ಮೇ ದಿನದ ಬದಲಾಗುತ್ತಿರುವ ಸಂದರ್ಭ
* ನೀಲೋತ್ಪಲ್ ಬಸು
ಮುಂದುವರಿದ ತಂತ್ರಜ್ಞಾನದ ಯುಗವು ಉತ್ಪಾದಕ ಶಕ್ತಿಗಳ ಅಗಾಧ ಬೆಳವಣಿಗೆಗೆ ಹಾದಿ ಮಾಡಿಕೊಟ್ಟಿದೆ. ಅದರ ಪರಿಣಾಮವಾಗಿ, ಹೆಚ್ಚಿದ ಶೋಷಣೆಯ ಸವಾಲನ್ನು ಎದುರಿಸುವಲ್ಲಿ ಬಂಡವಾಳ ಮತ್ತು ಶ್ರಮದ ನಡುವೆ ಸಂಘರ್ಷವೂ ಹೆಚ್ಚುವಂತಾಗಿದೆ. ಉತ್ಪಾದನಾ ಸಾಧನಗಳಲ್ಲಿನ ಸತತ ಬದಲಾವಣೆಗಳೊಂದಿಗೆ ಕಾರ್ಮಿಕರ ಚಳವಳಿಯು ಸದಾ ಸೆಣೆಸಬೇಕಾಗುತ್ತದೆ. ಏಕೆಂದರೆ ಲಾಭದಲ್ಲಿ ಹೆಚ್ಚಿನ ಪಾಲನ್ನು ಹೀರಲು ತಂತ್ರಜ್ಞಾನದಲ್ಲಿನ ಮುನ್ನಡೆಯನ್ನು ಪೂರ್ಣವಾಗಿ ಬಳಸಿಕೊಳ್ಳಲು ಬಂಡವಾಳದ ಮಾಲಿಕತ್ವವು ಸದಾ ಸಜ್ಜಾಗಿರುತ್ತದೆ. ಈ ಪ್ರಯತ್ನವನ್ನು ಸೋಲಿಸಲು, ಮೇಲೆದ್ದು ಬರುತ್ತಿರುವ ಇಂತಹ ಪ್ರವೃತ್ತಿಗೆ ದುಡಿಯುವ ವರ್ಗ ಪ್ರತಿಕ್ರಿಯಿಸಲೇ ಬೇಕು. ಈ ಸಮರ ಸದಾ ಕಾಲ ನಡೆಯುತ್ತಲೇ ಇರುತ್ತದೆ.
* ಕನ್ನಡಕ್ಕೆ: ವಿಶ್ವ
1886ರಲ್ಲಿ ಅಮೆರಿಕದ ಚಿಕಾಗೋದ ಹೇ ಮಾರ್ಕೆಟ್‌ನಲ್ಲಿ ನಡೆದ ಸಂಘರ್ಷಗಳಿಂದ ಚಿರಸ್ಥಾಯಿಯಾದ ಅಂತಾರಾಷ್ಟ್ರೀಯ ಕಾರ್ಮಿಕ ದಿನವಾದ ಮೇ ದಿನವನ್ನು ಮೇ 1ರಂದು ಆಚರಿಸಲಾಗುತ್ತದೆ. ಎಂಟು ಗಂಟೆಗಳ ಕೆಲಸದ ದಿನಕ್ಕಾಗಿ ನಡೆದಿದ್ದ ವರ್ಗ ಸಂಘರ್ಷ ಅದಾಗಿತ್ತು. ಅಂತಾರಾಷ್ಟ್ರೀಯ ಒಕ್ಕೂಟವೊಂದು 1889ರಲ್ಲಿ ಕಾರ್ಮಿಕರ ಸೌಹಾರ್ದತೆ ಮತ್ತು ಹಕ್ಕುಗಳನ್ನು ಪ್ರೋತ್ಸಾಹಿಸಲು ಮೇ ದಿನವನ್ನು ಆರಂಭಿಸಿದ್ದು ಅದನ್ನೀಗ ಜಗತ್ತಿನಾದ್ಯಂತ ಮಾನ್ಯ ಮಾಡಲಾಗಿದೆ.
ಚಿಕಾಗೋ ನಗರದ ಸಂಘಟಿತ ಕಾರ್ಮಿಕ ಚಳವಳಿಯೊಂದರ ಕರೆಯ ಮೇರೆಗೆ ತಮ್ಮ ಕೆಲಸದ ಉಪಕರಣಗಳನ್ನು ಕೆಳಗಿಟ್ಟ ಕಾರ್ಮಿಕರು ಭಾರಿ ದೊಡ್ಡ ಸಂಖ್ಯೆಯಲ್ಲಿ ಮೇ 1ರಂದು ನಗರಕ್ಕೆ ಹರಿದು ಬಂದಿದ್ದರು. ಅದುವರೆಗೆ ಸ್ವತಃ ದುಡಿಯುವ ವರ್ಗದ ಚಳವಳಿಯೇ ಕಂಡಿರದಿದ್ದಂಥ ವರ್ಗ ಸೌಹಾರ್ದತೆಯ ಅತ್ಯಂತ ಪರಿಣಾಮಕಾರಿ ಪ್ರದರ್ಶನ ಅದಾಗಿತ್ತು. 8 ಗಂಟೆಗಳ ಕೆಲಸದ ದಿನದ ಅಂದಿನ ಕಾಲದ ಆ ಬೇಡಿಕೆಯ ಮಹತ್ವ ಮತ್ತು ಮುಷ್ಕರದ ವಿಸ್ತಾರ ಹಾಗೂ ಲಕ್ಷಣವು ಚಳವಳಿಗೆ ಒಂದು ಮಹತ್ವದ ರಾಜಕೀಯ ಅರ್ಥವನ್ನು ಕೊಟ್ಟಿತ್ತು. ಸುತ್ತಿಗೆ

ಹೇಮಾರ್ಕೆಟ್ ಚೌಕದಲ್ಲಿನ ರಕ್ತಪಾತ, ಪಾರ್ಸನ್ಸ್, ಸ್ಪೈಸ್, ಫಿಶರ್ ಮತ್ತು ಏಂಜಲ್‌ರಿಗೆ ಅನ್ಯಾಯವಾಗಿ ವಿಧಿಸಿದ ಗಲ್ಲು ಶಿಕ್ಷೆ ಹಾಗೂ ಚಿಕಾಗೋದ ಇತರ ಕ್ರಾಂತಿಕಾರಿ ನಾಯಕರ ಬಂಧನ -ಇವೇ ಮೊದಲಾದವು ಚಿಕಾಗೋ ಯಜಮಾನರುಗಳ ಪ್ರತಿಕ್ರಾಂತಿಯ ಉತ್ತರವಾಗಿದ್ದವು. ದೇಶದಾದ್ಯಂತ ಕಾರ್ಯಾಚರಿಸಲು ಆ ಬಾಸ್‌ಗಳಿಗೆ ಅದು ಸನ್ನೆಯಾಗಿತ್ತು. 1886ರ ಉತ್ತರಾರ್ಧವು ಮಾಲಕರ ದಟ್ಟವಾದ ದೌರ್ಜನ್ಯಗಳಿಗೆ ಸಾಕ್ಷಿಯಾಯಿತು; 1885-1886ರ ಮುಷ್ಕರದ ವೇಳೆ ಕಳೆದುಕೊಂಡ ಸ್ಥಾನವನ್ನು ಮರಳಿ ಗಳಿಸಿಕೊಳ್ಳಲು ಮಾಲಿಕರು ಹಠತೊಟ್ಟು ನಿಂತಿದ್ದರು.
ಚಿಕಾಗೋ ಕಾರ್ಮಿಕ ನೇತಾರರನ್ನು ಗಲ್ಲಿಗೇರಿಸಿದ ಒಂದು ವರ್ಷದ ನಂತರ, 1887ರಲ್ಲಿ ಸೈಂಟ್ ಲೂಯಿಸ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಒಕ್ಕೂಟವು (ಫೆಡರೇಶನ್), 8 ಗಂಟೆ ಕೆಲಸದ ದಿನದ ಚಳವಳಿಯನ್ನು ಪುನಶ್ಚೇತನಗೊಳಿಸಲು ನಿರ್ಧರಿಸಿತು. ರಾಜಕೀಯ ವರ್ಗ ವಿಚಾರವೊಂದರ ಆಧಾರದಲ್ಲಿ ಎರಡು ವರ್ಷದಿಂದ ಬಲಿಷ್ಠವಾದ ಚಳವಳಿಯನ್ನು ನಡೆಸಿದ ಅನುಭವದಲ್ಲಿ ಈಗಾಗಲೇ ಒಂದು ಪರಂಪರೆ ಹುಟ್ಟುಹಾಕಿದ್ದ ಮೇ 1ನೇ ದಿನಾಂಕವನ್ನೇ 8 ಗಂಟೆ ಕೆಲಸದ ದಿನದ ಬೇಡಿಕೆ ಮುಂದಿಟ್ಟು ಮತ್ತೆ ಚಳವಳಿ ಆರಂಭಿಸುವ ದಿನವಾಗಿ ಆಯ್ಕೆ ಮಾಡಲಾಯಿತು. ಅಮೆರಿಕದ ತಟಗಳಾಚೆಗೂ ಜಗತ್ತಿನಾದ್ಯಂತ ವರ್ಗ ಒಗ್ಗಟ್ಟು ಮತ್ತು ಸೌಹಾರ್ದತೆಯನ್ನು ಅದು ಪ್ರತಿಪಾದಿಸಿತು. ಇತಿಹಾಸವನ್ನು ರೂಪಿಸುವಲ್ಲಿ ಒಂದು ವಿಭಿನ್ನ ವರ್ಗವಾಗಿ ದುಡಿಮೆಗಾರರ ಸಾಮೂಹಿಕ ಮಧ್ಯಪ್ರವೇಶದ ತುಂಬಾ ಮಹತ್ವದ ಅಭಿವ್ಯಕ್ತಿಯಾಗಿ ಅದು ಹೊರಹೊಮ್ಮಿತ್ತು.
“ಇದುವರೆಗಿನ ಎಲ್ಲ ಸಮಾಜಗಳ ಇತಿಹಾಸವು ವರ್ಗ ಹೋರಾಟಗಳ ಇತಿಹಾಸವಾಗಿದೆ” ಎಂದು ಕಾರ್ಲ್ ಮಾರ್ಕ್ಸ್ ಸರಿಯಾಗಿಯೇ ಹೇಳಿದ್ದಾರೆ. ದುಡಿಯುವ ವರ್ಗದ ಬದಲಾಗುತ್ತಿರುವ ಸನ್ನಿವೇಶ ಮತ್ತು ಅದರ ಪಾಠಗಳನ್ನು ಮನೋಗತ ಮಾಡಿಕೊಳ್ಳುವುದು ಅನುಭವದ ಮೌಲ್ಯಮಾಪನ ಹಾಗೂ ಮುಂದಿರುವ ಕಾರ್ಯಭಾರಗಳನ್ನು ಅರ್ಥಮಾಡಿಕೊಳ್ಳಲು ಹೊಸ ಅವಕಾಶವನ್ನು ಒದಗಿಸುತ್ತವೆ.

ಬಂಡವಾಳ vs ಶ್ರಮ
