ಹೈದರಾಬಾದ್‌ ಕರ್ನಾಟಕ ವಿಲೀನಕ್ಕೆ 78 ವರ್ಷ; ಬದಲಾಯಿತೇ ಜನರ ಬದುಕು?

ನಿಜಾಮಶಾಹಿಯ ಬರ್ಬರ ಪಾಳೆಯಗಾರಿಕೆಯ ವಿರುದ್ಧದ ಹೋರಾಟದಿಂದ ಒಕ್ಕೂಟ ವ್ಯವಸ್ಥೆಗೆ ವಿಲೀನಗೊಂಡು 78 ವರ್ಷ. 371(ಜೆ) ಜಾರಿಯಾಗಿ 13 ವರ್ಷ, ಕೆಕೆಆರ್‌ಡಿಬಿಗೆ ₹24,778 ಕೋಟಿ ಅನುದಾನ. ಆದರೂ ಹೈದ್ರಾಬಾದ್‌ ಕರ್ನಾಟಕದ ಪ್ರಾದೇಶಿಕ ಅಸಮಾನತೆ ಏಕೆ ಮುಂದುವರಿದಿದೆ? ಹೋರಾಟದ ಆಶಯಕ್ಕೆ ತಕ್ಕ ಅಭಿವೃದ್ಧಿ ಈ ನೆಲಕ್ಕೆ ಸಿಕ್ಕಿದೆಯೇ? ಈ ಲೇಖನ ಓದಿ….
ಗುರುರಾಜ ದೇಸಾಯಿ

ಸೆಪ್ಟೆಂಬರ್‌ 17 ಹೈದರಾಬಾದ್‌ ಸಂಸ್ಥಾನ ಭಾರತೀಯ ಒಕ್ಕೂಟಕ್ಕೆ ವಿಲೀನಗೊಂಡ ದಿನ. ಇಂದಿನ ಕಲ್ಯಾಣ ಕರ್ನಾಟಕದ ಬಹುಭಾಗವೂ ಅಂದಿನ ಹೈದರಾಬಾದ್‌ ಸಂಸ್ಥಾನದ ಭಾಗವಾಗಿತ್ತು. ಆದರೆ ಸೆಪ್ಟೆಂಬರ್‌ 17ರ ಇತಿಹಾಸವನ್ನು ಕೇವಲ ‘ವಿಮೋಚನೆ’ ಎಂಬ ಒಂದು ಪದದೊಳಗೆ ಬಂಧಿಸಿದರೆ, ನಿಜಾಮಶಾಹಿಯ ಬರ್ಬರ ಪಾಳೆಯಗಾರಿಕೆಯ ವಿರುದ್ಧ ವರ್ಷಗಳ ಕಾಲ ನಡೆದ ಜನರ ಹೋರಾಟ, ರೈತರ ಪ್ರತಿರೋಧ, ಜಮೀನ್ದಾರಿ ಶೋಷಣೆಯ ವಿರುದ್ಧದ ಸಂಘರ್ಷ ಮತ್ತು ಸಾಮಾಜಿಕ ನ್ಯಾಯದ ಆಶಯಗಳು ಮರೆಯಾಗುತ್ತವೆ. ಹೀಗಾಗಿ ಈ ದಿನವನ್ನು ಹೈದರಾಬಾದ್‌ ಕರ್ನಾಟಕ ವಿಲೀನ ಮತ್ತು ನಿಜಾಮಶಾಹಿಯ ಬರ್ಬರ ಪಾಳೆಯಗಾರಿಕೆಯ ವಿರುದ್ಧ ನಡೆದ ಹೋರಾಟದ ದಿನವಾಗಿ ನೆನಪಿಸಿಕೊಳ್ಳುವುದು ಹೆಚ್ಚು ಅರ್ಥಪೂರ್ಣ. ಹೈದರಾಬಾದ್‌

ನಿಜಾಮನ ಪಾಳೆಯಗಾರಿಕೆಯ ವಿರುದ್ಧ ಜನರ ಪ್ರತಿರೋಧ

ನಿಜಾಮನ ನಿರಂಕುಶ ಆಡಳಿತದ ವಿರುದ್ಧ ಜನರು ವಿವಿಧ ಧಾರೆಗಳಲ್ಲಿ ಹೋರಾಡಿದರು. ಸ್ಥಳೀಯ ಹೋರಾಟಗಾರರು ಸೇರಿದಂತೆ ಹಲವು ಸಂಘಟನೆಗಳು ಪ್ರತಿರೋಧ ನಡೆಸಿದವು. ಆದರೆ ಜಮೀನ್ದಾರಿ ಶೋಷಣೆ, ಬಲವಂತದ ದುಡಿಮೆ ಮತ್ತು ನಿಜಾಮಶಾಹಿಯ ದಮನದ ವಿರುದ್ಧ ನಡೆದ ರೈತ ಹೋರಾಟದಲ್ಲಿ ಆಂಧ್ರ ಮಹಾಸಭಾ ಮತ್ತು ಕಮ್ಯುನಿಸ್ಟ್‌ ಪಕ್ಷದ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ವಿಶೇಷವಾಗಿ ತೆಲಂಗಾಣದಲ್ಲಿ ರೈತರು ಸಂಘಟಿತರಾಗಿ ಜಮೀನ್ದಾರರು ಮತ್ತು ನಿಜಾಮನ ಆಡಳಿತದ ವಿರುದ್ಧ ಹೋರಾಟ ನಡೆಸಿದರು. ರಜಾಕಾರರ ದಮನವನ್ನು ಎದುರಿಸಲು ಈ ಹೋರಾಟ ಹಲವು ಕಡೆ ಸಶಸ್ತ್ರ ಗೆರಿಲ್ಲಾ ಪ್ರತಿರೋಧದ ರೂಪವನ್ನೂ ಪಡೆದುಕೊಂಡಿತು.

ಹೀಗಾಗಿ 1948ರ ಸೆಪ್ಟೆಂಬರ್‌ 17 ಕೇವಲ ಅಧಿಕಾರ ಬದಲಾವಣೆಯ ದಿನವಲ್ಲ; ನಿಜಾಮಶಾಹಿಯ ಬರ್ಬರ ಪಾಳೆಯಗಾರಿಕೆಯ ವಿರುದ್ಧ ಜನರು ನಡೆಸಿದ ದೀರ್ಘ ಪ್ರತಿರೋಧದ ಒಂದು ಐತಿಹಾಸಿಕ ತಿರುವು. ಈ ಹೋರಾಟದ ಇತಿಹಾಸವನ್ನು ಅರಿಯಲು ಪಿ. ಸುಂದರಯ್ಯ ಅವರ ‘ತೆಲಂಗಾಣ ಹೋರಾಟ’ ಕೃತಿ ಪ್ರಮುಖ ಆಕರವಾಗಿದೆ.

ವಿಲೀನವಾಯಿತು ಸಂಸ್ಥಾನ; ಬದಲಾಗಿತೇ ಜನರ ಬದುಕು?

ನಿಜಾಮನ ಆಡಳಿತ ಅಂತ್ಯಗೊಂಡಿತು. ಹೈದರಾಬಾದ್‌ ಸಂಸ್ಥಾನ ಭಾರತೀಯ ಒಕ್ಕೂಟದ ಭಾಗವಾಯಿತು. ನಂತರ ಭಾಷಾವಾರು ಪುನರ್‌ವಿಂಗಡಣೆಯ ಮೂಲಕ ಈ ಪ್ರದೇಶ ಕರ್ನಾಟಕದ ಭಾಗವಾಯಿತು. ದಶಕಗಳು ಉರುಳಿದವು. ಸರ್ಕಾರಗಳು ಬದಲಾದವು. ರಾಜಕೀಯ ನಾಯಕರು ಬದಲಾದರು. ಆದರೆ ಶಿಕ್ಷಣ, ಉದ್ಯೋಗ, ನೀರಾವರಿ, ಆರೋಗ್ಯ, ಕೈಗಾರಿಕೆ, ಕುಡಿಯುವ ನೀರು ಮತ್ತು ಗ್ರಾಮೀಣ ಮೂಲಸೌಕರ್ಯದ ಅಂತರ ಸಂಪೂರ್ಣವಾಗಿ ಮಾಯವಾಗಲಿಲ್ಲ.

