ರಾಮ ಮಂದಿರ ಟ್ರಸ್ಟ್ RTI ವ್ಯಾಪ್ತಿಗೆ ತರಲು ಸಿಪಿಐ(ಎಂ) ಸಂಸದ ಬ್ರಿಟ್ಟಾಸ್ ಒತ್ತಾಯ

ಲಖ್ನೋ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ವಿವಾದದ ಮಧ್ಯೆ, ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಮಾಹಿತಿ ಹಕ್ಕು ಕಾಯ್ದೆ (RTI) ವ್ಯಾಪ್ತಿಗೆ ಒಳಪಡಿಸದಿರುವ ಕೇಂದ್ರದ ನಿಲುವನ್ನು ಮರುಪರಿಶೀಲಿಸಲು ಒತ್ತಾಯಿಸಿದ್ದಾರೆ. ರಾಮ 

ಜುಲೈ 5ರಂದು ‘ಎಕ್ಸ್’ ಮೂಲಕ ಪತ್ರವನ್ನು ಹಂಚಿಕೊಂಡ ಬ್ರಿಟ್ಟಾಸ್, ಟ್ರಸ್ಟ್ ಅನ್ನು “ಸ್ವಾಯತ್ತ ಸಂಸ್ಥೆ” ಎಂದು ಹೇಳುವುದರಿಂದ ಮಾತ್ರ ಅದನ್ನು RTI ವ್ಯಾಪ್ತಿಯಿಂದ ಹೊರಗಿಡುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ. ಸರ್ಕಾರ ಅನುಮೋದಿಸಿದ ಯೋಜನೆಯಡಿ ಟ್ರಸ್ಟ್ ರಚನೆಯಾಗಿದ್ದು, ಸಂಸತ್ ಕಾಯ್ದೆಯಡಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಅದಕ್ಕೆ ಹಸ್ತಾಂತರಿಸಲಾಗಿದೆ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಸೇವೆಯಲ್ಲಿರುವ ಐಎಎಸ್ ಅಧಿಕಾರಿಗಳು ಇನ್ನೂ ಭಾಗಿಯಾಗಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. ರಾಮ 

“ಅಸಾಧಾರಣ ಸಾರ್ವಜನಿಕ ನಂಬಿಕೆಯನ್ನು ಹೊಂದಿರುವ ಟ್ರಸ್ಟ್‌ಗಳು ಅತ್ಯುನ್ನತ ಮಟ್ಟದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಕಾಪಾಡಬೇಕು” ಎಂದು ಅವರು ಕೇಂದ್ರ ಸರ್ಕಾರವನ್ನು ತನ್ನ ನಿಲುವನ್ನು ಮರುಪರಿಶೀಲಿಸಲು ವಿನಂತಿಸಿದರು.

ಇದನ್ನೂ ಓದಿ: ಕೆಲಸದ ಒತ್ತಡ ಅಪಘಾತದಲ್ಲಿ ಎಸ್.ಐ. ಅರ್. ಸೂಪವೈಜರ್ ಸಾವು

2025ರ ಜೂನ್ 6ರಂದು ಕೇಂದ್ರ ಮಾಹಿತಿ ಆಯೋಗ (CIC) ನೀಡಿದ ಆದೇಶದಲ್ಲಿ, ಈ ಟ್ರಸ್ಟ್ RTI ಕಾಯ್ದೆಯ ಸೆಕ್ಷನ್ 2(h) ಅಡಿಯಲ್ಲಿ “ಸಾರ್ವಜನಿಕ ಪ್ರಾಧಿಕಾರ” ಅಲ್ಲ ಎಂದು ಹೇಳಲಾಗಿದೆ. ಈ ತೀರ್ಮಾನವು ಗೃಹ ಸಚಿವಾಲಯದ ನಿಲುವಿನ ಮೇಲೆ ಆಧಾರಿತವಾಗಿದ್ದು, ಪಾರದರ್ಶಕತೆ ಹಾಗೂ ಸಾರ್ವಜನಿಕ ಹೊಣೆಗಾರಿಕೆಯ ಹಿತದೃಷ್ಟಿಯಿಂದ ಈ ನಿಲುವನ್ನು ಮರುಪರಿಶೀಲಿಸಲು ಬ್ರಿಟ್ಟಾಸ್ ಮನವಿ ಮಾಡಿದ್ದಾರೆ.

