ಅಯೋಧ್ಯಾ ರಾಮಮಂದಿರದಲ್ಲಿ ಭಕ್ತರ ಕಾಣಿಕೆ ಹುಂಡಿಯ ಹಗಲು ದರೋಡೆ?

ಅಯೋಧ್ಯಾ ರಾಮ ದೇವರ ಹುಂಡಿಯ ದರೋಡೆ ಈಗ ದೇಶದಲ್ಲಿ ಬಹು ದೊಡ್ಡ ಸುದ್ದಿ ಮಾಡಿದೆ. ಸಂಘ ಪರಿವಾರದ ರೂಪದಲ್ಲಿ ರಾಮ ದೇವರ ಮಹಾ ಭಕ್ತಾದಿಗಳೇ ತುಂಬಿರುವ ರಾಮ ಮಂದಿರ ಟ್ರಸ್ಟ್‌ನ ಪದಾಧಿಕಾರಿಗಳು ಇಲ್ಲ ಇಲ್ಲ ಎಂದು ಹೇಳುತ್ತಲೇ ಇದ್ದರೂ ಈ ಮಹಾ ದರೋಡೆ ಈಗ ಬೆಳಕಿಗೆ ಬರುತ್ತಿದೆ. ಉತ್ತರ ಪ್ರದೇಶದ ಸರ್ಕಾರ ವಿಶೇಷ ತನಿಖಾ ದಳ ನೇಮಿಸಿ ಅದರ ವರದಿ ಬರುತ್ತಲೇ ಎಫ್‌ಐಆರ್‌ ದಾಖಲಿಸಲಾಗಿದೆ. ಅಯೋಧ್ಯಾ

– ಜಿ. ಎಸ್‌ ಮಣಿ

ಎಂಟು ಜನ ಕೆಳ ಸ್ತರದ ನೌಕರರ ಬಂಧನ ಆಗಿದೆ. ದೊಡ್ಡವರ ರಕ್ಷಣೆಯ ಸಲುವಾಗಿ ಹೀಗೆ ಮಾಡಲಾಗಿದೆಯೇ ಎಂಬ ಪ್ರಶ್ನೆಗಳೂ ಎದ್ದಿವೆ. ದೊಡ್ಡ ಪ್ರಮಾಣದ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಈ ವಿಷಯ ಹೊರಗೆ ಕಾಣುವುದಕ್ಕಿಂತ ದೊಡ್ಡ ಹಗರಣ/ದರೋಡೆ ಇರಬಹುದು ಎಂಬ ಗುಮಾನಿಯನ್ನು ಹುಟ್ಟಿಹಾಕಿದೆ.

ಉತ್ತಮ ನಿರ್ವಹಣೆಯ ಉದಾಹರಣೆ ಯಾಕೆ ಬೇಡವಾಯಿತು?

ದೇಶದಲ್ಲೇ ಅತೀ ಶ್ರೀಮಂತ ದೇವಸ್ಥಾನವೆನಿಸಿಕೊಂಡಿರುವ ತಿರುಪತಿ ದೇವಸ್ಥಾನದ ಉತ್ತಮ ನಿರ್ವಹಣೆಯ ಉದಾಹರಣೆ ಇರುವಾಗ ಯಾಕೆ ಅಯೋಧ್ಯೆಯಲ್ಲಿ ನಿರ್ವಹಣೆ ಕುಂಟಿತವಾಯಿತು ಎಂಬ ಪ್ರಶ್ನೆಯೂ ಎದ್ದಿದೆ. ವಿಶ್ವಪ್ರಸಿದ್ಧ ತಿರುಪತಿ ಬಾಲಾಜಿ ದೇಗುಲದಲ್ಲಿ, ಭಕ್ತರು ದಾನ ಮಾಡುವ ಎಲ್ಲಾ ಆಭರಣಗಳನ್ನು ಗುರುತಿಸಲಾಗುತ್ತದೆ ಮತ್ತು ಮೌಲ್ಯಮಾಪನವನ್ನು ಭಾರತೀಯ ಮಿಂಟಿಂಗ್ ಕಾರ್ಪೊರೇಷನ್ ಮಾಡುತ್ತದೆ, ಆದರೆ ಅಯೋಧ್ಯೆಯಲ್ಲಿ, ಮಿಂಟಿಂಗ್ ಕಾರ್ಪೊರೇಷನ್ ಜೊತೆ ಒಪ್ಪಂದವನ್ನು ಸಿದ್ಧಪಡಿಸಲಾದರೂ ಕಾರ್ಯಗತಗೊಳಿಸಲಾಗಿಲ್ಲ. ಏಕೆ? ಇದು ಪ್ರಸಿದ್ಧ ಪತ್ರಕರ್ತರೊಬ್ಬರ ಪ್ರಶ್ನೆ. ಅಯೋಧ್ಯಾ

