ಹಿಮಾಚಲ ಪ್ರದೇಶ: ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ರೇಗಾ)ಯನ್ನು ಹಂತ ಹಂತವಾಗಿ ದುರ್ಬಲಗೊಳಿಸುತ್ತಿದೆ ಎಂಬ ಆರೋಪದ ವಿರುದ್ಧ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ)ಯ ಹಿಮಾಚಲ ಪ್ರದೇಶ ರಾಜ್ಯ ಸಮಿತಿ ಜನವರಿ 30ರಿಂದ ಫೆಬ್ರವರಿ 5ರವರೆಗೆ ರಾಜ್ಯವ್ಯಾಪಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಈ ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಧರಣಿ ಹಾಗೂ ಪ್ರತಿಭಟನೆಗಳು ನಡೆದಿವೆ. ಹಕ್ಕು
ಜನವರಿ 30ರಂದು ಮಹಾತ್ಮಾ ಗಾಂಧಿಯವರ ಹುತಾತ್ಮ ದಿನದಂದು, ಸಿಪಿಐ(ಎಂ) ಕಾರ್ಯಕರ್ತರು ಶಿಮ್ಲಾದ ರಿಡ್ಜ್ ಮೈದಾನದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ ಧರಣಿ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದವರು ರಾಷ್ಟ್ರೀಯ ಏಕತೆ, ಧರ್ಮನಿರಪೇಕ್ಷತೆ, ಸರ್ವಭೌಮತ್ವ, ಫೆಡರಲಿಸಂ, ಸಾಮುದಾಯಿಕ ಸೌಹಾರ್ದತೆ ಹಾಗೂ ಸಂವಿಧಾನವನ್ನು ರಕ್ಷಿಸುವ ಪ್ರತಿಜ್ಞೆ ಕೈಗೊಂಡು, ಸಾಮುದಾಯಿಕ ಶಕ್ತಿಗಳನ್ನು ಪ್ರತ್ಯೇಕಿಸಿ ಸೋಲಿಸುವುದಾಗಿ ಸಂಕಲ್ಪಿಸಿದರು. ನಂತರ ರಿಡ್ಜ್‌ನಿಂದ ಸ್ಕ್ಯಾಂಡಲ್ ಪಾಯಿಂಟ್, ಶೇರ್–ಎ–ಪಂಜಾಬ್ ಹಾಗೂ ಲೋಯರ್ ಬಜಾರ್ ಮೂಲಕ ಉಪ ಆಯುಕ್ತರ ಕಚೇರಿವರೆಗೆ ಮೇಣದ ದೀಪಗಳೊಂದಿಗೆ ಮೌನ ಮೆರವಣಿಗೆ ನಡೆಸಿ ಪ್ರತಿಭಟನೆಗೆ ತೆರೆ ಎಳೆದರು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಸಂಜಯ್ ಚೌಹಾನ್ ಸೇರಿದಂತೆ ಪಕ್ಷದ ಹಲವು ನಾಯಕರು, ಹಕ್ಕು ಆಧಾರಿತ ಕಾಯ್ದೆಯಾಗಿರುವ ಎಂಜಿಎನ್‌ರೇಗಾವನ್ನು ಬಜೆಟ್ ಮಿತಿಯೊಳಗಿನ, ಪೂರೈಕೆ ಆಧಾರಿತ ಯೋಜನೆಯಾಗಿ ಪರಿವರ್ತಿಸುವ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅದರ ಮೂಲ ಉದ್ದೇಶವನ್ನೇ ಧ್ವಂಸಗೊಳಿಸಿದೆ ಎಂದು ಆರೋಪಿಸಿದರು. ಇದರಿಂದ ಬಡ ರೈತರು, ಗ್ರಾಮೀಣ ಕಾರ್ಮಿಕರು ಹಾಗೂ ಕೃಷಿ ಕೂಲಿ ಕಾರ್ಮಿಕರ ಆರ್ಥಿಕ ಹಕ್ಕುಗಳಿಗೆ ನೇರ ಧಕ್ಕೆ ಉಂಟಾಗಿ, ಕೃಷಿ ಸಂಕಷ್ಟ ಗಂಭೀರಗೊಂಡು, ಹೆಚ್ಚಿನ ಕೃಷಿಕರು ಕೃಷಿಯಿಂದ ಹೊರಬರುವಂತಾಗಿದ್ದು, ಸಂಕಷ್ಟಕರ ಆತ್ಮಹತ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಬೆಂಗಳೂರು| ಫೆ. 1ರಿಂದ ಅಂತರಾಷ್ಟ್ರೀಯ ನಾಟಕೋತ್ಸವ, ರಂಗ ಪರಿಷೆ
ಎಂಜಿಎನ್‌ರೇಗಾ ಆರಂಭದಿಂದಲೂ ಕಾರ್ಪೊರೇಟ್ ವಲಯ, ಗ್ರಾಮೀಣ ಭೂಸ್ವಾಮಿಗಳು ಹಾಗೂ ಶ್ರೀಮಂತ ವರ್ಗಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದು, ಬೇಡಿಕೆಯ ಆಧಾರದಲ್ಲಿ ಉದ್ಯೋಗ ಖಾತ್ರಿ ನೀಡುವ ಹಾಗೂ 15 ದಿನಗಳೊಳಗೆ ಕೆಲಸ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆ ನೀಡುವ ವ್ಯವಸ್ಥೆಯೇ ಅವರಿಗೆ ಅಸಹ್ಯವಾಗಿತ್ತು ಎಂದು ನಾಯಕರು ಹೇಳಿದರು. 2014ರಿಂದ ಮೋದಿ ಸರ್ಕಾರ ಕ್ರಮೇಣ ಬಜೆಟ್ ಕಡಿತ, ವೇತನ ಪಾವತಿಯಲ್ಲಿ ವಿಳಂಬ ಹಾಗೂ ಆಡಳಿತಾತ್ಮಕ ಅಡ್ಡಿಗಳ ಮೂಲಕ ಯೋಜನೆಯನ್ನು ದುರ್ಬಲಗೊಳಿಸುತ್ತಾ ಬಂದಿದೆ ಎಂದು ಆರೋಪಿಸಿದರು.
2025ರ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಲ್ಪ ಚರ್ಚೆಯೊಂದಿಗೆ ಅಂಗೀಕೃತವಾದ ವಿ.ಬಿ–ಗ್ರಾಮ್ ಜಿ ಕಾಯ್ದೆ (VB-G RAM G Act) ಎಂಜಿಎನ್‌ರೇಗಾದ ಕಾನೂನು ಚೌಕಟ್ಟನ್ನೇ ಪರಿಣಾಮಕಾರಿಯಾಗಿ ಧ್ವಂಸಗೊಳಿಸುತ್ತಿದ್ದು, ಗ್ರಾಮೀಣ ಬಡವರ ಹಿತಾಸಕ್ತಿಯ ಬದಲು ಕಾರ್ಪೊರೇಟ್ ಹಿತಗಳಿಗೆ ಸೇವೆ ಸಲ್ಲಿಸುತ್ತಿದೆ ಎಂದು ಸಿಪಿಐ(ಎಂ) ನಾಯಕರು ಆರೋಪಿಸಿದರು. ಯೋಜನೆಯ ಹೆಸರನ್ನು ಬದಲಾಯಿಸಿರುವುದು ಸಾಮುದಾಯಿಕ ಅಜೆಂಡಾದ ಭಾಗವಾಗಿದ್ದು, ಹೆಚ್ಚಿನ ಆರ್ಥಿಕ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಗಳ ಮೇಲೆ ಹಾಕುವುದರಿಂದ ಅವರ ಬಜೆಟ್‌ಗಳಿಗೆ ಭಾರ ಬೀಳಲಿದೆ ಎಂದು ಎಚ್ಚರಿಸಿದರು. ಬಿಜೆಪಿ ಆಡಳಿತ ಅವಧಿಯಲ್ಲಿ ರಾಜ್ಯಗಳಿಗೆ ನೀಡುವ ಆದಾಯ ವರ್ಗಾವಣೆ ಕ್ರಮೇಣ ಕುಸಿದಿರುವುದನ್ನೂ ಅವರು ಉಲ್ಲೇಖಿಸಿದರು.
125 ದಿನಗಳ ಉದ್ಯೋಗ ನೀಡಲಾಗುತ್ತಿದೆ ಎಂಬ ಸರ್ಕಾರದ ಹೇಳಿಕೆಗಳನ್ನು ತಳ್ಳಿಹಾಕಿದ ನಾಯಕರು, ಮೂಲತಃ ಭರವಸೆ ನೀಡಿದ್ದ 100 ದಿನಗಳ ಉದ್ಯೋಗವೂ ಹೆಚ್ಚಿನ ಸಂದರ್ಭಗಳಲ್ಲಿ ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂದು ಹೇಳಿದರು.
ಹೊಸ ವಿ.ಬಿ–ಗ್ರಾಮ್ ಜಿ ಯೋಜನೆ ಜನಸಾಮಾನ್ಯರ ಅಗತ್ಯಗಳಿಗಿಂತ ಮೇಲಿನಿಂದ ಹೇರಲಾಗುವ ಆದ್ಯತೆಗಳಿಗೆ ಹೊಂದಿಕೊಳ್ಳುತ್ತಿದೆ ಎಂದು ಟೀಕಿಸಿದ ಸಿಪಿಐ(ಎಂ), ಗ್ರಾಮೀಣ ಕುಟುಂಬಗಳ ನೈಜ ಉದ್ಯೋಗ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ “ಎಂಜಿಎನ್‌ರೇಗಾವನ್ನು ಉಳಿಸಿ” ಎಂಬ ರಾಷ್ಟ್ರವ್ಯಾಪಿ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಘೋಷಿಸಿದೆ.
ಈ ಪ್ರತಿಭಟನೆಗಳು ಬೇಡಿಕೆ ಆಧಾರಿತ ಉದ್ಯೋಗ ವ್ಯವಸ್ಥೆಯಿಂದ ಪೂರೈಕೆ ಆಧಾರಿತ ವ್ಯವಸ್ಥೆಗೆ ಬದಲಾವಣೆ ಕಾನೂನಾತ್ಮಕ ಹಕ್ಕುಗಳನ್ನು ದುರ್ಬಲಗೊಳಿಸುವುದರ ಜೊತೆಗೆ, ರಾಜ್ಯ ಸರ್ಕಾರಗಳ ಮೇಲೆ ಹಣಕಾಸಿನ ಒತ್ತಡ ಹೆಚ್ಚಿಸಿ, ಕೂಲಿ ಭದ್ರತೆಯನ್ನು ಕುಂಠಿತಗೊಳಿಸುತ್ತಿದೆ ಎಂಬ ಎಡಪಕ್ಷಗಳು ಹಾಗೂ ವಿರೋಧ ಪಕ್ಷಗಳ ವ್ಯಾಪಕ ಟೀಕೆಗಳನ್ನು ಪ್ರತಿಬಿಂಬಿಸುತ್ತವೆ.
ಇದನ್ನೂ ನೋಡಿ: ಒಂದು ದೇಹ, ಒಂದು ಸಾಕ್ಷಿ | ಸಾಮ್ರಾಜ್ಯಶಾಹಿಯ ವಿರುದ್ಧ ಸುಮಿತೇರು ತಾನಿಗುಚಿJanashakthi Media