ತಮ್ಮ ಪತ್ರದಲ್ಲಿ ಟ್ರಸ್ಟ್‌ನ ಸ್ಥಾಪನೆ ವಿಶೇಷ ಸ್ವರೂಪದ್ದಾಗಿದೆ ಎಂದು ಅವರು ಹೇಳಿದ್ದಾರೆ. 2019ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಅಯೋಧ್ಯೆ ತೀರ್ಪಿನ ಬಳಿಕ, ಕೇಂದ್ರ ಸರ್ಕಾರ ಟ್ರಸ್ಟ್‌ಗೆ ಸಂಬಂಧಿಸಿದ ಯೋಜನೆಯನ್ನು ರೂಪಿಸಿ, ಗಜೆಟ್ ಅಧಿಸೂಚನೆಯ ಮೂಲಕ ಅದನ್ನು ರಚಿಸಿ, ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಹಸ್ತಾಂತರಿಸಿತು ಎಂದು ವಿವರಿಸಿದ್ದಾರೆ.

ಟ್ರಸ್ಟ್‌ನ ಪ್ರಾಥಮಿಕ ರಚನೆ 15 ಸದಸ್ಯರದ್ದಾಗಿದ್ದು, ಅವರಲ್ಲಿ 12 ಮಂದಿಯನ್ನು ಕೇಂದ್ರ ಸರ್ಕಾರವೇ ನಾಮನಿರ್ದೇಶನ ಮಾಡಿತ್ತು, ಉಳಿದ ಮೂವರು ಸದಸ್ಯರನ್ನು ಮೊದಲ ಸಭೆಯಲ್ಲಿ ಆಯ್ಕೆ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಸರ್ಕಾರವೇ ರಚಿಸಿದ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಸ್ಥಾಪಿತವಾದ ಟ್ರಸ್ಟ್ ಅನ್ನು RTI ಕಾಯ್ದೆಯ ಹೊಣೆಗಾರಿಕೆ ಚೌಕಟ್ಟಿನಿಂದ ಹೊರಗಿಡಬೇಕೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ ಎಂದು ಬ್ರಿಟ್ಟಾಸ್ ಹೇಳಿದ್ದಾರೆ.

CIC ಒಪ್ಪಿಕೊಂಡಿರುವ ವ್ಯಾಖ್ಯಾನವನ್ನು ಪ್ರಶ್ನಿಸಿದ ಅವರು, “ಸರ್ಕಾರದ ಅಧಿಸೂಚನೆಯ ಮೂಲಕ ರಚಿಸಲ್ಪಟ್ಟ ಸಂಸ್ಥೆ ಎಂಬುದರಲ್ಲಿ ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ ಹೊರಡಿಸಿದ ಅಧಿಸೂಚನೆ ಮತ್ತು ಸ್ವತಂತ್ರವಾಗಿ ಹೊರಡಿಸಿದ ಅಧಿಸೂಚನೆ ನಡುವೆ ಯಾವುದೇ ಭೇದವಿಲ್ಲ” ಎಂದು ವಾದಿಸಿದ್ದಾರೆ.

ಡಿಎವಿ ಕಾಲೇಜ್ ಟ್ರಸ್ಟ್ (2019), ತಳಪ್ಪಳಂ ಸೇವಾ ಸಹಕಾರಿ ಬ್ಯಾಂಕ್ (2013) ಕುರಿತ ಸುಪ್ರೀಂ ಕೋರ್ಟ್ ತೀರ್ಪುಗಳು ಹಾಗೂ ಜುಲೈ 1ರಂದು ದೆಹಲಿ ಹೈಕೋರ್ಟ್ ನೀಡಿದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಅನ್ನು RTI ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರವೆಂದು ಘೋಷಿಸಿದ ತೀರ್ಪನ್ನು ಉಲ್ಲೇಖಿಸಿ, ಸರ್ಕಾರದ ಕ್ರಮಗಳಿಂದ ಕಾನೂನುಬದ್ಧ ಅಸ್ತಿತ್ವ ಮತ್ತು ಸಾರ್ವಜನಿಕ ಸ್ವರೂಪ ಹೊಂದಿರುವ ಸಂಸ್ಥೆಗಳು ಪಾರದರ್ಶಕತೆಯನ್ನು ಉತ್ತೇಜಿಸುವ ರೀತಿಯಲ್ಲಿ ವ್ಯಾಖ್ಯಾನಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಟ್ರಸ್ಟ್‌ನ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ಪ್ರತಿನಿಧಿಗಳು, ಅಯೋಧ್ಯೆ ಜಿಲ್ಲಾಧಿಕಾರಿ ಸೇರಿದಂತೆ ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿಗಳ ಹಾಜರಾತಿಯನ್ನು ಅವರು ಪ್ರಸ್ತಾಪಿಸಿದರು. ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಟ್ರಸ್ಟ್‌ನ ಕೇಂದ್ರ ಪ್ರತಿನಿಧಿಯಾಗಿರುವುದನ್ನೂ ಅವರು ಉಲ್ಲೇಖಿಸಿದರು.

“ಟ್ರಸ್ಟ್ ಸಂಪೂರ್ಣ ಖಾಸಗಿ ಸ್ವರೂಪದ್ದಾಗಿದ್ದರೆ, ಅದರ ಆಡಳಿತದಲ್ಲಿ ಸರ್ಕಾರದ ಪ್ರತಿನಿಧಿಗಳನ್ನು ಮುಂದುವರಿಸುವ ಅಗತ್ಯವೇನು?” ಎಂದು ಅವರು ಪ್ರಶ್ನಿಸಿದರು.

ಇವರಿಗೆ ಮತದಾನ ಹಕ್ಕಿಲ್ಲದಿದ್ದರೂ, ಅವರ ಕಾನೂನುಬದ್ಧ ಹಾಜರಾತಿ ಟ್ರಸ್ಟ್‌ನ ಸಾರ್ವಜನಿಕ ಸ್ವರೂಪ ಹಾಗೂ ಸರ್ಕಾರದ ನಿರಂತರ ಸಂಸ್ಥಾತ್ಮಕ ಸಂಬಂಧವನ್ನು ತೋರಿಸುತ್ತದೆ ಎಂದು ಬ್ರಿಟ್ಟಾಸ್ ಹೇಳಿದರು.

ಟ್ರಸ್ಟ್ ದೇಶದ ಅತ್ಯಂತ ಪೂಜ್ಯ ಧಾರ್ಮಿಕ ಸಂಸ್ಥೆಗಳಲ್ಲಿ ಒಂದನ್ನು ನಿರ್ವಹಿಸುತ್ತಿದ್ದು, ಸಂಸತ್ತಿನ ಕಾಯ್ದೆಯಡಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ನಿರ್ವಹಿಸುವ ಜೊತೆಗೆ ದೇಶ-ವಿದೇಶಗಳ ಕೋಟ್ಯಾಂತರ ಭಕ್ತರಿಂದ ದೇಣಿಗೆಗಳನ್ನು ಸ್ವೀಕರಿಸುತ್ತದೆ ಎಂದು ಅವರು ಹೇಳಿದರು.

