ಮುಂಬೈ ಮಾದರಿಯಲ್ಲಿ ಸ್ಲಂ ಅಭಿವೃದ್ಧಿ: ಉತ್ತಮ ಮಾದರಿ ರೂಪಿಸಲು ಸಿಎಂ ಡಿ.ಕೆ. ಶಿ ಸೂಚನೆ

ಬೆಂಗಳೂರು: ರಾಜ್ಯದ ಸ್ಲಂ ಪ್ರದೇಶಗಳ ಅಭಿವೃದ್ಧಿಗಾಗಿ ಮುಂಬೈ ಮಾದರಿಯನ್ನು ಅನುಸರಿಸಿ ಸಮಗ್ರ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಜೂನ್‌ 14ರಂದು ಸೂಚನೆ ನೀಡಿದರು. ಮುಂದಿನ ಸಚಿವ ಸಂಪುಟ ಸಭೆಗೆ ಮುನ್ನ ಈ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಅವರು ಆದೇಶಿಸಿದರು.

ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿದ ಅವರು, ಮುಂಬೈನಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳಿಗಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುಂಬೈಗೆ ಭೇಟಿ ನೀಡಿ ಅಲ್ಲಿ ಜಾರಿಯಲ್ಲಿರುವ ಸ್ಲಂ ಪುನರ್ವಸತಿ ಮಾದರಿಯನ್ನು ಅಧ್ಯಯನ ಮಾಡಿ, ರಾಜ್ಯದಲ್ಲಿ ಇನ್ನಷ್ಟು ಉತ್ತಮವಾಗಿ ಜಾರಿಗೆ ತರಲು ಸಲಹೆಗಳನ್ನು ನೀಡಬೇಕು ಎಂದು ಸೂಚಿಸಿದರು.

ಪ್ರತಿ ಬಡ ಕುಟುಂಬಕ್ಕೂ ಮನೆ ಎಂಬುದು ಮೂಲಭೂತ ಹಕ್ಕು ಎಂದು ಒತ್ತಿ ಹೇಳಿದ ಅವರು, ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣ ಮತ್ತು ಸೈಟ್ ಹಂಚಿಕೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಶಾಲಾ ಊಟ ಯೋಜನೆ ವಿವಾದ: ಬಿಜೆಪಿ ವಿರುದ್ಧ TMC ಟೀಕೆ

ಹೌಸಿಂಗ್ ಹಂಚಿಕೆಯಲ್ಲಿ ನಡೆಯುತ್ತಿರುವ ಹರಾಜು ಪದ್ಧತಿಯನ್ನು ಸ್ಥಗಿತಗೊಳಿಸಿ, ಅದರ ಬದಲಿಗೆ ಪಾರದರ್ಶಕ ಲಾಟರಿ ಪದ್ಧತಿಯನ್ನು ಅನುಸರಿಸುವಂತೆ ಮುಖ್ಯಮಂತ್ರಿ ಸೂಚಿಸಿದರು. ಹರಾಜು ಪದ್ಧತಿಯಿಂದ ನಿಜವಾದ ಫಲಾನುಭವಿಗಳಿಗೆ ಲಾಭವಾಗುತ್ತಿದೆಯೇ ಅಥವಾ ಹಣವಿರುವವರಿಗೆ ಮಾತ್ರ ಅವಕಾಶ ಸಿಗುತ್ತಿದೆಯೇ ಎಂಬುದನ್ನು ಪ್ರಶ್ನಿಸಿದರು.

ಯಾವುದೇ ಯೋಜನೆಗಳನ್ನು ಜಾರಿಗೆ ತರಲು ಮುನ್ನ ಸಮಗ್ರ ಯೋಜನೆ ರೂಪಿಸಬೇಕು ಎಂದು ಅವರು ಹೇಳಿದರು. ಬೇಡಿಕೆಯಿಲ್ಲದೇ ಮನೆಗಳನ್ನು ನಿರ್ಮಿಸುವುದನ್ನು ತಪ್ಪಿಸಲು ಎಚ್ಚರಿಕೆ ನೀಡಿದರು. ಜೊತೆಗೆ, ಮನೆಗಳ ಜೊತೆಗೆ ಮೂಲಸೌಕರ್ಯ ಮತ್ತು ಸಂಪರ್ಕ ವ್ಯವಸ್ಥೆಗಳನ್ನೂ ಒದಗಿಸುವತ್ತ ಗಮನ ಹರಿಸಬೇಕು ಎಂದು ಸೂಚಿಸಿದರು.

ಕರ್ನಾಟಕ ಹೌಸಿಂಗ್ ಬೋರ್ಡ್ ಯೋಜನೆಗಳ ಕುರಿತು ಪರಿಶೀಲನೆ ನಡೆಸಿದ ವೇಳೆ, ಒಟ್ಟು 568 ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, ಇದರಲ್ಲಿ 280 ಯೋಜನೆಗಳು ಪೂರ್ಣಗೊಂಡಿವೆ ಹಾಗೂ 288 ಯೋಜನೆಗಳು ಬಾಕಿ ಉಳಿದಿವೆ ಎಂದು ತಿಳಿದುಬಂದಿದೆ. ಈ ಬಾಕಿ ಯೋಜನೆಗಳಲ್ಲಿ ಉಂಟಾಗಿರುವ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ, ಯಾವುದೇ ದುರುಪಯೋಗವಾಗದಂತೆ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಶಿವರಾಮ ಕಾರಂತ್ ಲೇಔಟ್‌ನಲ್ಲಿನ ರಾಜೀವ್ ಗಾಂಧಿ ವಸತಿ ಯೋಜನೆಯ ಮನೆಗಳ ನಿರ್ಮಾಣ ಜವಾಬ್ದಾರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಹಸ್ತಾಂತರಿಸುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು.

ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಮನೆ ಹಂಚಿಕೆ ಅರ್ಜಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಹಣ ಪಾವತಿಸಿ ವರ್ಷಗಳಿಂದ ಕಾಯುತ್ತಿರುವ ಅರ್ಜಿದಾರರಿಗೆ ಶೀಘ್ರದಲ್ಲಿ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಸೂಚಿಸಿದರು. ಈ ಸಂಬಂಧ ಶಾಸಕರೊಂದಿಗೆ ಚರ್ಚಿಸಿ ಫಲಾನುಭವಿಗಳ ಪಟ್ಟಿಯನ್ನು ಶೀಘ್ರದಲ್ಲೇ ಸಂಗ್ರಹಿಸುವುದಾಗಿ ಅವರು ಭರವಸೆ ನೀಡಿದರು.

“ಮನೆ ಹೊಂದುವುದು ಪ್ರತಿಯೊಬ್ಬ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಕನಸು. ಅರ್ಜಿದಾರರನ್ನು ಅನಾವಶ್ಯಕವಾಗಿ ಕಾಯಿಸುವುದನ್ನು ನಿಲ್ಲಿಸಿ, ಹಂಚಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು,” ಎಂದು ಮುಖ್ಯಮಂತ್ರಿ ಹೇಳಿದರು.

ಇದನ್ನೂ ನೋಡಿ: “ಟಾಟಾ ಕಂಪನಿಗೆ ವಿದ್ಯುತ್‌, ಜನತೆಗೆ ಕಾದಿದೆ ಆಪತ್ತು? | ವಿದ್ಯುತ್ ಖಾಸಗೀಕರಣ ವಿರುದ್ಧ ಸಮಾವೇಶ” Janashakthi Media

Donate Janashakthi Media

Leave a Reply

Your email address will not be published. Required fields are marked *