ಬೆಂಗಳೂರು ಸೇರಿ ಹಲವೆಡೆ ಜುಲೈ 19ರಂದು ಭಾರಿ ಮಳೆ ಸಾಧ್ಯತೆ: ಐಎಂಡಿ ಎಚ್ಚರಿಕೆ

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಜುಲೈ 19ರಂದು ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಕೆಲವೆಡೆ ಮಳೆಯಾಗುತ್ತಿದೆ. ಶನಿವಾರವೂ ನಗರದಲ್ಲಿ ಸಾಕಷ್ಟು ಮಳೆಯಾದ ಹಿನ್ನೆಲೆ, ಇದೇ ಪರಿಸ್ಥಿತಿ ಇಂದು ಕೂಡ ಮುಂದುವರಿಯುವ ನಿರೀಕ್ಷೆಯಿದೆ.

ತಾಪಮಾನ ವಿವರಗಳ ಪ್ರಕಾರ, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನವು 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಸುತ್ತಮುತ್ತ ಇರುವ ಸಾಧ್ಯತೆಯಿದೆ. ಇದರ ಜೊತೆಗೆ ದಿನಪೂರ್ತಿ ಮಳೆಯಾಗುವ ಸಾಧ್ಯತೆ ಇರುವುದಾಗಿ ಐಎಂಡಿ ತಿಳಿಸಿದೆ.

ಇದನ್ನೂ ಓದಿ: ದೇಶದಾದ್ಯಂತ ಚುರುಕಾದ ಮಳೆಗಾಲ: ಪಶ್ಚಿಮ ಬಂಗಾಳ – ಸಿಕ್ಕಿಂಗೆ ರೆಡ್ ಅಲರ್ಟ್

ಕರಾವಳಿ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ, ಮಲೆನಾಡಿನ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನು ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲೂ ಹಲವೆಡೆ ಮಳೆಯಾಗಲಿದೆ. ಮುಂದಿನ ಒಂದು ವಾರದವರೆಗೂ ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲೂ ಮೋಡ ಕವಿದ ವಾತಾವರಣದೊಂದಿಗೆ ಕೆಲವೆಡೆ ಮಳೆಯಾಗುವ ನಿರೀಕ್ಷೆಯಿದೆ.

ಇತ್ತೀಚಿನ ಮಳೆಯ ಪರಿಣಾಮವಾಗಿ ರಾಜ್ಯದ ಹಲವು ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ. ಇದರಿಂದ ರೈತರಲ್ಲಿ ಹರ್ಷದ ವಾತಾವರಣ ಕಂಡುಬರುತ್ತಿದೆ.

ಇದೇ ವೇಳೆ, ಈ ಬಾರಿ ಎಲ್ ನಿನೊ ಪರಿಣಾಮದಿಂದ ಮಳೆಯ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೂ, ಇತ್ತೀಚೆಗೆ ಮಳೆ ಮತ್ತೆ ಚುರುಕುಗೊಂಡಿರುವುದು ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ಇದೆ.

ಇದನ್ನೂ ನೋಡಿ: ಫಿಫಾ ವಿಶ್ವಕಪ್ 2026 ಫೈನಲ್ | ಮೆಸ್ಸಿಯ ಕೊನೆಯ ಕನಸೋ? ಸ್ಪೇನ್‌ನ ಹೊಸ ಇತಿಹಾಸವೋ? Janashakthi Media

Donate Janashakthi Media

Leave a Reply

Your email address will not be published. Required fields are marked *