ಮೇ ದಿನದ ಆಚರಣೆ ಮತ್ತು ಅದರ ಅಂತರಾಷ್ಟ್ರೀಯ ಮಾನ್ಯತೆಯು ಪ್ರತಿಯೊಂದು ಅರ್ಥದಲ್ಲೂ ಮಾರ್ಕ್ಸ್ ಪ್ರತಿಪಾದನೆಗೆ ಮಹಾನ್ ಸಮರ್ಥನೆಯಾಗಿದೆ. ಬಂಡವಾಳದ ಸ್ವರೂಪದ ಬಗ್ಗೆ ಮಾರ್ಕ್ಸ್ ರವರ ಮೂರ್ತ ಅಧ್ಯಯನವು ಶೋಷಣೆಯ ವಿರುದ್ಧದ ಹೋರಾಟದಲ್ಲಿನ ಪ್ರಜ್ಞಾಪೂರ್ವಕ ಬೆಳವಣಿಗೆ ಹಾಗೂ ಸಾಮಾಜಿಕ ಪರಿವರ್ತನೆಯ ಮಾರ್ಗವನ್ನು ಸ್ಪಷ್ಟವಾಗಿ ನಿರೂಪಿಸಿದೆ. ಬಂಡವಾಳದ ಸಾಂದ್ರೀಕರಣ ಮತ್ತು ಕೇಂದ್ರೀಕರಣದ ಅಂತರ್ಗತ ಪ್ರವೃತ್ತಿಯನ್ನು ಮಾರ್ಕ್ಸ್ ಸಿದ್ಧಾಂತ ಸ್ಪಷ್ಟವಾಗಿ ಸೂಚಿಸಿದೆ. ಸುತ್ತಿಗೆ
ಆದರೆ, ಬಂಡವಾಳದ ಮಾರ್ಗವು ಸ್ವಾಯತ್ತವಲ್ಲ , ಅದು ಶ್ರಮದ ಜತೆ ಸಂಘರ್ಷಕ್ಕೆ ಬರುತ್ತದೆ. ಇದಕ್ಕೆ ಶ್ರಮದ ಸ್ಪಂದನೆಯು ಉತ್ಪಾದಕ ಶಕ್ತಿಗಳ ಬೆಳವಣಿಗೆಯನ್ನು ಅನುಸರಿಸಿರುತ್ತದೆ. ಆದ್ದರಿಂದ, ತಂತ್ರಜ್ಞಾನದಲ್ಲಿನ ದಾಪುಗಾಲಿನ ಉತ್ಕರ್ಷವೂ ಸೇರಿದಂತೆ, ಉತ್ಪಾದನಾ ಸಾಧನಗಳಲ್ಲಿನ ಸತತ ಬದಲಾವಣೆಗಳೊಂದಿಗೆ ಕೂಡ ಕಾರ್ಮಿಕರ ಚಳವಳಿಯು ಸೆಣೆಸಬೇಕಾಗುತ್ತದೆ. ಲಾಭದಲ್ಲಿ ಹೆಚ್ಚಿನ ಪಾಲನ್ನು ಹೀರಲು ತಂತ್ರಜ್ಞಾನದಲ್ಲಿನ ಮುನ್ನಡೆಯನ್ನು ಪೂರ್ಣವಾಗಿ ಬಳಸಿಕೊಳ್ಳಲು ಬಂಡವಾಳದ ಮಾಲಿಕತ್ವವು ಸದಾ ಸಜ್ಜಾಗಿರುತ್ತದೆ. ಈ ಪ್ರಯತ್ನವನ್ನು ಸೋಲಿಸಲು, ಮೇಲೆದ್ದು ಬರುತ್ತಿರುವ ಈ ಪ್ರವೃತ್ತಿಗೆ ದುಡಿಯುವ ವರ್ಗ ಪ್ರತಿಕ್ರಿಯಿಸಲೇ ಬೇಕು. ಈ ಸಮರ ಸದಾ ಕಾಲ ನಡೆಯುತ್ತಲೇ ಇರುತ್ತದೆ.
ಜಾನ್ ಹೆನ್ರಿಯ ಕಥೆ ಮತ್ತು ಆತನ ವೀರೋಚಿತ ಸುತ್ತಿಗೆಯು ಹಬೆ ಯಂತ್ರದ ಆರಂಭಿಕ ದಿನಗಳಲ್ಲಿನ ಕಾರ್ಮಿಕರ ಗಾಥೆಯನ್ನು ದಾಖಲಿಸುತ್ತದೆ.* ಈ ಸಂಘರ್ಷವು ಇಂದಿನ ದಿನಮಾನದ ಹೊಸ ಕೃತಕ ಬುದ್ಧಿಮತ್ತೆ (ಎಐ) ವರೆಗೂ ಮುಂದುವರಿಯುತ್ತಿದೆ.
ಒಂದು ದಶಕದ ಹಿಂದೆ ‘ಜಾಕೋಬಿನ್ʼ(ನ್ಯೂಯಾರ್ಕಿನ ಪತ್ರಿಕೆ)`ನಲ್ಲಿ ಪ್ರಕಟವಾದ ʼಸ್ಮಾರ್ಟ್ ಫೋನ್ ಸೊಸೈಟಿ’, ಕೆಲಸದ ಗಂಟೆಗಳನ್ನು ವಿಸ್ತರಿಸುವಲ್ಲಿ ಸ್ಮಾರ್ಟ್ ಫೋನ್ ಗಳನ್ನು ಅನ್ವಯಿಸುವ ಸವಾಲನ್ನು ಎದುರಿಸುವಲ್ಲಿ ಕಾರ್ಮಿಕರ ಚಳವಳಿಯ ಚುರುಕುತನವನ್ನು ಚೆನ್ನಾಗಿ ಚಿತ್ರಿಸಿತ್ತು. ಜರ್ಮನ್ ಕಾರ್ಮಿಕರು ಸಂಜೆಯಾದ ನಂತರ ತಮ್ಮ ಇಮೇಲ್‌ಗಳನ್ನು ಶಟ್‌ಡೌನ್ ಮಾಡಬೇಕೆಂಬ ಬೇಡಿಕೆ ಮುಂದಿಟ್ಟರು. ನಂತರ ಅದು ಅಂಗೀಕಾರವಾಯಿತು. ಈ ಮುಂದುವರಿದ ತಂತ್ರಜ್ಞಾನದ ಯುಗವು ಉತ್ಪಾದಕ ಶಕ್ತಿಗಳ ಅಗಾಧ ಬೆಳವಣಿಗೆಗೆ ಹಾದಿ ಮಾಡಿಕೊಟ್ಟಿದೆ. ಅದರ ಪರಿಣಾಮವಾಗಿ, ಹೆಚ್ಚಿದ ಶೋಷಣೆಯ ಸವಾಲನ್ನು ಎದುರಿಸುವಲ್ಲಿ ಬಂಡವಾಳ ಮತ್ತು ಶ್ರಮದ ನಡುವಿನ ಸಂಘರ್ಷಕ್ಕೆ ದಾರಿ ಮಾಡಿದೆ.
ಇದನ್ನೂ ಓದಿ : ಮೇ ದಿನ: ಇತಿಹಾಸದ ಸ್ಮರಣೆ ಮಾತ್ರವಲ್ಲ, ಇಂದಿನ ಹೋರಾಟದ ಕರೆಯೂ ಹೌದು
ನವ-ಉದಾರವಾದ ಮತ್ತು ವಲಸೆ
ಸಮಕಾಲೀನ ಬಂಡವಾಳಶಾಹಿಯ ಈ ಘಟ್ಟದಲ್ಲಿ ಹಣಕಾಸು ಬಂಡವಾಳದ ಧಾವಂತ ಒಂದು ಮುಖ್ಯ ಲಕ್ಷಣ. ಇದು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಮತ್ತು ಅದರ ಪರಿಣಾಮವಾಗಿ ನವ-ಉದಾರವಾದಿ ಜಾಗತೀಕರಣದ ವಿದ್ಯಮಾನಕ್ಕೆ ಹಾದಿ ಮಾಡಿ ಕೊಟ್ಟಿತು. ನಿಜ, ವಿಭಿನ್ನ ದೇಶಗಳಲ್ಲಿ ನವ-ಉದಾರವಾದದ ನಿರ್ದಿಷ್ಟ ಆವೃತ್ತಿಗಳು ಕಾಣಬಂದಿವೆ. ಆದರೆ ಈ ಘಟ್ಟವು ಬಂಡವಾಳದ ಅಸಾಧಾರಣ ಕೇಂದ್ರೀಕರಣ ಹಾಗೂ ವಿವಿಧ ಪ್ರದೇಶಗಳಿಗೆ ಉತ್ಪಾದಕ ಚಟುವಟಿಕೆಗಳ ಪ್ರಸರಣಕ್ಕೆ ಕಾರಣವಾಗಿದೆ ಕೂಡ. ಈ ವಿದ್ಯಮಾನದ ಕಾರಣದಿಂದ ಈ ಸಮಕಾಲೀನ ವಾಸ್ತವತೆಯು ದೇಶದೊಳಗೇ ಮತ್ತು ನಾನಾ ದೇಶಗಳಲ್ಲಿ ಭಾರಿ ಪ್ರಮಾಣದ ವಲಸೆಗಳನ್ನು ತಂದಿದೆ.
ಶ್ರಮದ ಚಲನಶೀಲತೆಯು ಅಂತಾರಾಷ್ಟ್ರೀಯ ರಾಜಕೀಯದಲ್ಲಿಯೂ ಪ್ರತಿಫಲನಗೊಳ್ಳಲು ಆರಂಭವಾಗಿದೆ. ಪ್ಯಾಲೆಸ್ತೀನಿ ಜನರಿಗೆ ಅಮೆರಿಕ-ಇಸ್ರೇಲ್ ಕೂಟ ನಡೆಸಿದ ಬರ್ಬರ ನರಹತ್ಯೆಯ ವಿರುದ್ಧ ತೋರಿದ ಸೌಹಾರ್ದತೆಯು ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಈ ಸೌಹಾರ್ದತೆಯು ಅನೇಕ ಯುರೋಪಿಯನ್ ದೇಶಗಳಲ್ಲಿನ ಸಾಂಪ್ರದಾಯಿಕ ಇಸ್ರೇಲ್-ಪರ ಬೆಂಬಲಿಗರು ಮತ್ತು ಅಮೆರಿಕನ್ ಸಾಮ್ರಾಜ್ಯಶಾಹಿಯ ಅನುಯಾಯಿಗಳ ಶಿಬಿರವನ್ನೂ ಅಲುಗಾಡಿಸಿದೆ.
ಭಾರತದಲ್ಲಿ, ದುಡಿಯುವ ಜನರ ಚಳವಳಿಯ ಮೇಲೆ ಪರಿಣಾಮ ಬೀರುವಂಥ ಪ್ರಮುಖ ಬದಲಾವಣೆ ರಾಜಕೀಯ ರಂಗದಲ್ಲಿ ಆಗಿದೆ. ಮೋದಿ ಸರಕಾರದ ನೇತೃತ್ವದಡಿ ಆಕ್ರಮಣಕಾರಿ ನವ ಉದಾರವಾದಿ ನೀತಿ ಮತ್ತು ಕಾರ್ಪೊರೇಟ್-ಕೋಮುವಾದಿ ಮೈತ್ರಿಯು ಆಕ್ರಮಣಕಾರಿ ಕೋಮುವಾದಿ ಧ್ರುವೀಕರಣವನ್ನು ಅನುಸರಿಸುತ್ತಿದೆ. ಪ್ರಜಾಪ್ರಭುತ್ವವನ್ನು ಹೊಸಕಿಹಾಕಿ ಸರ್ವಾಧಿಕಾರಶಾಹಿ ಫ್ಯಾಸಿಸ್ಟ್ ಆಡಳಿತವನ್ನು ಗಟ್ಟಿಗೊಳಿಸಲಾಗುತ್ತಿದೆ. ತೀವ್ರವಾದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಹೆಚ್ಚಳ ಹಾಗೂ ಭಾರಿ ನಿರುದ್ಯೋಗ ಕೂಡ ಇದರ ಲಕ್ಷಣಗಳಾಗಿವೆ.

ನವ-ಫ್ಯಾಸಿಸಂ ಮತ್ತು ಶ್ರಮ ಸಂಹಿತೆಗಳು
ಇದು ದುಡಿಯುವ ವರ್ಗದ ಜೀವನೋಪಾಯಕ್ಕೇ ಬೆದರಿಕೆಯೊಡ್ಡಿದೆ. ನವ-ಫ್ಯಾಸಿಸ್ಟ್ ಆಡಳಿತದ ಲಕ್ಷಣಗಳು ಹೊಸ ಶ್ರಮ ಸಂಹಿತೆಗಳಲ್ಲಿ ಪ್ರಕಟಗೊಂಡಿವೆ. ಕಳೆದ ವರ್ಷ ರೂಪಿಸಲಾದ ಈ ಸಂಹಿತೆಗಳು ಹೊಸ ಆರ್ಥಿಕ ವರ್ಷದಿಂದ ಅನುಷ್ಠಾನಕ್ಕೆ ಬಂದಿವೆ. ಬಂಡವಾಳದ ಕಾರ್ಯಾಚರಣೆಯ ಹೊಸ ಲಕ್ಷಣದ ಭಾಗವಾಗಿ ಶ್ರಮದ ಮತ್ತು ಅಸಂಘಟಿತ ವಲಯದ ದೊಡ್ಡ ಪುನರ್‌ರಚನೆ ಮತ್ತು ಅವನ್ನು ಅನೌಪಚಾರಿಕಗೊಳಿಸುವ (ಇನ್‌ಫಾರ್ಮಲೈಸೇಶನ್) ಪ್ರಕ್ರಿಯೆ ತೀವ್ರ ಗತಿಯಲ್ಲಿ ಸಾಗಿದೆ. ನೈಜ ಕೂಲಿಯಲ್ಲಿನ ನಷ್ಟದಿಂದಾಗಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹರ್ಯಾಣ, ನೋಯ್ಡಾ, ರಾಜಸ್ಥಾನ, ಉತ್ತರಾಖಂಡದ ಉಧಂ ಸಿಂಗ್ ನಗರ, ಪಂಜಾಬ್‌ನ ಭಟಿಂಡಾ ಮತ್ತು ದೇಶದ ಇತರ ಹಲವು ಭಾಗಗಳಲ್ಲಿ ಕಾರ್ಮಿಕ ವರ್ಗ ನಡೆಸುತ್ತಿರುವ ಸ್ವಯಂಪ್ರೇರಿತ ಚಳವಳಿಗಳು ಈ ಬಾರಿಯ ಮೇ ದಿನ ಹಿನ್ನೆಲೆಯಲ್ಲಿ ಮಹತ್ವದ್ದಾಗಿವೆ. ಸುತ್ತಿಗೆ
ಈ ವರ್ಷದ ಮೇ ದಿನಾಚರಣೆಯು ಈ ಅಶಾಂತಿ ಹುಟ್ಟಲು ಕಾರಣವಾದ ನಿರ್ದಿಷ್ಟ ಅಂಶಗಳ ಅಧ್ಯಯನವನ್ನು ಒಳಗೊಳ್ಳಲಿದೆ. ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯುವಂತೆ ಮಾಡುವ ನಿಟ್ಟಿನಲ್ಲಿ ಈ ವಿವಿಧ ಕಾರ್ಯಾಚರಣೆಗಳನ್ನು ಒಂದು ಸಮಗ್ರ ಪ್ರಬಲ ಚಳವಳಿಯಾಗಿ ಹೆಣೆಯುವುದು ದುಡಿಯುವ ವರ್ಗ ಹಾಗೂ ಪಕ್ಷದ ಕಾರ್ಯಭಾರವಾಗಿದೆ. ದುಡಿಯುವ ವರ್ಗದ ಇಂಥ ಚಳುವಳಿಯು ಕೊನೆಗೆ ನವ ಫ್ಯಾಸಿಸ್ಟ್ ಆಕ್ರಮಣದ ಸವಾಲನ್ನು ಎದುರಿಸುವ ರಾಜಕೀಯ ಕಾರ್ಯಭಾರವನ್ನೂ ಕೈಗೆತ್ತಿಕೊಳ್ಳಬೇಕು.

* ಜಾನ್ ಹೆನ್ರಿ ಮತ್ತು ಆತನ ೧೦ ಪೌಂಡ್ ಸುತ್ತಿಗೆ
ಜಾನ್ ಹೆನ್ರಿ ಅಮೆರಿಕದ ಒಬ್ಬ ವಿಮೋಚಿತ ಗುಲಾಮ ದುಡಿಮೆಗಾರ- ಆತ ೧೮೭೦ರ ದಶಕದಲ್ಲಿ ಒಂದು ರೈಲ್ವೆ ಸುರಂಗ ನಿರ್ಮಾಣದ ವೇಳೆ ತನ್ನ ೧೦ ಪೌಂಡ್ (೪.೫ಕೆಜಿ)ತೂಕದ ಸುತ್ತಿಗೆಯನ್ನು ಹಿಡಿದುಕೊಂಡು ಹಬೆಯಿಂದ ಚಲಿಸುವ ತೂತು ಕೊರೆಯುವ ಉಪಕರಣದೊಂದಿಗೆ ಸ್ಪರ್ಧೆಗಿಳಿದು , ಅದರಲ್ಲಿ ಗೆದ್ದ, ಆದರೆ ಈ ಸ್ಪರ್ಧೆಯಲ್ಲಿ ಪ್ರಾಣ ಕಳೆದುಕೊಂಡ ಎಂದು ಹೇಳಲಾಗುತ್ತದೆ.
ಇದನ್ನೂ ನೋಡಿ : “ಮೇ ದಿನದ ಇತಿಹಾಸ: 8 ಗಂಟೆ ಕೆಲಸದ ಹಕ್ಕು ಹೇಗೆ ಬಂದಿತು?” JanashakthiMedia
