್. ವಿಶ್ವನಾಥ್

ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿ ವಯಸ್ಸು ಹೆಚ್ಚಾಗಿರುವ ಕಾರಣದಿಂದ ಬಿಎಸ್‌ವೈ ಅವರು ಸಮರ್ಥವಾಗಿ ಆಡಳಿತ ನಡೆಸಲು ಆಗುತ್ತಿಲ್ಲ. ಹೀಗಾಗಿ ನಾಯಕತ್ವ ಬದಲಾವಣೆ ಆಗಬೇಕಾಗಿದೆ. ಇನ್ಯಾವುದೇ ದುರುದ್ದೇಶವಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ನಾನೂ ಕೂಡ ಕಾರಣ, ನನಗೆ ಅಧಿಕಾರ ಸಿಗಬೇಕೆಂಬ ಆಸೆಯಿಲ್ಲ, ಆದರೆ ಕೆಲವರ ಹಣ-ಅಧಿಕಾರ ದಾಹದಿಂದ ಪಕ್ಷ ಹಾಳಾಗಿ ಹೋಗಬಾರದು ಎಂಬುದು ನನ್ನ ಉದ್ದೇಶವಷ್ಟೆ ಎಂದು ಹೇಳಿದರು.

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮತ್ತು ಅವರ ಕುಟುಂಬದವರ ಬಗ್ಗೆ ಮಾತನಾಡಲು ಬಹುತೇಕ ಸಚಿವರು ಮತ್ತು ಶಾಸಕರಿಗೆ  ಧೈರ್ಯವಿಲ್ಲ. ಇತ್ತೀಚೆಗೆ ಈಶ್ವರಪ್ಪ ಅವರೇ, ರಾಜ್ಯಪಾಲರಿಗೆ ದೂರು ಕೊಟ್ಟಿರುವುದ ಸಹ ಇದೇ ಕಾರಣಕ್ಕೆ. ಈಶ್ವರಪ್ಪ ಕೂಡ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಈಗ ವಲಸಿಗರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಿಶ್ವನಾಥ್‌ ಅವರು ಹೇಳಿದರು.

ಬಿ ವೈ ವಿಜಯೇಂದ್ರ ವಿರುದ್ಧ ಇಡಿಯಲ್ಲಿ ಪ್ರಕರಣವಿದೆ, ಹಾಗಾಗಿ ಆಗಾಗ ದೆಹಲಿಗೆ ಹೋಗಿ ಬರುತ್ತಿದ್ದಾರೆ. ಬಿಜೆಪಿ ಯಾವುದೋ ಒಂದು ಕುಟುಂಬದ ಪಕ್ಷವಲ್ಲ, ಸರಕಾರ ಯಾರ ಆಸ್ತಿಯೂ ಅಲ್ಲ, ಇದು ಜನರದ್ದು ಎಂದರು.

ಬಹುತೇಕ ಶೇಕಡ 80ರಷ್ಟು ಶಾಸಕರು ನಾಯಕತ್ವ ಬದಲಾವಣೆ ಕೇಳಿದ್ದಾರೆ. ರಾಜ್ಯ ಉಸ್ತುವಾರಿಯವರೊಂದಿಗೆ ಪ್ರತಿ ಅಂಶವೂ ವಿವರಿಸಲಿದ್ದಾರೆ. ಅರುಣ್ ಸಿಂಗ್ ಬಳಿ ಒಳಗೆ ಮಾತನಾಡಿರುವುದು ಬೇರೆ, ಹೊರಬಂದ ಬಳಿಕ ಹೇಳಿಕೆ ನೀಡುವುದು ಬೇರೆಯಾಗಿರುತ್ತದೆ. ಬಹುತೇಕರು ನಾಯಕತ್ವ ಬದಲಾವಣೆ ಬೇಕೆಂದು ಹೇಳಿದ್ದಾರೆ. ಎಲ್ಲರಿಗೂ ಎಲ್ಲವನ್ನೂ ಮಾತನಾಡುವ ಧೈರ್ಯ ಇಲ್ಲ ಎಂದರು.

ಜಿಂದಾಲ್‌ ಕಂಪನಿಗೆ ಭೂಮಿ ಮಾರಾಟ ಬಗ್ಗೆ

ಜಿಂದಾಲ್​​ಗೆ ಭೂಮಿ ಪರಭಾರೆ ಬಗ್ಗೆ ಮೊದಲು ದನಿ ಎತ್ತಿದ್ದೇ ನಾನು. ಸಿದ್ದರಾಮಯ್ಯ, ಕುಮಾರಸ್ವಾಮಿ ಏನು ಬಾಯಿಬಿಟ್ಟಿದ್ದಾರಾ? ಅವರಿಗೂ ಸಹ ಒಂದಷ್ಟು ಪಾಲು ತಲುಪಿರುವ ಕಾರಣ ಅವರು ಸುಮ್ಮನಾಗಿದ್ದಾರೆ. ಇಲ್ಲಿ ಮೂರು ಪಕ್ಷಗಳು ಅಧಿಕಾರ ನಡೆಸುತ್ತಿವೆ ಎಂಬುದು ಸತ್ಯ. ಈ ಸಂಬಂಧ ಸಿ.ಪಿ ಯೋಗೀಶ್ವರ್ ಹೇಳಿದ್ದು ಸತ್ಯ ಎಂದರು.

Donate Janashakthi Media

Leave a Reply

Your email address will not be published. Required fields are marked *