“ಟ್ರಸ್ಟ್‌ನ ಸಾರ್ವಜನಿಕ ಸ್ವರೂಪ ಅದರ ಕಾರ್ಯಗಳ ಸ್ವಭಾವದಿಂದಲೇ ಬರುತ್ತದೆ. ಇಂತಹ ಸಂಸ್ಥೆಗೆ ಸಾರ್ವಜನಿಕರಿಂದ ದೊರಕಿರುವ ಅಸಾಧಾರಣ ನಂಬಿಕೆಗೆ ಸಮಾನವಾಗಿ ಪಾರದರ್ಶಕ ಆಡಳಿತ, ಹಣಕಾಸು ನಿರ್ವಹಣೆ ಮತ್ತು ದೇಣಿಗೆಗಳ ಬಳಕೆಯಲ್ಲಿ ಸ್ಪಷ್ಟತೆ ಅಗತ್ಯವಿದೆ” ಎಂದು ಅವರು ಅಭಿಪ್ರಾಯಪಟ್ಟರು.

ಶ್ರೀ ಮಾತಾ ವೈಷ್ಣೋ ದೇವಿ ದೇವಸ್ಥಾನ ಮಂಡಳಿಯ ಉದಾಹರಣೆ ನೀಡಿ, ಸಂಸ್ಥಾತ್ಮಕ ಸ್ವಾಯತ್ತತೆ ಮತ್ತು ಸಾರ್ವಜನಿಕ ಹೊಣೆಗಾರಿಕೆ ಪರಸ್ಪರ ವಿರೋಧಿಗಳಲ್ಲ ಎಂದು ಬ್ರಿಟ್ಟಾಸ್ ಹೇಳಿದರು. ಸರ್ಕಾರದ ಚೌಕಟ್ಟಿನಡಿ ಸ್ಥಾಪಿತವಾದ ದೊಡ್ಡ ಧಾರ್ಮಿಕ ಸಂಸ್ಥೆಗಳು ಧಾರ್ಮಿಕ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು, ಆಡಳಿತ ಹಾಗೂ ಹಣಕಾಸಿನಲ್ಲಿ ಪಾರದರ್ಶಕ ವ್ಯವಸ್ಥೆಯೊಳಗೆ ಕಾರ್ಯನಿರ್ವಹಿಸುತ್ತವೆ ಎಂದು ಅವರು ವಿವರಿಸಿದರು.

ಟ್ರಸ್ಟ್‌ನ RTI ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಅಂತಿಮ ನ್ಯಾಯಾಂಗ ತೀರ್ಮಾನ ದೊರಕುವಂತೆ, ಗೃಹ ಸಚಿವಾಲಯ ತನ್ನ ನಿಲುವನ್ನು ಮರುಪರಿಶೀಲಿಸಿ ಸಂಬಂಧಿತ ಹೈಕೋರ್ಟ್ ಮುಂದೆ ಪರಿಷ್ಕೃತ ನಿಲುವನ್ನು ಮಂಡಿಸಬೇಕು ಎಂದು ಬ್ರಿಟ್ಟಾಸ್ ಮನವಿ ಮಾಡಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದೀಗ ಭಕ್ತರಿಂದ ಬಂದ ದೇಣಿಗೆಗಳ ದುರುಪಯೋಗ ಆರೋಪದ ವಿವಾದದ ಕೇಂದ್ರದಲ್ಲಿದೆ.

ಇದನ್ನೂ ನೋಡಿ: ಒಂದು ಕೋಟಿ ಕುಟುಂಬಗಳ ಬದುಕಿನ ಮೇಲೆ ಹೊಡೆತ; ಕನಿಷ್ಠ ವೇತನ ಹಿಂಪಡೆದರೆ ಬೀದಿಗಿಳಿಯುತ್ತೇವೆ: ಕಾರ್ಮಿಕ ಸಂಘಟನೆಗಳು

Donate Janashakthi Media

Leave a Reply

Your email address will not be published. Required fields are marked *