ʼಭಕ್ತಿʼಯ ಕಣ್ಣುಪಟ್ಟಿ ಮತ್ತು ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ

ಪ್ರೊ. ಪ್ರಭಾತ್‌ ಪಟ್ನಾಯಕ್‌
“ಅರಾಜಕತೆ”, “ರಾಷ್ಟ್ರದ್ರೋಹ” ಇತ್ಯಾದಿ ರಾಜಕೀಯ ಪ್ರಚಾರಕ್ಕಾಗಿ ಬಿಜೆಪಿ ಬಳಸುವ ಬಯ್ಗುಳದ ಮಾತುಗಳಷ್ಟೇ  ಅಲ್ಲ ಅಥವಾ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ನಡೆಯುತ್ತಿರುವ ಚಳುವಳಿಗೆ ಮಸಿ ಬಳೆಯಲು ಬಳಸಿದ ಉತ್ಪ್ರೇಕ್ಷೆಯ ಮಾತುಗಳಷ್ಟೇ ಅಲ್ಲ. ಜತೆಗೆ, ಇವು ಬಿಜೆಪಿ ಚಿಂತನೆಯ ಸಾರವನ್ನೇ ಪ್ರತಿನಿಧಿಸುತ್ತವೆ ಕೂಡ. ಇವು ಆ ಪಕ್ಷದ ಫ್ಯಾಸಿಸ್ಟ್ ಸಿದ್ಧಾಂತದ ತಿರುಳಿಗೆ ಅನುಗುಣವಾಗಿವೆ. ವಸಾಹತುಶಾಹಿ ವಿರೋಧಿ ಹೋರಾಟದೊಂದಿಗೆ ಸಂಬಂಧವಿಲ್ಲದ ಇವರು ಭಾರತದ ಜನತೆಯ ದೀರ್ಘ ಕ್ರಾಂತಿಯ ವಿರುದ್ಧವಾಗಿ ಒಂದು ಪ್ರತಿ-ಕ್ರಾಂತಿಯನ್ನು ಬಹಿರಂಗವಾಗಿ ಪ್ರತಿಪಾದಿಸುತ್ತಲೇ ಬಂದಿರುವವರೂ ಹೌದು.  ವಿದ್ಯಾರ್ಥಿಗಳು ಮತ್ತು ಯುವಕರ ಪ್ರಸ್ತುತ ಹೋರಾಟವು ಜ್ಞಾನೇಶ್ ಕುಮಾರ್ ರಾಜೀನಾಮೆಯ ಸೀಮಿತವಾಗಿ ಕಾಣುವ ಉದ್ದೇಶದ ಸುತ್ತ ಸಂಘಟಿತವಾಗಿದ್ದರೂ, ವಾಸ್ತವದಲ್ಲಿ ದೇಶವನ್ನು ಶತಮಾನಗಳಷ್ಟು ಹಿಂದಕ್ಕೆ ತಳ್ಳಲು ಪ್ರಯತ್ನಿಸುವ ಈ ಸಮಸ್ತ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪ್ರತಿ-ಕ್ರಾಂತಿಯ ವಿರುದ್ಧವೂ ಹೌದು. ಭಕ್ತಿʼ
ಅನು:ಕೆ.ಎಂ.ನಾಗರಾಜ್

ಭಾರತೀಯ ಜನತಾ ಪಕ್ಷದ ಅಧ್ಯಕ್ಷ ನಿತಿನ್ ನಬಿನ್, ನಿರೀಕ್ಷಿಸಬಹುದಾದ ರೀತಿಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಎಡಪಂಥೀಯ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ಹಾಗೂ ‘ಕಾಕ್ರೋಚ್ ಜನತಾ ಪಾರ್ಟಿ’ ಅಕ್ಟೋಬರ್ 10 ರಂದು ಆರಂಭಿಸಿದ ಚಳುವಳಿಯು “ವಿದೇಶಿ ಶಕ್ತಿ”ಗಳಿಂದ ಪ್ರೇರಿತವಾದುದು ಎಂದು ಬಣ್ಣಿಸಿದ್ದಾರೆ. ಅವರ ಮಾರ್ಗದರ್ಶನವನ್ನು ಅನುಸರಿಸಿದ ಬಿಜೆಪಿಯ ನಾಯಕರು, ಈ ಪ್ರತಿಭಟನಾಕಾರರು ಸಮಾಜದಲ್ಲಿ “ಅರಾಜಕತೆ”ಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಈ ಪ್ರತಿಭಟನೆಯು ಪ್ರಜಾಪ್ರಭುತ್ವದ ಮತ್ತು ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕಿನ ರಕ್ಷಣೆಯ ಉದ್ದೇಶದಿಂದ ನಡೆದಿತ್ತು. ಹಾಗೆ ನೋಡಿದರೆ ಈ ಪ್ರತಿಭಟನೆಯೂ ಸಹ ಜನರು ಹೊಂದಿರುವ ತಮ್ಮ ಪ್ರಜಾಸತ್ತಾತ್ಮಕ ಹಕ್ಕಿನ ಅಭಿವ್ಯಕ್ತಿಯೇ. ಈ ಪ್ರತಿಭಟನೆಯನ್ನು ಮತ್ತು ಯಾವುದೇ ಅನ್ಯಾಯದ ಅಥವಾ ಅಕ್ರಮದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸುವ ಹಕ್ಕನ್ನು ಹೊಂದಿರುವ ಜನರ ಅಭಿಪ್ರಾಯವನ್ನು “ಅರಾಜಕತೆ”ಯನ್ನು ಹರಡುವುದು ಎಂದು ದೂಷಿಸುವ ಮೂಲಕ “ರಾಷ್ಟ್ರ”ವನ್ನು ದುರ್ಬಲಗೊಳಿಸುವ ಪ್ರಯತ್ನವೆಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಮತ್ತು ಬಿಜೆಪಿಯ ಪ್ರಕಾರ, ಈ ಪ್ರತಿಭಟನೆಯಲ್ಲಿ ಭಾಗಿಯಾದವರು “ರಾಷ್ಟ್ರವಿರೋಧಿ”ಗಳಾಗುತ್ತಾರೆ.

ಈ ಹೇಳಿಕೆಗಳು ಕೇವಲ ರಾಜಕೀಯ ಪ್ರಚಾರಕ್ಕಾಗಿ ಬಿಜೆಪಿ ಬಳಸುವ ಬಯ್ಗುಳದ ಮಾತುಗಳಲ್ಲ ಅಥವಾ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ನಡೆಯುತ್ತಿರುವ ಚಳುವಳಿಗೆ ಮಸಿ ಬಳೆಯಲು ಬಳಸಿದ ಉತ್ಪ್ರೇಕ್ಷೆಯ ಮಾತುಗಳೂ ಅಲ್ಲ. ಇವು ಸಮಕಾಲೀನ ರಾಜಕೀಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಚಿಲ್ಲರೆ ಮಾತುಗಳಷ್ಟೇ ಅಲ್ಲ; ಬದಲಾಗಿ, ಇವು ಬಿಜೆಪಿ ಚಿಂತನೆಯ ಸಾರವನ್ನೇ ಪ್ರತಿನಿಧಿಸುತ್ತವೆ. ಇವು ಆ ಪಕ್ಷದ ಫ್ಯಾಸಿಸ್ಟ್ ಸಿದ್ಧಾಂತದ ತಿರುಳಿಗೆ ಅನುಗುಣವಾಗಿವೆ ಮತ್ತು ಈ ಕಾರಣದಿಂದಾಗಿಯೇ ಫ್ಯಾಸಿಸ್ಟ್ ಸಿದ್ಧಾಂತವು ಅತ್ಯಂತ ಅಪಾಯಕಾರಿಯಾಗುತ್ತದೆ. ಭಕ್ತಿʼ

ʼರಾಷ್ಟ್ರʼ , ʼನಾಯಕʼ ಮತ್ತು ಫ್ಯಾಸಿಸಂ

ಫ್ಯಾಸಿಸಂ ಹಲವು ಲಕ್ಷಣಗಳನ್ನು ಹೊಂದಿದೆ: ಏಕಸ್ವಾಮ್ಯ ಬಂಡವಾಳಶಾಹಿಯ ಹಿತಾಸಕ್ತಿಗಳನ್ನು, ಅದರಲ್ಲೂ ವಿಶೇಷವಾಗಿ ಅದರೊಳಗಿನ ಒಂದು ವಿಭಾಗವಾದ  “ಹೊಸ” ಏಕಸ್ವಾಮ್ಯ ಬಂಡವಾಳಶಾಹಿ ವರ್ಗದ ಹಿತಾಸಕ್ತಿಗಳನ್ನು ಬಹಿರಂಗವಾಗಿ ಪ್ರತಿಪಾದಿಸುವುದು; ಒಂದು ಅದೃಷ್ಟಹೀನ ಜನಾಂಗೀಯ ಅಲ್ಪಸಂಖ್ಯಾತರನ್ನು ಅಥವಾ ಧಾರ್ಮಿಕ ಅಲ್ಪಸಂಖ್ಯಾತರನ್ನು “ಅನ್ಯರು” ಎಂದು ಬಿಂಬಿಸಿ, ಅವರ ವಿರುದ್ಧ ಜನಾಂಗೀಯ ಅಥವಾ ಧಾರ್ಮಿಕ ಬಹುಸಂಖ್ಯಾತರ ಮನಸ್ಸಿನಲ್ಲಿ  ದ್ವೇಷವನ್ನು ಹುಟ್ಟುಹಾಕಲು ಯತ್ನಿಸುವುದು; ಪ್ರಜಾಪ್ರಭುತ್ವವನ್ನು ದಮನ ಮಾಡಲು ಮತ್ತು ಜನಸಾಮಾನ್ಯರ ಮನಸ್ಸಿನಲ್ಲಿ ಒಂದು ರೀತಿಯ ಭಯವನ್ನು ಉಂಟುಮಾಡಲು ಪ್ರಭುತ್ವದ ದಮನಕಾರಿ ಕ್ರಮಗಳನ್ನು ಮತ್ತು ಫ್ಯಾಸಿಸ್ಟ್ ಗೂಂಡಾಗಳ ದೌರ್ಜನ್ಯವನ್ನು ಒಟ್ಟಾಗಿ ಬಳಸುವುದು – ಇವೆಲ್ಲವೂ ಫ್ಯಾಸಿಸಂನ ಲಕ್ಷಣಗಳೇ. ಇವುಗಳ ಜೊತೆಗೆ, ಫ್ಯಾಸಿಸಂ ತಪ್ಪದೇ “ನಾಯಕ” ಮತ್ತು “ರಾಷ್ಟ್ರ”ದ ನಡುವಿನ ಸಂಬಂಧವನ್ನೇ ತಲೆಕೆಳಗು ಮಾಡುತ್ತದೆ. “ರಾಷ್ಟ್ರ”ವನ್ನು ಅದರ ಜನರೊಂದಿಗೆ ಗುರುತಿಸುವುದಲ್ಲ, “ನಾಯಕ”ನೊಂದಿಗೆ “ರಾಷ್ಟ್ರ”ವನ್ನು ಗುರುತಿಸಲಾಗುತ್ತದೆ. ಆದ್ದರಿಂದ, “ನಾಯಕ”ನ ವಿರುದ್ಧ ಪ್ರತಿಭಟಿಸುವವರು ಯಾರೇ ಇರಲಿ, ಅವರು ಈ ಕಾರಣಕ್ಕಾಗಿಯೇ “ರಾಷ್ಟ್ರದ್ರೋಹಿ”ಗಳಾಗುತ್ತಾರೆ. ಮತ್ತು, ಅವರು “ರಾಷ್ಟ್ರವಿರೋಧಿ”ಗಳಾಗಿ ವರ್ತಿಸುತ್ತಿದ್ದಾರೆಂದೂ, ಅವರ ಈ ಕೃತ್ಯಗಳು “ರಾಷ್ಟ್ರ”ದೊಂದಿಗೆ ವೈರತ್ವ ಸಾಧಿಸುವ “ವಿದೇಶಿ ಶಕ್ತಿ”ಗಳ ನಿರ್ದೇಶನದ ಮೇರೆಗೆ ನಡೆಯುತ್ತಿವೆ ಎಂದೂ ಅರ್ಥೈಸಲಾಗುತ್ತದೆ.

ಫ್ಯಾಸಿಸಂ ತಪ್ಪದೇ “ನಾಯಕ” ಮತ್ತು “ರಾಷ್ಟ್ರ”ದ ನಡುವಿನ ಸಂಬಂಧವನ್ನೇ ತಲೆಕೆಳಗು ಮಾಡುತ್ತದೆ. “ರಾಷ್ಟ್ರ”ವನ್ನು ಅದರ ಜನರೊಂದಿಗೆ ಗುರುತಿಸುವುದಲ್ಲ, “ನಾಯಕ”ನೊಂದಿಗೆ “ರಾಷ್ಟ್ರ”ವನ್ನು ಗುರುತಿಸಲಾಗುತ್ತದೆ. ಆದ್ದರಿಂದ, “ನಾಯಕ”ನ ವಿರುದ್ಧ ಪ್ರತಿಭಟಿಸುವವರು ಯಾರೇ ಇರಲಿ, ಅವರು ಈ ಕಾರಣಕ್ಕಾಗಿಯೇ “ರಾಷ್ಟ್ರದ್ರೋಹಿ”ಗಳಾಗುತ್ತಾರೆ.

ಈ ಗ್ರಹಿಕೆಯು ತನ್ನ ಅಂತರಾಳದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ವಿರೋಧವನ್ನು ಹೊಂದಿದೆ. ಅಕ್ಟೋಬರ್ 10 ರಂದು ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಸರ್ಕಾರವು ನಡೆಸಿದ ದಮನಕಾರಿ ಕ್ರಮಗಳ ಸಂದರ್ಭದಲ್ಲಿ, ನಾವು “ಸರ್ವಾಧಿಕಾರ”ದ ಅಡಿಯಲ್ಲಿ ಬದುಕುತ್ತಿದ್ದೇವೆ ಎಂಬ ಅಭಿಪ್ರಾಯವನ್ನು ಅನೇಕ ವಿರೋಧ ಪಕ್ಷದ ನಾಯಕರು ವ್ಯಕ್ತಪಡಿಸಿದರು. ಅವರ ಈ ಆರೋಪವು ವಾಸ್ತವವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ. ಇಂದಿನ ಸಂದರ್ಭದಲ್ಲಿ ಫ್ಯಾಸಿಸಂ (ಅಥವಾ ‘ನವ-ಫ್ಯಾಸಿಸಂ’ಎಂದು ಹೇಳಬಹುದು) ಎಂಬುದು ಕೇವಲ ಸರ್ವಾಧಿಕಾರವಷ್ಟೇ ಅಲ್ಲ; ಮಧ್ಯಮ ವರ್ಗದ ಕೆಲವು ವಲಯಗಳಲ್ಲಿ ಆಗಾಗ್ಗೆ ಕೇಳಿಬರುವ, “ಆಡಳಿತ ನಡೆಸಲು ಸರ್ವಾಧಿಕಾರವೇ ಒಂದು ದಕ್ಷ ಮಾರ್ಗ” ಎಂಬ ವಾದಕ್ಕಿಂತಲೂ ಇದು ಭಿನ್ನವಾದದ್ದು ಮತ್ತು ಹೆಚ್ಚು ವಿಸ್ತಾರವಾದದ್ದು. ಫ್ಯಾಸಿಸಂ, ಇಂತಹ ವಾದಗಳನ್ನು ಮಂಡಿಸುತ್ತದೆ ಮತ್ತು ಇವು ಕೇವಲ ಪೂರಕ ವಾದಗಳಷ್ಟೇ ಆಗಿರುತ್ತವೆ. ಇಲ್ಲಿ ಮುಖ್ಯವಾದ ವಿಷಯವೇನೆಂದರೆ, “ರಾಷ್ಟ್ರ” ಮತ್ತು “ನಾಯಕ”ರ ನಡುವಿನ ಸಂಬಂಧವನ್ನು ತಲೆಕೆಳಗು ಮಾಡುವ ರೀತಿಯಲ್ಲಿ ವ್ಯಕ್ತಪಡಿಸುವ ಅದರ ವಿಶ್ವದೃಷ್ಟಿಯು ಪ್ರಜಾಪ್ರಭುತ್ವದೊಂದಿಗೆ ಮೂಲಭೂತವಾಗಿ ಹೊಂದಿಕೊಳ್ಳದಂತಹ ರೀತಿಯದ್ದು ಎಂಬುದು.

