ನಕಲಿ ರಾಜಕೀಯ ಪಕ್ಷಗಳ ಮೂಲಕ ₹10 ಸಾವಿರ ಕೋಟಿ ತೆರಿಗೆ ವಂಚನೆ ಆರೋಪ: ಪ್ರಧಾನಿ ಮೋದಿ ಮೌನ ಏಕೆ? ಕಾಂಗ್ರೆಸ್ ಪ್ರಶ್ನೆ

ನವದೆಹಲಿ: ನೋಂದಾಯಿತವಾದರೂ ಮಾನ್ಯತೆ ಪಡೆಯದ ನಕಲಿ ರಾಜಕೀಯ ಪಕ್ಷಗಳನ್ನು ಬಳಸಿಕೊಂಡು ದೇಶದಲ್ಲಿ ₹10 ಸಾವಿರ ಕೋಟಿಗೂ ಅಧಿಕ ಕಪ್ಪುಹಣ ಸೃಷ್ಟಿಸಲಾಗಿದೆ ಹಾಗೂ ತೆರಿಗೆ ವಂಚನೆ ನಡೆದಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಕ್ರಮವೇನು ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರು ಈ ಆರೋಪಗಳ ಬಗ್ಗೆ ಏಕೆ ಮೌನ ವಹಿಸಿದ್ದಾರೆ ಎಂದು ಕೇಳಿದೆ. ನಕಲಿ

ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಶಕ್ತಿ ಸಿಂಗ್ ಗೋಹಿಲ್ ಅವರು ಸೆಪ್ಟೆಂಬರ್ 9ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಆರೋಪಗಳನ್ನು ಮಾಡಿದರು. ಅವರ ಪ್ರಕಾರ, ಸುಮಾರು 3,260 ನೋಂದಾಯಿತ ಆದರೆ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು (RUPPs) ತೆರಿಗೆ ವಂಚನೆಗೆ ಮಧ್ಯವರ್ತಿಗಳಾಗಿ ಬಳಸಲ್ಪಟ್ಟಿವೆ. ಇಂತಹ ಪಕ್ಷಗಳಿಗೆ ರಾಜಕೀಯ ದೇಣಿಗೆ ನೀಡಿದಂತೆ ದಾಖಲೆ ಸೃಷ್ಟಿಸಿ ತೆರಿಗೆ ವಿನಾಯಿತಿ ಪಡೆಯಲಾಗುತ್ತಿತ್ತು. ನಂತರ ದೇಣಿಗೆಯ ಬಹುಪಾಲು ಹಣವನ್ನು ಕಮಿಷನ್ ಕಡಿತಗೊಳಿಸಿ ದಾನಿಗಳಿಗೆ ನಗದು ರೂಪದಲ್ಲಿ ಮರಳಿಸಲಾಗುತ್ತಿತ್ತು ಎಂದು ಗೋಹಿಲ್ ಆರೋಪಿಸಿದ್ದಾರೆ.

ಆದಾಯ ತೆರಿಗೆ ಕಾಯ್ದೆಯ 80GGC ಮತ್ತು 80GGB ಸೇರಿದಂತೆ ಕೆಲವು ನಿಬಂಧನೆಗಳಡಿ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗಳಿಗೆ ತೆರಿಗೆ ಪ್ರಯೋಜನ ದೊರೆಯುತ್ತದೆ. ಇದೇ ಅವಕಾಶವನ್ನು ದುರುಪಯೋಗಪಡಿಸಿಕೊಂಡು ನಕಲಿ ದೇಣಿಗೆಗಳ ಹೆಸರಿನಲ್ಲಿ ತೆರಿಗೆ ತಪ್ಪಿಸುವ ವ್ಯವಸ್ಥೆ ರೂಪಿಸಲಾಗಿದೆ ಎಂಬುದು ಕಾಂಗ್ರೆಸ್‌ನ ಆರೋಪ. ಈ ವ್ಯವಹಾರಗಳಲ್ಲಿ ಪಕ್ಷಗಳ ಮಧ್ಯವರ್ತಿಗಳು ಶೇ.2ರಿಂದ ಶೇ.15ರವರೆಗೆ ಕಮಿಷನ್ ಪಡೆದುಕೊಂಡು ಉಳಿದ ಹಣವನ್ನು ದಾನಿಗಳಿಗೆ ಹಿಂತಿರುಗಿಸುತ್ತಿದ್ದರು ಎಂದು ಗೋಹಿಲ್ ಹೇಳಿದ್ದಾರೆ.

₹5 ಕೋಟಿಗೂ ಅಧಿಕ ಆದಾಯ ಹೊಂದಿರುವ ತೆರಿಗೆದಾರರಿಗೆ ಆದಾಯ ತೆರಿಗೆ, ಹೆಚ್ಚುವರಿ ಶುಲ್ಕ ಮತ್ತು ಸೆಸ್ ಸೇರಿ ತೆರಿಗೆ ಹೊರೆ ಶೇ.42ಕ್ಕಿಂತ ಹೆಚ್ಚಾಗಬಹುದು. ಹೀಗಾಗಿ ತೆರಿಗೆ ತಪ್ಪಿಸಲು ಇಂತಹ ಮಾರ್ಗವನ್ನು ಬಳಸುವ ಪ್ರಲೋಭನೆ ಹೆಚ್ಚಿರುತ್ತದೆ ಎಂದು ಗೋಹಿಲ್ ವಿವರಿಸಿದ್ದಾರೆ. ತೆರಿಗೆ ಇಲಾಖೆ ಮತ್ತು ತೆರಿಗೆ ನ್ಯಾಯಮಂಡಳಿಗಳು ಕೆಲವು ಪ್ರಕರಣಗಳಲ್ಲಿ ಇಂತಹ ವಂಚನೆಯನ್ನು ಪತ್ತೆಹಚ್ಚಿದ್ದರೂ, ಕ್ರಿಮಿನಲ್ ಮೊಕದ್ದಮೆ ಹಾಗೂ ದಂಡದ ಕ್ರಮಗಳು ಏಕೆ ಕೈಗೊಳ್ಳಲಾಗಿಲ್ಲ ಎಂಬುದನ್ನೂ ಅವರು ಪ್ರಶ್ನಿಸಿದ್ದಾರೆ. ನಕಲಿ

ಇದನ್ನೂ ಓದಿ : ಸರ್ಕಾರಿ ಶಾಲಾ ಮಕ್ಕಳ ಶೂ, ಸಾಕ್ಸ್‌ ಕಳಪೆ ಆರೋಪ: ತನಿಖೆಗೆ ಶಿಕ್ಷಣ ಇಲಾಖೆ ಆದೇಶ; ಉಪಲೋಕಾಯುಕ್ತರಿಂದ ಸ್ವಯಂಪ್ರೇರಿತ ಪ್ರಕರಣ

ಉದ್ದೇಶಪೂರ್ವಕವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ತೆರಿಗೆ ವಂಚನೆ ಮಾಡಿದ್ದರೆ ಆದಾಯ ತೆರಿಗೆ ಕಾಯ್ದೆಯ 276C(1) ಮತ್ತು 277ನೇ ವಿಧಿಗಳ ಅಡಿಯಲ್ಲಿ ಕಠಿಣ ದಂಡ ಹಾಗೂ ಕ್ರಿಮಿನಲ್ ಪ್ರಕರಣಕ್ಕೆ ಅವಕಾಶವಿದೆ ಎಂದು ಗೋಹಿಲ್ ಹೇಳಿದ್ದಾರೆ. ಕೆಲವು ಪ್ರಕರಣಗಳಲ್ಲಿ ಶೇ.200ರವರೆಗೆ ದಂಡ ಹಾಗೂ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯಂತಹ ಕಾನೂನು ಕ್ರಮಗಳ ಸಾಧ್ಯತೆಯಿದ್ದರೂ ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿಲ್ಲ ಎಂಬುದು ಅವರ ಆರೋಪವಾಗಿದೆ.

ಈ ವಿಚಾರದಲ್ಲಿ ಚುನಾವಣಾ ಆಯೋಗದ ಜವಾಬ್ದಾರಿಯನ್ನೂ ಕಾಂಗ್ರೆಸ್ ಪ್ರಶ್ನಿಸಿದೆ. ರಾಜಕೀಯ ಪಕ್ಷಗಳ ಹಣಕಾಸಿನಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಖಚಿತಪಡಿಸಲು 2014ರಲ್ಲಿ ಚುನಾವಣಾ ಆಯೋಗ ರೂಪಿಸಿದ್ದ ಮಾರ್ಗಸೂಚಿಗಳ ಪ್ರಕಾರ, ಪಕ್ಷಗಳು ತಮ್ಮ ದೇಣಿಗೆ ಮತ್ತು ಖರ್ಚಿನ ವಿವರಗಳನ್ನು ಬಹಿರಂಗಪಡಿಸಬೇಕು ಹಾಗೂ ಸಂಬಂಧಿತ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು. ಆದರೆ ಈ ನಿಯಮಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿವೆಯೇ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಮುಂದಿಟ್ಟಿದೆ.

ಇದೇ ವೇಳೆ ಗುಜರಾತ್‌ನ ಆರು ನೋಂದಾಯಿತ ಆದರೆ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಮತ್ತೊಂದು ವರದಿಯೂ ಈ ಚರ್ಚೆಗೆ ಹಿನ್ನೆಲೆ ಒದಗಿಸಿದೆ. 2022-23ರಲ್ಲಿ ಆರು ಪಕ್ಷಗಳು ಒಟ್ಟು ₹1,500 ಕೋಟಿಗೂ ಅಧಿಕ ದೇಣಿಗೆ ಪಡೆದಿದ್ದರೂ, 2024ರ ಲೋಕಸಭಾ ಚುನಾವಣೆಯಲ್ಲಿ ಅವು ಒಟ್ಟಾಗಿ ಕೇವಲ 15 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು ಎಂದು ಬಿಬಿಸಿ ಹಿಂದಿಯ ತನಿಖೆಯನ್ನು ಉಲ್ಲೇಖಿಸಿ ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ. ಈ ದೇಣಿಗೆಗಳಲ್ಲಿ ಅಕ್ರಮ ನಡೆದಿದೆ ಎಂದು ಆ ತನಿಖೆ ಹೇಳಿಲ್ಲವಾದರೂ, ಕೆಲವು ದೇಣಿಗೆಗಳನ್ನು ಆದಾಯ ತೆರಿಗೆ ಇಲಾಖೆ ಪರಿಶೀಲಿಸಿ ಕೆಲವು ದಾನಿಗಳಿಂದ ತೆರಿಗೆ ವಸೂಲಿ ಮಾಡಿರುವುದಾಗಿ ವರದಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ನಕಲಿ ಅಥವಾ ಅಲ್ಪ ರಾಜಕೀಯ ಚಟುವಟಿಕೆ ಹೊಂದಿರುವ ಪಕ್ಷಗಳ ಹೆಸರಿನಲ್ಲಿ ದೊಡ್ಡ ಪ್ರಮಾಣದ ಹಣ ಹರಿಯುತ್ತಿರುವುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಕಪ್ಪುಹಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳುವ ಕೇಂದ್ರ ಸರ್ಕಾರ ಇಂತಹ ಪ್ರಕರಣಗಳಲ್ಲಿ ಏಕೆ ಮೌನವಾಗಿದೆ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಎಂದು ಶಕ್ತಿ ಸಿಂಗ್ ಗೋಹಿಲ್ ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ : “ಆಪರೇಷನ್‌ ನಂತರ ಗಂಭೀರ ಸಮಸ್ಯೆ! ವೈದ್ಯರ ನಿರ್ಲಕ್ಷ್ಯವೇ?” Janashakthi Media

Donate Janashakthi Media

Leave a Reply

Your email address will not be published. Required fields are marked *