ಬೆಂಗಳೂರು: ನಗರದ ರಸ್ತೆ ಬದಿಗಳು, ಖಾಲಿ ನಿವೇಶನಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವರ್ಷಗಳಿಂದ ಬಿದ್ದಿರುವ ಬೃಹತ್ ಪ್ರಮಾಣದ ತ್ಯಾಜ್ಯವನ್ನು ತೆರವುಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಹತ್ವಾಕಾಂಕ್ಷೆಯ ಕಾರ್ಯಾಚರಣೆಗೆ ಮುಂದಾಗಿದೆ. ನಗರದಲ್ಲಿ ಗುರುತಿಸಲಾದ 22 ಸಾವಿರ ಟನ್ಗೂ ಅಧಿಕ ತ್ಯಾಜ್ಯವನ್ನು ತೆರವುಗೊಳಿಸಿ ವಿಲೇವಾರಿ ಮಾಡಲು ಐದು ಅನಾಥ ಕ್ವಾರಿಗಳನ್ನು ಗುರುತಿಸಲಾಗಿದೆ.
ನಗರವನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಆಗಸ್ಟ್ 1ರಿಂದ 31ರವರೆಗೆ “ತ್ಯಾಜ್ಯದಿಂದ ಸ್ವಾತಂತ್ರ್ಯ” ಎಂಬ ತಿಂಗಳ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ವಿವಿಧ ಇಲಾಖೆಗಳ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
1,616 ಸ್ಥಳಗಳಲ್ಲಿ ತ್ಯಾಜ್ಯ ಪತ್ತೆ
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ವಿಭಾಗ ನಡೆಸಿದ ಸಮೀಕ್ಷೆಯಲ್ಲಿ ನಗರದ ವಿವಿಧ ಭಾಗಗಳ 1,616 ಸ್ಥಳಗಳಲ್ಲಿ 22 ಸಾವಿರ ಟನ್ಗಿಂತಲೂ ಹೆಚ್ಚು ಕಟ್ಟಡ ಭಗ್ನಾವಶೇಷ, ಬೃಹತ್ ತ್ಯಾಜ್ಯ ಹಾಗೂ ಇತರೆ ಕಸ ಬಿದ್ದಿರುವುದು ಪತ್ತೆಯಾಗಿದೆ. ಪ್ರತಿಯೊಂದು ಸ್ಥಳದ ತ್ಯಾಜ್ಯದ ಪ್ರಮಾಣವನ್ನು ಮ್ಯಾಪಿಂಗ್ ಮಾಡಿ ತೆರವು ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗಿದೆ.
ಕಸ ವಿಲೇವಾರಿಗೆ ಐದು ಕ್ವಾರಿಗಳ ಗುರುತು
ಬೃಹತ್ ಪ್ರಮಾಣದಲ್ಲಿ ತೆರವುಗೊಳ್ಳುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಯರಪ್ಪನಹಳ್ಳಿ, ಮಾರೇನಹಳ್ಳಿ, ವೆಂಕಟಪುರ, ವಿಟ್ಟಸಂದ್ರ ಹಾಗೂ ಕಲ್ಲುಬಾಳು ಪ್ರದೇಶಗಳಲ್ಲಿರುವ ಐದು ಅನಾಥ ಕ್ವಾರಿಗಳನ್ನು ಗುರುತಿಸಲಾಗಿದೆ. ನಗರದ ವಿವಿಧ ಭಾಗಗಳಿಂದ ಸಂಗ್ರಹವಾಗುವ ತ್ಯಾಜ್ಯವನ್ನು ಮೊದಲು ತಾತ್ಕಾಲಿಕ ಸಂಗ್ರಹ ಕೇಂದ್ರಗಳಿಗೆ ಸಾಗಿಸಿ, ಅಲ್ಲಿಂದ ಈ ಕ್ವಾರಿಗಳಿಗೆ ರವಾನಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ: 30 ಸಾವಿರ ಜನರಿಗೆ ಕೇವಲ ಒಂದು ಶೌಚಾಲಯ! ಬಿ.ಪ್ಯಾಕ್ ಅಧ್ಯಯನದಲ್ಲಿ ಆತಂಕಕಾರಿ
ಈ ಅಭಿಯಾನದಲ್ಲಿ ಜಿಬಿಎ, ನಗರದ ಐದು ಮಹಾನಗರ ಪಾಲಿಕೆಗಳು, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ, ಬೆಂಗಳೂರು ಮೆಟ್ರೋ, ಕೆ-ರೈಡ್, ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕೆಐಎಡಿಬಿ, ಬೆಸ್ಕಾಂ ಹಾಗೂ ಜಲಮಂಡಳಿ ಸೇರಿದಂತೆ ಹಲವು ಇಲಾಖೆಗಳು ಜಂಟಿಯಾಗಿ ಭಾಗವಹಿಸಲಿವೆ.
ಕಸದ ತೆರವಿನ ಜೊತೆಗೆ ನಗರದ ಪ್ರಮುಖ ರಸ್ತೆಗಳು, ಹೊರ ವರ್ತುಲ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಜಂಕ್ಷನ್ಗಳು ಹಾಗೂ ಪಾದಚಾರಿ ಮಾರ್ಗಗಳ ಸಮಗ್ರ ಸ್ವಚ್ಛತಾ ಕಾರ್ಯವೂ ನಡೆಯಲಿದೆ. ರಸ್ತೆ ಬದಿಯಲ್ಲಿರುವ ಬಳಕೆಯಲ್ಲದ ವಿದ್ಯುತ್ ಕಂಬಗಳು, ಅನಗತ್ಯ ತಂತಿಗಳು, ಪೈಪ್ಗಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯಕ್ಕೂ ಆದ್ಯತೆ ನೀಡಲಾಗಿದೆ. ಹೆಬ್ಬಾಳ ಜಂಕ್ಷನ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ವಿವಿಧ ಇಲಾಖೆಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಸ್ವಚ್ಛತಾ ಯೋಜನೆ ಜಾರಿಗೊಳಿಸಲಿವೆ.
ಆಗಸ್ಟ್ ತಿಂಗಳ ಪೂರ್ತಿ ನಡೆಯುವ ಈ ವಿಶೇಷ ಅಭಿಯಾನದ ಮೂಲಕ ರಸ್ತೆ ಬದಿ, ಖಾಲಿ ಜಾಗಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಬಿಸಾಡಲಾಗಿರುವ ತ್ಯಾಜ್ಯವನ್ನು ಸಂಪೂರ್ಣ ತೆರವುಗೊಳಿಸಿ, ನಗರವನ್ನು ಹೆಚ್ಚು ಸ್ವಚ್ಛ ಹಾಗೂ ಸುಂದರವಾಗಿಸುವ ಗುರಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊಂದಿದೆ. ಕಸ ಸಾಗಣೆಗಾಗಿ ನೋಂದಾಯಿತ ವಾಹನಗಳನ್ನೇ ಬಳಸುವುದು ಹಾಗೂ ಸಂಪೂರ್ಣ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ.
ಇದನ್ನೂ ನೋಡಿ : ನೀಟ್ ಹೋರಾಟಕ್ಕೆ ಕಲೆಯ ಧ್ವನಿ! ಸೋನಂ ವಾಂಗ್ಚುಕ್ ಬೆಂಬಲಕ್ಕೆ ಚಿತ್ರ ಬಿಡಿಸಿದ ಬಿ.ಎಸ್. ದೇಸಾಯಿ Janashakthi Media