ಪ್ರಜಾಪ್ರಭುತ್ವವೆಂದರೆ ಏನು ಎಂಬುದರ ಬಗ್ಗೆ ಅಮರ್ತ್ಯ ಸೇನ್ ಅವರು ಹತ್ತೊಂಬತ್ತನೇ ಶತಮಾನದ ಒಬ್ಬ ಇಂಗ್ಲಿಷ್ ಪ್ರಬಂಧಕಾರ ವಾಲ್ಟರ್ ಬಜಾಟ್ ಅವರ ಮಾತನ್ನು ಉಲ್ಲೇಖಿಸುತ್ತಾರೆ. ಅವರ ಪ್ರಕಾರ ಪ್ರಜಾಪ್ರಭುತ್ವವೆಂದರೆ,  “ಚರ್ಚೆಯ ಮೂಲಕ ನಡೆಯುವ ಸರ್ಕಾರ”. ಇದು ಪ್ರಜಾಪ್ರಭುತ್ವವನ್ನು ನೋಡುವ ಒಂದು ವಿಧಾನ ಮತ್ತು ಖಂಡಿತವಾಗಿಯೂ ಇದು ಸರಿಯಾದ ದೃಷ್ಟಿಕೋನವೂ ಹೌದು. ಆದರೆ ಫ್ಯಾಸಿಸಂ ಅಥವಾ ನವ-ಫ್ಯಾಸಿಸಂ ಚರ್ಚೆಯನ್ನು ದ್ವೇಷಿಸುತ್ತದೆ. ಅದು ಸರ್ಕಾರವನ್ನು “ನಾಯಕ”ನ ಇಚ್ಛೆಯನ್ನು ವ್ಯಕ್ತಪಡಿಸುವ ಒಂದು ಸಾಧನವನ್ನಾಗಿ ಮಾತ್ರ ನೋಡುತ್ತದೆ. ತಾನು ಬಯಸಿದರೆ ಮಾತ್ರ ಈ “ನಾಯಕ” (ಫ್ಯಾಸಿಸಂನಲ್ಲಿ ಸಾಮಾನ್ಯವಾಗಿ ಈ ʼನಾಯಕʼ ಪುರುಷನೇ ಇರುತ್ತಾನೆ) ಇತರರೊಂದಿಗೆ ಸಮಾಲೋಚನೆ ನಡೆಸಬಹುದು. ಆದರೆ, “ಚರ್ಚೆಯ ಮೂಲಕ ನಡೆಯುವ ಸರ್ಕಾರ” ಎಂಬ ಪರಿಕಲ್ಪನೆಯನ್ನು ಅದು ದೃಢವಾಗಿ ತಿರಸ್ಕರಿಸುತ್ತದೆ. ಒಂದು ಆಧುನಿಕ ಸನ್ನಿವೇಶದಲ್ಲಿ ಫ್ಯಾಸಿಸಂ ಎಂಬುದು, “ಪ್ರಭುತ್ವ,ಅಂದರೆ ನಾನು” ಎಂದು ಹೇಳಿದ ಫ್ರಾನ್ಸ್‌ನ ರಾಜ ಲೂಯಿ XIV, ಅಥವಾ “ಯುರೋಪ್ ಎಂದರೇನು? ಅದು ನೀನು ಮತ್ತು ನಾನು” ಎಂದು ರಷ್ಯಾದ ಮೊದಲನೆಯ ಝಾರ್ ಅಲೆಕ್ಸಾಂಡರ್, ಫ್ರಾನ್ಸ್‌ನ ಚಕ್ರವರ್ತಿ ನೆಪೋಲಿಯನ್‌ಗೆ ಬರೆದಾಗ ವ್ಯಕ್ತಗೊಂಡ ಹಿಂದಿನ ಊಳಿಗಮಾನ್ಯ ವಿಚಾರಕ್ಕೆ ಮರಳಿರವುದನ್ನು ಪ್ರತಿನಿಧಿಸುತ್ತದೆ.

ರಾಷ್ಟ್ರ ಎಂಬುದನ್ನು ಆಳರಸರನೊಂದಿಗೆ  ಹೀಗೆ ಗುರುತಿಸುವುದು, ನಂತರದ ಊಳಿಗಮಾನ್ಯ ವ್ಯವಸ್ಥೆಯ ಲಕ್ಷಣವಾಗಿತ್ತು. ಆ ಹೊತ್ತಿಗಾಗಲೇ “ರಾಷ್ಟ್ರ” ಎಂಬುದರ ಪರಿಕಲ್ಪನೆಯು ಅದಾಗಲೇ ಉದಯವಾಗಿದ್ದ ಬೂರ್ಜ್ವಾ ವರ್ಗದೊಂದಿಗೇ ಮೂಡಿಬಂದಿತ್ತು. ಈ ಪರಿವರ್ತನೆಯು ಒಬ್ಬ ರಾಜನಿಗೆ “ಆಳಲು ದೈವದತ್ತ ಹಕ್ಕಿದೆ” ಎಂಬ ಹಳೆಯ ಪರಿಕಲ್ಪನೆಯನ್ನು ಕೊನೆಗೊಳಿಸಿ, “ರಾಷ್ಟ್ರ”ದ ಹಿತಾಸಕ್ತಿಗಳನ್ನು ಉತ್ತೇಜಿಸುವ ಜವಾಬ್ದಾರಿಯನ್ನು ರಾಜನ ಹುದ್ದೆಗೆ ನೀಡಿತು. ಆಳ್ವಿಕೆಯ ಚುಕ್ಕಾಣಿ ಹಿಡಿದಿರುವ ವ್ಯಕ್ತಿಯೊಬ್ಬನನ್ನು ‘ರಾಷ್ಟ್ರ’ದೊಂದಿಗೆ ಗುರುತಿಸುವ ಆಧುನಿಕ-ಪೂರ್ವ ಕಾಲದ ವಿಚಾರವನ್ನು ಫ್ಯಾಸಿಸಂ ಅಡಿಯಲ್ಲಿ ಪುನರುಜ್ಜೀವನಗೊಳಿಸಲಾಗುತ್ತಿದೆ. ಆದರೆ, ಈ ಕ್ರಮದಲ್ಲಿ ಸ್ಪಷ್ಟವಾಗಿ ಕಾಣುವ ಒಂದು ಬದಲಾವಣೆ ಇದೆ: ಹಿಂದೆ ರಾಜವಂಶದಲ್ಲಿ ಜನಿಸಿದ ಕಾರಣಕ್ಕಾಗಿ ಆಳ್ವಿಕೆ ನಡೆಸುತ್ತಿದ್ದ ಒಬ್ಬ ವ್ಯಕ್ತಿಯ ಸ್ಥಾನವನ್ನು ಈಗ ತುಂಬುವ ‘ನಾಯಕ’ನು ಒಬ್ಬ ಸಾಮಾನ್ಯ ವ್ಯಕ್ತಿಯೂ ಆಗಿರಬಹುದು – ನರೇಂದ್ರ ಮೋದಿ ಅವರು ಹೇಳಿಕೊಂಡ ‘ಚಾಯ್‌ವಾಲಾ’ ಕೂಡ ಆಗಿರಬಹುದು. ಆದರೆ. ಈಗ ಅಧಿಕಾರದಲ್ಲಿರುವ ಈ ವ್ಯಕ್ತಿಯೇ ಅಧಿಕಾರದ ಮೂಲ ಮತ್ತು ಈ ವ್ಯಕ್ತಿಯೇ ಅಧಿಕಾರದ ಸರ್ವಸ್ವ. ಭಕ್ತಿʼ

