ಈ ಚಲನಚಿತ್ರದಾದ್ಯಂತ ಅನೇಕ ಬಗೆಯ ಕತ್ತಲೆಗಳು ಅನಾವರಣಗೊಂಡಿವೆ. ಇವುಗಳಿಗೆ ಸಾಮಾಜಿಕ, ರಾಜಕೀಯ ಮತ್ತು ಕೌಟುಂಬಿಕ ಆಯಾಮಗಳಿವೆ. ಸಮಕಾಲೀನ ಸಂದರ್ಭದ ಬರಹಗಾರರ ಮೇಲಿನ ಆಕ್ರಮಣಗಳು, ಅಸಹಿಷ್ಣುತೆ, ಆಹಾರದ ಹಕ್ಕಿನ ಮೇಲಿನ ಪ್ರಹಾರಗಳು ಇತ್ಯಾದಿಗಳ ಪ್ರಸ್ತಾಪಗಳು ಈ ಚಲನಚಿತ್ರದಲ್ಲಿ ಇವೆ. ಇವು ಒಂದು ರೀತಿಯ ಕತ್ತಲೆಯನ್ನು ಪ್ರತಿನಿಧಿಸುತ್ತದೆ.
ಅನಾದಿ ಕಾಲದಿಂದ ನಮ್ಮ ಸಮಾಜ ಅನೇಕ ಬಗೆಯ ಕತ್ತಲುಗಳಿಗೆ ಸಾಕ್ಷಿಯಾಗುತ್ತಲೇ ಇದೆ. ಕತ್ತಲು ಮತ್ತು ಬೆಳಕನ್ನು ಬೈನರಿ ನೆಲೆಯಿಂದ ವ್ಯಾಖ್ಯಾನಿಸಲು ಇಷ್ಟವಿರದಿದ್ದರೂ, ಮಲಯಾಳಂ ಚಲನಚಿತ್ರ ‘ಇರುಟ್ಟ್’(ಕತ್ತಲೆ) ಬಗೆಗೆ ಬರೆಯಲು ಶುರುಮಾಡಿದಾಗ ಬೈನರಿ ನೆಲೆಯಿರುವ ಶೀರ್ಷಿಕೆ ನನಗೆ ಹೊಳೆದದ್ದು ಬಹುಶಃ ಈ ಚಲನಚಿತ್ರದ ಕಥಾವಸ್ತುವಿನ ಪ್ರಭಾವದಿಂದಿರಬಹುದು ಎಂದೆನಿಸುತ್ತದೆ. ಇರಲಿ, ಈಗ ಸ್ವಲ್ಪ ಸ್ಪಾಯ್ಲರ್ಸ್…
ಈ ಚಲನಚಿತ್ರದ ಪ್ರಧಾನ ಪಾತ್ರಧಾರಿ ಪ್ರೊ. ರಾಮದಾಸ್ (ನಟ ಕೆ ಕಲಾಧರನ್), ವಿಶ್ವವಿದ್ಯಾನಿಲಯದ ಒಬ್ಬ ನಿವೃತ್ತ ಪ್ರಾಧ್ಯಾಪಕ. ಅವರು ಎಡಪಂಥೀಯ ವಿಚಾರಧಾರೆಯೆಡೆಗೆ ವಾಲಿರುವ ಒಬ್ಬ ಉದಾರವಾದಿ ಚಿಂತಕ. ಒಂದು ಸುಂದರವಾದ ಮನೆಯಲ್ಲಿ ಒಬ್ಬಂಟಿಗನಾಗಿ ವಾಸಿಸುತ್ತಿರುವ ಅವರು ಒಂದು ಎಡಪಂಥೀಯ ನಿಲುವುಳ್ಳ ಪ್ರತಿಕೆಗೆ ಲೇಖನಗಳನ್ನು ಬರೆಯುತ್ತಿರುತ್ತಾರೆ. ಆ ಪತ್ರಿಕೆಯ ಸಂಪಾದಕ ಮತ್ತು ಅದರ ಯುವ ಡಿಸೈನರ್ ಅಲೆಕ್ಸ್ ಅವರಿಗಿರುವ ಇಬ್ಬರು ಸ್ನೇಹಿತರು. ಅವರಿಗೆ ಆಗಾಗ್ಗೆ ಬೆದರಿಕೆಯ ಟೆಲಿಫೋನ್ ಕರೆಗಳು ಬರುತ್ತಿರುತ್ತವೆ. ಅವರು ಸೆಕ್ಯುಲರ್ ನಿಲುವಿನ ಲೇಖನ ಬರೆಯುವುದನ್ನು ನಿಲ್ಲಿಸಬೇಕೆಂದು, ಇಲ್ಲದಿದ್ದರೇ ಶಾಶ್ವತವಾಗಿ ಬರೆಯುವುದನ್ನು ಬರಖಾಸ್ತುಗೊಳಿಸಲ್ಪಡುವ ಕಾಲವನ್ನು ನಿರೀಕ್ಷಿಸಬೇಕಾಗುತ್ತದೆಯೆಂದು ಕರೆ ಮಾಡುವವರು ಬೆದರಿಸುತ್ತಿರುತ್ತಾರೆ. ಕರೆಗಳು ಹಿಂದಿ ಭಾಷೆಯಲ್ಲಿರುತ್ತವೆ. ಅವುಗಳಿಗೆ ರಾಮದಾಸ್ ಆಂಗ್ಲ ಭಾಷೆಯಲ್ಲಿ ಉತ್ತರಿಸುತ್ತಿರುತ್ತಾರೆ. ಇದಕ್ಕೂ ದಮಕಿ ನೀಡಲಾಗುತ್ತದೆ.
ಹೀಗಿರುವಾಗ, ದೆಹಲಿಯ ಪ್ರತಿಷ್ಠಿತ ಜೆಎನ್‌ಯುನ ಯುವ ಸಂಶೋಧಕಿ ನೀಲಿಮಾ ಚಾಟರ್ಜಿ (ನಟಿ ನೀನಾ ಚಕ್ರಬೊರ್ತಿ)ಯ ಪ್ರವೇಶವಾಗುತ್ತದೆ. ಆಕೆ ತನ್ನ ಸಂಶೋಧನೆಗಾಗಿ ರಾವiದಾಸರನ್ನು ಸಂದರ್ಶಿಸಲು ಬರುತ್ತಾಳೆ. ಅವರ ನಡುವೆ ಧೀರ್ಘವಾದ ಸಂಭಾಷಣೆಗಳು ಜರಗುತ್ತವೆ. ಅವುಗಳ ಮೂಲಕವೇ ರಾಮದಾಸರ ಅದುವರೆಗಿನ ಜೀವನ ವೃತ್ತಾಂತಗಳು ಅನಾವರಣಗೊಳ್ಳುತ್ತವೆ. ಅನೇಕ ವರ್ಷಗಳ ಹಿಂದೆ ಅವರ ಪತ್ನಿ ಗತಿಸಿರುತ್ತಾರೆ. ಕಾಲೇಜಿನಲ್ಲಿ ತಮ್ಮ ಕಿರಿಯ ಸಹೋದ್ಯೋಗಿಯೊಡನೆ ಆಕರ್ಷಿತರಾಗುತ್ತಾರೆ. ಇದು ಗುಲ್ಲಾಗುತ್ತದೆ. ಆಕೆ ಕೆಲಸವನ್ನು ತ್ಯಜಿಸಿ, ವಿದೇಶವೊಂದರಲ್ಲಿ ನೆಲೆಸುತ್ತಾಳೆ. ಈ ಪ್ರಕರಣ ರಾಮದಾಸರ ಒಬ್ಬನೇ ಮಗ ಕಬೀರ್ ಮನೆಯನ್ನು ತೊರೆಯುವುದಕ್ಕೆ ಕಾರಣವಾಗುತ್ತದೆ. ಆದರೂ ಆತ ತನಗೆ ಹಣದ ಅವಶ್ಯಕತೆಯಿದ್ದಾಗ ತಂದೆಯನ್ನು ಪೀಡಿಸುತ್ತಿರುತ್ತಾನೆ; ನಿಂದಿಸುತ್ತಿರುತ್ತಾನೆ ಕೂಡ. ತಾತ-ಮೊಮ್ಮಗಳ ಸಂಪರ್ಕಕ್ಕೆ ತಡೆಯನ್ನು ಒಡ್ಡಿರುತ್ತಾನೆ. ಅಲ್ಲದೆ ತನ್ನ ತಂದೆ ಮತ್ತು ನೀಲಿಮಾ ಬಗೆಗೆ ಕೂಡ ಕೆಟ್ಟ ಭಾವನೆಯನ್ನು ಹೊಂದಿರುತ್ತಾನೆ. ತನ್ನ ತಂದೆಗೆ ಹೇಳುತ್ತಾನೆ ಕೂಡ! ಕೊನೆಯಲ್ಲಿ ರಾಮದಾಸರು ವೈನಾಡಿಗೆ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ಕಾರಿನಲ್ಲಿ ತೆರಳುತ್ತಾರೆ. ಆಗ ಅವರಿಗೆ ಏನಾಗುತ್ತದೆ ಎಂಬುದು ಚಲನಚಿತ್ರದ ಕ್ಲೈಮ್ಯಾಕ್ಸ್.
ಈ ಚಲನಚಿತ್ರದಾದ್ಯಂತ ಅನೇಕ ಬಗೆಯ ಕತ್ತಲೆಗಳು ಅನಾವರಣಗೊಂಡಿವೆ. ಇವುಗಳಿಗೆ ಸಾಮಾಜಿಕ, ರಾಜಕೀಯ ಮತ್ತು ಕೌಟುಂಬಿಕ ಆಯಾಮಗಳಿವೆ. ಸಮಕಾಲೀನ ಸಂದರ್ಭದ ಬರಹಗಾರರ ಮೇಲಿನ ಆಕ್ರಮಣಗಳು, ಅಸಹಿಷ್ಣುತೆ, ಆಹಾರದ ಹಕ್ಕಿನ ಮೇಲಿನ ಪ್ರಹಾರಗಳು ಇತ್ಯಾದಿಗಳ ಪ್ರಸ್ತಾಪಗಳು ಈ ಚಲನಚಿತ್ರದಲ್ಲಿ ಇವೆ. ಇವು ಒಂದು ರೀತಿಯ ಕತ್ತಲೆಯನ್ನು ಪ್ರತಿನಿಧಿಸುತ್ತದೆ. ಹಿಂದಿ ಹೇರಿಕೆ, ಭಾಷೆಯ ಮೂಲಕ ಹರಡುವ ಕತ್ತಲೆಯನ್ನು ಸೂಚಿಸುತ್ತದೆ. ತಂದೆ ಧೀಮಂತ, ವಿಶಾಲ ಮನಸ್ಸಿನ ವ್ಯಕ್ತಿಯಾಗಿದ್ದರೂ ಅವರೊಂದಿಗಿನ ಮಗ ಕಬೀರ್‌ನ ಅಸಹ್ಯ ನಡವಳಿಕೆ, ಸಣ್ಣ ಮನಸ್ಸು ಕೌಟುಂಬಿಕ ಕತ್ತಲೆಯನ್ನು ಪ್ರತಿಫಲಿಸುತ್ತದೆ. ಅಲೆಕ್ಸ್ ನಿಲಿಮಾಳಿಗೆ ತಿರುವನಂತಪುರದ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸುವ ಮಾರ್ಗದರ್ಶಕನಾಗುತ್ತಾನೆ. ಒಮ್ಮೆ ಆಕೆಯೊಡನೆ ಮಾತನಾಡುವಾಗ ಆತ ತನಗೆ ಸ್ನೇಹಿತರೇ ಇಲ್ಲವೆಂದು ಹಲಬುತ್ತಾನೆ. ಅದಕ್ಕೆ ನೀಲಿಮಾ ಸಂWಟನೆಯ ಕಾಮ್ರೇಡ್ಸ್ಗಳಿದ್ದಾರಲ್ಲ ಎಂದು ತಿಳಿಸುತ್ತ ಕಾಮ್ರೇಡ್ ಮತ್ತು ಸ್ನೇಹಿತ ಪದಗಳ ವ್ಯತ್ಯಾಸವನ್ನು ತಿಳಿಸುತ್ತಾಳೆ. ಅಲೆಕ್ಸ್ ಒಪ್ಪಿಕೊಳ್ಳುತ್ತಾನೆ. ಆತ ಆಕೆಗೆ ವಿದಾಯವನ್ನು ಹೇಳುವ ಸಂದರ್ಭದಲ್ಲಿ ಸ್ನೇಹಕ್ಕೂ ಮೀರಿದ ಮಧುರ ಭಾವದ ಸುಳಿವು ಸಿಕ್ಕ ನೀಲಿಮಾ ತನಗೆ ಒಬ್ಬ ಗೆಳೆಯನಿರುವುದಾಗಿ ತಿಳಿಸುತ್ತಾಳೆ! ಹೀಗಾಗಿ ಆತ ಏಕಾಂಗಿತನವನ್ನು ಅನುಭವಿಸುತ್ತಿರುವನೇನೋ ಎಂಬ ಭಾವ ವೀಕ್ಷಕರಲ್ಲಿ ಮೂಡುತ್ತದೆ. ರಾಮದಾಸರು ಒಂದು ಎಡಪಂಥೀಯ ರಾಜಕೀಯ ಪಕ್ಷದ ಮಾಜಿ ಸದಸ್ಯರಾಗಿರುತ್ತಾರೆ. ಪಕ್ಷದಿಂದ ಹೊರಬಂದು ದಿಟ್ಟ ಬರವಣಿಗೆಗಳಲ್ಲಿ ತೊಡಗಿರುತ್ತಾರೆ. ಮಗ, ಸೊಸೆ ಮತ್ತು ಮೊಮ್ಮಗಳು ಒಂದೇ ಊರಿನಲ್ಲಿದ್ದರೂ, ಅವರು ಏಕಾಂಗಿಯಾಗಿ ಬಾಳನ್ನು ನಡೆಸುತ್ತಿರುತ್ತಾರೆ. ಹೀಗೆ ಏಕಾಂಗಿತನ(ರಾಜಕೀಯ ಮತ್ತು ಕೌಟುಂಬಿಕ) ಅವರ ಸಾಥಿಯಾಗಿರುತ್ತದೆ. ಅಲೆಕ್ಸ್ ಮತ್ತು ರಾಮದಾಸರ ಏಕಾಂಗಿತನ ಒಂದು ಬಗೆಯ ಕತ್ತಲೆಯೇ ಆಗಿರುತ್ತದೆ. ಕೇರಳದಂತಹ ರಾಜ್ಯದಲ್ಲೂ ಒಬ್ಬ ಪ್ರಗತಿಪರ ವ್ಯಕ್ತಿ ತಮ್ಮ ಚಿಂತೆನೆಗಳಿಗಾಗಿ ಕಷ್ಟ ಕೋಟಲೆಗಳನ್ನು ಎದುರಿಸಬೇಕಾದ ಸಂದರ್ಭವೂ ಒಂದು ಕತ್ತಲೆಯ ವಿಷಯವೇ ಸರಿ!
ಆದರೆ ಇಂತಹ ಜೀವನ ನಡೆಸುತ್ತಿರುವ ರಾಮದಾಸರು ಬಹಳ ಕಕ್ಕುಲಾತಿಯಿಂದ ತಮ್ಮ ಕೈತೋಟವನ್ನು ಬೆಳೆಸಿರುತ್ತಾರೆ; ಮೀನುಗಳ ಜೊತೆ ಪ್ರೀತಿಯ ಒಡನಾಟವನ್ನು ಇಟ್ಟುಕೊಂಡಿರುತ್ತಾರೆ. ಇವು ಅವರ ಜೀವನ ಪ್ರೀತಿಯ ದ್ಯೋತಕ. ಅಲ್ಲದೇ ಎಂತಹ ತಲ್ಲಣದ ಸ್ಥಿತಿಯಲ್ಲೂ, ಎಷ್ಟೇ ಬೆದರಿಕೆಗಳಿದ್ದರೂ, ಅವರು ತಾವು ನಂಬಿದ ಸಿದ್ಧಾಂತ ಮತ್ತು ಮೌಲ್ಯಗಳಿಂದ ವಿಮುಖರಾಗುವುದಿಲ್ಲ. ಇವೆಲ್ಲ ಈ ಚಲನಚಿತ್ರದಲ್ಲಿ ನಿರೂಪಿಸಲ್ಪಟ್ಟಿರುವ ಬೆಳಕಿನ ಅಂಶಗಳು! ಚಲನಚಿತ್ರವನ್ನು ವೀಕ್ಷಿಸಿದ ತರುವಾಯ ನನ್ನಲ್ಲಿ ನರೇಂದ್ರ ದಾಬೋಲ್ಕರ್, ಗೋವಿಂದ್ ಪನ್ಸಾರೆ, ಕಲ್ಬುರ್ಗಿ, ಗೌರಿ ಲಂಕೇಶ್‌ರವರ ದಾರುಣ ಮತ್ತು ಹೇಯ ಹತ್ಯೆಗಳ ನೆನಪಾಗಿ ಹೃದಯ ಭಾರವಾಯಿತು.
ಇವು ಈ ಚಲನಚಿತ್ರದ ಒಡಲಿನ ಕತ್ತಲೆ-ಬೆಳಕಿನ ಕಥೆಯಾದರೇ, ಹೊರಗಡೆ ಇದು ಸುರಂಗ ಮಾರ್ಗದಲ್ಲಿ ಪಯಣಿಸಿ ಕೊನೆಗೆ ಬೆಳಕನ್ನು ಕಂಡಿತು! ಬಾಬುಸೇನನ್ (ಸತೀಶ್ ಮತ್ತು ಸಂತೋಷ್) ಸಹೋದರರು ಈ ಚಲನಚಿತ್ರದ ನಿರ್ದೇಶಕರು. ಮೊದಲು ಸೆನ್ಸಾರ್ ಬೋರ್ಡಿನ ಪ್ರಾದೇಶಿಕ ಕಚೇರಿ ಈ ಚಲನಚಿತ್ರಕ್ಕೆ ಹಸಿರು ನಿಶಾನೆಯನ್ನು ತೋರಿಸಲಿಲ್ಲ. ಕಾರಣಗಳನ್ನೂ ನೀಡಲಿಲ್ಲ! ನಂತರ ಅದು, ಸಂಭಾಷಣೆಗಳಲ್ಲಿರುವ “ ಕೇಸರೀಕರಣ”, “ಭೀಫ್ ತಿನ್ನುವವರು”, “ಮಾವೋವಾದಿಗಳು” ಮುಂತಾದ ಪದಗಳನ್ನು ತೆಗೆದುಹಾಕಬೇಕೆಂದು ಸಹೋದರರಿಗೆ ನಿರ್ದೇಶನವನ್ನು ನೀಡಿತು. ಇದನ್ನು ನಿರ್ದೇಶಕರು ನಿರಾಕರಿಸಿದರು. ತರುವಾಯ ಈ ವಿಷಯ ಮುಂಬೈನ ಸೆನ್ಸಾರ್ ಬೋರ್ಡಿನ ಕೇಂದ್ರ ಕಚೇರಿಗೆ ರವಾನಿಸಲ್ಪಟ್ಟಿತು. ಎಲ್ಲ ಹಂತಗಳಲ್ಲೂ ನಿರ್ದೇಶಕರು ತಮ್ಮ ಪಟ್ಟನ್ನು ಬಿಡಲಿಲ್ಲ! ಕೊನೆಗೆ ಈ ವಿಚಾರ ಇತ್ಯರ್ಥವಾಗುವುದರಲ್ಲಿ ತಡವಾಯಿತು. ಇದು ಇವರು ಎದುರಿಸಿದ ಪಡಿಪಾಟಲುಗಳ ಕರ್ಮಕಾಂಡ! ಇವರ ಮೊದಲನೆಯ ಚಲನಚಿತ್ರ ‘ಛಾಯಮ್ ಪೂಸಿಯ ವೀಡು ( ದಿ ಪೈಂಟಡ್ ಹೌಸ್)’ ಕೂಡ ಸುಪ್ರೀಂ ಕೋರ್ಟಿನ ಮಧ್ಯಪ್ರವೇಶದಿಂದ ತೆರೆಕಂಡಿತ್ತು
ದಿಟ್ಟವಾಗಿ ಹಾಗೂ ನೇರವಾಗಿ ಈ ಚಲನಚಿತ್ರ ಪ್ರಸ್ತುತ ಕಾಲದ ಕೆಲವು ವಿಷಮಕಾರಿ ಬೆಳವಣಿಗೆಗಳ ಬಗೆಗೆ ಬೆಳಕನ್ನು ಕಣ್ಣು ಕೋರೈಸದ ರೀತಿಯಲ್ಲಿ ಚೆಲ್ಲುತ್ತದೆ. ವೀಕ್ಷಕರಲ್ಲಿ ವಿವೇಚನೆಯ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಆದುದರಿಂದ ಇದನ್ನು ‘ಅವಾಂತ್ ಗಾರ್ದ್’ ಚಲನಚಿತ್ರಗಳ ವಿಭಾಗಕ್ಕೆ ಸೇರಿಸಬಹುದು ಎಂಬುದು ನನ್ನ ಅನಿಸಿಕೆ. ಇದರಲ್ಲಿ ರಾಜಕೀಯ/ಸಾಮಾಜಿಕ ಸಂದರ್ಭಗಳ ಢಾಳಾದ ಅಭಿವ್ಯಕ್ತಿಯಿದೆ. ಅದು ವೀಕ್ಷಕರನ್ನು ರಾಚುವಂತೆ ಇದೆ. ದೃಶ್ಯಗಳಲ್ಲಿ ಕುಸುರಿ ಕೆಲಸಗಳಿಲ್ಲ. ಕಡಿಮೆ ಬಡ್ಜೆಟ್‌ನಲ್ಲಿ ಚಲನಚಿತ್ರವನ್ನು ನಿರ್ಮಿಸಬೇಕೆಂಬ ಇರಾದೆಯೂ ಇದೆ. ಈ ಕೆಲವು ಕಾರಣಗಳಿಂದ ‘ಇರುಟ್ಟ್’ ಚಲನಚಿತ್ರವನ್ನು ‘ಅವಾಂತ್ ಗಾರ್ದ್’ ಎಂದು ಕರೆಯಬಹುದು. ‘ಒಳ್ಳೆಯ ಚಲನಚಿತ್ರ’ ಎಂದೆನಿಸಿಕೊಳ್ಳಲು ಇನ್ನೇನು ಬೇಕು?
‘ಇರುಟ್’ ಫಿಲಂ ಕುರಿತು ಎಂ ಎಸ್ ಮುರಳಿಕೃಷ್ಣ ಅವರೇ ನಿರೂಪಿಸಿದ ವಿಡಿಯೋ ಗೆ ಇಲ್ಲಿ ನೋಡಿ