ಕರ್ನಾಟಕದ ಮತದಾರರ ಪಟ್ಟಿಯಿಂದ 716 ವಿದೇಶಿ ಪ್ರಜೆಗಳ ಹೆಸರು ಅಳಿಸಿ ಹಾಕಿದ ಚುನಾವಣಾ ಆಯೋಗ

ಬೆಂಗಳೂರು :  ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ಸಂದರ್ಭದಲ್ಲಿ 716 ವಿದೇಶಿ ಪ್ರಜೆಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲೇ 583 ಅನರ್ಹ ಮತದಾರರನ್ನು ಗುರುತಿಸಲಾಗಿದ್ದು, ಅವರಲ್ಲಿ ನೇಪಾಳದ 545 ಪ್ರಜೆಗಳ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ಮತದಾರರ ಗುರುತಿನ ಚೀಟಿ ಹೊಂದಿದ್ದರೂ, ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಪ್ರಕರಣಗಳು ಪರಿಶೀಲನೆಗೆ ಬಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕರ್ನಾಟಕದ

ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬೆನ್ನಲ್ಲೇ ವಿದೇಶಿ ಪ್ರಜೆಗಳ ಹೆಸರುಗಳನ್ನು ತೆಗೆದುಹಾಕಿರುವ ಅಂಶ ಬೆಳಕಿಗೆ ಬಂದಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅರ್ಹತೆಯನ್ನು ದೃಢಪಡಿಸುವ ದಾಖಲೆಗಳ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಈ ಹೆಸರುಗಳನ್ನು ಗುರುತಿಸಲಾಗಿದೆ. ಆದರೆ, ವಿದೇಶಿ ಪ್ರಜೆಗಳ ಹೆಸರುಗಳ ತೆರವು ಮತ್ತು ರಾಜ್ಯದಾದ್ಯಂತ ಮತದಾರರ ಪಟ್ಟಿಯಲ್ಲಿ ಒಟ್ಟಾರೆಯಾಗಿ ಸಂಭವಿಸಿರುವ ದೊಡ್ಡ ಪ್ರಮಾಣದ ಇಳಿಕೆ ಎರಡೂ ಪ್ರತ್ಯೇಕ ವಿಚಾರಗಳಾಗಿವೆ.

ಬೆಂಗಳೂರು ಉತ್ತರದಲ್ಲೇ 583 ಹೆಸರುಗಳ ತೆರವು

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಪರಿಶೀಲನೆಯಲ್ಲಿ ನೇಪಾಳದ ಪ್ರಜೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಟ್ಟು 583 ಅನರ್ಹ ಮತದಾರರ ಹೆಸರುಗಳನ್ನು ಅಳಿಸಲಾಗಿದ್ದು, ಈ ಪೈಕಿ 545 ಮಂದಿ ನೇಪಾಳದ ಪ್ರಜೆಗಳಾಗಿದ್ದಾರೆ. ಅಮೆರಿಕ, ದುಬೈ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ಕೆನಡಾದ ಪ್ರಜೆಗಳು ಕೂಡ ಮತದಾರರ ಗುರುತಿನ ಚೀಟಿ ಹೊಂದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

2002ರ ಮತದಾರರ ಪಟ್ಟಿಯೊಂದಿಗೆ ಹೆಸರುಗಳ ಹೊಂದಾಣಿಕೆ ಮಾಡುವ ಸಂದರ್ಭದಲ್ಲಿ ಈ ಪ್ರಕರಣಗಳು ಪತ್ತೆಯಾಗಿವೆ. ಎಸ್‌ಐಆರ್‌ ಪ್ರಕ್ರಿಯೆಯ ಭಾಗವಾಗಿ ಮತದಾರರ ಗಣತಿ ನಮೂನೆಗಳನ್ನು ಪರಿಶೀಲಿಸುವಾಗ, ಹಿಂದಿನ ಪಟ್ಟಿಯಲ್ಲಿನ ದಾಖಲೆಗಳ ಹೊಂದಾಣಿಕೆ ಸಿಗದ ಪ್ರಕರಣಗಳನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಮತದಾರರ ಗುರುತಿನ ಚೀಟಿ ಹೊಂದಿದ್ದರೂ, ಶಾಲಾ ಪ್ರಮಾಣಪತ್ರ, ಆಸ್ತಿ ದಾಖಲೆಗಳು ಅಥವಾ ಸೂಚಿಸಲಾದ ಇತರ ದಾಖಲೆಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕದ

ಇದನ್ನೂ ಓದಿ : ಎಸ್‌ಐಆರ್‌ನಿಂದ ಸುಮಾರು ಒಂದು ಕೋಟಿ ಮತದಾರರ ಹೆಸರು ರದ್ದು: ಸಿಪಿಐ(ಎಂ) ತೀವ್ರ ಆಕ್ರೋಶ

ದಕ್ಷಿಣ ಕನ್ನಡದಲ್ಲಿ 40, ಉಡುಪಿಯಲ್ಲಿ 44 ಹೆಸರುಗಳ ತೆರವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ದೇಶಗಳ 40 ಪ್ರಜೆಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇವರಲ್ಲಿ ನೇಪಾಳದ 17 ಮಂದಿ, ಬ್ರಿಟನ್‌ನ ಇಬ್ಬರು, ಕೆನಡಾದ ಐವರು, ಆಸ್ಟ್ರೇಲಿಯಾದ ಆರು ಮಂದಿ ಮತ್ತು ಅಮೆರಿಕದ ಆರು ಮಂದಿ ಸೇರಿದ್ದಾರೆ. ನೆದರ್ಲೆಂಡ್ಸ್‌, ದಕ್ಷಿಣ ಆಫ್ರಿಕಾ, ಐರ್ಲೆಂಡ್‌ ಹಾಗೂ ನಾರ್ವೆ ದೇಶಗಳ ತಲಾ ಒಬ್ಬರ ಹೆಸರನ್ನೂ ಅಳಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ನೇಪಾಳ, ಅಮೆರಿಕ, ಬ್ರಿಟನ್‌, ಫ್ರಾನ್ಸ್‌ ಮತ್ತು ಕೆನಡಾ ಸೇರಿದಂತೆ ವಿವಿಧ ದೇಶಗಳ 44 ಪ್ರಜೆಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನೇಪಾಳ, ಪಾಕಿಸ್ತಾನ, ಅಮೆರಿಕ ಮತ್ತು ಬಾಂಗ್ಲಾದೇಶದ ಪ್ರಜೆಗಳಿಗೆ ಸಂಬಂಧಿಸಿದ 22 ಹೆಸರುಗಳನ್ನು ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ. ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಲ್ಲಿಯೂ ನೇಪಾಳ ಹಾಗೂ ಶ್ರೀಲಂಕಾದ ಪ್ರಜೆಗಳಿಗೆ ಸಂಬಂಧಿಸಿದ ಹೆಸರುಗಳು ಪತ್ತೆಯಾಗಿವೆ.

ಇದನ್ನೂ ನೋಡಿ : ಎಸ್‌ಐಆರ್‌ | ಮತದಾರರ ಪಟ್ಟಿ ಅಂತಿಮ: 99.32 ಲಕ್ಷ ಹೆಸರು ಡಿಲೀಟ್‌! ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *