ಬೆಂಗಳೂರು: “ಕೃಷಿ ಕೆಲಸ ಮಾಡಿ ದಣಿದು ಬಂದ ಕಾರ್ಮಿಕರಿಗೆ ನೀಡಲು ಪ್ರಾವಿಷನ್ ಸ್ಟೋರ್‌ನಲ್ಲಿ ಬಿಯರ್, ಲಿಕ್ಕರ್ ಇರಿಸಲಾಗಿತ್ತು” ಎಂಬ ವಾದವನ್ನು ಕೇಳಿ ಕರ್ನಾಟಕ ಹೈಕೋರ್ಟ್ ಅಚ್ಚರಿಗೊಂಡಿತು. ಇಂಥ ಪದ್ಧತಿ ಸ್ಕಾಟ್‌ಲ್ಯಾಂಡ್‌ನಲ್ಲಿ ವಿಸ್ಕಿ ಕಂಡುಹಿಡಿದ ಕಾಲದಲ್ಲಿ ಇರಬಹುದು, ಆದರೆ ಭಾರತದಲ್ಲಿ ಅದನ್ನು ಅನುಸರಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿತು.
ಅಲ್ಲದೆ, ಜನರನ್ನು ಅಮಲಿನಲ್ಲಿ ಮುಳುಗಿಸಿ ಹಾಳು ಮಾಡುತ್ತಿರುವುದಕ್ಕೆ ಸಂಬಂಧಿಸಿ ಸರ್ಕಾರವು ಪ್ರತ್ಯೇಕ ಪ್ರಕರಣ ದಾಖಲಿಸಬೇಕು ಎಂಬುದನ್ನೂ ನ್ಯಾಯಪೀಠ ಮೌಖಿಕವಾಗಿ ಸೂಚಿಸಿತು.
ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಿಸಿರುವ ದೋಷಾರೋಪ ಪಟ್ಟಿ ಹಾಗೂ ಗುಬ್ಬಿಯ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕೆಂದು ಕೋರಿ ತುಮಕೂರು ಜಿಲ್ಲೆಯ ಮಣಿಕುಪ್ಪೆ ಗ್ರಾಮದ ಯಶೋಧಮ್ಮ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ವಿದ್ಯಾರ್ಥಿಗಳ ಪ್ರತಿಭಟನೆಗೆ ಬಿಹಾರ ವಿಧಾನಸಭೆಯಲ್ಲಿ ಪ್ರತಿಧ್ವನಿ: ಕಲಾಪದಲ್ಲಿ ಭಾರೀ ಗದ್ದಲ
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಅರ್ಜಿದಾರೆ ಮಹಿಳೆಯಾಗಿದ್ದು, ಪ್ರಕರಣ ಈಗ ವಿಚಾರಣಾ ಹಂತದಲ್ಲಿದೆ ಎಂಬ ಕಾರಣದಿಂದ ಅಧೀನ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡುವುದಾಗಿ ತಿಳಿಸಿದರು. ಜೊತೆಗೆ, ಅರ್ಜಿ ಸಂಬಂಧ ಪ್ರತಿವಾದಿಗಳಾದ ಗುಬ್ಬಿ ವಲಯದ ಅಬಕಾರಿ ಉಪ ನಿರೀಕ್ಷಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದರು.
ವಿಚಾರಣೆ ವೇಳೆ, ಅರ್ಜಿದಾರರ ದಿನಸಿ ಅಂಗಡಿಯಲ್ಲಿ ಯಾವ ಯಾವ ಮದ್ಯ ಇತ್ತು ಎಂದು ನ್ಯಾಯಪೀಠ ಕೇಳಿತು. ಅದಕ್ಕೆ ಅರ್ಜಿದಾರರ ಪರ ವಕೀಲರು, “ವಿಸ್ಕಿ, ಬಿಯರ್ ಹಾಗೂ ರಮ್. ಸ್ವಾಮಿ, ಇದು ವೈಯಕ್ತಿಕ ಬಳಕೆಗೆ. ಕೃಷಿ ಕೆಲಸ ಮಾಡಿ ಬಂದ ಕಾರ್ಮಿಕರಿಗೆ ನೀಡಲು ಇಟ್ಟುಕೊಂಡಿದ್ದೆವು,” ಎಂದು ಹೇಳಿದರು.
ಆದರೆ ಈ ವಿವರಣೆಯಿಂದ ನ್ಯಾಯಪೀಠ ತೃಪ್ತವಾಗಲಿಲ್ಲ. “ಅರ್ಜಿಯನ್ನು ಒಮ್ಮೆ ನೋಡಿ. ಎಷ್ಟು ಲಿಕ್ಕರ್ ಇದೆ ಎಂಬುದನ್ನು ಓದಿಕೊಂಡು ಬರಬೇಕಲ್ಲವೇ? 22.8 ಲೀಟರ್ ವಿಸ್ಕಿ, 7 ಬಾಟಲಿ ಬಿಯರ್ ಇದೆ. ವೈಯಕ್ತಿಕ ಬಳಕೆಗೆ 22 ಲೀಟರ್ ವಿಸ್ಕಿ ಇಡಲಾಗಿತ್ತೇ? ವಿಸ್ಕಿ ನೀಡಿ ಕಾರ್ಮಿಕರನ್ನು ಹಾಳು ಮಾಡುತ್ತಿದ್ದೀರಿ. ಮದ್ಯ ಇಟ್ಟುಕೊಳ್ಳಬೇಕೆಂದಾದರೆ ಪರವಾನಗಿ ಪಡೆಯಬೇಕು. ಆದರೂ ದಿನಸಿ ಅಂಗಡಿಯಲ್ಲಿ ಮದ್ಯ ಇಡಲು ಸಾಧ್ಯವಿಲ್ಲ,” ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.
ಅರ್ಜಿದಾರರ ಪರ ವಕೀಲರು, ಮದ್ಯವನ್ನು ಮಾರಾಟ ಮಾಡುತ್ತಿರಲಿಲ್ಲ; ವೈಯಕ್ತಿಕ ಬಳಕೆಗೆ ಮಾತ್ರ ಇಡಲಾಗಿತ್ತು ಎಂದು ಮತ್ತೊಮ್ಮೆ ಸಮಜಾಯಿಷಿ ನೀಡಿದರು.
ಇದರಿಂದ ಮತ್ತಷ್ಟು ಅಸಮಾಧಾನಗೊಂಡ ನ್ಯಾಯಪೀಠ, “ಹೌದಾ? ಹಾಗಾದರೆ ಜನರನ್ನು ಅಮಲಿನಲ್ಲಿ ಮುಳುಗಿಸಿ ಹಾಳು ಮಾಡುತ್ತಿರುವುದಕ್ಕೆ ಸರ್ಕಾರವು ಅರ್ಜಿದಾರರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಬೇಕು. ಪ್ರಕರಣದ ವಿಚಾರಣೆ ಮುಂದುವರಿಯಲಿ. ಮದ್ಯ ಮಾರಾಟ ಮಾಡಲಾಗುತ್ತಿತ್ತೇ ಅಥವಾ ವೈಯಕ್ತಿಕ ಬಳಕೆಗೆ ಇರಿಸಿಕೊಳ್ಳಲಾಗಿತ್ತೇ ಎಂಬುದು ತಿಳಿದು ಬರಲಿ,” ಎಂದು ಖಾರವಾಗಿ ಹೇಳಿತು.
ಅರ್ಜಿದಾರರ ಪರ ವಕೀಲರು, ಕೃಷಿ ಕೆಲಸ ಮಾಡಿ ದಣಿದು ಬರುವ ಕಾರ್ಮಿಕರಿಗೆ ನೀಡಲಾಗುತ್ತಿತ್ತು ಎಂಬುದು ಸತ್ಯ ಎಂದು ಮತ್ತೊಮ್ಮೆ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “ಅಯ್ಯೋ ಪಾಪ. ಕೆಲಸ ಮಾಡಿ ಸುಸ್ತಾಗಿ ಬರುವ ಕಾರ್ಮಿಕರಿಗೆ ತಗೊಳ್ಳಿ ಅಂತ ಲಿಕ್ಕರ್ ಕೊಡುತ್ತಿದ್ದಿರಾ? ವಿಸ್ಕಿ ಕಂಡು ಹಿಡಿದಾಗ ಸ್ಕಾಟ್‌ಲ್ಯಾಂಡ್‌ನಲ್ಲಿ ಈ ರೀತಿ ಮಾಡಲಾಗುತ್ತಿತ್ತು. ಆ ಪದ್ಧತಿಯನ್ನು ಭಾರತದಲ್ಲಿ ಮಾಡಬೇಕಿಲ್ಲ. 23 ಲೀಟರ್ ಲಿಕ್ಕರ್ ಅನ್ನು ದಿನಸಿ ಅಂಗಡಿಯಲ್ಲಿ ಇಟ್ಟುಕೊಳ್ಳುವುದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.
ಪ್ರಕರಣ ಇನ್ನೂ ಪ್ರಾಥಮಿಕ ಹಂತದಲ್ಲಿರುವುದರಿಂದ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿ, ವಿಚಾರಣೆಯನ್ನು ಮುಂದೂಡಿತು.
ಇದನ್ನೂ ನೋಡಿ: ಫಿಫಾ ವಿಶ್ವಕಪ್ 2026 ಫೈನಲ್ | ಮೆಸ್ಸಿಯ ಕೊನೆಯ ಕನಸೋ? ಸ್ಪೇನ್‌ನ ಹೊಸ ಇತಿಹಾಸವೋ? Janashakthi Media
