ಫಾರ್ಮ್‌ ೬ರಲ್ಲಿ ಕಡ್ಡಾಯ ಘೋಷಣೆ ಸೇರ್ಪಡೆ:ತಕ್ಷಣವೇ ಹಿಂತೆಗೆದುಕೊಳ್ಳಿ- ಮುಖ್ಯ ಚುನಾವಣಾ ಆಯುಕ್ತರಿಗೆ ಜಾನ್‌ ಬ್ರಿಟ್ಟಾಸ್‌ ಪತ್ರ

ನವದೆಹಲಿ: ರಾಜ್ಯಸಭೆಯಲ್ಲಿ ಸಿಪಿಐ(ಎಂ) ನಾಯಕರಾಗಿರುವ ಜಾನ್ ಬ್ರಿಟ್ಟಾಸ್, ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಹೊಸ ಮತದಾರರ ನೋಂದಣಿಗಾಗಿ ಇಸಿಐನೆಟ್ ಪೋರ್ಟಲ್‌ನಲ್ಲಿ ಆನ್‌ಲೈನ್ ಫಾರ್ಮ್ 6 ರಲ್ಲಿ ಸೇರಿಸಲಾದ ಒಂದು ಕಡ್ಡಾಯ ಘೋಷಣೆಯನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಫಾರ್ಮ್‌

ಚುನಾವಣಾ ಆಯೋಗವು ಆನ್‌ ಲೈನ್‌ ಅರ್ಜಿದಾರರು ಕಳೆದ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮನ್ನು ಅಥವಾ ಅವರ ಪೋಷಕರು ಅಥವಾ ಅಜ್ಜಿ-ತಾತರನ್ನು ಸೇರಿಸಲಾಗಿದೆಯೇ ಎಂಬುದನ್ನು ಕಡ್ಡಾಯವಾಗಿ ತಿಳಿಯಪಡಿಸಲು ಮತ್ತು ತಮ್ಮಪೂರ್ವಿಕರ(legacy) ಚುನಾವಣಾ ವಿವರಗಳನ್ನು ಒದಗಿಸಬೇಕು ಎಂದು  ವಿಧಿಸಿದೆ. ಆದರೆ, 1960 ರ ಮತದಾರರ ನೋಂದಣಿ ನಿಯಮಗಳ ಅಡಿಯಲ್ಲಿ ಸೂಚಿಸಲಾದ ಶಾಸನಬದ್ಧ ಫಾರ್ಮ್ 6 ಗೆ ಯಾವುದೇ ತಿದ್ದುಪಡಿ ಮಾಡದೆ ಹೀಗೆ ವಿಧಿಸುವಂತಿಲ್ಲ. ಅಲ್ಲದೆ ಇದನ್ನು ಆನ್‌ಲೈನ್ ಫಾರ್ಮ್‌ ನಲ್ಲಿ ಮಾತ್ರ ಮಾಡಲಾಗಿದೆ. ಬಿಎಲ್‌ಒ ಗಳಿಗೆ ಕೈಯಾರೆ ಕೊಡುವ ಫಾರ್ಮ್‌ ಗಳಲ್ಲಿ ಮಾಡಿಲ್ಲ ಮತ್ತು ಈ ಬಗ್ಗೆ, ಕಾನೂನು ಮತ್ತು ನ್ಯಾಯ  ಮಂತ್ರಾಲಯದ ಯಾವುದೇ ಗಜೆಟ್‌ ಅಧಿಸೂಚನೆಯೂ ಇದ್ದಂತಿಲ್ಲ.

ಕಾನೂನಿನಲ್ಲಿ ನಿಗದಿಪಡಿಸಿದ ಕಾರ್ಯವಿಧಾನವನ್ನು ಅನುಸರಿಸದೆ ಆಡಳಿತಾತ್ಮಕ ಸೂಚನೆಗಳು ಅಥವಾ ಸಾಫ್ಟ್‌ವೇರ್ ಅಪ್‌ ಡೇಟ್‌ಗಳ ಮೂಲಕ ಚುನಾವಣಾ ಆಯೋಗ ಒಂದು ಶಾಸನಬದ್ಧ ಫಾರ್ಮ್ ಅನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಬ್ರಿಟ್ಟಾಸ್‌  ತಮ್ಮ ಪತ್ರದಲ್ಲಿ ವಾದಿಸಿದ್ದಾರೆ. ಇದಕ್ಕೆ ಅವಕಾಶ ನೀಡಿದರೆ, ನಾಳೆ ಮತದಾರರ ನೋಂದಣಿಗೆ ಸಂಬಂಧಪಟ್ಟ ಯಾವುದೇ ಶಾಸನಾತ್ಮಕ ರಕ್ಷಣೆಯನ್ನು ನಿಯಮಾವಳಿಗಳನ್ನು ತಿದ್ದುಪಡಿ ಮಾಡದೆ, ಸಂಸತ್ತಿನ ಮೇಲುಸ್ತುವಾರಿ ಇಲ್ಲದೆ ಮತ್ತು ಕಾನೂನಿನ ಆಧಾರವಿಲ್ಲದೆಯೇ ಬದಲಿಸಬಹುದು. ಇದು ಕಾನೂನಿನ ಆಳ್ವಿಕೆ ಎಂಬುದರ ಬುಡಕ್ಕೇ ಏಟು ಕೊಡುತ್ತದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ : ಪಶ್ಚಿಮ ಬಂಗಾಳ ಮತದಾರರ ಪರಿಶೀಲನೆ: ವಿಚಾರಣೆ ಪಟ್ಟಿಯಲ್ಲಿ 70% ಮುಸ್ಲಿಮರು

ಈ ಹೆಚ್ಚುವರಿ ಅವಶ್ಯಕತೆಯು ಲಕ್ಷಾಂತರ ಮೊದಲ ಬಾರಿಯ ಮತದಾರರು, ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು, ದತ್ತು ಪಡೆದ ಮಕ್ಕಳು, ಅನಾಥರು ಮತ್ತು ಅಂತಹ ಪೂರ್ವಿಕರ ಮಾಹಿತಿಯನ್ನು ಒದಗಿಸುವ ಪ್ರಾಯೋಗಿಕ ಮಾರ್ಗಗಳನ್ನು ಹೊಂದಿರದ, ತಮ್ಮ ತಂದೆ-ತಾಯಿ, ಅಜ್ಜ-ಅಜ್ಜಿಯರ ದಶಕಗಳಷ್ಟು ಹಿಂದಿನ ದಾಖಲೆ ಲಭ್ಯವಿರದ ಇತರರ ಮೇಲೆ ಅನ್ಯಾಯವಾಗಿ ಹೊರೆ ಹಾಕುತ್ತದೆ. ಸಾರ್ವತ್ರಿಕ ವಯಸ್ಕ ಮತದಾನದ ಸಾಂವಿಧಾನಿಕ ಖಾತರಿಯನ್ನು ಶಾಸನಾತ್ಮಕ ಮಂಜೂರಾತಿ ಇಲ್ಲದ ತಂತ್ರಜ್ಞಾನದ ತಡೆಗಳಿಂದ ದುರ್ಬಲಗೊಳಿಸಲು ಸಾಧ್ಯವಿಲ್ಲ.

ಇದು ಕೇವಲ ಕಾರ್ಯವಿಧಾನದ ಬದಲಾವಣೆಯಲ್ಲ, ಅದಕ್ಕಿಂತಲೂ ಬಹಳ ಮುಂದೆ ಹೋಗುತ್ತದೆ. ಆದ್ದರಿಂದ ಆನ್‌ ಲೈನ್‌ ಫಾರ್ಮ್‌ ೬ರಲ್ಲಿ ಈ ಕಡ್ಡಾಯ ಘೋಷಣೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಮತ್ತು ಈ ಅನಧಿಕೃತ ಅವಶ್ಯಕತೆಯಿಂದಾಗಿ ಮತದಾರರ ನೋಂದಣಿಯ ಯಾವುದೇ ಅರ್ಜಿಯನ್ನು ತಿರಸ್ಕರಿಸಲಾಗುವುದಿಲ್ಲ, ವಿಳಂಬಗೊಳಿಸಲಾಗುವುದಿಲ್ಲ ಅಥವಾ ಅಪೂರ್ಣವೆಂದು ಪರಿಗಣಿಸಲಾಗುವುದಿಲ್ಲ ಎಂದು ಖಚಿತಪಡಿಸಬೇಕೆಂದು ಜಾನ್‌ ಬ್ರಿಟ್ಟಾಸ್‌  ಚುನಾವಣಾ ಆಯೋಗವನ್ನು ಬಲವಾಗಿ ಆಗ್ರಹಿಸಿದ್ದಾರೆ.

ಇದನ್ನೂ ನೋಡಿ : ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಎಡವಟ್ಟುಗಳೇ ಹೆಚ್ಚು? ಗೊಂದಲದ ಗೂಡಾದ ಎಸ್‌ಐಆರ್‌ | ಕೆ ಎಸ್ ವಿಮಲಾ

Donate Janashakthi Media

Leave a Reply

Your email address will not be published. Required fields are marked *