ಇದನ್ನೂ ಓದಿ: ರಾಜಸ್ಥಾನ| ಅಕ್ರಮ ಗಣಿಗಾರಿಕೆ ವಿರುದ್ಧ ಜನರ ಹೋರಾಟ ತೀವ್ರ: ಪರಿಸರ – ಜೀವನೋಪಾಯಕ್ಕೆ ಭಾರೀ ಅಪಾಯ

ಉದಾಹರಣೆಗಳು ಇರುವಾಗ ಅಲ್ಲಿನ ಉತ್ತಮ ನಿರ್ವಹಣಾ ವಿಧಾನಗಳ ಅಳವಡಿಕೆ ಮಾಡಿಕೊಳ್ಳಲಿಲ್ಲ ಎಂದರೆ ಅದು ದುರುದ್ದೇಶಪೂರ್ವಕವಾಗಿಯೇ ಇರಬಹುದು ಎಂಬ ಶಂಕೆ ಬಲ ಪಡೆಯುತ್ತದೆ. ತಾವು ಉತ್ತಮರಲ್ಲಿ ಉತ್ತಮರು ಎಂಬ ಸಂಘ ಪರಿವಾರದವರ ದುರಹಂಕಾರ ಮತ್ತು ಅಪ್ರಾಮಾಣಿಕತೆಯನ್ನು ಇದು ತೆರೆದು ತೋರಿಸಿದೆ. ಅಯೋಧ್ಯಾ

ಬಯಲಾದ ಕಳ್ಳತನ

ಟ್ರಸ್ಟ್ನ ನೌಕರ ಮಹಿಪಾಲ ಸಿಂಗ್‌ ಎನ್ನುವವರು ಕಾಣಿಕೆ ಹಣದ ಎಣಿಕೆಯಲ್ಲಿ ಆಗುತ್ತಿರುವ ಮೋಸವನ್ನು ಹಸಿಯಾಗಿಯೇ ಹಿಡಿದು ತೋರಿಸಿದರು. ಮೂವತ್ತೈದು ಲಕ್ಷ ರೂಪಾಯಿಗಳ ಬದಲು ಬರೀ 20 ಲಕ್ಷ ರೂಪಾಯಿಗಳ ಲೆಕ್ಕ ಆಗಿದ್ದನ್ನು ಅವರು ಎತ್ತಿ ತೋರಿಸಿ ಪ್ರಶ್ನಿಸಿದ್ದಾರೆ. ಈ ಕಾರಣಕ್ಕೆ ಅವರನ್ನು ಕೆಲಸದಿಂದ ವಜಾ ಮಡಲಾಯಿತು. ಆದರೆ ಅವರ ಮೇಲೆ ಕ್ರಮ ಕೈಗೊಳ್ಳುವ ಧೈರ್ಯ ಮೇಲಿನವರಿಗೆ ಬರಲಿಲ್ಲ (ಕಳ್ಳನ ಮನಸ್ಸು ಹುಳ್ಳಗೆ ಇರಬಹುದೇ?). ಅಯೋಧ್ಯಾ

ದರೋಡೆ ದುಡ್ಡಿನ ಪಾಲಿನ ಅಸಮಾನತೆ ಅಸಮಾಧಾನವನ್ನೂ ಹುಟ್ಟಿಹಾಕಿತ್ತು. ಹಾಗೆ ಹೊರಬಂದ ವಿಷಯ ಹರಡತೊಡಗಿ ಇಂದು ಬಹು ದೊಡ್ಡ ಅಕ್ರಮವಾಗಿ ಹೊರಬಂದು ಸಾರ್ವಜನಿಕ ಹಗರಣವಾಗಿ ಕೂತಿದೆ. ಸಮಾಜವಾದಿ ಪಕ್ಷದ ಶಾಸಕ ಪವನ್‌ ಪಾಂಡೆ ಈ ವಿಷಯವನ್ನು ಹೊರಹಾಕಿದ ಬೆನ್ನಲ್ಲೇ ವಿಷಯ ದೊಡ್ಡ ರಾಜಕೀಯ ರೂಪವನ್ನು ತಳೆದು ದೇಶದೊಳಗೆ ಬಿರುಗಾಳಿ ಎಬ್ಬಿಸಿತು. ಅಯೋಧ್ಯೆಯ ನಿವಾಸಿಯಾಗಿರುವ ಪಾಂಡೆ, ದೇವಾಲಯದಲ್ಲಿನ ಅಕ್ರಮಗಳು ಮತ್ತು ನಿಧಿಯ ದುರುಪಯೋಗದ ಬಗ್ಗೆ ಒಳಗಿನವರು ಮತ್ತು ಮಾಜಿ ಉದ್ಯೋಗಿಗಳು ಒದಗಿಸಿದ ಮಾಹಿತಿಯನ್ನು ಬಳಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಕುಕೃತ್ಯಗಳನ್ನು ಎಸಗಿದವರು  ಎಲ್ಲಾ ಸಿಸಿಟಿವಿ ದೃಶ್ಯಗಳನ್ನು ಅಳಿಸಿಹಾಕಿದ್ದಾರೆ ಎಂಬುದು ಇನ್ನೊಂದು ಬೆಚ್ಚಿಬೀಳಿಸುವ ವಿಷಯ

ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ

ಮೋಹಿತ್‌ ಅಶೋಕ್‌ ಎಂಬ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯೊಂದನ್ನು ಅಲಹಾಬಾದ್‌ ಹೈಕೋರ್ಟಿನಲ್ಲಿ ದಾಖಲಿಸಿದ್ದಾರೆ. ಹೀಗೆ ಪ್ರಕರಣ ನ್ಯಾಯಾಲಯಕ್ಕೂ ಪ್ರವೇಶ ಪಡೆದಂತಾಗಿದೆ. ಜೂನ್‌ 9 ಮತ್ತು 12 ರ ನಡುವೆ ಅಲಹಾಬಾದ್‌ ಹೈಕೋರ್ಟಿನ ಇಬ್ಬರು ನಿವ್ರತ್ತ ನ್ಯಾಯಧೀಶರ ವಿಚಾರಣಾ ಸಮಿತಿ ನೇಮಕ ಮಾಡುವ ಚರ್ಚೆಯೂ ನಡೆದಿತ್ತು. ಅಯೋಧ್ಯಾ

ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ಈ ಕೆಳಗಿನ ಒತ್ತಾಯಗಳನ್ನು ಮಾಡಿದೆ:

1. ರಾಮ ಮಂದಿರ ಯೋಜನೆಗೆ ಸಂಬಂಧಿಸಿದ ಭೂ ಮತ್ತು ಹಣಕಾಸು ವಹಿವಾಟುಗಳಲ್ಲಿ ಇಡೀ ಜಿಲ್ಲಾಡಳಿತದ ಪಾತ್ರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು

2. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅವರಿಂದ ಸಮಗ್ರ ಲೆಕ್ಕಪರಿಶೋಧನೆ ಮಾಡಿಸಬೇಕು

3. ಟ್ರಸ್ಟ್ ರಚನೆಯಿಂದ ಇಲ್ಲಿಯವರೆಗೆ ಅದರ ಹಣಕಾಸು ಚಟುವಟಿಕೆಗಳ ವಿಧಿವಿಜ್ಞಾನ ಪರೀಕ್ಷೆ ಆಗಬೇಕು

4. ಅಶೋಕ್ ಅವರು ಎಸ್‌ಐಟಿ ತನಿಖೆಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿದ್ದಾರೆ

ಟ್ರಸ್ಟ್ ಅನ್ನು ತನಿಖೆ ಮಾಡಲು ಎಸ್‌ಐಟಿಗೆ ಅಧಿಕಾರವಿದೆಯೇ ಎಂಬುದು ಪ್ರಮುಖ ವಿವಾದಗಳಲ್ಲಿ ಒಂದಾಗಿದೆ. ಟ್ರಸ್ಟ್‌ನ ವ್ಯವಹಾರಗಳನ್ನು ತನಿಖೆ ಮಾಡಲು ಎಸ್‌ಐಟಿಗೆ ಶಾಸನಬದ್ಧ ಅಥವಾ ಕಾನೂನು ಸ್ಥಾನಮಾನವಿಲ್ಲ ಎಂದು ಅಶೋಕ್ ಹೇಳುತ್ತಾರೆ. ದಾಖಲೆಗಳನ್ನು ಸಲ್ಲಿಸಲು ಅಥವಾ ತನಿಖಾಧಿಕಾರಿಗಳನ್ನು ಸಂಪರ್ಕಿಸಲು ಸಾರ್ವಜನಿಕವಾಗಿ ಲಭ್ಯವಿರುವ ಯಾವುದೇ ಕಾರ್ಯವಿಧಾನವಿಲ್ಲದಿರುವಾಗ ಮಾಹಿತಿ ನೀಡುವವರು ಅಥವಾ ಪುರಾವೆಗಳನ್ನು ಹೊಂದಿರುವ ವ್ಯಕ್ತಿಗಳು ಎಸ್‌ಐಟಿ ಅನ್ನು ಹೇಗೆ ಸಂಪರ್ಕಿಸಬೇಕು ಎಂದು ಪ್ರಶ್ನಿಸಿ ವಾಸ್ತವಿಕ ಕಾಳಜಿಗಳನ್ನು ಅವರು ಎತ್ತಿದ್ದಾರೆ. ಅಯೋಧ್ಯಾ

ವಿಶೇಷ ತನಿಖಾ ದಳದ ನೇಮಕ

ಅಪಾರ ರಾಜಕೀಯ ಒತ್ತಡದ ಕಾರಣ ಉತ್ತರ ಪ್ರದೇಶದ ಸರ್ಕಾರ ವಿಶೇಷ ತನಿಖಾ ದಳ (ಎಸ್‌ಐಟಿ) ನೇಮಿಸಲೇಬೇಕಾಗಿ ಬಂತು. ಜೂನ್ 14 ರಂದು, ಯುಪಿ ಸರ್ಕಾರವು ಆರೋಪಗಳ ತನಿಖೆಗಾಗಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿತು. ಎಸ್‌ಐಟಿಯಲ್ಲಿ-

1. ವಿಜಯ್ ವಿಶ್ವಾಸ್ ಪಂತ್, ವಿಭಾಗೀಯ ಆಯುಕ್ತರು, ಲಕ್ನೋ

2. ಕಿರಣ್ ಎಸ್, ಇನ್ಸ್‌ಪೆಕ್ಟರ್ ಜನರಲ್

3. ನೀಲ್ ರತನ್, ವಿಶೇಷ ಕಾರ್ಯದರ್ಶಿ, ಹಣಕಾಸು, ಇವರೆಲ್ಲ ಇದ್ದಾರೆ

ಎಸ್‌ಐಟಿ ಪೂರ್ವಭಾವಿ ವರದಿಯನ್ನು ಆಗಲೇ ನೀಡಿದೆ.

ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್‌ ಅವರು ಅಕ್ರಮವಾಗಿದ್ದರೆ ಯಾರನ್ನೂ ಬಿಡುವುದಿಲ್ಲ ಎಂದು ಸಾರ್ವಜನಿಕಾವಾಗಿ ಅಬ್ಬರಿಸಿದರು. “ನಾವು 500 ವರ್ಷಗಳ ಕಾಲ ಕಾದಿದ್ದೇವೆ. ಈಗ ಇನ್ನೂ 15 ದಿನ ಕಾಯೋಣ. ಅಯೋಧ್ಯೆಯನ್ನು ಕೆಣಕಲು ಮತ್ತು ರಾಮ ಜನ್ಮಭೂಮಿ ದೇವಾಲಯವನ್ನು ಅವಮಾನಿಸಲು ಪ್ರಯತ್ನಿಸುವವರಿಂದ ದಾರಿ ತಪ್ಪಬೇಡಿ. ಇಂದು, ತಪ್ಪು ಮಾಹಿತಿ ಅಭಿಯಾನಗಳ ಮೂಲಕ, ಅವರು ನಮ್ಮ ಪವಿತ್ರ ಯಾತ್ರಾ ನಗರಗಳಲ್ಲಿ ಪ್ರಮುಖವಾದ ಅಯೋಧ್ಯಾ ಧಾಮವನ್ನು ಅವಮಾನಿಸಲು ಪ್ರಯತ್ನಿಸುತ್ತಿದ್ದಾರೆ. ಅಯೋಧ್ಯಾ

ಅವರು ಸುಳ್ಳು ಪ್ರಚಾರವನ್ನು ಹರಡುತ್ತಿದ್ದಾರೆ” ಎಂದು ಹೇಳಿದರು. ಇದು ಅಪ್ಪಟ ರಾಜಕೀಯದ ಮಾತು. ಇಂತಹ ದೊಡ್ಡ ದೇವಾಲಯದಲ್ಲಿ ಅದಕ್ಕೆ ತಕ್ಕ ಹಾಗೆ ವಿಧಿ ವಿಧಾನಗಳನ್ನು ಯಾಕೆ ಜಾರಿಗೊಳಿಸಲಿಲ್ಲ ಎಂಬ ಪ್ರಶ್ನೆ ಉತ್ತರಕ್ಕಾಗಿ ಕಾದು ಕುಳಿತೇ ಇದೆ. ಟ್ರಸ್ಟ್ನ ಮುಖ್ಯಸ್ಥ ಚಂಪತ್‌ ರಾಯ್‌ ರಾಜಿನಾಮೆ ನೀಡಿರುವ ಸುದ್ದಿ ಬಂದಿದೆ. ವಿಶೇಷ ತನಿಖಾ ದಳದ ವರದಿಯ ನಂತರ ಬಂಧನಕ್ಕೆ ಒಳಗಾದವರಲ್ಲಿ ಚಂಪತ್‌ ರಾಯ್‌ ಅವರ ಕಾರಿನ ಡ್ರೈವರ್‌ ಒಬ್ಬ. ಚಂಪತ್‌ ರಾಯ್‌ಗೆ ಈ ಅಕ್ರಮಗಳ ವಿಷಯ ತಿಳಿದಿರಲೇ ಇಲ್ಲ ಎಂದರೆ ನಂಬುವುದು ಸಾಧ್ಯವೇ? ಅಯೋಧ್ಯಾ

ದೇವಾಲಯದ ಸುತ್ತ ಎಲ್ಲೆಲ್ಲೂ ಅಕ್ರಮ

ಈ ಪ್ರದೇಶದ ಸುತ್ತಮುತ್ತಲು ವಾಸಿಸುವವರು ಹೇಳುವ ಪ್ರಕಾರ ದೇವಾಲಯಕ್ಕಾಗಿ ಜಮೀನು ಕೊಳ್ಳುವಾಗಲೇ ಕಡಿಮೆ ಬೆಲೆಗೆ ಬೆಳಿಗ್ಗೆ ಜಮೀನು ಕೊಂಡು ಸಾಯಂಕಾಲ ಅದೇ ಜಮೀನನ್ನು ದೇವಾಲಯಕ್ಕಾಗಿ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರಿರುವ ಪುಕಾರುಗಳಿವೆ. ಅಂದರೆ ಇಲ್ಲಿ ನಡೆದಿರುವ ಅಕ್ರಮಗಳಿಗೆ ಲಂಗು ಲಗಾಮು ಯಾವುದೇ ಇದ್ದಿರುವ ಲಕ್ಷಣಗಳೇ ಇಲ್ಲ!! ಅಯೋಧ್ಯಾ

ಕಾಣಿಕೆ ನೀಡಿದ ಭಕ್ತರ ಪ್ರಶ್ನೆಗಳು

ಭಕ್ತರನೇಕರು ತಾವು ನೀಡಿದ ಕಾಣಿಕೆಗಳು ಎಲ್ಲಿ ಹೋದವು ಎಂಬ ಪ್ರಶ್ನೆಗಳನ್ನು ಕೇಳತೊಡಗಿದ್ದಾರೆ. ಇನ್ನೂರು ಬೆಳ್ಳಿ ಇಟ್ಟಿಗೆ ನೀಡಿದವರು, ಚಿನ್ನದ ಕಂಠ ಹಾರ ನೀಡಿದವರು, ವಜ್ರವೈಡೂರ್ಯ ನೀಡಿದವರು ಇವುಗಳ ಲೆಕ್ಕ ಕೇಳತೊಡಗಿದ್ದಾರೆ. ಉತ್ತರ ನೀಡುವವರು ಯಾರು? ಕೋಟಿ ಕೋಟಿ ಭಕ್ತರ ಭಾವನೆಗಳಿಗೆ ಅಪಾರ ಪ್ರಮಾಣದ ಘಾಸಿ ಆಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಅಯೋಧ್ಯಾ

ಮರ್ಯಾದಾ ಪುರುಷೋತ್ತಮ ರಾಮ ಎಂಬ ಬಿರುದನ್ನು ರಾಮ ದೇವರಿಗೆ ನೀಡಿ ಹಲವು ವರ್ಷಗಳ ಕಾಲ ಆ ದೇವರ ಹೆಸರಿನಲ್ಲಿ ಚಳುವಳಿ ನಡೆಸಿ ಅಧಿಕಾರಕ್ಕೆ ಬಂದು, ಆ ದೇವರಿಗೆ ಅದ್ದೂರಿ ಆಲಯ ಕಟ್ಟಿಸಿ ದೊಡ್ಡ ತೀರ್ಥಕ್ಷೇತ್ರ ರೂಪಿಸಿ ಅದಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ಸಂಪನ್ಮೂಲ ಸಂಗ್ರಹಿಸಿ ಈಗ ಇಂತಹ ಮೋಸಕ್ಕೆ ಉತ್ತರಿಸುವವರೇ ಇಲ್ಲದಿದ್ದರೆ ಹೇಗೆ?

ವಿರೋಧ ಪಕ್ಷಗಳ ಕಣ್ಣಳತೆಯ ಅಂದಾಜುಗಳು

ವಿರೋಧ ಪಕ್ಷಗಳು ಈ ಹಗರಣದ ಮೊತ್ತವನ್ನು ವಿಧ ವಿಧವಾಗಿ ಹೇಳಿದ್ದಾರೆ. ಕಾಂಗ್ರೆಸ್‌ ನವರು ಇದು 5000 ಕೋಟಿ ರೂಪಾಯಿಗಳಿಗೂ ಮೀರಿದ ದರೋಡೆ ಎಂದಿದ್ದಾರೆ. ಆಮ್‌ ಆದ್ಮಿ ಪಕ್ಷ ಇದು 200 ಕೋಟಿ ರೂಪಾಯಿಗಳ ಹಗರಣ ಎಂದಿದೆ. ಸಮಾಜವಾದಿ ಪಕ್ಷ ಇದು ಸಾವಿರಾರು ಕೋಟಿ ರೂಪಾಯಿಗಳ ಕಳ್ಳತನ ಎಂದಿದೆ. ಈ ಮೊತ್ತಗಳು ಅವರವರ ಕಣ್ಣಳತೆಗೆ ಸಿಕ್ಕ ಹರಹಿನಿಂದ ನಿರ್ಧರಿತವಾಗಿರಬಹುದು.

ಮುಖ್ಯವಾಗಿ ಸರಿಯಾದ ತನಿಖೆ ಆಗಬೇಕು. ಆಗ ಸರಿಯಾದ ವಿವರಗಳು ದೊರೆತಾವು. ಆದರೆ ಸಂಘ ಪರಿವಾರ ತನ್ನ ಮರ್ಯಾದೆಯ ಪ್ರಶ್ನೆ ಎಂದು ಹಗರಣವನ್ನು ಮುಚ್ಚಿಹಾಕುವ ಕೆಲಸ ಮಾಡಿದರೆ ಆಗ ಸತ್ಯ ಪೂರ್ತಿ ಹೊರಬರದೆ ಉಳಿಯಬಹುದು.

ಶಿವಸೇನೆಯ ಟೀಕೆ

ಈ ವಿಷಯದ ಬಗ್ಗೆ ಶಿವಸೇನೆ (ಯುಬಿಟಿ) ಬಿಜೆಪಿ ವಿರುದ್ಧ ಕೆಲವು ಪ್ರಬಲ ದಾಳಿಗಳನ್ನು ನಡೆಸಿದೆ. ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ, ಬಿಜೆಪಿ ರಾಮ ಮಂದಿರವನ್ನು “ಲೂಟಿ” ಮಾಡಿದೆ ಎಂದು ಪಕ್ಷ ಆರೋಪಿಸಿದೆ. “ಅಯೋಧ್ಯೆಯ ರಾಮಮಂದಿರದಲ್ಲಿ ‘ದೇವಾಲಯ ಅಭಿವೃದ್ಧಿ’ ಎಂದರೆ ಏನು ಎಂಬುದನ್ನು – ಅಂದರೆ ದೇವರ ದೇಣಿಗೆ ಪೆಟ್ಟಿಗೆಗಳ ಲೂಟಿಯನ್ನು – ದೇಶ ಈಗ ನೋಡಿದೆ.

ರಾಮಮಂದಿರದಲ್ಲಿನ ದೇಣಿಗೆಗಳು, ಚಿನ್ನ, ಬೆಳ್ಳಿ ಮತ್ತು ಆಭರಣಗಳನ್ನು ನಿರ್ಲಜ್ಜವಾಗಿ ಲೂಟಿ ಮಾಡಲಾಯಿತು. ಕರಸೇವಕರು ತಮ್ಮ ರಕ್ತವನ್ನು ಚೆಲ್ಲಿ ರಾಮಮಂದಿರಕ್ಕಾಗಿ ಅಂತಿಮ ತ್ಯಾಗ ಮಾಡಿದರು, ಆದರೆ ಆ ದೇವಾಲಯವನ್ನೇ ಲೂಟಿ ಮಾಡಿದ್ದು ಬಿಜೆಪಿ. ಘಜ್ನಿಯ ಮಹಮ್ಮದ್ ಸೋಮನಾಥ ದೇವಾಲಯವನ್ನು ಲೂಟಿ ಮಾಡಿದ ರೀತಿಯಲ್ಲಿ, ಬಿಜೆಪಿ ರಾಮಮಂದಿರವನ್ನು ಲೂಟಿ ಮಾಡಿದೆ” ಎಂದು ಲೇಖನದಲ್ಲಿ ಹೇಳಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು ಈ ಸಂಪಾದಕೀಯವು, ದೇಶಾದ್ಯಂತದ ದೇವಾಲಯ ಲೂಟಿ ಪ್ರಕರಣಗಳಲ್ಲಿ ಬಿಜೆಪಿಗೆ ಸಂಬಂಧಿಸಿದ ಜನರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದೆ. “ಕಳೆದ ದಶಕದಲ್ಲಿ ದೇಶಾದ್ಯಂತ ಅನೇಕ ಪ್ರಮುಖ ದೇವಾಲಯಗಳನ್ನು ಲೂಟಿ ಮಾಡಲಾಗಿದೆ, ಮತ್ತು ಈ ಎಲ್ಲಾ ಲೂಟಿಕೋರರು ಬಿಜೆಪಿಯೊಳಗೆ ಇದ್ದಾರೆ ಅಷ್ಟೇ ಅಲ್ಲ  ಅಮಿತ್ ಶಾ ಅವರ ಮಡಿಲಲ್ಲಿ ಕುಳಿತಿದ್ದಾರೆ” ಎಂದಿದೆ.

ಭಕ್ತಿಯ ಭಾವಸಮಾಧಿಯಲ್ಲಿ ತಮ್ಮ ದಿನನಿತ್ಯದ ನೋವು, ದುಃಖ ದುಮ್ಮಾನಗಳನ್ನು ಮರೆತು ರಾಮದೇವರ ಕೃಪೆಯಿಂದ ತಮಗೆ ಒಳ್ಳೆಯ ದಿನಗಳು ಬರಬಹುದೆಂಬ ಆಶಾಭಾವ ಹೊತ್ತು ಅಯೋಧ್ಯೆಗೆ ಬಂದು ದೇವರಿಗೆ ಕಾಣಿಕೆ ಒಪ್ಪಿಸಿ ಹಿಂತಿರುಗುವ ಭಕ್ತರಿಗೆ ಇಂತಹ ಮೋಸ ನಾಗರಿಕತೆಯನ್ನು ಪ್ರಪಾತದೊಳಕ್ಕೆ ತಳ್ಳಿದಂತೆ ಅಲ್ಲವೇ? ಇದೇ ಬಿಜೆಪಿಯ ಅಚ್ಛೇ ದಿನ್‌ ಗಳೇ?

ಇದನ್ನೂ ನೋಡಿ: “ಟಾಟಾ ಕಂಪನಿಗೆ ವಿದ್ಯುತ್‌, ಜನತೆಗೆ ಕಾದಿದೆ ಆಪತ್ತು? | ವಿದ್ಯುತ್ ಖಾಸಗೀಕರಣ ವಿರುದ್ಧ ಸಮಾವೇಶ” Janashakthi Media

Donate Janashakthi Media

Leave a Reply

Your email address will not be published. Required fields are marked *