ನವದೆಹಲಿ: ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಅದರ ಮೇಲಿನ ಪೊಲೀಸ್ ಕ್ರಮದ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಷರತ್ತು ವಿಧಿಸಿದ್ದು, ಇದಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂಸತ್ ಆವರಣದಲ್ಲಿ ಬುಧವಾರ ಮಾತನಾಡಿದ ಅಮಿತ್ ಶಾ, ವಿದ್ಯಾರ್ಥಿಗಳ ಪ್ರತಿಭಟನೆ ಸೇರಿದಂತೆ ಎಲ್ಲ ವಿಚಾರಗಳ ಕುರಿತು ಸರ್ಕಾರ ಸಂಸತ್ತಿನಲ್ಲಿ ವಿವರವಾದ ಚರ್ಚೆಗೆ ಸಿದ್ಧವಿದೆ ಎಂದು ಹೇಳಿದರು. ಆದರೆ ಚರ್ಚೆಗೆ ಅವಕಾಶ ಕಲ್ಪಿಸಲು ವಿರೋಧ ಪಕ್ಷಗಳು ಲೋಕಸಭಾ ಸ್ಪೀಕರ್‌ಗೆ ಲಿಖಿತ ನೋಟಿಸ್ ನೀಡಬೇಕು ಎಂದು ಅವರು ತಿಳಿಸಿದರು.
ವಿರೋಧ ಪಕ್ಷಗಳು ಮಧ್ಯಾಹ್ನ 2 ಗಂಟೆಯೊಳಗೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಲಿಖಿತ ಮನವಿ ಸಲ್ಲಿಸಿದರೆ, ಮಧ್ಯಾಹ್ನ 3 ಗಂಟೆಯಿಂದ ಮರುದಿನ 3 ಗಂಟೆಯವರೆಗೆ ಈ ವಿಚಾರದ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಅಮಿತ್ ಶಾ ಹೇಳಿದರು. ಸಂಸತ್ ಕಲಾಪ ಸುಗಮವಾಗಿ ನಡೆಯಲು ಅವಕಾಶ ನೀಡಬೇಕು ಎಂದೂ ಅವರು ವಿರೋಧ ಪಕ್ಷಗಳಿಗೆ ಮನವಿ ಮಾಡಿದರು.
‘ಅಮಿತ್ ಶಾ ಅವರ ಉಪನ್ಯಾಸದಲ್ಲಿ ಆಸಕ್ತಿ ಇಲ್ಲ’
ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ವಿರೋಧ ಪಕ್ಷಗಳಿಗೆ ಗೃಹ ಸಚಿವರ ‘ಉಪನ್ಯಾಸ’ದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದರು. ಪ್ರತಿಭಟನಾಕಾರರ ವಿರುದ್ಧ ನಡೆದ ಪೊಲೀಸ್ ಕ್ರಮಕ್ಕೆ ನೇರವಾಗಿ ಯಾರು ಆದೇಶ ನೀಡಿದರು ಎಂಬುದಕ್ಕೆ ಗೃಹ ಸಚಿವರು ಉತ್ತರಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ಹಾಗೂ ಲಾಠಿ ಪ್ರಹಾರದ ಆದೇಶವನ್ನು ಯಾರು ನೀಡಿದರು ಎಂಬುದನ್ನು ಅಮಿತ್ ಶಾ ಸ್ಪಷ್ಟಪಡಿಸಬೇಕು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಈ ಕ್ರಮಕ್ಕೆ ಗೃಹ ಸಚಿವರೇ ಹೊಣೆಗಾರರಾಗಿದ್ದರೆ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ಹಲವು ದಿನಗಳಿಂದ ಗೃಹ ಸಚಿವರು ಸಂಸತ್ತಿನಲ್ಲಿ ಕಾಣಿಸಿಕೊಂಡಿಲ್ಲ ಎಂದು ಆರೋಪಿಸಿದ ರಾಹುಲ್ ಗಾಂಧಿ, ಸಂಸತ್ತಿಗೆ ಬಂದು ಈ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಅವರಿಗೆ ಇಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ : ‘ಬಂಡವಾಳಶಾಹಿಯ ಬಿಕ್ಕಟ್ಟು ತೀವ್ರ ಹಂತ ತಲುಪಿದೆ’: ಕ್ಯೂಬಾ ಅಧ್ಯಕ್ಷ ಡಿಯಾಜ್-ಕ್ಯಾನೆಲ್
ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರದಲ್ಲಿ ಮುಂದುವರಿದ ಬಿಕ್ಕಟ್ಟು
ಜುಲೈ 20ರಂದು ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಅದರ ಮೇಲಿನ ಪೊಲೀಸ್ ಕ್ರಮ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ರಾಮಮಂದಿರದ ದೇಣಿಗೆಗೆ ಸಂಬಂಧಿಸಿದ ಆರೋಪಗಳೂ ಸಂಸತ್ ಕಲಾಪದಲ್ಲಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿವೆ.
ಸಂಸತ್ ಕಲಾಪದಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿರೋಧ ಪಕ್ಷದ ಸದಸ್ಯರು ಕಲಾಪಕ್ಕೆ ಅವಕಾಶ ನೀಡಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಬುಧವಾರ ಮನವಿ ಮಾಡಿದರು. ಸಂಸತ್ತಿನ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಪ್ರತಿಭಟನೆ ಮತ್ತು ಘೋಷಣೆಗಳನ್ನು ಕೂಗುವುದು ಸೂಕ್ತವಲ್ಲ ಎಂದು ಅವರು ಹೇಳಿದರು.
ಇದನ್ನೂ ನೋಡಿ : ಅಪರಾಧ ಮತ್ತು ಶಿಕ್ಷೆ… ಯಾವುದು ಅಪರಾಧ… | ಕೆ.ಎಸ್.ವಿಮಲಾ Janashakthi Media
