ಮೂಲ: ವಿಜಯ್ ಪ್ರಶಾದ್, ಅನುವಾದ : ವಸಂತರಾಜ ಎನ್.ಕೆ
ವೆನೆಜುವೇಲಾದ ಬೊಲಿವಾರಿಯನ್ ಕ್ರಾಂತಿಯ ನಂತರ ಲ್ಯಾಟಿನ್ ಅಮೆರಿಕದಲ್ಲಿ ಕಳೆದ ಎರಡು ದಶಕಗಳಲ್ಲಿ ಬೀಸಿದ ‘ಎಳೆಗೆಂಪು ಅಲೆ’ ಇತ್ತೀಚಿನ ವರ್ಷಗಳಲ್ಲಿ ನಿಂತು ಹೋಗಿದೆ. ಬದಲಿಗೆ ವಿಶೇಷ ಮಾದರಿಯ ಬಲಪಂಥದ ಅಲೆ ಬೀಸುತ್ತಿದೆ. ಲ್ಯಾಟಿನ್ ಅಮೆರಿಕದ 20 ದೇಶಗಳಲ್ಲಿ 11ರಲ್ಲಿ ಎದ್ದಿರುವ ಈ ಉಗ್ರ ಬಲಪಂಥದ ಅಲೆಯ ಸಾಮಾನ್ಯ ಗುಣಲಕ್ಷಣಗಳು, ಅದರ ವ್ಯಾಪ್ತಿಯ ಬಗ್ಗೆ ಈ ಲೇಖನ .
ಇತ್ತೀಚೆಗೆ ಬಲಪಂಥೀಯ ಶತಕೋಟ್ಯಾಧಿಪತಿ ಅಬೆಲಾರ್ಡೊ ಡೆ ಲಾ ಎಸ್ಪ್ರಿಯೆಲ್ಲಾ ಕೊಲಂಬಿಯಾದ ಅಧ್ಯಕ್ಷರಾಗಿ ಆಯ್ಕೆಯಾಗಿ, ಅಧಿಕಾರ ವಹಿಸಿಕೊಂಡರು. ಎಡಪಂಥೀಯ ಅಭ್ಯರ್ಥಿ ಇವಾನ್ ಸೆಪೆಡಾ ಅವರಿಗಿಂತ ಕೇವಲ ಶೇಕಡ 1 ರಷ್ಟು ಮತಪ್ರಮಾಣಕ್ಕಿಂತ ಕಡಿಮೆ ಅಂತರದಲ್ಲಿ ಗೆದ್ದರೂ, ಉಗ್ರ ಬಲಪಂಥೀಯ ಕಾರ್ಯಸೂಚಿಯನ್ನು ಜಾರಿ ಮಾಡಲು ಹೊರಟಿದ್ದಾರೆ. ಜನಾದೇಶ ಏನೇ ಹೇಳಲಿ, ತಮಗೆ ಸಮಾಜವನ್ನು ತಮ್ಮ ವಿಷಕಾರಿ ಅಜೆಂಡಾದಂತೆ ಪರಿವರ್ತಿಸುವ ಅಧಿಕಾರವಿದೆ ಎಂದು ನಟಿಸುವುದು ಈ ವಿಶೇಷ ಮಾದರಿಯ ಉಗ್ರ ಬಲಪಂಥೀಯರ ಲಕ್ಷಣವಾಗಿದೆ. ಲ್ಯಾಟಿನ್ ಅಮೆರಿಕದ ಭಾಗವೆಂದು ಸಾಮಾನ್ಯವಾಗಿ ಭಾವಿಸಲಾದ 20 ದೇಶಗಳಲ್ಲಿ, 11 ಈಗ ಇಂತಹ ವಿಶೇಷ ಮಾದರಿಯ ಉಗ್ರ ಬಲಪಂಥೀಯ ಸರ್ಕಾರಗಳನ್ನು ಹೊಂದಿವೆ: ಅರ್ಜೆಂಟೀನಾ (2023 ರಿಂದ ಜೇವಿಯರ್ ಮಿಲೀ), ಬೊಲಿವಿಯಾ (2025 ರಿಂದ ರೋಡ್ರಿಗೋ ಪಾಜ್), ಚಿಲಿ (2026 ರಿಂದ ಜೋಸ್ ಆಂಟೋನಿಯೊ ಕಾಸ್ಟ್), ಕೊಲಂಬಿಯಾ (2026ರಿಂದ ಡಿ ಲಾ ಎಸ್ಪ್ರಿಯೆಲ್ಲಾ), ಕೋಸ್ಟರಿಕಾ (2026 ರಿಂದ ಲಾರಾ ಫೆರ್ನಾಂಡಿಸ್), ಈಕ್ವೆಡಾರ್ (2025 ರಿಂದ ಡೇನಿಯಲ್ ನೊಬೊವಾ), ಎಲ್ ಸಾಲ್ವಡಾರ್ (2024 ರಿಂದ ನಯೀಬ್ ಬುಕೆಲೆ), ಹೊಂಡುರಾಸ್ (2026 ರಿಂದ ನಸ್ರಿ ಅಸ್ಫುರಾ), ಪನಾಮ (2024 ರಿಂದ ಜೋಸ್ ರೌಲ್ ಮುಲಿನೊ), ಪರಾಗ್ವೆ (2023 ರಿಂದ ಸ್ಯಾಂಟಿಯಾಗೊ ಪೆನಾ), ಮತ್ತು ಪೆರು (2026 ರಿಂದ ಕೀಕೊ ಫುಜಿಮೊರಿ).
ಈ ನಾಯಕರಲ್ಲಿ ಹೆಚ್ಚಿನವರು ಹಳೆಯ ಸಂಪ್ರದಾಯವಾದಿ ರಾಜಕೀಯ ಬಣದಿಂದ ಬಂದವರಲ್ಲ. ಬದಲಿಗೆ ಸರಾಸರಿ 52 ವರ್ಷ ವಯಸ್ಸಿನ ಹೊಸ ಪೀಳಿಗೆಯ ಭಾಗವಾಗಿದ್ದಾರೆ (ನೊಬೊವಾ ಗುಂಪಿನಲ್ಲಿ ಕಿರಿಯ, 1987 ರಲ್ಲಿ ಜನಿಸಿದರು). ಇವರು ಲ್ಯಾಟಿನ್ ಅಮೆರಿಕದ ಹಳೆಯ ಗುತ್ತೇದಾರಿ ಶ್ರೀಮಂತ ಕುಟುಂಬಗಳನ್ನು ಪ್ರತಿನಿಧಿಸುವವರು. ಆಳವಾದ ವಸಾಹತುಶಾಹಿ ಬೇರುಗಳನ್ನು ಹೊಂದಿರುವ ಮತ್ತು ವಿಶಾಲವಾದ ಆಸ್ತಿಗಳನ್ನು ಹೊಂದಿರುವ ಹಳೆಯ ಕುಟುಂಬಗಳಿಗೆ ಸೇರಿದವರು. ಆದರೆ ಈ ನಾಯಕರು ಕುಲೀನ ಶ್ರೀಮಂತರ ಸಂವೇದನೆಯನ್ನು ಹೊಂದಿಲ್ಲ ಅಥವಾ ಸ್ಥಾಪಿತ ಸಂಪ್ರದಾಯವಾದಿ ರಾಜಕೀಯ ಪಕ್ಷಗಳಿಂದ ಬಂದವರಲ್ಲ. ಅವರು ಯು.ಎಸ್ ಕಾರ್ಯಸೂಚಿಗೆ ಅಂಧಭಕ್ತಿಯ ಸ್ವಭಾವವನ್ನು ಹೊಂದಿದವರು. ಅವರು ತಮ್ಮನ್ನು ದೇಶಪ್ರೇಮಿಗಳಾಗಿ ತೋರಿಸಿಕೊಳ್ಳುತ್ತಾರೆ. ಆದರೆ ಯು.ಎಸ್ ಸಾಮ್ರಾಜ್ಯಶಾಹಿ ಮತ್ತು ಅದರ ಕಾರ್ಪೊರೇಟುಗಳಿಗೆ ಸಂಪೂರ್ಣ ನಿಷ್ಠೆಗಾಗಿ ದೇಶಭಕ್ತಿಯನ್ನು ಬದಿಗಿಡುವವರು.
‘ಕ್ರೂರ ಹಿಂಸಾಚಾರದಿಂದ ದಮನವೇ ಪರಿಹಾರ’
ಗುತ್ತೇದಾರಿ ಶ್ರೀಮಂತ ಕುಟುಂಬಗಳ ಕಾನೂನುಬಾಹಿರ ಹಿಂಸಾಚಾರದ ಸುದೀರ್ಘ ಸಂಪ್ರದಾಯದಿಂದ ಈ ಉಗ್ರ ಬಲಪಂಥೀಯರು ಹೊಮ್ಮಿದ್ದಾರೆ. ಈ ಹಿಂಸಾತ್ಮಕ ಸಂಪ್ರದಾಯವು ಸ್ಥಳೀಯ ಮೂಲನಿವಾಸಿಗಳ ನರಮೇಧದಿಂದ ಆರಂಭಿಸಿ ಆಪರೇಷನ್ ಕಾಂಡೋರ್ ಯುಗದ ಮಿಲಿಟರಿ ಸರ್ವಾಧಿಕಾರದ ವರೆಗೆ ಚಾಚಿಕೊಂಡಿದೆ. ಹಿಂಸಾಚಾರಕ್ಕೆ ಯಾವುದೇ ಕಡಿವಾಣ ಇಲ್ಲದಿರುವುದು ಈ ವರ್ಗ ಮತ್ತು ಅದರ ರಾಜಕೀಯ ಪ್ರತಿನಿಧಿಗಳ ವಿಶಿಷ್ಟ ಲಕ್ಷಣವಾಗಿದೆ. ಹಾಗಾಗಿ ಈ ಉಗ್ರ ಬಲಪಂಥೀಯರು ಅದರ ವರ್ಗ ಮತ್ತು ಅದರ ಪೂರ್ವಜರ ನೈಜ ವಾರಸುದಾರರು. ಲಾರಾ ಫೆರ್ನಾಂಡಿಸ್ ಅವರು 1986 ರಲ್ಲಿ ಜನಿಸಿದರು, ಕೋಸ್ಟರಿಕಾದ ಅಧ್ಯಕ್ಷ ಆಸ್ಕರ್ ಏರಿಯಾಸ್ ಅವರು ಮಧ್ಯ ಅಮೆರಿಕದಲ್ಲಿ ಸಂಘರ್ಷ ಪರಿಹಾರದಲ್ಲಿ ಮಾಡಿದ ಕೆಲಸಕ್ಕಾಗಿ ಶಾಂತಿಗಾಗಿ ನೊಬೆಲ್ ಪ್ರಶಸ್ತಿಯನ್ನು ಗೆಲ್ಲುವ ಮೊದಲು (ಕೋಸ್ಟರಿಕಾ ತನ್ನ 1949 ರ ಸಂವಿಧಾನದಲ್ಲಿ ತನ್ನ ಮಿಲಿಟರಿಯನ್ನು ತೊಡೆದುಹಾಕಿತು). ಮೇ 2026 ರಲ್ಲಿ ತನ್ನ ಉದ್ಘಾಟನಾ ಸಮಾರಂಭದಲ್ಲಿ ಫೆರ್ನಾಂಡಿಸ್ ಅವರು “ಅಪರಾಧವನ್ನು ಹತ್ತಿಕ್ಕುವಲ್ಲಿ ಕಬ್ಬಿಣದ ಮುಷ್ಟಿಯ ಪ್ರತಿಕ್ರಿಯೆಯನ್ನು ಹೊಂದಿರುತ್ತಾರೆ” ಮತ್ತು ಅವರ ’ ಕೈ ನಡುಗುವುದಿಲ್ಲ ಎಂದು ಹೇಳಿದರು. ಕೊಲಂಬಿಯಾದಲ್ಲಿನ ಆಂತರಿಕ ಘರ್ಷಣೆಗಳಿಗೆ ಶಾಂತಿಯುತ ನಿರ್ಣಯಗಳನ್ನು ತರಲು ಗುಸ್ಟಾವೊ ಪೆಟ್ರೋ ಮಾಡಿದ ಪ್ರಯತ್ನಗಳ ನಂತರ, ‘ಅಪರಾಧಿಗಳಿಗೆ ಗುಂಡು ಹಾಕಬೇಕು’ ಎಂಬ ದೃಷ್ಟಿಕೋನದಿಂದ ಡೆ ಲಾ ಎಸ್ಪ್ರಿಯೆಲ್ಲಾ ಅಧಿಕಾರಕ್ಕೆ ಬಂದರು. ಇದು ಮತ್ತೆ ಅಂತರ್ಯುದ್ಧದ ಸ್ಥಿತಿಗೆ ಮರಳುವುದನ್ನು ಸೂಚಿಸಿತು.

ಎಲ್ ಸಾಲ್ವಡಾರ್ ನ ನಯೀಬ್ ಬುಕೆಲೆ ಅವರ – ಸಾಮೂಹಿಕ ಬಂಧನಗಳು, ಮಿಲಿಟರಿ ಬಂದೋಬಸ್ತುಗಳು, ತುರ್ತು ಪರಿಸ್ಥಿತಿ ಮತ್ತು ಮೆಗಾ ಜೈಲುಗಳ – ವಿಧಾನವು ಲ್ಯಾಟಿನ್ ಅಮೆರಿಕದ ಉಗ್ರ ಬಲಪಂಥೀಯರ ಮೇಲೆ ಗಾಢ ಪ್ರಭಾವ ಬೀರಿದೆ, ಅವರ ಪ್ರಾದೇಶಿಕ ರಾಜಕೀಯ ಮಾದರಿಯಾಗಿಸಿದೆ. ಈಕ್ವೆಡಾರ್, ಕೊಲಂಬಿಯಾ, ಕೋಸ್ಟರಿಕಾ, ಪೆರು, ಚಿಲಿ ಮತ್ತು ಇತರೆಡೆಗಳ ನಾಯಕರು ಮತ್ತು ಅಭ್ಯರ್ಥಿಗಳು ಸಾಂಪ್ರದಾಯಿಕ ಕಾನೂನು ವ್ಯವಸ್ಥೆ ಮತ್ತು ಸಾಮಾಜಿಕ ನೀತಿಗಿಂತ, ಅಪರಾಧಗಳ ನೆಪದ ಮೇಲೆ ಅದನ್ನು ಹತ್ತಿಕ್ಕಲು ಅಸಾಧಾರಣ ದಮನದ ಅಧಿಕಾರದ ಬೇಡುವ ಯುದ್ಧದ ಅಗತ್ಯವನ್ನು ಪ್ರತಿಪಾದಿಸುತ್ತಾರೆ. ಎಲ್ ಸಾಲ್ವಡಾರ್ ನಲ್ಲಿ ಬುಕೆಲೆ ಅವರ ಜನಪ್ರಿಯತೆಯು ಮಿಲಿಟರಿ ಬೀದಿಗಳು, ಕಠಿಣ ಶಿಕ್ಷೆಗಳು, ವಿಸ್ತರಿತ ಕಾರಾಗೃಹಗಳು ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಳ ಭರವಸೆಗಳನ್ನು ದುರ್ಬಲಗೊಳಿಸುವುದನ್ನು ಸಹಜಗೊಳಿಸಿದೆ. ಈ ಕ್ರೂರ ವ್ಯವಸ್ಥೇಯ ಟೀಕಾಕಾರರು ಲಂಗು ಲಗಾಮಿಲ್ಲದ ಬಂಧನ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ದಾಖಲಿಸಿದರೂ, ಅವರ ಅಭಿಮಾನಿಗಳು ಅವರ ವಿಧಾನಗಳನ್ನು ನಿರ್ಣಾಯಕ, ನಿರಂಕುಶ ನಾಯಕತ್ವ ಮಾತ್ರವೇ ಕಾನೂನು-ಸುವ್ಯವಸ್ಥೆಯನ್ನು ಪುನಃಸ್ಥಾಪಿಸಬಹುದು ಎಂಬುದಕ್ಕೆ ಪುರಾವೆಯಾಗಿ ನೋಡುತ್ತಾರೆ. ಕಾನೂನು-ಸುವ್ಯವಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳು ನಿಷ್ಪರಿಣಾಮಕಾರಿಯಾಗಿವೆ ಎಂಬುದು ಅವರ ಅಭಿಪ್ರಾಯ. ಈ ಉಗ್ರ ಬಲಪಂಥೀಯರು ಅಪರಾಧಕ್ಕೆ, ವಾಸ್ತವವಾಗಿ ಬಡವರ ನೆರೆಹೊರೆಗಳಿಗೆ, ಮಾದಕ-ದ್ರವ್ಯ-ಮಾಫಿಯಾಗಳು ಮತ್ತು ಕೊಳೆಗೇರಿಗಳ ಸಣ್ಣ ಅಪರಾಧಿಗಳಿಗೆ ಕ್ರೂರ ವಿಧಾನ, ,ಏಕೈಕ ಪರಿಣಾಮಕಾರಿ ಪರಿಹಾರವೆಂದು ಚತ್ರಿಸುತ್ತಾರೆ.
ಸಾಮಾಜಿಕ ಸಾಧನೆಗಳ ವಿನಾಶ
ಲ್ಯಾಟಿನ್ ಅಮೆರಿಕದಾದ್ಯಂತ, ಈ ಉಗ್ರ ಬಲಪಂಥಧ ಅಲೆಯು, ಗರ್ಭಪಾತ ಮತ್ತು ಗರ್ಭನಿರೋಧಕ ಕ್ರಮಗಳನ್ನು ನಿರ್ಬಂಧಿಸುವುದು, ಲಿಂಗ ಹಿಂಸೆಯನ್ನು ಪರಿಹರಿಸುವ ಸಂಸ್ಥೆಗಳನ್ನು ಕಿತ್ತುಹಾಕುವುದು, ಲೈಂಗಿಕ ಶಿಕ್ಷಣದ ಮೇಲೆ ದಾಳಿ ಮಾಡುವುದು – ಇವುಗಳ ಮೂಲಕ ಸ್ತ್ರೀವಾದಿ ಸಾಧನೆಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿದೆ. ಸ್ತ್ರೀವಾದವನ್ನು ಸಾಂಪ್ರದಾಯಿಕ ಕುಟುಂಬಕ್ಕೆ ಬೆದರಿಕೆ ಎಂದು ಚಿತ್ರಿಸುತ್ತದೆ. ಅರ್ಜೆಂಟೀನಾದಲ್ಲಿ, ಜೇವಿಯರ್ ಮಿಲೀ ಅವರ ಸರ್ಕಾರವು ಮಹಿಳಾ ಸಚಿವಾಲಯವನ್ನು ಮುಚ್ಚಿತು, ರಾಷ್ಟ್ರೀಯವಾಗಿ ಗರ್ಭಪಾತದ ಔಷಧಿಗಳನ್ನು ವಿತರಿಸುವುದನ್ನು ನಿಲ್ಲಿಸಿತು ಮತ್ತು ಗರ್ಭನಿರೋಧಕ ಮತ್ತು ಹದಿಹರೆಯದ-ಗರ್ಭಧಾರಣೆಯ ಕಾರ್ಯಕ್ರಮಗಳನ್ನು ಕಡಿತಗೊಳಿಸಿತು. ಇದರಿಂದಾಗಿ ಮಹಿಳೆಯರಿಗೆ, ವಿಶೇಷವಾಗಿ ಬಡ ಮತ್ತು ಕಾರ್ಮಿಕ ವರ್ಗದ ಮಹಿಳೆಯರಿಗೆ, ತಮ್ಮ ಹಕ್ಕುಗಳನ್ನು ಸ್ಥಾಪಿಸುವುದು ಹೆಚ್ಚೆಚ್ಚು ಕಷ್ಟವಾಗುತ್ತಿದೆ.
ಚಿಲಿಯಲ್ಲಿ, ಬಲಪಂಥೀಯ ಶಾಸಕರು ದೇಶದ ಅಪರೂಪದ ಸಂದರ್ಭಗಳಲ್ಲಿ ಅನುಮತಿಸಲಾದ ಗರ್ಭಪಾತಗಳನ್ನು ಪಡೆಯುವ ಮೊದಲು ಭ್ರೂಣದ ಹೃದಯ ಬಡಿತವನ್ನು ಕೇಳಲು ಮಹಿಳೆಯರನ್ನು ಒತ್ತಾಯಿಸಲು ಪ್ರಸ್ತಾಪಿಸಿದ್ದಾರೆ. ಹಲವಾರು ಹೊಸ ಮಸೂದೆಗಳು ಅತ್ಯಾಚಾರ, ಲೈಂಗಿಕ ನಿಂದನೆ ಮತ್ತು ಕೌಟುಂಬಿಕ ಹಿಂಸಾಚಾರವನ್ನು ಒಳಗೊಂಡಿರುವ ‘ಸುಳ್ಳು ಆರೋಪ’ಗಳನ್ನು ಶಿಕ್ಷಿಸುತ್ತವೆ. ಈ ಪ್ರಸ್ತಾವಗಳು ಪ್ರಕರಣವನ್ನು ವಜಾಗೊಳಿಸಿದ ನಂತರ ಆರೋಪಿಯು ದೂರುದಾರರನ್ನು ಹಿಂಬಾಲಿಸಲು ಅವಕಾಶ ನೀಡುತ್ತದೆ ಮತ್ತು ಆದ್ದರಿಂದ ಅವರನ್ನು ಬೆದರಿಸಬಹುದು; ವರ್ಗ ಪರಿಭಾಷೆಯಲ್ಲಿ, ಈ ಅಪಾಯ-ಬೆದರಿಕೆಗಳು ವಕೀಲರು, ಹಣ ಮತ್ತು ಸಾಂಸ್ಥಿಕ ರಕ್ಷಣೆಯ ಕೊರತೆಯಿರುವ ಕಾರ್ಮಿಕ-ವರ್ಗ, ಗ್ರಾಮೀಣ, ವಲಸಿಗ ಮತ್ತು ಸ್ಥಳೀಯ ಮಹಿಳೆಯರ ಮೇಲೆ ಕಠಿಣವಾಗಿ ಬೀಳುತ್ತದೆ. ನ್ಯಾಯದ ಅವಕಾಶವನ್ನು ಅಪಾಯಕಾರಿಯಾಗಿಸಿ, ಪಿತೃಪ್ರಭುತ್ವದ ನಿಯಂತ್ರಣವನ್ನು ಬಲಪಡಿಸುತ್ತದೆ.

ಇದನ್ನೂ ಓದಿ :ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ
ನರಮೇಧಕ್ಕೆ ಕುರುಡು
ಉಗ್ರ ಬಲಪಂಥೀಯರು ಇಂದು ಕಾನೂನುಬಾಹಿರ ಹಿಂಸಾಚಾರವನ್ನು ತಮ್ಮ ವಿಶೇಷತೆಯಾಗಿ ನೋಡುವುದು ಮಾತ್ರವಲ್ಲ, ಅಮೆರಿಕದ ಮೂಲನಿವಾಸಿಗಳ ಸ್ಥಳೀಯ ಜನರ ವಿರುದ್ಧ ವಸಾಹತುಶಾಹಿಗಳ ವಿಜಯದ ಇತಿಹಾಸವನ್ನು ಮತ್ತು ಪಾಶ್ಚಿಮಾತ್ಯ ನಾಗರಿಕತೆಯನ್ನು ವೈಭವೀಕರಿಸುತ್ತದೆ. ನರಮೇಧಕ್ಕೆ ಕುರುಡುತನವು ಸಹ ಈ ಉಗ್ರ ಬಲಪಂಥೀಯರ ಅಭ್ಯಾಸವಾಗಿದೆ. ಹಾಗಾಗಿಯೇ ಅದು ಯು.ಎಸ್ ಜತೆ ನಿಕಟ ಸಂಬಂಧಗಳ ಬಗ್ಗೆ ಅದರ ಹಿತಾಸಕ್ತಿಗೆ ಇಡೀ ಅಮೆರಿಕದ ಖಂಡವನ್ನು ಅಧೀನಗೊಳಿಸಲು ಪ್ರಯತ್ನಿಸುವ ನೀತಿಯ ಬಗ್ಗೆ ಯಾವುದೇ ಸಂಕೋಚವನ್ನು ಹೊಂದಿಲ್ಲ. ತನ್ನೊಂದಿಗೆ ನಿಕಟ ಸಂಬಂಧಗಳ ಹಾದಿಯು ಇಸ್ರೇಲಿನ ಮೂಲಕ ಹೋಗಬೇಕು ಎಂದು ವಾಷಿಂಗ್ಟನ್ ಹೇಳಿದಾಗ, ಪ್ಯಾಲೆಸ್ಟೀನಿಯನ್ನರ ನಡೆಯುತ್ತಿರುವ ನರಮೇಧದ ಹೊರತಾಗಿಯೂ ಬಲಪಂಥೀಯ ಸರ್ಕಾರಗಳು ಇಸ್ರೇಲ್ – ನೊಂದಿಗೆ ನಿಕಟ ಸಂಬಂಧವನ್ನು ಬೆಸೆಯಲು ಆತುರಪಡುತ್ತವೆ.
ಜೂನ್ 2025 ರಲ್ಲಿ, ಇಸ್ರೇಲಿನಲ್ಲಿ ಅರ್ಜೆಂಟೀನಾದ ರಾಯಭಾರಿ, ರಬ್ಬಿ ಶಿಮೊನ್ ಆಕ್ಸೆಲ್ ವಾಹ್ನಿಶ್, ಲ್ಯಾಟಿನ್ ಅಮೇರಿಕನ್ ದೇಶಗಳನ್ನು ಇಸ್ರೇಲಿನೊಂದಿಗೆ ನಿಕಟ ಸಂಬಂಧಕ್ಕೆ ತರಲು ವಿನ್ಯಾಸಗೊಳಿಸಲಾದ ಐಸಾಕ್ ಒಪ್ಪಂದಗಳು ಕುರಿತು ಘೋಷಣೆಯನ್ನು ಮಾಡಿದರು. ನಿಜವಾದ ಐಸಾಕ್ ಒಪ್ಪಂದಗಳನ್ನು ಔಪಚಾರಿಕವಾಗಿ ಏಪ್ರಿಲ್ 2026 ರಲ್ಲಿ ಜೆರುಸಲೆಂ ನಲ್ಲಿ ಸ್ಥಾಪಿಸಲಾಗಿದ್ದು, ಈ ಪ್ರಕಟಣೆಯು ಗಾಗಾ ನರಮೇಧದ ಸುಮಾರು ಎರಡು ವರ್ಷಗಳ ನಂತರ ಬಂದಿತು. ಅರ್ಜೆಂಟೀನಾ ಮತ್ತು ಇಸ್ರೇಲ್ ಮಾತ್ರ ಐಸಾಕ್ ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಮೇ 2026ರಲ್ಲಿ, ಬ್ಯೂನಸ್ ಐರಿಸ್ ನಲ್ಲಿ ನಡೆದ ಸಮ್ಮೇಳನವು ಬೊಲಿವಿಯಾ, ಬ್ರೆಜಿಲ್, ಚಿಲಿ, ಕೊಲಂಬಿಯಾ, ಕೋಸ್ಟರಿಕಾ, ಈಕ್ವೆಡಾರ್, ಎಲ್ ಸಾಲ್ವಡಾರ್, ಗ್ವಾಟೆಮಾಲಾ, ಹೊಂಡುರಾಸ್, ಪನಾಮ, ಪರಾಗ್ವೆ ಮತ್ತು ಉರುಗ್ವೆಯ ಅಧಿಕಾರಿಗಳನ್ನು ಒಟ್ಟುಗೂಡಿಸಿತು. ಅಲ್ಲಿ ಐಸಾಕ್ ಒಪ್ಪಂದಗಳ ವಿಸ್ತರಣೆಗೆ ಕರೆ ನೀಡುವ ಹೇಳಿಕೆಯನ್ನು ಬಿಡುಗಡೆ ಮಾಡಲಾಯಿತು. ಇಸ್ರೇಲ್ ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಬೊಲಿವಿಯಾ (2025) ಮತ್ತು ಕೊಲಂಬಿಯಾ (2026) ಪುನಃಸ್ಥಾಪಿಸಿವೆ, ವೆನೆಜುವೆಲಾ (2026) ರಾಯಭಾರ ಸೇವೆಗಳನ್ನು ನವೀಕರಿಸಿದೆ.
ಅನಭಿವೃದ್ಧಿಯಲ್ಲಿ ಹೆಚ್ಚಳ
ಅಧ್ಯಕ್ಷೀಯ ಅರಮನೆಗಳ ಒಳಗೆ ಮತ್ತು ಶಾಸಕಾಂಗಗಳಲ್ಲಿ, ಬಲಪಂಥೀಯ ಸರ್ಕಾರಗಳು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು US ಖಜಾನೆ ಇಲಾಖೆಗಳು ನಿರ್ದೇಶಿಸುವ ಆರ್ಥಿಕ ಕಾರ್ಯಸೂಚಿಗಳನ್ನು ಜಾರಿ ಮಾಡುತ್ತವೆ. ಈ ಕಾರ್ಯಸೂಚಿಗಳು ಸರಳವಾಗಿವೆ – ಪಾಶ್ಚಿಮಾತ್ಯ ಮೂಲದ ಬಹುರಾಷ್ಟ್ರೀಯ ಸಂಸ್ಥೆಗಳು ಲ್ಯಾಟಿನ್ ಅಮೆರಿಕದಿಂದ ಕಚ್ಚಾ ಸಾಮಗ್ರಿಗಳಿಗೆ ಸುಲಭ ಪ್ರವೇಶವನ್ನು ಹೊಂದಿವೆ ಎಂದು ಖಚಿತಪಡಿಸಿಕೊಳ್ಳಿ, ಈ ನಿಗಮಗಳ ಹೂಡಿಕೆಗಳನ್ನು ರಕ್ಷಿಸಿ, ಸಾಮಾಜಿಕ ಸಂಪತ್ತಿನ ದೋಚುವಿಕೆಯಲ್ಲಿ ಗುತ್ತೇದಾರಿ ಕುಟುಂಬಗಳು ಭಾಗವಹಿಸಲು ಅವಕಾಶ ಮಾಡಿಕೊಡಿ ಮತ್ತು ಬಹುಸಂಖ್ಯಾತ ಜನರನ್ನು ತಕ್ಷಣದ ‘ಮಿತವ್ಯಯ’ ಮತ್ತು ಭವಿಷ್ಯದ ಸಂಪತ್ತಿನ ಭರವಸೆಯೊಂದಿಗೆ ಹದ್ದುಬಸ್ತಿನಲ್ಲಿಡಿ.
ಉಗ್ರ ಬಲಪಂಥೀಯ ಆಡಳಿತದಲ್ಲಿರುವ ಹೆಚ್ಚಿನ ದೇಶಗಳು (ಅರ್ಜೆಂಟೀನಾ, ಚಿಲಿ, ಈಕ್ವೆಡಾರ್, ಎಲ್ ಸಾಲ್ವಡಾರ್, ಹೊಂಡುರಾಸ್ ಮತ್ತು ಪರಾಗ್ವೆ) IMF ಕಾರ್ಯಸೂಚಿಯ ಅಡಿಯಲ್ಲಿವೆ, IMF ನ ಭವಿಷ್ಯದ ಕಾರ್ಯಕ್ರಮಗಳಿಗಾಗಿ ಇತರ ದೇಶಗಳು ಕಾಯುತ್ತಿವೆ. ಮುಖ್ಯವಾದುದು IMF ಕಾರ್ಯಕ್ರಮವಲ್ಲ, ಆದರೆ ಯು.ಎಸ್ ಹೂಡಿಕೆಗಳನ್ನು ಯಾವುದೇ ನಿಬಂಧನೆಗಳಿಗೆ ಒಳಪಡಿಸುವುದುನ್ನು ಖಚಿತಪಡಿಸಿಕೊಳ್ಳಲು IMF ನ ಹೊಸ ಒತ್ತಡ/ಒತ್ತು. ಅರ್ಜೆಂಟೀನಾದ ದೊಡ್ಡ ಹೂಡಿಕೆ ಪ್ರೋತ್ಸಾಹಕ ಆಡಳಿತ (RIGI), 2024 ರಲ್ಲಿ ಕಾನೂನಾಗಿ ಅಂಗೀಕರಿಸಲ್ಪಟ್ಟಿದೆ, ಬೊಲಿವಿಯಾದಂತಹ IMF ಸಾಲ ಕಾರ್ಯಕ್ರಮದೊಂದಿಗೆ ಲ್ಯಾಟಿನ್ ಅಮೇರಿಕಾ – ನಾದ್ಯಂತ ಅಂಗೀಕರಿಸಬೇಕಾದ ಕಾನೂನುಗಳಿಗೆ ಚೌಕಟ್ಟನ್ನು ಒದಗಿಸುತ್ತದೆ. ಹೆಚ್ಚಾಗಿ ವಿದೇಶಿ ಹೂಡಿಕೆಗಳ ರಕ್ಷಣೆ ಈ ಕಾನೂನುಗಳ ಅಂಗೀಕಾರದ ಮೇಲೆ ಅವಲಂಬಿತವಾಗಿದೆ. RIGI, ದೀರ್ಘಾವಧಿಯ ಚೌಕಾಶಿ, ನಿಗಮಗಳಿಗೆ 30 ವರ್ಷಗಳವರೆಗೆ ವ್ಯಾಪಕವಾದ ತೆರಿಗೆ, ಕಸ್ಟಮ್ಸ್, ಕರೆನ್ಸಿ ಮತ್ತು ನಿಬಂಧನನೆ-ರಹಿತತೆಗಳ ಸವಲತ್ತುಗಳನ್ನು ನೀಡುವ ಮೂಲಕ ದೊಡ್ಡ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುತ್ತದೆ. ಇದು ಲಾಭವನ್ನು ಖಾಸಗೀಕರಣಗೊಳಿಸುತ್ತದೆ; ಸಾರ್ವಜನಿಕ ಆದಾಯವನ್ನು ದುರ್ಬಲಗೊಳಿಸುತ್ತದೆ ಮತ್ತು ಬಂಡವಾಳವನ್ನು ನಿಯಂತ್ರಿಸುವ ಭವಿಷ್ಯದ ಸರ್ಕಾರಗಳ ಸಾಮರ್ಥ್ಯವನ್ನು ಸೀಮಿತಗೊಳಿಸುತ್ತಲೇ, ಪರಿಸರ ಮತ್ತು ಆರ್ಥಿಕ ಅಪಾಯಗಳನ್ನು ಸಾಮಾಜಿಕಗೊಳಿಸುತ್ತದೆ. ಕಾರ್ಮಿಕರು ಮತ್ತು ನಾಗರಿಕರು ಸ್ಥಿರ ಉದ್ಯೋಗ, ಉತ್ತಮ ವೇತನ, ಸ್ಥಳೀಯ ಉತ್ಪಾದನೆ ಅಥವಾ ಸಾರ್ವಜನಿಕ ಪ್ರಯೋಜನಗಳ ಸಮಾನವಾದ ಬಲವಾದ ಖಾತರಿಗಳನ್ನು ಪಡೆಯುವುದಿಲ್ಲ, ಆದರೆ ಬಹುರಾಷ್ಟ್ರೀಯ ಹೂಡಿಕೆದಾರರು ಅರ್ಜೆಂಟೀನಾದ ಸಂಪನ್ಮೂಲಗಳನ್ನು ಹೊರತೆಗೆಯಲು ಮತ್ತು ಲಾಭವನ್ನು ವಿದೇಶಕ್ಕೆ ಸಾಗಿಸಲು ಹೆಚ್ಚಿನ ಶಕ್ತಿಯನ್ನು ಪಡೆಯುತ್ತಾರೆ.
ಈ ಕ್ರೂರ ನಾಯಕತ್ವದ ಮರಳುವಿಕೆಯು ಲ್ಯಾಟಿನ್ ಅಮೆರಿಕದ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ; ಆದರೆ ಇದು ಜನರನ್ನು ಪರಸ್ಪರ ವಿರುದ್ಧವಾಗಿ ತಿರುಗಿಸುವ ಮೂಲಕ ಸಾಮಾಜಿಕ ಸಂಬಂಧಗಳನ್ನು ವಿಷಪೂರಿತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಆದ್ದರಿಂದ ಅವರ ಸ್ವಂತ ಸಮಾಜವನ್ನು ನಿರ್ಮಿಸುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಅವರ ಗುರಿ ಸಂಪೂರ್ಣ ಸಾಮಾಜಿಕ ಪರಿವರ್ತನೆಯಾಗಿದೆ, ಕೇವಲ ಈ ಅಥವಾ ಆ ಶಾಸನವನ್ನು ಜಾರಿಗೊಳಿಸುವುದಿಲ್ಲ. ಇದು ಕ್ಯೂಬನ್ ಕ್ರಾಂತಿಯ ಪ್ರಭಾವದಿಂದ ಮತ್ತು ಬೊಲಿವೇರಿಯನ್ ಪ್ರಕ್ರಿಯೆಯ ಮೂಲಕ ಗಳಿಸಿದ ಸಾಧನೆಗಳ ವಿರುದ್ಧ ತೀವ್ರವಾದ ಪ್ರತಿ-ಕ್ರಾಂತಿಯಾಗಿದೆ. ಅನಿಶ್ಚಿತತೆ ಮತ್ತು ಸಾಮಾಜಿಕ ಧರ್ಮನಿಷ್ಠೆಯ ಹೊಸ ರೂಪಗಳಿಂದ ವಿಭಜಿಸಲ್ಪಟ್ಟ ಜನಸಂಖ್ಯೆಯ ನಡುವೆ ವೈರುಧ್ಯಗಳು ನಿಸ್ಸಂದೇಹವಾಗಿ ಹೊರಹೊಮ್ಮುತ್ತವೆ. ಬಹುಶಃ ಅದು ನಿಧಾನವಾಗಿ ಆಗಬಹುದು.
***************
ಇದನ್ನೂ ನೋಡಿ :ಪಾರ್ಕಿಂಗ್ ಪಾಲಿಸಿ: ಸಮಸ್ಯೆಗೆ ಪರಿಹಾರವೇ, ಸರ್ಕಾರಕ್ಕೆ ಆದಾಯವೇ? ಬೆಂಗಳೂರಿನ ಪಾರ್ಕಿಂಗ್ ಕಥೆ ಏನು? |
