ಮೈಸೂರಿನಲ್ಲಿ ‘ಗೋ ಬ್ಯಾಕ್ ಮೋದಿ’ ಯತ್ನ ವಿಫಲ: ದಸಂಸ ಮುಖಂಡರು ಪೊಲೀಸ್ ವಶಕ್ಕೆ

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೈಸೂರು ಭೇಟಿಯನ್ನು ವಿರೋಧಿಸಿ ‘ಗೋ ಬ್ಯಾಕ್ ಮೋದಿ’ ಚಳುವಳಿ ನಡೆಸಲು ಮುಂದಾಗಿದ್ದ ದಲಿತ ಸಂಘರ್ಷ ಸಮಿತಿ (ದಸಂಸ) ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.

ನಗರದ ಮಾನಸಗಂಗೋತ್ರಿಯ ಕ್ಲಾಕ್ ಟವರ್‌ನಿಂದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ವಿವೇಕ ಸ್ಮಾರಕದವರೆಗೆ ಜಾಥಾ ನಡೆಸಲು ದಸಂಸ ಕಾರ್ಯಕರ್ತರು ಯೋಜನೆ ರೂಪಿಸಿದ್ದರು. ಪ್ರಧಾನಿ ಮೋದಿ ಅವರು ಇದೇ ಸ್ಮಾರಕದ ಉದ್ಘಾಟನೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಆದರೆ ಜಾಥಾ ಆರಂಭಕ್ಕೂ ಮುನ್ನವೇ ಪೊಲೀಸರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ದರು.

ಇದಕ್ಕೂ ಮೊದಲು ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಅವರನ್ನು ಶುಕ್ರವಾರ ರಾತ್ರಿ ಆಲನಹಳ್ಳಿ ಪೊಲೀಸರು ಅವರ ನಿವಾಸದಲ್ಲೇ ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಬಲವಾದ ಗಾಳಿಗೆ ಮಳೆ ಸಹಕಾರ ಇಲ್ಲ: ಕರ್ನಾಟಕದಲ್ಲಿ ಮಳೆಯ ಕೊರತೆ ಮುಂದುವರಿಕೆ

ಆದರೂ ದಸಂಸ ಮುಖಂಡರು ಹಿಂಜರಿಯದೆ, ರಾಜ್ಯ ಸಂಚಾಲಕ ಎಡದೊರೆ ಮಹದೇವಯ್ಯ ಅವರ ನೇತೃತ್ವದಲ್ಲಿ ಕ್ಲಾಕ್ ಟವರ್ ಬಳಿ ಸೇರಿ ಪ್ರತಿಭಟನೆಗೆ ಮುಂದಾದರು. ಮಾಹಿತಿ ಪಡೆದ ಪೊಲೀಸರು ಒಂದು ಗಂಟೆಗೂ ಹೆಚ್ಚು ಕಾಲ ಮುಖಂಡರೊಂದಿಗೆ ಮಾತುಕತೆ ನಡೆಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.

ಪ್ರತಿಭಟನಾಕಾರರು “ಜಾಥಾ ಬೇಡ, ಕನಿಷ್ಠ ಹತ್ತು ನಿಮಿಷ ಪ್ರತಿಭಟನೆಗೆ ಅವಕಾಶ ನೀಡಿ” ಎಂದು ಕೇಳಿಕೊಂಡರೂ ಪೊಲೀಸರು ಅನುಮತಿ ನೀಡಲಿಲ್ಲ.

ಈ ವೇಳೆ ಮಾತನಾಡಿದ ಎಡದೊರೆ ಮಹದೇವಯ್ಯ, “ಪ್ರತಿಭಟನೆ ನಮ್ಮ ಪ್ರಜಾಪ್ರಭುತ್ವದ ಹಕ್ಕು. ಅದನ್ನು ಹತ್ತಿಕ್ಕುವುದು ಸರಿಯಲ್ಲ” ಎಂದು ಆಕ್ಷೇಪಿಸಿದರು.

ಅವರು ಮುಂದುವರೆದು, “ನೀಟ್ ಹಗರಣದ ಹಿನ್ನೆಲೆಯಲ್ಲಿ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಗಳಿಗೆ ಸಮರ್ಪಕ ಪರಿಹಾರ ಅಥವಾ ಉದ್ಯೋಗ ನೀಡಲಾಗಿಲ್ಲ. ಜೊತೆಗೆ ಎನ್‌ಟಿಎಂ ಹೆಣ್ಣು ಮಕ್ಕಳ ಶಾಲೆಯಿದ್ದ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲೇ ಪ್ರಧಾನಿ ಸ್ಮಾರಕ ಉದ್ಘಾಟನೆಗೆ ಬರುವುದು ಸೂಕ್ತವಲ್ಲ,” ಎಂದು ಆರೋಪಿಸಿದರು.

ಕೊನೆಗೆ ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಪೊಲೀಸರು ದಸಂಸ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸ್ ವ್ಯಾನ್‌ನಲ್ಲಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು.

ಈ ವೇಳೆ ಪ್ರತಿಭಟನಾಕಾರರು “ಬೇಕೆ ಬೇಕು, ನ್ಯಾಯ ಬೇಕು” ಮತ್ತು “ಗೋ ಬ್ಯಾಕ್ ಮೋದಿ” ಎಂಬ ಘೋಷಣೆಗಳನ್ನು ಕೂಗಿದರು.

ಇದನ್ನೂ ನೋಡಿ: ಆರ್ಚರ್ ಮೀನು: ನೀರಿನ ಬಾಣ ಬಿಟ್ಟು ಬೇಟೆಯಾಡುವ ಗುರಿಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *