ಜಮಖಂಡಿ: ರಾಜ್ಯದಲ್ಲಿ ಮಳೆ ಕೊರತೆ ತೀವ್ರಗೊಂಡ ಹಿನ್ನೆಲೆ ಬರ ಪರಿಸ್ಥಿತಿ ಉಲ್ಬಣಗೊಂಡಿದ್ದು, ಬೆಳೆಸಾಲ ಮನ್ನಾ ಹಾಗೂ ಮುಂಗಾರು ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಜೂನ್ 26ರಂದು ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.
ಮಳೆಯ ಅಭಾವದಿಂದ ಭೂಗರ್ಭ ಜಲಮಟ್ಟ ಕುಸಿದಿದ್ದು, ಬೋರ್‌ವೆಲ್‌ಗಳ ಮೂಲಕವೂ ನೀರಾವರಿ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಆರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಂಡು ಬೆಳೆಸಾಲ ಮನ್ನಾ ಜಾರಿಗೆ ತರುವುದು ಮಾತ್ರವಲ್ಲದೆ, ಬೆಳೆ ನಷ್ಟಕ್ಕೆ ಸಮರ್ಪಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಅಮೆರಿಕಾ–ಇರಾನ್ ಪರಸ್ಪರ ದಾಳಿ, ಕದನ ವಿರಾಮ ಉಲ್ಲಂಘನೆ ಆರೋಪ
ಇನ್ನೊಂದೆಡೆ, ಕೆಇಬಿ ಖಾಸಗೀಕರಣದ ಪ್ರಸ್ತಾವವನ್ನು ಕೈಬಿಡಬೇಕು ಎಂದು ಆಗ್ರಹಿಸಿ, ವಿದ್ಯುತ್ ಸೇವೆ ಸರ್ಕಾರಿ ವಲಯದಲ್ಲಿಯೇ ಮುಂದುವರಿಯಬೇಕು ಎಂದರು. ಖಾಸಗೀಕರಣ ಜಾರಿಗೆ ಬಂದರೆ ರೈತರ ಮೇಲೆ ಹೆಚ್ಚುವರಿ ಆರ್ಥಿಕ ಭಾರ ಬೀಳುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದರು.
ರೈತರಿಗೆ ಸಂಬಂಧಿಸಿದ ಸರ್ಕಾರಿ ಸೇವೆಗಳ ಶುಲ್ಕ ವಿವರಗಳನ್ನು ಕಚೇರಿಗಳಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಿ, ಅನಧಿಕೃತ ಹಣ ವಸೂಲಿಗೆ ತಡೆಹಿಡಿಯಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶ್ರೀಶೈಲ ಭೂಮಾರ, ರಾಜು ನದಾಫ್, ಹನಮಂತ ಮಗದುಮ, ಯಲ್ಲಪ್ಪ ಹೆಗಡೆ, ಬಾಹುಬಲಿ ನ್ಯಾಮಗೌಡ, ಕಲ್ಲಪ್ಪ ಬಿರಾದಾರ ಸೇರಿದಂತೆ ಅಥಣಿ ಮತ್ತು ಬಬಲೇಶ್ವರ ತಾಲೂಕುಗಳ ರೈತರು ಭಾಗವಹಿಸಿದ್ದರು.
ಇದನ್ನೂ ನೋಡಿ: ಬೀದಿ ವ್ಯಾಪಾರಿಗಳನ್ನು ರಕ್ಷಿಸಿ – ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ Janashakthi Media