ನಿಜಾಮಶಾಹಿಯಿಂದ ಪ್ರದೇಶ ರಾಜಕೀಯವಾಗಿ ವಿಲೀನಗೊಂಡಿತು. ಆದರೆ ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿತದಿಂದ ಈ ಪ್ರದೇಶ ಯಾವಾಗ ವಿಮೋಚನೆಗೊಳ್ಳುತ್ತದೆ? ಇದೇ ಹೈದರಾಬಾದ್‌ ಕರ್ನಾಟಕದ ಇಂದಿನ ಮೂಲ ಪ್ರಶ್ನೆ. ಹೈದರಾಬಾದ್‌

ಹೆಸರು ಬದಲಾಯಿತು; ‘ಕಲ್ಯಾಣ’ ಎಲ್ಲಿದೆ?

ಹೈದರಾಬಾದ್‌ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಕರೆಯಲಾಯಿತು. ಆದರೆ ಹೆಸರು ಬದಲಾವಣೆಯು ಮಾತ್ರ ಅಭಿವೃದ್ಧಿಯ ಮಾನದಂಡವಾಗಲು ಸಾಧ್ಯವಿಲ್ಲ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಯುವಕರಿಗೆ ಉದ್ಯೋಗ, ರೈತನಿಗೆ ನೀರು ಮತ್ತು ನ್ಯಾಯಯುತ ಬೆಲೆ, ಬಡವರಿಗೆ ವಸತಿ, ಗ್ರಾಮಗಳಿಗೆ ರಸ್ತೆ ಮತ್ತು ಸಾರಿಗೆ, ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಮತ್ತು ಸುರಕ್ಷಿತ ಕುಡಿಯುವ ನೀರು ದೊರೆತಾಗ ಮಾತ್ರ ‘ಕಲ್ಯಾಣ’ ಎಂಬ ಪದಕ್ಕೆ ಅರ್ಥ ಬರುತ್ತದೆ.

ಈ ಭಾಗದಲ್ಲಿ 41 ತಾಲೂಕುಗಳು, 42 ವಿಧಾನಸಭಾ ಕ್ಷೇತ್ರಗಳಿವೆ. ಪ್ರತಿ ಚುನಾವಣೆಯಲ್ಲೂ ಗೆದ್ದವರೇ ಗುಲ್ಲುತ್ತಲೇ ಬಂದಿದ್ದಾರೆ.  ಒಮ್ಮೊಮ್ಮೆ ಹೊಸಬರೂ ಆಯ್ಕೆಯಾಗುತ್ತಾರೆ. ಪ್ರಭಾವಿ ರಾಜಕೀಯ ನಾಯಕತ್ವವೂ ಈ ಪ್ರದೇಶದಿಂದ ಬಂದಿದೆ. ಆದರೂ ತಾಲೂಕುವಾರು ಅಭಿವೃದ್ಧಿಯ ಅಂತರ ಏಕೆ ಉಳಿದಿದೆ? ಕೆಲವು ನಗರಗಳು ಮತ್ತು ಕೇಂದ್ರಗಳು ಬೆಳೆಯುತ್ತಿರುವಾಗ, ಹಲವು ತಾಲೂಕುಗಳು ಮೂಲಭೂತ ಸೌಲಭ್ಯಗಳಿಗಾಗಿ ಇನ್ನೂ ಕಾಯುತ್ತಿವೆ.

ಹೈದ್ರಾಬಾದ್‌ ಕರ್ನಾಟಕದ (ಕಲ್ಯಾಣ ಕರ್ನಾಟಕ) ಕೇಂದ್ರ ಸ್ಥಾನ ಕಲಬುರಗಿ ಮೇಲ್ನೋಟಕ್ಕೆ ಅಭಿವೃದ್ಧಿಯ ಗುರುತುಗಳನ್ನು ಪಡೆದಿರಬಹುದು. ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಈ ಭಾಗದ ಪ್ರಭಾವಿ ನಾಯಕರು ಅಧಿಕಾರದಲ್ಲಿದ್ದ ಕಾಲವೂ ಇದೆ. ಆದರೆ ಒಂದು ನಗರ ಅಥವಾ ಒಂದು ಕ್ಷೇತ್ರದ ಬೆಳವಣಿಗೆಯನ್ನು ಇಡೀ ಪ್ರದೇಶದ ಅಭಿವೃದ್ಧಿಯ ಮಾನದಂಡವನ್ನಾಗಿ ಪರಿಗಣಿಸಲಾಗದು.

ದೇವದುರ್ಗ, ಶಹಾಪುರ, ಸುರಪುರ, ಬೀದರ್‌, ಬಸವಕಲ್ಯಾಣ, ಔರಾದ್‌, ಕುಷ್ಟಗಿ, ಯಲಬುರ್ಗಾ, ಕುಕನೂರು, ಆಳಂದ, ಜೇವರ್ಗಿ ಸೇರಿದಂತೆ ಹಿಂದುಳಿದ ತಾಲೂಕುಗಳ ಸ್ಥಿತಿಯನ್ನು ನೋಡಿದಾಗ ಪ್ರಾದೇಶಿಕ ಅಭಿವೃದ್ಧಿಯ ಚಿತ್ರ ಒಂದೇ ರೀತಿಯಲ್ಲಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಕೈಗೆತ್ತಿಕೊಂಡ ಕಾಮಗಾರಿಗಳು ಅರ್ಧಕ್ಕೆ ನಿಲ್ಲುವುದು, ವರ್ಷಗಟ್ಟಲೆ ಯೋಜನೆಗಳು ಪೂರ್ಣಗೊಳ್ಳದಿರುವುದು, ರಸ್ತೆಯ ತುಂಬೆಲ್ಲ ಹೊಂಡಗಳು, ರೈತರಿಗೆ ಸಮರ್ಪಕವಾಗಿ ಸಿಗದ ಸಬ್ಸಿಡಿ ಸೌಲಭ್ಯಗಳು ಇವುಗಳನ್ನೆಲ್ಲ ಗಮನಿಸಿದರೆ ಕಲ್ಯಾಣ ಯಾವಾಗ ಎಂಬ ಪ್ರಶ್ನೆ ಹುಟ್ಟುವುದು ಸಹಜ.

371(ಜೆ): ಸ್ಥಾನಮಾನ ಸಿಕ್ಕಿತು; ಪೂರ್ಣ ಹಕ್ಕು ಸಿಕ್ಕಿತೇ?

ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ನಡೆದ ದೀರ್ಘ ಹೋರಾಟಗಳ ಫಲವಾಗಿ ಸಂವಿಧಾನದ 371(ಜೆ) ಮಹತ್ವದ ಸ್ಥಾನಮಾನ ಪಡೆದಿದೆ. ಇದು ಕೇವಲ ವಿಶೇಷ ಮೀಸಲಾತಿಯ ವ್ಯವಸ್ಥೆಯಲ್ಲ. ಅಭಿವೃದ್ಧಿ ಮಂಡಳಿ, ಅಭಿವೃದ್ಧಿ ವೆಚ್ಚದಲ್ಲಿ ಸಮಾನ ಅವಕಾಶ, ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಸ್ಥಳೀಯರಿಗೆ ವಿಶೇಷ ಅವಕಾಶ ಕಲ್ಪಿಸುವ ಸಂವಿಧಾನಾತ್ಮಕ ವ್ಯವಸ್ಥೆಯಾಗಿದೆ.

371(ಜೆ) ಜಾರಿಗೆ ಬಂದು 13 ವರ್ಷಗಳು ಕಳೆದಿವೆ. ಇದರಿಂದ ಸಣ್ಣ ಪ್ರಮಾಣದ ಲಾಭವಾಗಿದೆ. ಆದರೆ ಸಿಗಬೇಕಾದಷ್ಟು ಹಕ್ಕು ಇನ್ನೂ ಸಿಕ್ಕಿಲ್ಲ. ಒಂದರ್ಥದಲ್ಲಿ ಕನ್ನಡಿಯೊಳಗಿನ ಗಂಟಾಗಿದೆ. ಸ್ಥಳೀಯ ಕೇಡರ್‌ನಲ್ಲಿ ಸಾವಿರಾರು ಹುದ್ದೆಗಳು ಖಾಲಿ ಉಳಿದಿರುವುದು, ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ, ಮೀಸಲಾತಿಯ ಅನುಷ್ಠಾನದಲ್ಲಿನ ತೊಡಕುಗಳು ಮುಂತಾದ ಪ್ರಶ್ನೆಗಳು ಇನ್ನೂ ಚರ್ಚೆಯಲ್ಲಿವೆ. ಲಭ್ಯ ಸರ್ಕಾರಿ ಅಂಕಿಅಂಶಗಳ ಪ್ರಕಾರ 2024-25ರಲ್ಲಿ ಸ್ಥಳೀಯ ಕೇಡರ್‌ನ 1,05,168 ಹುದ್ದೆಗಳ ಪೈಕಿ 74,179 ಹುದ್ದೆಗಳು ಭರ್ತಿಯಾಗಿದ್ದು, 30,989 ಖಾಲಿ ಉಳಿದಿದ್ದವು. ರಾಜ್ಯ ಕೇಡರ್‌ನ 8% ಮೀಸಲಾತಿಗೆ ಸಂಬಂಧಿಸಿದ 19,864 ಹುದ್ದೆಗಳ ಪೈಕಿ 13,390 ಭರ್ತಿಯಾಗಿದ್ದು, 6,474 ಖಾಲಿ ಉಳಿದಿವೆ.

371(ಜೆ) ಸಮರ್ಪಕ ಅನುಷ್ಠಾನಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ, ಎಸ್‌ಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತಿವೆ. ಸಂವಾದ, ವಿಚಾರ ಸಂಕಿರಣ ಮತ್ತು ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಪ್ರಾದೇಶಿಕ ಅಸಮಾನತೆ ಮತ್ತು ಸಂವಿಧಾನಾತ್ಮಕ ಹಕ್ಕುಗಳ ಪ್ರಶ್ನೆಯನ್ನು ಜನರ ಮುಂದೆ ಇಡಲಾಗುತ್ತಿದೆ. ಹೈದರಾಬಾದ್‌

₹24,778 ಕೋಟಿ ಅನುದಾನ; ಅಭಿವೃದ್ಧಿಯ ಲೆಕ್ಕ ಎಲ್ಲಿದೆ?

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ—ಇಂದಿನ ಕೆಕೆಆರ್‌ಡಿಬಿ—ರಚನೆಯಾಗಿ ಸುಮಾರು 13 ವರ್ಷಗಳಾಗಿವೆ. ಈ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನ ಬಂದಿದೆ.

ಕರ್ನಾಟಕ ಆರ್ಥಿಕ ಸಮೀಕ್ಷೆ 2025-26ರ ಪ್ರಕಾರ 2013-14ರಿಂದ 2025-26ರವರೆಗೆ ಕೆಕೆಆರ್‌ಡಿಬಿಗೆ ಒಟ್ಟು ₹24,778.33 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಅದರಲ್ಲಿ ₹17,728.80 ಕೋಟಿ ಬಿಡುಗಡೆಯಾಗಿದ್ದು, ₹15,803.92 ಕೋಟಿ ವೆಚ್ಚವಾಗಿದೆ. ಈ ಅವಧಿಯಲ್ಲಿ 43,397 ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, 35,013 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು KKRDB ವೆಬ್ಸೈಟ್‌ನಲ್ಲಿ ನೋಡಬಹುದು.

₹24,778 ಕೋಟಿ ಎಲ್ಲಿ ಖರ್ಚಾಯಿತು ಎಂಬುದು ಒಂದು ಪ್ರಶ್ನೆ. ಆದರೆ ಅದಕ್ಕಿಂತ ದೊಡ್ಡ ಪ್ರಶ್ನೆ ಆ ಹಣದ ಸಾಮಾಜಿಕ ಪರಿಣಾಮವೇನು? ಎಷ್ಟು ಶಾಶ್ವತ ಉದ್ಯೋಗ ಸೃಷ್ಟಿಯಾಯಿತು? ಎಷ್ಟು ರೈತರ ಆದಾಯ ಹೆಚ್ಚಾಯಿತು? ಎಷ್ಟು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ದೊರೆಯಿತು? ಎಷ್ಟು ಶಾಲೆಗಳ ಗುಣಮಟ್ಟ ಸುಧಾರಿಸಿತು? ಎಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೋದರು? ಎಷ್ಟು ಯುವಕರು ತಮ್ಮದೇ ಪ್ರದೇಶದಲ್ಲಿ ಉದ್ಯೋಗ ಪಡೆದರು? ಈ ಪ್ರಶ್ನೆಗಳಿಗೆ ಜಿಲ್ಲಾವಾರು, ತಾಲೂಕುವಾರು ಮತ್ತು ಕ್ಷೇತ್ರವಾರು ಉತ್ತರ ಸಿಗಬೇಕಾಗಿದೆ.

ಕೆಕೆಆರ್‌ಡಿಬಿಯ ಹಣದಿಂದ ರಸ್ತೆಗಳು, ಸೇತುವೆಗಳು, ಶಾಲೆಗಳು, ಆಸ್ಪತ್ರೆಗಳು, ಕುಡಿಯುವ ನೀರು ಸೇರಿದಂತೆ ಹಲವು ಮೂಲಸೌಕರ್ಯ ಕಾಮಗಾರಿಗಳು ನಡೆದಿವೆ ಎಂದು ಕೆಕೆಆರ್‌ಡಿಬಿ ಹೇಳುತ್ತದೆ. ಆದರೆ ಕಣ್ಣಿಗೆ ಕಾಣುವಂತಹ ಯಾವ ಅಭಿವೃದ್ಧಿಗಳು ಆಗಿಲ್ಲ ಎಂಬ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ.

13 ವರ್ಷದ ಹಣಕಾಸಿನ ಲೆಕ್ಕ

ವರ್ಷ ಹಂಚಿಕೆ ₹ ಕೋಟಿ ಬಿಡುಗಡೆ ₹ ಕೋಟಿ ವೆಚ್ಚ ₹ ಕೋಟಿ
2013-14 153.50 78.97 26.66
2014-15 600.00 300.00 322.59
2015-16 1,000.00 750.00 493.66
2016-17 1,000.00 750.00 960.02
2017-18 1,000.00 800.00 450.32
2018-19 1,000.00 1,000.00 1,193.54
2019-20 1,500.00 1,125.00 1,246.81
2020-21 1,131.86 1,031.86 925.81
2021-22 1,492.97 1,492.97 1,129.66
2022-23 2,900.00 2,900.00 1,584.31
2023-24 3,000.00 3,000.00 2,009.53
2024-25 5,000.00 3,000.00 3,144.93
2025-26* 5,000.00 1,500.00 2,315.47
ಒಟ್ಟು 24,778.33 17,728.80 15,803.92

ಪ್ರಾದೇಶಿಕ ಅಸಮಾನತೆಯ ಪ್ರಮಾಣವನ್ನು ಪ್ರತ್ಯೇಕವಾಗಿ ಅಳೆಯಬೇಕಾಗಿದೆ

ಕಲ್ಯಾಣ ಕರ್ನಾಟಕದಲ್ಲಿ ದೊಡ್ಡ ಆಸ್ಪತ್ರೆಗಳು, ವೈದ್ಯಕೀಯ ಸಂಸ್ಥೆಗಳು ಮತ್ತು ಆರೋಗ್ಯ ಮೂಲಸೌಕರ್ಯ ಯೋಜನೆಗಳು ಬಂದಿವೆ. ಆದರೆ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿದ್ದಾರೆಯೇ? ಔಷಧಿ ದೊರೆಯುತ್ತದೆಯೇ? ಗರ್ಭಿಣಿಯರಿಗೆ ಸಮಯಕ್ಕೆ ಚಿಕಿತ್ಸೆ ಸಿಗುತ್ತಿದೆಯೇ? ಮಕ್ಕಳ ಅಪೌಷ್ಟಿಕತೆ ಎಷ್ಟಿದೆ? ಎಂಬ ಪ್ರಶ್ನೆಗಳು ಉಳಿದಿವೆ.

ಕುಡಿಯುವ ನೀರಿನ ಪರಿಸ್ಥಿತಿಯೂ ಇದೇ ರೀತಿಯ ಪ್ರಶ್ನೆ ಎತ್ತುತ್ತದೆ. ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಅನುದಾನ ಇರುವ ಪ್ರದೇಶದಲ್ಲಿಯೇ ಬೇಸಿಗೆಯಲ್ಲಿ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾದರೆ, ಯೋಜನೆ ಮತ್ತು ಅನುಷ್ಠಾನದ ಆದ್ಯತೆಗಳನ್ನು ಮರುಪರಿಶೀಲಿಸಬೇಕಾಗುತ್ತದೆ. ಹೈದರಾಬಾದ್‌

ವಿಶೇಷ ಪ್ಯಾಕೇಜ್‌ಗಿಂತ ಶಾಶ್ವತ ಅಭಿವೃದ್ಧಿ ರೂಪರೇಷೆ ಬೇಕು

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸುವುದು ಹೊಸದಲ್ಲ. ಮಂಡಳಿ ರಚಿಸುವುದೂ ಹೊಸದಲ್ಲ. 371(ಜೆ) ಜಾರಿಯೂ ಆಗಿದೆ. ಈಗ ಬೇಕಾಗಿರುವುದು ಮುಂದಿನ ಹತ್ತು-ಹದಿನೈದು ವರ್ಷಗಳ ಸ್ಪಷ್ಟ, ಅಳತೆ ಮಾಡಬಹುದಾದ ಅಭಿವೃದ್ಧಿ ರೂಪರೇಷೆ.

ಪ್ರತಿ ತಾಲೂಕಿಗೆ ಅಗತ್ಯವಾದ ಶಾಲೆಗಳ ಸಂಖ್ಯೆ ಎಷ್ಟು? ಎಷ್ಟು ಹೊಸ ಕಾಲೇಜುಗಳು ಬೇಕು? ಎಷ್ಟು ವಿದ್ಯಾರ್ಥಿ ನಿಲಯಗಳು ಬೇಕು? ಎಷ್ಟು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಬೇಕು? ಎಷ್ಟು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಬೇಕು? ಎಷ್ಟು ನೀರಾವರಿ ಯೋಜನೆಗಳು ಬೇಕು? ಎಷ್ಟು ಕೈಗಾರಿಕೆಗಳು ಬರಬೇಕು? ಎಷ್ಟು ಸ್ಥಳೀಯ ಉದ್ಯೋಗ ಸೃಷ್ಟಿಸಬೇಕು? ಎಂಬುದನ್ನು ಗಮನದಲ್ಲಿಟ್ಟುಕೊಂಡು ಕ್ರಿಯಾಯೋಜನೆ ರೂಪಿಸಬೇಕು.

371(ಜೆ)ಯ ಸಮರ್ಪಕ ಅನುಷ್ಠಾನದ ಜೊತೆಗೆ ರೈತರು, ವಿದ್ಯಾರ್ಥಿಗಳು, ಕೂಲಿಕಾರರು ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ವಿಶೇಷ ಕಾರ್ಯಕ್ರಮಗಳು ಅಗತ್ಯ. ಶಾಲೆ-ಕಾಲೇಜುಗಳ ಬಲವರ್ಧನೆ, ವಿದ್ಯಾರ್ಥಿ ನಿಲಯಗಳ ವಿಸ್ತರಣೆ, ಗ್ರಾಮೀಣ ಆರೋಗ್ಯ ಕೇಂದ್ರಗಳ ಸುಧಾರಣೆ, ರಸ್ತೆ ಮತ್ತು ಸಾರ್ವಜನಿಕ ಸಾರಿಗೆ, ಶಾಶ್ವತ ಕುಡಿಯುವ ನೀರು, ನೀರಾವರಿ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ವಸತಿ ಮತ್ತು ನಿವೇಶನದಂತಹ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಬೇಕಾಗಿದೆ.

ಪ್ರತಿ ಚುನಾವಣೆಯಲ್ಲೂ ಕಲ್ಯಾಣ ಕರ್ನಾಟಕದ ಹಿಂದುಳಿತ ಅಭಿವೃದ್ಧಿಯ ಪ್ರಮುಖ ವಿಷಯವಾಗುತ್ತದೆ. ಆದರೆ ಚುನಾವಣಾ ಘೋಷಣೆಯ ನಂತರ ಆ ಪ್ರಶ್ನೆ ಆಡಳಿತದ ನಿರಂತರ ಆದ್ಯತೆಯಾಗುತ್ತದೆಯೇ ಎಂಬುದು ಮುಖ್ಯ. ಪ್ರಬಲ ರಾಜಕಾರಣಿಗಳು ಇದ್ದಾರೆ. ಅಧಿಕಾರದಲ್ಲಿದ್ದವರು ಇದ್ದಾರೆ. ಸಾವಿರಾರು ಕೋಟಿ ರೂಪಾಯಿ ಅನುದಾನವೂ ಬಂದಿದೆ. ಆದರೆ ತಾಲೂಕುವಾರು ಅಸಮಾನತೆ ಉಳಿದಿದ್ದರೆ, ಅಭಿವೃದ್ಧಿಯ ಫಲ ಎಲ್ಲರಿಗೂ ಸಮಾನವಾಗಿ ತಲುಪುತ್ತಿದೆಯೇ ಎಂಬ ಪ್ರಶ್ನೆ ಸಹಜ. ಅಭಿವೃದ್ಧಿಯ ಕೊರತೆಯನ್ನೇ ಚುನಾವಣಾ ರಾಜಕೀಯದ ವಿಷಯವನ್ನಾಗಿ ಮಾಡುವುದಕ್ಕಿಂತ, ಅಭಿವೃದ್ಧಿಯ ಕೊರತೆಯನ್ನು ಶಾಶ್ವತವಾಗಿ ನಿವಾರಿಸುವ ರಾಜಕೀಯ ಇಚ್ಛಾಶಕ್ತಿ ಮುಖ್ಯ.

ಹೀಗಾಗಿ ಸೆಪ್ಟೆಂಬರ್‌ 17ರ ನೆನಪು ಕೇವಲ ಇತಿಹಾಸವನ್ನು ಆಚರಿಸುವುದಾಗಿರಬಾರದು. ನಿಜಾಮಶಾಹಿಯ ಬರ್ಬರ ಪಾಳೆಯಗಾರಿಕೆಯ ವಿರುದ್ಧ ಹೋರಾಡಿದ ಜನರ ಆಶಯಗಳನ್ನು ಇಂದಿನ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಪ್ರಶ್ನೆಗಳೊಂದಿಗೆ ಜೋಡಿಸುವ ದಿನವಾಗಬೇಕು.

ಇದನ್ನೂ ನೋಡಿ : ಹೈ.ಕ. ವಿಲೀನ ದಿನ | ಜಗತ್ತಿಗೆ ಭತ್ತ, ತೊಗರಿ, ಚಿನ್ನ ಕೊಟ್ಟ ಪ್ರದೇಶಕ್ಕೆ ಸಿಕ್ಕಿದ್ದು ಕಹಿಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *