ಸಕಲೇಶಪುರ: ಯಸಳೂರು ಸಮೀಪದ ಮಂದಳ್ಳಿ ಗ್ರಾಮದಲ್ಲಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆ ನಡೆಸಿ, ಮನೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದ್ದೂ, ಈ ಘಟನೆಯನ್ನು ಖಂಡಿಸಿ ದಲಿತ ಮುಖಂಡರು ಯಸಳೂರು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ, ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಗ್ರಾಮದ ದೇವರಾಜು (50) ಅವರ ಅಳಿಯನ ಬೈಕ್ ಅನ್ನು ಅದೇ ಗ್ರಾಮದ ವೆಂಕಟೇಶ್ ಶೆಟ್ಟಿ (70) ವಿನಾಕಾರಣ ಕಾಡಿಗೆ ತಳ್ಳಿ ಬಂದಿದ್ದ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಯಸಳೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ನಂತರ ಗ್ರಾಮಸ್ಥರು ರಾಜೀ ಪಂಚಾಯಿತಿ ನಡೆಸಿ, ವೆಂಕಟೇಶ್ ಶೆಟ್ಟಿಗೆ 6 ಸಾವಿರ ರೂ. ದಂಡ ವಿಧಿಸುವ ಮೂಲಕ ಪ್ರಕರಣ ಇತ್ಯರ್ಥಪಡಿಸಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸರ್ಕಾರಿ ನೇಮಕಾತಿಗೆ ಆಗ್ರಹ: ಜೂನ್ 9ರಿಂದ ಧಾರವಾಡದಲ್ಲಿ ಸತ್ಯಾಗ್ರಹ ಎಚ್ಚರಿಕೆ
ಆದರೆ ರಾಜೀ ಪಂಚಾಯಿತಿಯ ಬಳಿಕವೂ ದ್ವೇಷ ಮುಂದುವರಿದಿದ್ದು, ಮೇ 31ರಂದು ದೇವರಾಜು ಕೂಲಿ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಆರೋಪಿ ದಾರಿ ತಡೆದು ಜಗಳ ಆರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ.
ನನ್ನ ವಿರುದ್ಧ ದೂರು ಕೊಡಲು ನೀನೇ ಪ್ರಚೋದನೆ ನೀಡಿದ್ದೀಯಾ? ಎಂದು ಆಕ್ರೋಶ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಕತ್ತಿಯಿಂದ ಕಾಲಿಗೆ ಇರಿದಿದ್ದಾನೆ ಎನ್ನಲಾಗಿದೆ. ಹಲ್ಲೆಯ ಪರಿಣಾಮ ದೇವರಾಜು ಅವರ ಕಾಲಿನ ಮೂಳೆ ಮುರಿದಿದ್ದು, ಅವರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಲ್ಲೆಯ ಬಳಿಕವೂ ಶಾಂತವಾಗದ ಆರೋಪಿ ಜೂ.1ರ ರಾತ್ರಿ ಸಂತ್ರಸ್ತರ ಮನೆಗೆ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಪಿಕಪ್ ವಾಹನ ಖರೀದಿಸಲು ಮನೆಯಲ್ಲಿ ಇಟ್ಟಿದ್ದ 1.5 ಲಕ್ಷ ರೂ. ನಗದು ಹಣ ಹಾಗೂ ಚೆಕ್ ಬುಕ್ ಬೆಂಕಿಗೆ ಆಹುತಿಯಾಗಿದೆ ಎಂದು ದೇವರಾಜು ಅವರ ಪುತ್ರ ಮನೋಹರ್ ಆರೋಪಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ದಲಿತ ಮುಖಂಡರು ಯಸಳೂರಿನಲ್ಲಿ ಪ್ರತಿಭಟನೆ ನಡೆಸಿ, ಆರೋಪಿಯ ವಿರುದ್ಧ ಕಾನೂನುಬದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ನೋಡಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ಎನ್ಟಿಎ ವಿರುದ್ಧ ಎಸ್ಎಫ್ಐ ಪ್ರತಿಭಟನೆ; ಕಾರ್ಯಕರ್ತರ ಬಂಧನ Janashakthi Media
