ಬೆಂಗಳೂರು: ಪ್ರೌಢ ಶಿಕ್ಷಣ ಹಂತದಲ್ಲಿ ಬಾಲಕರು ಶಾಲೆ ತೊರೆಯುತ್ತಿರುವ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 2025–26ನೇ ಸಾಲಿನಲ್ಲಿ 9ರಿಂದ 12ನೇ ತರಗತಿಯ ಹಂತದಲ್ಲಿರುವ ಬಾಲಕರ ಪೈಕಿ ಶೇ.18.1ರಷ್ಟು ಮಂದಿ ಶಾಲೆಯಿಂದ ಹೊರಗುಳಿದಿದ್ದಾರೆ. ಕರ್ನಾಟಕ
ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಿಡುಗಡೆ ಮಾಡಿರುವ ಏಕೀಕೃತ ಜಿಲ್ಲಾ ಶಿಕ್ಷಣ ಮಾಹಿತಿ ವ್ಯವಸ್ಥೆ ಪ್ಲಸ್ (ಯುಡಿಐಎಸ್ಇ+) ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಬಾಲಕರ ಶಾಲಾ ತೊರೆಯುವಿಕೆ ಪ್ರಮಾಣದಲ್ಲಿ ಕರ್ನಾಟಕದ ನಂತರ ಛತ್ತೀಸ್ಗಢ ಶೇ.18ರೊಂದಿಗೆ ಎರಡನೇ ಸ್ಥಾನದಲ್ಲಿದೆ. ಲಡಾಖ್ನಲ್ಲಿ ಶೇ.15.6 ಹಾಗೂ ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯುನಲ್ಲಿ ಶೇ.15ರಷ್ಟು ಬಾಲಕರು ಪ್ರೌಢ ಹಂತದಲ್ಲಿ ಶಿಕ್ಷಣದಿಂದ ಹೊರಗುಳಿದಿದ್ದಾರೆ.
ಬಾಲಕರ ಪ್ರಮಾಣ ಮಾತ್ರವಲ್ಲದೆ, 9ರಿಂದ 12ನೇ ತರಗತಿಯ ಪ್ರೌಢ ಹಂತದಲ್ಲಿ ಎಲ್ಲ ವಿದ್ಯಾರ್ಥಿಗಳ ಒಟ್ಟಾರೆ ಶಾಲಾ ತೊರೆಯುವಿಕೆ ಪ್ರಮಾಣದಲ್ಲೂ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. 2025–26ನೇ ಸಾಲಿನಲ್ಲಿ ರಾಜ್ಯದ ಒಟ್ಟಾರೆ ಶಾಲಾ ತೊರೆಯುವಿಕೆ ಪ್ರಮಾಣ ಶೇ.14.3ರಷ್ಟಿದೆ. ಲಡಾಖ್ ಶೇ.14.8ರೊಂದಿಗೆ ಮೊದಲ ಸ್ಥಾನದಲ್ಲಿದೆ. ಕರ್ನಾಟಕ
ಪ್ರಾಥಮಿಕ ಹಂತದಲ್ಲಿ ಶೇ.100, ಪ್ರೌಢ ಹಂತದಲ್ಲಿ ಕುಸಿತ
ವಿದ್ಯಾರ್ಥಿಗಳು ಒಂದು ಶಿಕ್ಷಣ ಹಂತದಿಂದ ಮತ್ತೊಂದು ಹಂತಕ್ಕೆ ಮುಂದುವರಿಯುವ ಪ್ರಮಾಣದಲ್ಲೂ ಕರ್ನಾಟಕದಲ್ಲಿ ವ್ಯತ್ಯಾಸ ಕಂಡುಬಂದಿದೆ. ಪೂರ್ವ ಪ್ರಾಥಮಿಕ ಹಂತದಿಂದ 3ರಿಂದ 5ನೇ ತರಗತಿಯ ಪೂರ್ವಸಿದ್ಧತಾ ಹಂತಕ್ಕೆ ವಿದ್ಯಾರ್ಥಿಗಳು ಮುಂದುವರಿಯುವ ಪ್ರಮಾಣ ಕರ್ನಾಟಕದಲ್ಲಿ ಶೇ.100ರಷ್ಟಿದೆ. ಈ ಸಾಧನೆ ಮಾಡಿದ ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕರ್ನಾಟಕವೂ ಒಂದಾಗಿದೆ. ಕರ್ನಾಟಕ
ಆದರೆ 6ರಿಂದ 8ನೇ ತರಗತಿಯ ಮಧ್ಯಮ ಹಂತದಿಂದ 9ರಿಂದ 12ನೇ ತರಗತಿಯ ಪ್ರೌಢ ಹಂತಕ್ಕೆ ವಿದ್ಯಾರ್ಥಿಗಳು ಮುಂದುವರಿಯುವ ಪ್ರಮಾಣ ಶೇ.97.6ಕ್ಕೆ ಇಳಿದಿದೆ. ಈ ವಿಭಾಗದಲ್ಲಿ ಶೇ.100ರಷ್ಟು ಪರಿವರ್ತನೆ ಸಾಧಿಸಿದ ಏಕೈಕ ರಾಜ್ಯ ಕೇರಳವಾಗಿದೆ.
ಪ್ರಾಥಮಿಕ ಹಂತದಲ್ಲಿ ಶಾಲಾ ದಾಖಲಾತಿ ಮತ್ತು ವಿದ್ಯಾರ್ಥಿಗಳ ಮುಂದುವರಿಕೆಯಲ್ಲಿ ಉತ್ತಮ ಸ್ಥಿತಿ ಹೊಂದಿದ್ದರೂ, ಪ್ರೌಢ ಹಂತಕ್ಕೆ ಬಂದಾಗ, ಅದರಲ್ಲೂ ಬಾಲಕರಲ್ಲಿ ಶಾಲಾ ತೊರೆಯುವಿಕೆ ಹೆಚ್ಚುತ್ತಿರುವುದು ಕರ್ನಾಟಕದ ಶಿಕ್ಷಣ ವ್ಯವಸ್ಥೆಯ ಮುಂದಿರುವ ಗಂಭೀರ ಸವಾಲಾಗಿದೆ.
ಇದನ್ನೂ ಓದಿ : ಕರ್ನಾಟಕ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ಗುರುವಾರವೇ ಸಚಿವರ ಪ್ರಮಾಣವಚನ ಸಾಧ್ಯತೆ?
ಬಾಲಕರು ಶಾಲೆ ಬಿಡುತ್ತಿರುವುದೇಕೆ? ಕಾರಣಗಳತ್ತ ಗಮನ ಬೇಕು
ಕರ್ನಾಟಕದಲ್ಲಿ ಪ್ರೌಢ ಹಂತದಲ್ಲಿ ಬಾಲಕರ ಶಾಲಾ ತೊರೆಯುವಿಕೆ ಪ್ರಮಾಣ ಶೇ.22ರಷ್ಟಿರುವುದು ಕೇವಲ ಅಂಕಿ-ಅಂಶವಲ್ಲ; ಇದರ ಹಿಂದಿರುವ ಕಾರಣಗಳನ್ನು ಸರ್ಕಾರ ಗುರುತಿಸಬೇಕಾದ ಅಗತ್ಯವಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿ, ಬಾಲಕರನ್ನು ಉದ್ಯೋಗ ಅಥವಾ ಕೂಲಿ ಕೆಲಸಕ್ಕೆ ಕಳುಹಿಸುವ ಅನಿವಾರ್ಯತೆ, ಶಾಲೆ ಮತ್ತು ಮನೆಯಿಂದ ದೂರದ ಅಂತರ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಪ್ರೌಢ ಹಂತದಲ್ಲಿ ಶಿಕ್ಷಣದ ಮೇಲಿನ ಆಸಕ್ತಿ ಕಡಿಮೆಯಾಗುವುದು, ವೃತ್ತಿಪರ ಶಿಕ್ಷಣದ ಅವಕಾಶಗಳ ಕೊರತೆ ಹಾಗೂ ಶಾಲೆಯಲ್ಲಿನ ಮೂಲಸೌಕರ್ಯ ಮತ್ತು ಕಲಿಕಾ ವಾತಾವರಣ ಮುಂತಾದ ಅಂಶಗಳು ಕಾರಣವಾಗಿರಬಹುದೇ ಎಂಬುದನ್ನು ಜಿಲ್ಲಾವಾರು ಪರಿಶೀಲಿಸಬೇಕಿದೆ.
ಇದರಲ್ಲಿ ವಿಶೇಷವಾಗಿ 6ರಿಂದ 8ನೇ ತರಗತಿಯ ಹಂತದಲ್ಲಿ ಡ್ರಾಪೌಟ್ ಶೇ.1.2ರಷ್ಟಿದ್ದು, 9ರಿಂದ 10ನೇ ತರಗತಿಗೆ ಬಂದಾಗ ಬಾಲಕರ ಡ್ರಾಪೌಟ್ ಶೇ.22ಕ್ಕೆ ಏರಿರುವುದು ಗಮನಾರ್ಹ. ಅಂದರೆ ಸಮಸ್ಯೆ ಪ್ರೌಢ ಹಂತಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ತೀವ್ರವಾಗುತ್ತಿದೆ. ಹೀಗಾಗಿ “ಬಾಲಕರು ಏಕೆ ಶಾಲೆ ಬಿಡುತ್ತಿದ್ದಾರೆ?” ಎಂಬ ಪ್ರಶ್ನೆಗೆ ಜಿಲ್ಲಾವಾರು ಸಮೀಕ್ಷೆ ನಡೆಸಿ ಉತ್ತರ ಕಂಡುಕೊಳ್ಳುವುದು ಅತ್ಯಂತ ಮುಖ್ಯ. ಕೇವಲ ಶಾಲಾ ದಾಖಲಾತಿ ಹೆಚ್ಚಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ; ಶಾಲೆಯಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವ ನೀತಿ ಅಗತ್ಯ. ಕರ್ನಾಟಕ
ಇದನ್ನೂ ನೋಡಿ : NEET ಹೋರಾಟದ ಒಳನೋಟ | ದಮನದ ಪ್ರತಿಯೊಂದು ಹೆಜ್ಜೆಗೂ ವಿದ್ಯಾರ್ಥಿಗಳ ಪ್ರತಿರೋಧ | ಗುರುರಾಜ ದೇಸಾಯಿ Janashakthi
