ಬೆಂಗಳೂರು: ದೇಶದ ಐಟಿ ರಾಜಧಾನಿ ಎಂದು ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯಗಳ ತೀವ್ರ ಕೊರತೆ ಇರುವ ಆತಂಕಕಾರಿ ಸಂಗತಿ ಅಧ್ಯಯನವೊಂದರಿಂದ ಬಹಿರಂಗವಾಗಿದೆ. ಸುಮಾರು 1.4 ಕೋಟಿ ಜನಸಂಖ್ಯೆ ಹೊಂದಿರುವ ನಗರದಲ್ಲಿ ಕೇವಲ 900 ಸಾರ್ವಜನಿಕ ಶೌಚಾಲಯಗಳು ಮಾತ್ರ ಲಭ್ಯವಿದ್ದು, ಸರಾಸರಿ 25 ಸಾವಿರದಿಂದ 30 ಸಾವಿರ ಜನರಿಗೆ ಕೇವಲ ಒಂದು ಸಾರ್ವಜನಿಕ ಶೌಚಾಲಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯ
ನಗರಾಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಂಸ್ಥೆಯಾದ ಬೆಂಗಳೂರು ಪಾಲಿಟಿಕಲ್ ಆಕ್ಷನ್ ಕಮಿಟಿ (B.PAC) ತನ್ನ ಸಿವಿಕ್ ಲೀಡರ್ಶಿಪ್ ಇನ್ಕ್ಯುಬೇಟರ್ ಪ್ರೋಗ್ರಾಂ (CLIP) ಅಡಿಯಲ್ಲಿ ನಡೆಸಿದ ಸಾರ್ವಜನಿಕ ಶೌಚಾಲಯಗಳ ಅಧ್ಯಯನ (ಆಡಿಟ್) ವರದಿಯಲ್ಲಿ ಈ ಅಂಶಗಳು ಬೆಳಕಿಗೆ ಬಂದಿವೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಗರದ ವಿವಿಧ ಭಾಗಗಳಲ್ಲಿನ ಶೌಚಾಲಯಗಳ ಸ್ಥಿತಿ, ಸ್ವಚ್ಛತೆ, ನಿರ್ವಹಣೆ ಮತ್ತು ಸಾರ್ವಜನಿಕರ ಬಳಕೆಯ ಅನುಕೂಲತೆಯನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಾಗಿದೆ. ಶೌಚಾಲಯ
ನಾಲ್ಕನೇ ಒಂದು ಭಾಗ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿಲ್ಲ
ಅಧ್ಯಯನದ ಪ್ರಕಾರ, ನಗರದಲ್ಲಿರುವ ಸಾರ್ವಜನಿಕ ಶೌಚಾಲಯಗಳಲ್ಲಿ ಸುಮಾರು 26 ಶೇಕಡಾ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ವಾಸ್ತವವಾಗಿ ಸಾರ್ವಜನಿಕರ ಬಳಕೆಗೆ ಲಭ್ಯವಿರುವ ಶೌಚಾಲಯಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗಿದೆ.
ಇದಲ್ಲದೆ ಅನೇಕ ಶೌಚಾಲಯಗಳಲ್ಲಿ ಕುಡಿಯುವ ನೀರು, ಕೈತೊಳೆಯಲು ಸಾಬೂನು, ಕಸದ ಬುಟ್ಟಿಗಳು, ಸಮರ್ಪಕ ಬೆಳಕು ಹಾಗೂ ನಿಯಮಿತ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯೂ ಕಂಡುಬಂದಿದೆ.
ಮಹಿಳೆಯರು ಮತ್ತು ವಿಶೇಷಚೇತನರಿಗೆ ಹೆಚ್ಚು ತೊಂದರೆ
ವರದಿಯ ಪ್ರಕಾರ, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಅನುಕೂಲವಾಗುವ ರೀತಿಯ ಮೂಲಸೌಕರ್ಯ ಬಹುತೇಕ ಸಾರ್ವಜನಿಕ ಶೌಚಾಲಯಗಳಲ್ಲಿ ಇಲ್ಲ. ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯಗಳ ಕೊರತೆ ಹಾಗೂ ವಿಶೇಷಚೇತನ ಸ್ನೇಹಿ ವ್ಯವಸ್ಥೆಗಳ ಅಭಾವ ಗಂಭೀರ ಸಮಸ್ಯೆಯಾಗಿ ಗುರುತಿಸಲಾಗಿದೆ.
ಇದನ್ನೂ ಓದಿ : ಎಸ್ಐಆರ್ ಫಾರ್ಮ್ನಲ್ಲಿ 2002ರ ವಿವರ ಕಡ್ಡಾಯವಲ್ಲ; ಆಗಸ್ಟ್ 8ರೊಳಗೆ ಅರ್ಜಿ ಸಲ್ಲಿಸಿ: ಕರ್ನಾಟಕ ಮುಖ್ಯ ಚುನಾವಣಾಧಿಕಾರಿ
ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಸಾಲದ ಮೂಲಸೌಕರ್ಯ
ಪ್ರತಿದಿನ ಲಕ್ಷಾಂತರ ಜನರು ಉದ್ಯೋಗ, ಶಿಕ್ಷಣ ಹಾಗೂ ವ್ಯಾಪಾರಕ್ಕಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಆದರೆ ಜನಸಂಖ್ಯೆಯ ಏರಿಕೆಗೆ ಅನುಗುಣವಾಗಿ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಿಲ್ಲ. ಇದರಿಂದ ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ, ವಾಣಿಜ್ಯ ಪ್ರದೇಶಗಳು ಹಾಗೂ ಜನನಿಬಿಡ ಸ್ಥಳಗಳಲ್ಲಿ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಶೌಚಾಲಯ
ತಕ್ಷಣ ಕ್ರಮಕ್ಕೆ ಶಿಫಾರಸು
ನಗರದಲ್ಲಿ ಹೊಸ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವುದು, ಕಾರ್ಯನಿರ್ವಹಿಸದ ಶೌಚಾಲಯಗಳನ್ನು ತಕ್ಷಣ ದುರಸ್ತಿಗೊಳಿಸುವುದು, ಮಹಿಳೆಯರು ಮತ್ತು ವಿಶೇಷಚೇತನರಿಗೆ ಅನುಕೂಲವಾಗುವಂತೆ ಮೂಲಸೌಕರ್ಯ ಕಲ್ಪಿಸುವುದು ಹಾಗೂ ಸ್ವಚ್ಛತೆ ಮತ್ತು ನಿರ್ವಹಣೆಗೆ ಶಾಶ್ವತ ವ್ಯವಸ್ಥೆ ರೂಪಿಸುವಂತೆ ಬಿ.ಪ್ಯಾಕ್ ವರದಿಯಲ್ಲಿ ಶಿಫಾರಸು ಮಾಡಿದೆ.
ನಗರದ ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕರ ಮೂಲಭೂತ ಸೌಲಭ್ಯಗಳ ದೃಷ್ಟಿಯಿಂದ ಈ ಸಮಸ್ಯೆಯನ್ನು ಆದ್ಯತೆಯಾಗಿ ಪರಿಗಣಿಸಿ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ವರದಿ ಒತ್ತಿ ಹೇಳಿದೆ. ಶೌಚಾಲಯ
ಇದನ್ನೂ ನೋಡಿ : ನೀಟ್ ಹಗರಣ: ದೆಹಲಿ ಹೋರಾಟಕ್ಕೆ ಮತ್ತಷ್ಟು ಬಲ! ಎನ್ಡಿಎ ಮಿತ್ರಪಕ್ಷಗಳ ಮೌನ ಏಕೆ? Janashakthi Media
