ಯಡಿಯೂರಪ್ಪಗೆ ವಯಸ್ಸಾಯ್ತು, ಸಿಎಂ ಚೇಂಜ್ ಮಾಡಿ, ಬೇಕಾದರೆ ಲಿಂಗಾಯತರನ್ನೆ ಸಿಎಂ ಮಾಡೋಣ – ಎಚ್. ವಿಶ್ವನಾಥ್

ಬೆಂಗಳೂರು: ಸಿಎಂ ಯಡಿಯೂರಪ್ಪನವರಿಗೆ ವಯಸ್ಸಾಗಿದೆ, ಅವರಿಗೆ ಮೊದಲಿನಂತೆ ಕೆಲಸ ಮಾಡಲು ಆಗುತ್ತಿಲ್ಲ, ಹೀಗಾಗಿ ತಮ್ಮ ಪರಿಸ್ಥಿತಿ, ವಯಸ್ಸಿನ ಇತಿಮಿತಿ, ಆರೋಗ್ಯವನ್ನು ಮನಗಂಡು ಬೇರೆಯವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಮತ್ತೊಮ್ಮೆ ಯಡಿಯೂರಪ್ಪ ನಾಯಕತ್ವದ ಬಗ್ಗೆ ಮತ್ತೆ ಅಪಸ್ವರ ಎತ್ತಿದ್ದಾರೆ.

ಬಿಜೆಪಿಯಲ್ಲಿ ಸಾಕಷ್ಟು ಬೇರೆ ನಾಯಕರಿದ್ದಾರೆ, ಬೇರೆಯವರಿಗೆ ಬೆಳೆಯಲು ಯಡಿಯೂರಪ್ಪನವರು ಅವಕಾಶ ನೀಡಲಿ. ಪಂಚಮಸಾಲಿ ಲಿಂಗಾಯತ ಸಮುದಾಯದವರೇ ಬೇಕಾದರೆ ಮುಖ್ಯಮಂತ್ರಿ ಆಗಲಿ, ಮುರುಗೇಶ್ ನಿರಾಣಿ, ಬಸನ ಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ ಬೆಲ್ಲದ್ ಅವರು ಮೂವರಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಗಳಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.

ಅರುಣ್ ಸಿಂಗ್ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತದಲ್ಲಿ ಹಸ್ತಕ್ಷೇಪ, ಭ್ರಷ್ಟಚಾರ ಹೆಚ್ಚಾಗಿದೆ. ಸರ್ಕಾರದ ಮೇಲೆ ಸಾರ್ವಜನಿಕ ಅಭಿಪ್ರಾಯ ಹೋಗಿದೆ. ಬಿಜೆಪಿ ಹಾಗೂ ಮೋದಿ ಮೇಲೆ ನಂಬಿಕೆ ಹೋಗುತ್ತಿದೆ ಎಂದು ಬಿಜೆಪಿ ಪರಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ಸುಮಾರು 20 ನಿಮಿಷ ಅರುಣ್ ಸಿಂಗ್ ಜೊತೆ ಮಾತಾಡಿದ್ದೇನೆ, ಮೈತ್ರಿ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡಿ ಬಂದಿದ್ದೇವೆ. ಕುಟುಂಬ ರಾಜಕಾರಣ, ರಾಕ್ಷಸ ರಾಜಕಾರಣ ಇಲ್ಲೂ ಕೂಡ ಕಾಣುತ್ತಿದ್ದೇವೆ. ನಾನು ಯಾವುದೇ ಬಣದಲ್ಲೂ ಇಲ್ಲ. ನಾನೊಬ್ಬ ಬಿಜೆಪಿ ಕಾರ್ಯಕರ್ತ. ಪಕ್ಷದ ಹಿತದೃಷ್ಟಿಯಿಂದ ಕೆಲವೊಂದು ಮಾತುಗಳನ್ನು ಹೇಳಿದ್ದೇನೆ. ಯಡಿಯೂರಪ್ಪ ಮೇಲೆ ಎಲ್ಲರಿಗೂ ಗೌರವ ಇದೆ. ಇತರರನ್ನು ಬೆಳೆಯಲು ಬಿಡಲು ಅವಕಾಶ ಕೊಟ್ಟಂತಾಗುತ್ತದೆ ಎಂದರು.

ರಾಜ್ಯ ಬಿಜೆಪಿಯಲ್ಲಿ ಹಲವು ದಿನಗಳಿಂದ ಅಸಮಧಾನ ತಲೆ ಎತ್ತಿದ್ದು, ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಸರಣಿ ಸಭೆ ನಡೆಸುತ್ತಿದ್ದಾರೆ. ಇಂದು ಎಲ್ಲಾ ಶಾಸಕರು, ಸಚಿವರು ಹಾಗೂ ಎಂಎಲ್​ಸಿಗಳೊಂದಿಗೆ ಅರುಣ್​ ಸಿಂಗ್ ಒನ್​ಟುಒನ್​​ ಸಭೆ ನಡೆಸಿದ್ದು ನಾಯಕತ್ವ ಬದಲಾವಣೆಯ ಕೂಗು ಜೋರಾಗಿ ಕೇಳಿ ಬರುತ್ತದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

 

Donate Janashakthi Media

Leave a Reply

Your email address will not be published. Required fields are marked *