ಗುರ್ಗಾಂವ್: ಹರಿಯಾಣದ ರೋಹ್ತಕ್ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕಿಯನ್ನು, ಜೂನ್ 6ರಂದು ದೆಹಲಿಯ ಜಂತರ್ ಮಂತರ್ನಲ್ಲಿ ‘ಕಾಕ್ರೋಚ್ ಜನತಾ ಪಕ್ಷ’ (CJP) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವೇ ದಿನಗಳಲ್ಲಿ ಅಮಾನತು ಮಾಡಲಾಗಿದೆ. ಜಂತರ್
ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ ಬುಧವಾರ ಹೊರಡಿಸಿದ ಆದೇಶದ ಪ್ರಕಾರ, ಸುಲೇಖಾ ದಲಾಲ್ ಅವರನ್ನು ಜೂನ್ 8ರಿಂದ ಅಮಾನತುಗೊಳಿಸಲಾಗಿದೆ. ಆದರೆ ಈ ಕ್ರಮಕ್ಕೆ ಕಾರಣವನ್ನು ಆದೇಶದಲ್ಲಿ ಸ್ಪಷ್ಟಪಡಿಸಲಾಗಿಲ್ಲ ಎಂದು ಪಿಟಿಐ ವರದಿ ತಿಳಿಸಿದೆ.
ಆದೇಶದಂತೆ, ಅಮಾನತು ಅವಧಿಯಲ್ಲಿ ರೋಹ್ತಕ್ ಬ್ಲಾಕ್ ಶಿಕ್ಷಣಾಧಿಕಾರಿಯ ಕಚೇರಿಯನ್ನು ದಲಾಲ್ ಅವರ ಮುಖ್ಯ ಕಚೇರಿಯಾಗಿ ನಿಗದಿಪಡಿಸಲಾಗಿದ್ದು, ಮುಂಚಿತ ಅನುಮತಿ ಇಲ್ಲದೆ ಆ ಸ್ಥಳವನ್ನು ಬಿಟ್ಟು ಹೋಗಬಾರದು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: 2 ತಿಂಗಳಲ್ಲಿ ವಿದ್ಯುತ್ ಮಾರಾಟದಿಂದ ಕರ್ನಾಟಕಕ್ಕೆ 423 ಕೋಟಿ ರೂ. ಆದಾಯ
CJP ಪ್ರತಿಭಟನೆಯಲ್ಲಿ ದಲಾಲ್ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಬೆಳವಣಿಗೆ ನಡೆದಿದೆ.
ಆ ವಿಡಿಯೋದಲ್ಲಿ ದಲಾಲ್, “ಇದು ಒಂದು ಹೋರಾಟ. ಈ ಬಾರಿ ಇದು ‘ಮಾಡೋ ಅಥವಾ ಸಾಯೋ’ ಹೋರಾಟ. ಈಗ ಕಾಕ್ರೋಚ್ನ ತಾಯಿ ಮೈದಾನಕ್ಕಿಳಿದಿದ್ದಾಳೆ. ನಾವು ಯಾವುದೇ ಗುಂಪಿನ ಭಾಗವಲ್ಲ; ನಾವು ನಮ್ಮ ಮಕ್ಕಳ ಜೊತೆ ಇದ್ದೇವೆ. ತಾಯಿ ಎಂದರೆ ಸಂಪೂರ್ಣ ರಾಷ್ಟ್ರದ ತಾಯಿ,” ಎಂದು ಹೇಳಿರುವುದು ಕೇಳಿಸುತ್ತದೆ.
ಅಮಾನತಿಗೆ ಪ್ರತಿಕ್ರಿಯಿಸಿದ ದಲಾಲ್, ತನ್ನ ವಿರುದ್ಧ ಕೈಗೊಂಡ ಕ್ರಮಕ್ಕೆ ಕಾರಣವನ್ನು ತಿಳಿಸಲಾಗಿಲ್ಲ ಎಂದು ಹೇಳಿದ್ದಾರೆ.
“ನಾನು ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿ (ಪ್ರತಿಭಟನೆಯಲ್ಲಿ) ಭಾಗವಹಿಸಲು ಸಾಧ್ಯವಿಲ್ಲ ಎಂಬುದು ನನಗೆ ತಿಳಿದಿರಲಿಲ್ಲ. ಕನಿಷ್ಠ ಅಮಾನತುಗೊಳಿಸುವ ಮೊದಲು ಕಾರಣವನ್ನು ತಿಳಿಸಬೇಕಿತ್ತು,” ಎಂದು ಅವರು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ತಾನು ಪ್ರತಿಭಟನೆಯಲ್ಲಿ ಭಾಗವಹಿಸಿರುವುದು ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳ ಬಗ್ಗೆ ಉಂಟಾದ ಆತಂಕದಿಂದ ಎಂದು ದಲಾಲ್ ತಿಳಿಸಿದ್ದಾರೆ.
“ನನ್ನ ಮಗನು ಪದವೀಧರ. ಅವನು ಬರೆದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎನ್ನಲಾಗಿದೆ. ಆದ್ದರಿಂದ, ತಾಯಿಯಾಗಿ ನನಗೂ ಇದರ ಪರಿಣಾಮ ಬಿದ್ದಿದೆ,” ಎಂದು ಅವರು ಹೇಳಿದರು.
“ನಾನು ಅಲ್ಲಿ ಕೇವಲ ಕಾಳಜಿಯುತ ತಾಯಿಯಾಗಿ ಹೋಗಿದ್ದೆ. ನಾನು ಹೇಳಿದ್ದು ತಾಯಿಯ ನೋವು. ನಾನು ಯಾವುದೇ ಪಕ್ಷ ಅಥವಾ ಸಂಘಟನೆಯೊಂದಿಗೆ ಸಂಬಂಧ ಹೊಂದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಹರಿಯಾಣದಲ್ಲಿ ಅತಿಥಿ ಶಿಕ್ಷಕರು ಸರ್ಕಾರದಿಂದ ತಾತ್ಕಾಲಿಕ ಖಾಲಿ ಹುದ್ದೆಗಳು ಮತ್ತು ಶಿಕ್ಷಕರ ಕೊರತೆಯನ್ನು ಭರ್ತಿಮಾಡಲು ಒಪ್ಪಂದದ ಆಧಾರದ ಮೇಲೆ ನೇಮಕಗೊಳ್ಳುವವರು.
‘ಕಾಕ್ರೋಚ್ ಜನತಾ ಪಕ್ಷ’ ಜೂನ್ 6ರಂದು ಜಂತರ್ ಮಂತರ್ನಲ್ಲಿ ಪ್ರತಿಭಟನೆ ಆಯೋಜಿಸಿದ್ದು, ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಮತ್ತು ಯುವಕರು ಭಾಗವಹಿಸಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳ ಬಗ್ಗೆ ಜವಾಬ್ದಾರಿ ನಿಗದಿಪಡಿಸಲು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇತ್ತೀಚಿನ ವಾರಗಳಲ್ಲಿ ಈ ಸಂಘಟನೆ ಸಾಮಾಜಿಕ ಜಾಲತಾಣಗಳ ಮೂಲಕ ಪರೀಕ್ಷಾ ಅಕ್ರಮಗಳ ವಿರುದ್ಧ ಅಭಿಯಾನ ನಡೆಸಿ ಗಮನ ಸೆಳೆದಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಾಗಿ ಯುವಕರ ವೇದಿಕೆಯಾಗಿ ತಾನು ತೋರ್ಪಡಿಸಿಕೊಂಡಿದೆ.
ಇದನ್ನೂ ನೋಡಿ: ದೇಶದ ಆರ್ಥಿಕತೆ ಮತ್ತು ಹಣದುಬ್ಬರ: ನಿಜ ಹೇಳಿ ಮೋದಿಜೀ.. nation wants to know #JanashakthiMedia