ಇದನ್ನೂ ಓದಿ : ಉತ್ತರಾಖಂಡ ವಿಧಾನಸಭೆ ಅಧಿವೇಶನದ ಮೊದಲ ದಿನವೇ ಪ್ರತಿಭಟನೆ: ಕಾಂಗ್ರೆಸ್‌–ಯುಕೆಡಿ ಕಾರ್ಯಕರ್ತರು, ಪೊಲೀಸರ ನಡುವೆ ಘರ್ಷಣೆ

‘ವಿವೇಕದ ವಿನಾಶ‘

ಒಬ್ಬ ‘ನಾಯಕ’ನನ್ನು ‘ರಾಷ್ಟ್ರ’ದೊಂದಿಗೆ ಗುರುತಿಸುವ ಮತ್ತು ಈ ‘ನಾಯಕ’ನಿಗೆ ಸೇವೆ ಸಲ್ಲಿಸುವುದರಿಂದಲೇ ‘ರಾಷ್ಟ್ರ’ವು ಒಂದು ಔಚಿತ್ಯವನ್ನು ಪಡೆಯುತ್ತದೆ ಎಂದು ಭಾವಿಸುವ ತಲೆಕೆಳಗಾದ ಸಂಬಂಧದ ಈ ಸ್ಥಿತಿಯು ‘ವಿವೇಕದ ವಿನಾಶ’ ಎಂಬ ಒಂದು ಹೆಚ್ಚು ವಿಸ್ತೃತ ವಿದ್ಯಮಾನದ ಭಾಗವಾಗಿದೆ. ವಿವೇಕ ಎಂಬುದು ಸಾಕ್ಷ್ಯಾಧಾರಗಳನ್ನು ಅವಲಂಬಿಸಿರುವುದರಿಂದ ಮತ್ತು ಸಾಕ್ಷ್ಯಾಧಾರಗಳ ಬಗ್ಗೆ ಫ್ಯಾಸಿಸಂ ತಿರಸ್ಕಾರ ಹೊಂದಿರುವುದರಿಂದ, ಈ ತಿರಸ್ಕಾರವು ವಿವೇಕದ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ. ಮಾರ್ಕ್ಸ್‌ವಾದೀ ಚಿಂತಕ ಜಾರ್ಜ್ ಲುಕಾಕ್ಸ್ ಅವರು ತಮ್ಮ 1952ರ ‘ದಿ ಡಿಸ್ಟ್ರಕ್ಷನ್ ಆಫ್ ರೀಸನ್’ (ವಿವೇಕದ ವಿನಾಶ) ಎಂಬ ಕೃತಿಯಲ್ಲಿ, ಫ್ಯಾಸಿಸಂ ಎಂಬುದು ವಿವೇಕವನ್ನು ನಾಶಪಡಿಸುವ ಒಂದು ದೀರ್ಘ ಪ್ರಕ್ರಿಯೆಯ ಅಂತಿಮ ಪರಿಣಾಮ ಎಂದು ವಾದಿಸಿದ್ದರು. ‘ನಾಯಕ’ ಮತ್ತು ‘ರಾಷ್ಟ್ರ’ದ ನಡುವಿನ ಸಂಬಂಧವು ತಲೆಕೆಳಗಾಗಿರುವ ಭಾರತದ ಸನ್ನಿವೇಶದಲ್ಲಿ ಇಂದು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವ ವಿವೇಕದ ಈ ವಿನಾಶವನ್ನು ಸ್ಪಷ್ಟವಾಗಿ ಕಾಣಬಹುದು.

‘ನಾಯಕ’ ಮತ್ತು ‘ರಾಷ್ಟ್ರ’ದ ನಡುವಿನ ಸಂಬಂಧದ ಈ ತಲೆಕೆಳಗಾದ ಸ್ಥಿತಿ, ಸಾಕ್ಷ್ಯಾಧಾರಗಳ ಬಗ್ಗೆ ಸಂಪೂರ್ಣ ತಾತ್ಸಾರ ಮತ್ತು ಇಂತಹ ಪ್ರವೃತ್ತಿಗಳನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಮೌಢ್ಯವನ್ನು ಉತ್ತೇಜಿಸುವುದು – ಇವೆಲ್ಲವೂ ಸೇರಿ ಒಂದು ರಾಷ್ಟ್ರದ ಜೀವನದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತವೆ. ಈ ಸಂಗತಿಯು, ಅಲ್ಪಸಂಖ್ಯಾತರ ಮೇಲಿನ ಒಂದು ಕ್ರೂರ ದಮನ, ಜನ ಸಾಮಾನ್ಯರ ಧ್ವನಿಯನ್ನು ಅಡಗಿಸುವುದು, ಪ್ರಜಾಸತ್ತಾತ್ಮಕ ಸಂಸ್ಥೆಗಳ ನಾಶ, ಜನರ ನಡುವೆ ಭಯದ ವಾತಾವರಣವನ್ನು ವ್ಯಾಪಕವಾಗಿ ಸೃಷ್ಟಿಸುವುದು ಮತ್ತು ದೊಡ್ಡ ಬಂಡವಾಳಶಾಹಿ ಹಿತಾಸಕ್ತಿಗಳನ್ನು ನಿರ್ಲಜ್ಜವಾಗಿ ಉತ್ತೇಜಿಸುವುದು ಮುಂತಾದ ದೃಢೀಕರಿಸಿದ ಸಂಗತಿಗಳಲ್ಲದೆ, ಚಿಂತನಾಶಕ್ತಿ ಮತ್ತು ಜ್ಞಾನಾರ್ಜನೆಯ ವಿಷಯದಲ್ಲಿ ಇದು ದೇಶವನ್ನು ಶತಮಾನಗಳಷ್ಟು ಹಿಂದಕ್ಕೆ ತಳ್ಳುತ್ತದೆ ಕೂಡ.

ಚಿಂತಕ ಜಾರ್ಜ್ ಲುಕಾಕ್ಸ್  ಫ್ಯಾಸಿಸಂ ಎಂಬುದು ವಿವೇಕವನ್ನು ನಾಶಪಡಿಸುವ ಒಂದು ದೀರ್ಘ ಪ್ರಕ್ರಿಯೆಯ ಅಂತಿಮ ಪರಿಣಾಮ ಎಂದು ವಾದಿಸಿದ್ದರು. ‘ನಾಯಕ’ ಮತ್ತು ‘ರಾಷ್ಟ್ರ’ದ ನಡುವಿನ ಸಂಬಂಧವು ತಲೆಕೆಳಗಾಗಿರುವ ಭಾರತದ ಸನ್ನಿವೇಶದಲ್ಲಿ ಇಂದು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವ ವಿವೇಕದ ಈ ವಿನಾಶವನ್ನು ಸ್ಪಷ್ಟವಾಗಿ ಕಾಣಬಹುದು.

ದೇಶವನ್ನು ಹಿಂದಕ್ಕೆ ತಳ್ಳುವ ಸಂಗತಿಯು ಇತಿಹಾಸ ಅಧ್ಯಯನ ಕ್ಷೇತ್ರದಲ್ಲಿ ಅತ್ಯಂತ ಸ್ಪಷ್ಟವಾಗಿ ಕಂಡುಬರುತ್ತದೆಯಾದರೂ ಇದು ಕೇವಲ ಆ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಉದಾಹರಣೆಗೆ, ‘ಆರ್ಯರು’ ಭಾರತದಲ್ಲಿಯೇ ಹುಟ್ಟಿದರು ಮತ್ತು ಅಲ್ಲಿಂದ ಜಗತ್ತಿನ ಇತರ ಭಾಗಗಳಿಗೆ ಹರಡಿದರು ಎಂದು ನವ-ಫ್ಯಾಸಿಸ್ಟರು ನಂಬುತ್ತಾರೆ; ಸಂಕ್ಷಿಪ್ತವಾಗಿ ಹೇಳುವುದಾದರೆ, ಜಗತ್ತಿನ ಇತರ ಭಾಗಗಳಲ್ಲಿ ಕಂಡುಬರುವ ಅನೇಕ ‘ನಾಗರಿಕತೆ’ಗಳಿಗೆ ಭಾರತವೇ ಮೂಲ ಎಂದು ಅವರು ಪ್ರತಿಪಾದಿಸುತ್ತಾರೆ. ಇಂತಹ ಒಂದು ನಂಬಿಕೆಯ ವಿರುದ್ಧವಾಗಿ ಎಷ್ಟೇ ಸಾಕ್ಷ್ಯಾಧಾರಗಳನ್ನು ಒದಗಿಸಿದರೂ, ಅದು ಸತ್ಯವಲ್ಲ ಎಂದು ಅವರನ್ನು ಒಪ್ಪಿಸುವುದು ಸಾಧ್ಯವಿಲ್ಲ. ಒಂದು ಬಹಳ ವಿಶಿಷ್ಟವಾದ ನಗರ ಕೇಂದ್ರಿತ ಸ್ವರೂಪವನ್ನು ಹೊಂದಿದ್ದ ಸಿಂಧೂ ಕಣಿವೆ ನಾಗರಿಕತೆಯು ನಮ್ಮ ಉಪಖಂಡಕ್ಕೆ ಬಂದ ವಲಸೆಗಿಂತಲೂ ಹಿಂದಿನ ಕಾಲದ್ದಾಗಿದೆ. ಆದರೂ ಈ ನಾಗರಿಕತೆಯನ್ನು ‘ಆರ್ಯರ’ (ಈ ನಾಗರಿಕತೆಯಂದಿಗೆ ಆರ್ಯರಿಗೆ ಪ್ರಾಯಶಃ ಯಾವ ಸಂಬಂಧವೂ ಇಲ್ಲ) ಉದಯದೊಂದಿಗೆ ಜೋಡಿಸಲು ಪ್ರಯತ್ನಿಸುವ ಕ್ರಮವು ಸಿಂಧೂ ನಾಗರಿಕತೆಯ ವಿಶಿಷ್ಟ ಸ್ವರೂಪದ ನಿರಾಕರಣೆಯಾಗುತ್ತದೆ ಮಾತ್ರವಲ್ಲ, ಅದನ್ನು ‘ಆರ್ಯ’ ನಾಗರಿಕತೆಯ ಭಾಗವೆಂದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕಲಿಸುವ ಸ್ಥಿತಿಗೆ ದೂಡುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮೌಢ್ಯವನ್ನು ಬಲವಂತವಾಗಿ ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತದೆ. ಸಾಕ್ಷ್ಯಾಧಾರಗಳನ್ನು ಪ್ರಶ್ನೆಗೆ ಒಳಪಡಿಸುವ ಕ್ರಮವು ವೈಜ್ಞಾನಿಕ ವಿಧಾನದ ಒಂದು ಭಾಗವೇ ಆಗಿದ್ದರೂ, ಇಲ್ಲಿ ಸಾಕ್ಷ್ಯಾಧಾರಗಳನ್ನು ಪ್ರಶ್ನೆಗೆ ಒಳಪಡಿಸುವುದರ ಬದಲಿಗೆ ವಿದ್ಯಾರ್ಥಿಗಳು ಅವುಗಳನ್ನು ಸಂಪೂರ್ಣವಾಗಿ ಕಡೆಗಣಿಸುವಂತೆ ಹೇಳಲಾಗುತ್ತದೆ. ಇದು ಮೌಢ್ಯದ ಪರಾಕಾಷ್ಠೆಯಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನವ-ಫ್ಯಾಸಿಸ್ಟರು ಮಾಡುವ ಪ್ರಚಾರ ನಿರೂಪಣೆಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವಂತೆ ಮತ್ತು ಈ ಪ್ರಕ್ರಿಯೆಯಲ್ಲಿ ತರ್ಕಬದ್ಧ ಚಿಂತನಾ ಕ್ರಮವನ್ನು ಕೈಬಿಡುವಂತೆ ಅವರನ್ನು ಒತ್ತಾಯಿಸಲಾಗುತ್ತದೆ. ಇದರಿಂದ ಉಂಟಾಗುವ ಹಾನಿಯನ್ನು ಊಹಿಸುವುದೂ ಸಹ ಸಾಧ್ಯವಿಲ್ಲ.

ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಬೂರ್ಜ್ವಾ ರಾಜಕೀಯ ಗುಂಪುಗಳೂ ಸೇರಿದಂತೆ ಇತರ ಎಲ್ಲ ರಾಜಕೀಯ ಗುಂಪುಗಳಿಗಿಂತಲೂ ನವ-ಫ್ಯಾಸಿಸ್ಟರು ಭಿನ್ನವಾಗಿದ್ದಾರೆ. ಈ ನವ-ಫ್ಯಾಸಿಸ್ಟರು ಅಧಿಕಾರಕ್ಕೆ ಬರುವುದರಿಂದ ಕೇವಲ ಸಾಮಾಜಿಕ ಮತ್ತು ಆರ್ಥಿಕ ಹಿನ್ನಡೆ ಉಂಟಾಗುವುದಷ್ಟೇ ಅಲ್ಲದೆ, ತರ್ಕಬದ್ಧ ಚಿಂತನೆಯ ಮಟ್ಟದಲ್ಲೂ ಹಿನ್ನಡೆ ಉಂಟಾಗುತ್ತದೆ. ಭಕ್ತಿʼ

“ಪ್ರತಿ-ಕ್ರಾಂತಿ”ಯ ವಿರುದ್ಧವೂ ಹೌದು

ತರ್ಕಬದ್ಧ ಚಿಂತನೆಗೆ ಮತ್ತು ವೈಜ್ಞಾನಿಕ ಮನೋಭಾವವನ್ನು ಎತ್ತಿಹಿಡಿಯುವುದಕ್ಕೆ ಬೆಂಬಲ, ಎಲ್ಲರಿಗೂ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಲ್ಪಿಸುವುದು, ಸಾರ್ವತ್ರಿಕ ವಯಸ್ಕ ಮತದಾನದ ಆಧಾರದ ಮೇಲೆ ಸರ್ಕಾರಗಳನ್ನು ರಚಿಸುವುದು ಮತ್ತು ದೇಶದಲ್ಲಿ ಮಾನವಕೋಟಿಯ ಸಮಾನತೆಯಲ್ಲಿ ನಂಬಿಕೆಯಿರುವ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯನ್ನು ನಿರ್ಮಿಸುವುದು – ಇವು ವಸಾಹತುಶಾಹಿ ವಿರೋಧಿ ಹೋರಾಟದ ಗುರಿಗಳಾಗಿದ್ದವು. ಈ ಗುರಿಗಳು ಒಂದು ಸಮಗ್ರ ವ್ಯವಸ್ಥೆಯನ್ನು ರೂಪಿಸುತ್ತವೆ ಮತ್ತು ಸ್ವಾತಂತ್ರ್ಯದ ನಂತರ ಅಂಗೀಕರಿಸಲ್ಪಟ್ಟ ಸಂವಿಧಾನದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಸಂವಿಧಾನದ ಕೆಲವು ಅಂಶಗಳ ಬಗ್ಗೆ ಯಾರೇ ಏನೇ ಟೀಕೆಗಳನ್ನು ಹೊಂದಿದ್ದರೂ ಸಹ, ಸಂವಿಧಾನದ ಈ ದೃಷ್ಟಿಕೋನವು ಅತ್ಯಂತ ಮಹತ್ವದ ಕೇಂದ್ರ ಸಂಗತಿಯಾಗಿ ಉಳಿದಿದೆ.

ದೇಶವನ್ನು ಮತ್ತು ಜಗತ್ತಿನ ಅನೇಕ ದೇಶಗಳನ್ನೂ ಒಂದು ಬಿಕ್ಕಟ್ಟಿನ ಹಂತಕ್ಕೆ ತಂದು ನಿಲ್ಲಿಸಿರುವ ನವ-ಉದಾರವಾದವು ನವ-ಫ್ಯಾಸಿಸ್ಟ್ ರಾಜಕೀಯ ಆಳ್ವಿಕೆಯ ಒಂದು ಸನ್ನಿವೇಶದತ್ತ ಕೊಂಡೊಯ್ದಿದೆ. ಭಾರತದಲ್ಲಿ ಇಂತಹ ಒಂದು ಆಳ್ವಿಕೆಯನ್ನು ಹಿಂದುತ್ವ ಪ್ರತಿಪಾದಕರು ನಡೆಸುತ್ತಿದ್ದಾರೆ.

ಅಸಮಾನತೆಯನ್ನು ಹೆಚ್ಚಿಸುವ ಸಹಜ ಪ್ರವೃತ್ತಿಯನ್ನು ಹೊಂದಿರುವ ಮತ್ತು ಸಮಾನತೆಗಾಗಿ ಶ್ರಮಿಸುವ ದೇಶದ ಪ್ರಯತ್ನಗಳನ್ನು ದುರ್ಬಲಗೊಳಿಸುವ ನವ-ಉದಾರವಾದಿ ಆರ್ಥಿಕ ನೀತಿಗಳ ಆಳ್ವಿಕೆಯನ್ನು ಅಳವಡಿಸಿಕೊಂಡಿರುವುದು ನಮ್ಮ ಸಾಂವಿಧಾನಿಕ ಗುರಿಗಳಿಗೆ ಎಸಗಿದದ ಮೊದಲ ದ್ರೋಹವಾಗಿತ್ತು. ದೇಶದ ಆರ್ಥಿಕ ಬೆಳವಣಿಗೆಯನ್ನು ವೃದ್ಧಿಸುವ ಭರವಸೆ ನೀಡಿದ ನವ-ಉದಾರವಾದದ ಗುಣಲಕ್ಷಣಗಳು (ಮಿತಿ ಮೀರಿದ ಲಾಭ, ಕಾರ್ಮಿಕರ ಹಕ್ಕುಗಳ ಕಡಿತ, ಇತ್ಯಾದಿ) ಅಸಮಾನತೆಯನ್ನು ತೀವ್ರಗೊಳಿಸಿವೆ ಮತ್ತು ನಿರುದ್ಯೋಗವನ್ನು ಹೆಚ್ಚಿಸಿವೆ. ದೇಶವನ್ನು ಮತ್ತು ಜಗತ್ತಿನ ಅನೇಕ ದೇಶಗಳನ್ನೂ ಒಂದು ಬಿಕ್ಕಟ್ಟಿನ ಹಂತಕ್ಕೆ ತಂದು ನಿಲ್ಲಿಸಿರುವ ನವ-ಉದಾರವಾದವು ನವ-ಫ್ಯಾಸಿಸ್ಟ್ ರಾಜಕೀಯ ಆಳ್ವಿಕೆಯ ಒಂದು ಸನ್ನಿವೇಶದತ್ತ ಕೊಂಡೊಯ್ದಿದೆ. ಭಾರತದಲ್ಲಿ ಇಂತಹ ಒಂದು ಆಳ್ವಿಕೆಯನ್ನು ಹಿಂದುತ್ವ ಪ್ರತಿಪಾದಕರು ನಡೆಸುತ್ತಿದ್ದಾರೆ. ಇವರು ವಸಾಹತುಶಾಹಿ ವಿರೋಧಿ ಹೋರಾಟದೊಂದಿಗೆ ಸಂಬಂಧವಿಲ್ಲದವರು ಮತ್ತು ಭಾರತದ ಜನತೆಯ ದೀರ್ಘ ಕ್ರಾಂತಿಯ ವಿರುದ್ಧವಾಗಿ ಒಂದು ಪ್ರತಿ-ಕ್ರಾಂತಿಯನ್ನು ಬಹಿರಂಗವಾಗಿ ಪ್ರತಿಪಾದಿಸುತ್ತಲೇ ಬಂದಿರುವವರೂ ಹೌದು.

ವಿದ್ಯಾರ್ಥಿಗಳು ಮತ್ತು ಯುವಕರ ಪ್ರಸ್ತುತ ಹೋರಾಟವು ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡುವ ನಿರ್ದಿಷ್ಟ ಮತ್ತು ಸೀಮಿತವಾಗಿ ಕಾಣುವ ಉದ್ದೇಶದ ಸುತ್ತ ಸಂಘಟಿತವಾಗಿದ್ದರೂ, ವಾಸ್ತವದಲ್ಲಿ ದೇಶವನ್ನು ಶತಮಾನಗಳಷ್ಟು ಹಿಂದಕ್ಕೆ ತಳ್ಳಲು ಪ್ರಯತ್ನಿಸುವ ಈ ಸಮಸ್ತ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪ್ರತಿ-ಕ್ರಾಂತಿಯ ವಿರುದ್ಧವೂ ಹೌದು. ಭಕ್ತಿʼ

ಇದನ್ನೂ ನೋಡಿ : ಎಸ್‌ಐಆರ್‌ | ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಈಗಲೇ ಪರಿಶೀಲಿಸಿ! ಹೇಗೆ ಪರಿಶೀಲಿಸಬೇಕು? ಈ ವಿಡಿಯೋ ನೋಡಿ

 

Donate Janashakthi Media

Leave a Reply

Your email address will not be published. Required fields are marked *