ಎಸ್‌ಐಆರ್‌ನಿಂದ ಸುಮಾರು ಒಂದು ಕೋಟಿ ಮತದಾರರ ಹೆಸರು ರದ್ದು: ಸಿಪಿಐ(ಎಂ) ತೀವ್ರ ಆಕ್ರೋಶ

ಅಂತಿಮ ಮತದಾರರ ಪಟ್ಟಿಯಲ್ಲಿ 99.76 ಲಕ್ಷ ಹೆಸರುಗಳು ಕಡಿತ; ಎಸ್‌ಐಆರ್‌ ರದ್ದತಿಗೆ ಆಗ್ರಹಿಸಿ ನವೆಂಬರ್‌ 5ರಂದು ಬೆಂಗಳೂರಿನಲ್ಲಿ ಪ್ರತಿಭಟನೆಗೆ ಬೆಂಬಲ
ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಸಮಗ್ರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ಬಳಿಕ ಅಂತಿಮ ಮತದಾರರ ಪಟ್ಟಿಯಿಂದ ಸುಮಾರು ಒಂದು ಕೋಟಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐ(ಎಂ) ಆರೋಪಿಸಿದೆ. ಇಷ್ಟು ದೊಡ್ಡ ಸಂಖ್ಯೆಯ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದಕ್ಕೆ ಚುನಾವಣಾ ಆಯೋಗ ಸಮರ್ಪಕ ಉತ್ತರ ನೀಡಿಲ್ಲ ಎಂದು ಪಕ್ಷದ ರಾಜ್ಯ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಎಸ್‌ಐಆರ್‌

2026ರ ಜೂನ್‌ 16ರಂದು ಕರ್ನಾಟಕದಲ್ಲಿ 5,54,32,314 ಮತದಾರರಿದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ ಈ ಸಂಖ್ಯೆ 4,54,55,689ಕ್ಕೆ ಇಳಿದಿದೆ. ಅಂದರೆ, ಒಟ್ಟು 99,76,625 ಮತದಾರರ ಹೆಸರುಗಳು ಕಡಿತಗೊಂಡಿವೆ ಎಂದು ಸಿಪಿಐ(ಎಂ) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮರಣ ಹೊಂದಿದ 16.39 ಲಕ್ಷ ಮತದಾರರು ಹಾಗೂ ಒಂದಕ್ಕಿಂತ ಹೆಚ್ಚು ಬಾರಿ ಹೆಸರು ನೋಂದಣಿಯಾಗಿದ್ದ 7.10 ಲಕ್ಷ ಮತದಾರರನ್ನು ಸೇರಿಸಿದರೆ ಒಟ್ಟು 23.49 ಲಕ್ಷ ಹೆಸರುಗಳಾಗುತ್ತವೆ. ಈ ಸಂಖ್ಯೆಯನ್ನು ಹೊರತುಪಡಿಸಿದರೂ ಉಳಿದ 76 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳು ಏಕೆ ಕಡಿತಗೊಂಡಿವೆ ಎಂಬುದಕ್ಕೆ ಚುನಾವಣಾ ಆಯೋಗ ಸಮರ್ಪಕ ಉತ್ತರ ನೀಡಿಲ್ಲ ಎಂದು ಸಿಪಿಐ(ಎಂ) ಪ್ರಶ್ನಿಸಿದೆ.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು. ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ ಎಂದು ಪಕ್ಷ ಹೇಳಿದೆ. ಎಸ್‌ಐಆರ್‌

ಇದನ್ನೂ ಓದಿ : ಕರ್ನಾಟಕದಲ್ಲಿ ಎಸ್‌ಐಆರ್‌ ಅಂತಿಮ ಮತದಾರರ ಪಟ್ಟಿ ಪ್ರಕಟ: 1 ಕೋಟಿಗೂ ಅಧಿಕ ಹೆಸರುಗಳು ಪಟ್ಟಿಯಿಂದ ಹೊರಗೆ?

ಸ್ಥಳಾಂತರಗೊಂಡ ಮತದಾರರಿಗೆ ಅವಕಾಶ ನೀಡಿಲ್ಲವೆಂದು ಆರೋಪ

ಸ್ಥಳಾಂತರಗೊಂಡವರು ಮತ್ತು ಗೈರುಹಾಜರಿ ಮತದಾರರು ತಮ್ಮ ಅರ್ಜಿಗಳನ್ನು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸಾಕಷ್ಟು ಕಾಲಾವಕಾಶ ನೀಡಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಚುನಾವಣಾ ಆಯೋಗ ಅದನ್ನು ಪರಿಗಣಿಸಿಲ್ಲ ಎಂದು ಸಿಪಿಐ(ಎಂ) ಆರೋಪಿಸಿದೆ.

ಇದರ ಪರಿಣಾಮವಾಗಿ ಇತರ ರಾಜ್ಯಗಳಲ್ಲಿರುವಂತೆ ಕರ್ನಾಟಕದಲ್ಲಿಯೂ ಹೆಚ್ಚಿನ ಸಂಖ್ಯೆಯ ಮತದಾರರು ತಮ್ಮ ಹಕ್ಕುಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಕ್ಷ ಆತಂಕ ವ್ಯಕ್ತಪಡಿಸಿದೆ.

ಬಾಂಗ್ಲಾದೇಶ, ಪಾಕಿಸ್ತಾನದ ಅಕ್ರಮ ವಲಸಿಗರ ನೆಪ ಸುಳ್ಳು: ಸಿಪಿಐ(ಎಂ)

ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಲಕ್ಷಾಂತರ ಅಕ್ರಮ ವಲಸಿಗರು ದೇಶದೊಳಗೆ ನುಸುಳಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ, ಅಂತಿಮ ಮತದಾರರ ಪಟ್ಟಿಯಲ್ಲಿನ ಹೆಸರುಗಳ ಕಡಿತವು ಈ ವಾದದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ ಎಂದು ಸಿಪಿಐ(ಎಂ) ಹೇಳಿದೆ.

ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಹಾಕುವುದನ್ನು ಪಕ್ಷ ವಿರೋಧಿಸಿದೆ. ಎಸ್‌ಐಆರ್‌ ಪ್ರಕ್ರಿಯೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸಿಪಿಐ(ಎಂ), ಅದನ್ನು ರದ್ದುಗೊಳಿಸುವುದರಿಂದ ಮಾತ್ರ ಜನರ ಮತದಾನದ ಹಕ್ಕನ್ನು ರಕ್ಷಿಸಲು ಸಾಧ್ಯ ಎಂದು ಹೇಳಿದೆ.

ನವೆಂಬರ್‌ 5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಿರುವುದನ್ನು ವಿರೋಧಿಸಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ನವೆಂಬರ್‌ 5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿವೆ. ಈ ಪ್ರತಿಭಟನೆಯಲ್ಲಿ ಸಿಪಿಐ(ಎಂ) ಸಕ್ರಿಯವಾಗಿ ಭಾಗವಹಿಸಲಿದೆ ಎಂದು ಪಕ್ಷದ ರಾಜ್ಯ ಸಮಿತಿ ತಿಳಿಸಿದೆ.

ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವಂತೆ ಪಕ್ಷ ಜನರಿಗೆ ಕರೆ ನೀಡಿದೆ.

ಇದನ್ನೂ ನೋಡಿ : ಎಸ್‌ಐಆರ್‌ | ಮತದಾರರ ಪಟ್ಟಿ ಅಂತಿಮ: 99.32 ಲಕ್ಷ ಹೆಸರು ಡಿಲೀಟ್‌! ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *