ನನ್ನನ್ನು ನಿರಂತರವಾಗಿ ಪ್ರಚೋದನೆ ಮಾಡಲು ಷಡ್ಯಂತ್ರ: ಕೆ. ಎಂ. ಶಿವಲಿಂಗೇಗೌಡ ಕಿಡಿ

ಹಾಸನ: ಅಧಿವೇಶನದಲ್ಲಿ ನನ್ನನ್ನು ನಿರಂತರವಾಗಿ ಪ್ರಚೋದನೆ ಮಾಡಲು ಷಡ್ಯಂತ್ರ ನಡೆಸಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್ ನಾಯಕರತ್ತ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸುದ್ದಿಗೋಷ್ಠಿಯಲ್ಲಿ ಬೊಟ್ಟು ಮಾಡಿ ಆರೋಪಿಸಿದರು.

ಕುಮ್ಮಕ್ಕು ಇಲ್ಲದೆ ಇಷ್ಟೆಲ್ಲ ನಡೆಯದು. ಜಿಲ್ಲೆಯಲ್ಲಿ ದೇವೇಗೌಡರನ್ನು ಬಿಟ್ಟು ಹೋದವರು ಯಾರೂ ಗೆಲ್ಲಲಿಲ್ಲ. ನಾನೊಬ್ಬ ಗೆದ್ದೆ ಅನ್ನೋ ಒಂದೇ ಕಾರಣಕ್ಕೆ ಮತ್ಸರ ಸಾಧಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಹಿಂದೆ ದೇವೇಗೌಡರು ನಾನು ಬದುಕಿರುವವರೆಗೂ ಬಿಜೆಪಿ ಸಖ್ಯ ಮಾಡುವುದಿಲ್ಲ ಎಂದಿದ್ದರು. ಆದರೀಗ ಅವರ ಜತೆಯಲ್ಲೇ ಇದ್ದಾರೆ. ರಾಜಕೀಯದಲ್ಲಿ ಇದೆಲ್ಲ ಸರ್ವೇ ಸಾಮಾನ್ಯ, ಅದು ಅನಿವಾರ್ಯ ಕೂಡ, ಅವರ ಸಂಗ ಬಿಟ್ಟೆ ಅನ್ನೋ ಕಾರಣಕ್ಕೆ ಜೆಡಿಎಸ್‌ನವರು ನನ್ನ ಮೇಲೆ ಸಿಟ್ಟು ಮಾಡಿಕೊಳ್ಳುವುದು, ಹಗೆ ಸಾಧಿಸುವುದು ಒಳ್ಳೆಯದಲ್ಲ ಎಂದರು.

ಇದನ್ನೂ ಓದಿ: ಧಾರವಾಡ | ಸಂಪ್ರದಾಯದ ಮೌಲ್ಯಗಳಿಗೆ ಆಧುನಿಕ ಸ್ಪರ್ಶ: ವಿನಯಾ ಒಕ್ಕುಂದ

ನಾನು ದೇವೇಗೌಡರ ಕುಟುಂಬಕ್ಕೆ ಚೂರಿ ಹಾಕಿ ಹೋಗಿಲ್ಲ, ಸಭೆಯೊಂದರಲ್ಲಿ ಅರಸೀಕೆರೆಗೆ ಎಂಎಲ್‌ಸಿ ಸ್ಥಾನ ಕೊಡಲಿಲ್ಲ, ಆ ಕಾರಣಕ್ಕೆ ಹೊರಹೋಗುತ್ತಿದ್ದೇನೆ ಎಂದು ಬಹಿರಂಗ ಸಭೆಯಲ್ಲೇ ಹೇಳಿ ಹೋಗಿದ್ದೇನೆ. ನಾನು ಜೆಡಿಎಸ್‌ನಲ್ಲಿದ್ದಾಗ ಅವರ ಗೆಲುವಿಗೆ ನಾನೂ ಮತ ಹಾಕಿಸಿದ್ದೇನೆ. ನಾನು ಇವರಿಗೆ ಚಾಕು ಹಾಕಿದ್ದರೆ ಜನ ನನ್ನ ಸೋಲಿಸುತ್ತಿದ್ದರು. 20 ಸಾವಿರ ಮತಗಳಿಂದ ಏಕೆ ಗೆಲ್ಲಿಸಿದರು ಎಂದು ಪ್ರಶ್ನೆ ಹಾಕಿದರು.

ದೃಶ್ಯ ಮಾಧ್ಯಮಗಳು ಸದನದಲ್ಲಿ ಇದ್ದಿದ್ದರೆ ಅವರ ಪ್ರಚೋದನೆ, ನಿಂದನೆ, ಅಸಂಬದ್ಧ ಪದ ಬಳಕೆ, ಟೀಕೆ ಟಿಪ್ಪಣಿ ಗೊತ್ತಾಗುತ್ತಿತ್ತು. ಆದರೆ ನನ್ನ ಹೇಳಿಕೆ ಮಾತ್ರ ರೆಕಾರ್ಡ್ ಆಗಿದೆ. ಹಾಗಾಗಿ ಸದನದ ಒಳಗೆ ಅಂದು ಏನು ನಡೆಯಿತು, ಅವರ ಪ್ರಚೋದನೆ ಏನು ಎಂಬುದನ್ನು ವಿಶ್ಲೇಷಣೆ ಮಾಡಿ ನನಗೆ ನ್ಯಾಯ ಕೊಡಿಸಬೇಕು, ಮಾಧ್ಯಮಗಳಿಂದ ಅದು ಸಾಧ್ಯವಿದೆ ಎಂದು ಮನವಿ ಮಾಡಿದರು.

ಮಾತೆತ್ತಿದರೆ ನನ್ನನ್ನು ರಾಗಿ ಕಳ್ಳ, ಕೊಬ್ಬರಿ ಕಳ್ಳ, ದೇವೇಗೌಡರಿಗೆ ಚೂರಿ ಹಾಕಿದ್ದೇನೆ ಎಂದು ಪದೇ ಪದೆ ಕಿಚಾಯಿಸುತ್ತಿದ್ದರು. ಕಳ್ಳ, ದರೋಡೆಕೋರ ಅನ್ನೋದು ಅಸಾಂವಿಧಾನಿಕ ಪದ ಅಲ್ವ?, ಮನರೇಗಾ ಯೋಜನೆ ಅಗತ್ಯತೆ ಬಗ್ಗೆ ನಾನು ಮಾತನಾಡಲು ಬಿಡದೆ ತಕ ತಕ ಅಂತ ಕುಣಿಯಲು ಆರಂಭಿಸಿದರು. ತಾಳ್ಮೆ ಕಳೆದು ಕೊಂಡು ನಾನು ಮಾತನಾಡಬೇಕಾಯಿತು. 20 ವರ್ಷದಲ್ಲಿ ಸದನದಲ್ಲಿ ಹೀಗೆ ಆಗಿದ್ದು ಇದೇ ಮೊದಲು, ನಾನು ಕಳ್ಳ ಅನ್ನೋದನ್ನು ಇವರು ಸಾಬೀತು ಮಾಡುತ್ತಾರಾ ಎಂದು ಖಾರವಾಗಿ ಪ್ರಶ್ನಿಸಿದರು.

ಪ್ರತಿವಪಕ್ಷದವರು ನನ್ನ ಪ್ರಚೋದನೆ ಮಾಡಲಿಲ್ಲ ಅಂದರೆ ನಾನು ಭಾಷಣ ಮುಗಿಸಿ ಸುಮ್ಮನಾಗುತ್ತಿದ್ದೆ. ಆದರೆ, ನನಗೆ ಸಂಬಂಧಪಡದ ಕಾರಣ ಮುಂದಿಟ್ಟು ಒಬ್ಬ ಶಾಸಕನನ್ನು ಈ ರೀತಿ ನಿಂದನೆ ಇದೇ ಮೊದಲು. ಮಹಿಳೆ ಬಗ್ಗೆ ಮಾತನಾಡಿದ್ದಕ್ಕೆ ಈಗಾಗಲೇ ವಿಷಾದವ್ಯಕ್ತಪಡಿಸಿದ್ದೇನೆ. ಆರ್‌ಎಸ್‌ಎಸ್ ಬಗ್ಗೆ ನನಗೆ ಗೌರವ ಇದೆ ಎಂದು ಹೇಳಿದ ಅವರು. ಹಳ್ಳಿ ಭಾಷೆಯಲ್ಲಿ ಕೆಲವೊಂದು ಮಾತನಾಡಿದ್ದೇನೆ, ಆಡಬಾರದಿತ್ತು. ಮುಂದಿನ ದಿನಗಳಲ್ಲಿ ದೃಶ್ಯ ಮಾಧ್ಯಮದವರನ್ನೂ ಒಳಗೆ ಬಿಡುವಂತೆ ನಾನೇ ನಿರ್ಣಯ ಮಂಡಿಸುತ್ತೇನೆ ಎಂದರು.

ಅರಸೀಕೆರೆಯಲ್ಲಿ ಸರ್ಕಾರಿ ಪಾರ್ಕ್ ಕಬಳಿಸಿದ್ದೇನೆ ಎಂಬುದು ಶುದ್ಧ ಸುಳ್ಳು ಎಂದು ಹೆಸರು ಹೇಳದೆಯೇ ಬಿಜೆಪಿ ಮುಖಂಡ ದೇವರಾಜೇಗೌಡರಿಗೆ ತಿರುಗೇಟು ನೀಡಿದರು. ನಾನು ಮನೆಕಟ್ಟಿದ್ದು 1991ರಲ್ಲಿ, ಶಾಸಕ ಆಗಿದ್ದು 2008ರಲ್ಲಿ. ಪೆನ್ ಡ್ರೈವ್ ವಿಚಾರ ನನಗೆ ಗೊತ್ತಿಲ್ಲ. ಸುಳ್ಳು ಹೇಳುವುದಕ್ಕೂ ಆತ್ಮಸಾಕ್ಷಿ ಬೇಡವೇ ಎಂದು ಮೂದಲಿಸಿದರು.

ಕಾಂಗ್ರೆಸ್ ಮುಖಂಡ ಮಹೇಶ್ ಮಾತನಾಡಿದರು. ಅರಸೀಕೆರೆ ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ, ಮುಖಂಡರಾದ ಶಿವಶಂಕರಸ್ವಾಮಿ, ರಮಾನಾಥ್ ಇದ್ದರು.

ಇದನ್ನೂ ನೋಡಿ: ಸಿದ್ದಿ, ಕುಣಬಿ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ವೈಶಿಷ್ಟ್ಯತೆಯ ನೃತ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *