ಜೀವನ ವೆಚ್ಚದ ಬಿಕ್ಕಟ್ಟಿನ ವಿರುದ್ಧ ದಶಕದಲ್ಲೇ  ಅಭೂತಪೂರ್ವ ಫ್ರೆಂಚ್ ದಂಗೆ

ವಸಂತರಾಜ ಎನ್.ಕೆ
ಕಳೆದ ಶನಿವಾರ (ಅಕ್ಟೋಬರ್ 17) ರಂದು ಫ್ರಾನ್ಸ್ ನಾದ್ಯಂತ ‘ದಂಗೆ’ ಎಂದು ಕರೆಯಬಹುದಾದ, ಒಂದು ದಶಕದಲ್ಲೇ ಅತಿ ದೊಡ್ಡ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯಿತು.  ಈ ಫ್ರೆಂಚ್ ದಂಗೆಯಲ್ಲಿ 10 ಲಕ್ಷ ಜನ ಭಾಗವಹಿಸಿದರು ಎನ್ನಲಾಗಿದೆ.  ಈ  ಪ್ರತಿಭಟನೆಗಳ ಸಂದರ್ಭದಲ್ಲಿ ಲೂಟಿಗಳು, ವಾಣಿಜ್ಯ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶಗಳು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದ್ದು ನಿಜವಾದರೂ, ಪ್ರತಿಭಟನೆಯ ವ್ಯಾಪಕತೆ ಗಮನಿಸಿದರೆ ಇವು ನಗಣ್ಯವೇ ಆಗಿದ್ದವು. ಆದರೆ ಫ್ರೆಂಚ್ ಸರಕಾರ ಮತ್ತು ಪಾಶ್ಚಿಮಾತ್ಯ ಮಾಧ್ಯಮಗಳು ಇವನ್ನೇ ಅತಿಯಾಗಿ ಬಿಂಬಿಸಿ ಬಹುಪಾಲು ಶಾಂತಿಯುತವಾಗಿ ನಡೆದ ಪ್ರತಿಭಟನೆಯ ವ್ಯಾಪಕತೆ, ಜನಬೆಂಬಲವನ್ನು ಮರೆಮಾಚಲು, ನಿರ್ಲಕ್ಷಿಸಲು ಪ್ರಯತ್ನಿಸಿವೆ. ಈ ಚಾರಿತ್ರಿಕ ಪ್ರತಿಭಟನೆ ಶಾಲಾವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲಾರ್ಥ ಸಂಘಟಿಸಲಾಗಿದ್ದರೂ ನಿಜವಾಗಿಯೂ  ಜನತೆಯ ದೊಡ್ಡ ಜನವಿಭಾಗಗಳನ್ನು ಬಾಧಿಸುತ್ತಿರುವ ಜೀವನ ವೆಚ್ಚದ ಬಿಕ್ಕಟ್ಟಿನ ವಿರುದ್ಧ ಆಗಿತ್ತು.

ಕಳೆದ ನಾಲ್ಕು ವಾರಗಳಿಂದ ಫ್ರಾನ್ಸ್ ನಾದ್ಯಂತ ನಡೆಯುತ್ತಿರುವ ಶಾಲಾವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲಾರ್ಥ ಕಳೆದ ಶನಿವಾರ (ಅಕ್ಟೋಬರ್ 17) ರಂದು ‘ದಂಗೆ’ ಎಂದು ಕರೆಯಬಹುದಾದ, ಒಂದು ದಶಕದಲ್ಲೇ ಅತಿ ದೊಡ್ಡ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯಿತು. ಸರಕಾರವೇ 5 ಲಕ್ಷಕ್ಕೂ ಹೆಚ್ಚು ಜನ ಫ್ರಾನ್ಸ್ ನಾದ್ಯಂತ ಭಾಗವಹಿಸಿದರು ಎಂದಿದೆ. ಪ್ರತಿಭಟನೆಯ ಸಂಘಟಕರು 8-10 ಲಕ್ಷ ಜನ ಭಾಗವಹಿಸಿದರು ಎಂದಿದ್ದಾರೆ. ಕೆಲವು ಮಾಧ್ಯಮಗಳೂ ಕನಿಷ್ಟ 8 ಲಕ್ಷ ಜನ ಭಾಗವಹಿಸಿದರು ಎಂದಿವೆ.

ಫ್ರೆಂಚ್ ಪ್ರತಿಭಟನೆಯಲ್ಲಿ ಜನಸ್ತೋಮ
ಫ್ರೆಂಚ್ ಪ್ರತಿಭಟನೆಯಲ್ಲಿ ಜನಸ್ತೋಮ

ಕಳೆದ ನಾಲ್ಕು ವಾರಗಳಿಂದ ಫ್ರಾನ್ಸ್ ನಾದ್ಯಂತ ನಡೆಯುತ್ತಿರುವ ಶಾಲಾವಿದ್ಯಾರ್ಥಿಗಳ ಪ್ರತಿಭಟನೆಯ ವಿವರಗಳು ಈ ವರದಿಯಲ್ಲಿವೆ.

ಇದನ್ನೂ ಓದಿ : ಫ್ರೆಂಚ್ ಶಾಲಾ ವಿದ್ಯಾರ್ಥಿಗಳ  ಐತಿಹಾಸಿಕ ಮುಷ್ಕರ ನಾಲ್ಕನೇ ವಾರದಲ್ಲಿ

ಫ್ರಾನ್ಸ್ ನ ಎಲ್ಲ ನಗರಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದವು. ಫ್ರಾನ್ಸಿನ ಪ್ರಮುಖ ನಗರಗಳಲ್ಲಿ –  ಬೋರ್ಡೋ ನಲ್ಲಿ 1 ಲಕ್ಷ, ಟೊಲೌಸ್ ನಲ್ಲಿ 80 ಸಾವಿರ, ನಾಂಟೆಸ್ ನಲ್ಲಿ 60 ಸಾವಿರ, ಲಿಲ್ಲೆ ಯಲ್ಲಿ 60 ಸಾವಿರ, ಲ್ಯೋನ್ ನಲ್ಲಿ 50 ಸಾವಿರ,  ಮೊನ್ ಪೆಲೆ ಯಲ್ಲಿ 40 ಸಾವವಿರ, ಸ್ಟ್ರಾಟ್ಸ್ ಬೊರ್ಗ್ ನಲ್ಲಿ 30 ಸಾವಿರ, ಗ್ರೆನೋಬಲ್ ನಲ್ಲಿ 30 ಸಾವಿರ, ರೆನೆಯಲ್ಲಿ 20 ಸಾವಿರ ಮತ್ತು ರೌನ್ ನಲ್ಲಿ 20 ಸಾವಿರ ಕ್ಕೂ ಹೆಚ್ಚು ಜನ ಪ್ರತಿಭಟನೆಗಳಲ್ಲಿ ಭಾಗವಹಿಸಿದರು.

ಫ್ರೆಂಚ್ ಪ್ರತಿಭಟನೆಯಲ್ಲಿ ಜನಸ್ತೋಮ
ಫ್ರೆಂಚ್ ಪ್ರತಿಭಟನೆಯಲ್ಲಿ ಜನಸ್ತೋಮ

ಪ್ಯಾರೀಸ್, ಸುತ್ತಮುತ್ತಲಿನ ಮಾರ್ಸೆಲೆ ಮತ್ತು ಇತರ ನಗರಗಳಲ್ಲಿ ಲೆಕ್ಕಕ್ಕೆ ಸಿಗದಷ್ಟು (ಲಕ್ಷಗಳಲ್ಲಿ) ಜನ ಭಾಗವಹಿಸಿದರು. ಪ್ರಮುಖವಾಗಿ ಈ ನಗರಗಳಲ್ಲಿ ಬೆಳಿಗ್ಗೆನಿಂದಲೆ ಜನ ಜಮಾಯಿಸಲಾರಂಭಿಸಿದ್ದು ಭಾರೀ ಸಂಖ್ಯೆಯಲ್ಲಿದ್ದ ಪೋಲಿಸರು ಅವರನ್ನು ತಡೆಯಲು ಪೋಲೀಸರು ದಮನ ಕ್ರಮ  ಆರಂಭಿಸಿದಾಗ ಘರ್ಷಣೆಗಳು ನಡೆದವು. 2400ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಆದರೆ ಫ್ರತಿಭಟನೆಗಳು ಹೆಚ್ಚಾಗಿ ಶಾಂತಿಯುತವಾಗಿ ನಡೆದವು. ಇವು ಜತೆಗಿರುವ ಚಿತ್ರಗಳಿಂದ ಸ್ಪಷ್ಟವಾಗುತ್ತವೆ.

ಪ್ರತಿಭಟನೆಯ ಪರಿಸ್ಥಿತಿ ಬಳಸಿ ಲೂಟಿ ಮಾಡಿದ ಗ್ಯಾಂಗ್ ಗಳು
ಪ್ರತಿಭಟನೆಯ ಪರಿಸ್ಥಿತಿ ಬಳಸಿ ಲೂಟಿ ಮಾಡಿದ ಗ್ಯಾಂಗ್ ಗಳು

ಆದರೆ ಕೆಲವು ಕಡೆ ಕೆಲವು ಗುಂಪುಗಳು ಬೆಲೆಬಾಳುವ ಸರಕುಗಳ ಅಂಗಡಿಗಳನ್ನು ಲೂಟಿ ಮಾಡಿದವು. ಮಾತ್ರವಲ್ಲ ಪೋಲಿಸರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದವು. ಭಾರೀ ಜನದಟ್ಟಣೆಯ ಮತ್ತು ಅವರನ್ನು ನಿಯಂತ್ರಿಸುವಲ್ಲಿ ಭಾರೀ ಪೋಲಿಸರ ನಿಯೋಜನೆ, ಹಾಗೂ ಇತರ ಕಾನೂನು-ಸುವ್ಯವಸ್ಥೆ ಕಾಪಾಡುವ, ಕ್ರಿಮಿನಲ್ ಕೃತ್ಯಗಳ ತಡೆಗೆ ಪೋಲಿಸರು ಲಭ್ಯವಿಲ್ಲದ ಪರಿಸ್ಥಿತಿಯ ಲಾಭ ಪಡೆದು, ಕೆಲವು ಸಂಘಟಿತ ಕ್ರಿಮಿನಲ್ ಸಶಸ್ತ್ರ ಗ್ಯಾಂಗುಗಳು ಈ ಕುಕೃತ್ಯಗಳನ್ನು ಮಾಡಿದವು. ಇಂತಹ ಲೂಟಿಗಳು ಫ್ರತಿಭಟನೆಗಳಲ್ಲಿ ಮಾತ್ರವಲ್ಲ, ಭಾರೀ ಜನಸಂದಣಿಯ ಹಲವು ಸಂದರ್ಭಗಳಲ್ಲಿ ನಡೆಯುತ್ತವೆ.. ಉದಾಹರಣೆಗೆ ಇತ್ತೀಚಿನ ಪ್ಯಾರೀಸಿನ ಫುಟ್ಬಾಲ್ ತಂಡವೊಂದು ಲೀಗ್ ಪಂದ್ಯ ಗೆದ್ದಾಗಿನ ಸಂಭ್ರಮಾಚರಣೆಯಲ್ಲೂ ಇಂತಹ ಲೂಟಿಗಳು ನಡೆದಿದ್ದವು. ಇದು ಫ್ರೆಂಚ್ ಸಾಮಾಜಿಕ ಬದುಕಿನ ಭಾಗವಾಗಿಬಿಟ್ಟಿದೆ. ಇದರಲ್ಲಿ ಪ್ರತಿಭಟನಾಕಾರರ ಯಾವುದೇ ಪಾತ್ರವಿರಲಿಲ್ಲ. ಈ ಗ್ಯಾಂಗುಗಳು ಕಪ್ಪು ಮುಸುಕು ಮತ್ತು ಕೋಟುಗಳನ್ನು ಧರಿಸಿ ಕೈಯಲ್ಲಿ ಕಬ್ಬಿಣದ ರಾಡುಗಳನ್ನು ಹಿಡಿದಿರುತ್ತಾರೆ. ಅವರನ್ನು ಪ್ರತ್ಯೇಕಿಸಿ ಬಂಧಿಸುವುದು ಪೋಲಿಸರಿಗೆ ಕಷ್ಟವೇನಲ್ಲ. ಆದರೂ ಅದನ್ನು ಮಾಡಿಲ್ಲ. ಬಹುಶಃ ಈ ಲೂಟಿಯ ಜವಾಬ್ದಾರಿಯನ್ನು ಪ್ರತಿಭಟನಾಕಾರರ ಮೇಲೆ ಹಾಕಬಹುದು ಎಂದೋ ಏನೋ!

ಲಿಮೊಜೆ ಟೌನ್ ಹಾಲ್ ಸುಟ್ಟು ಹಾಕಿದ್ದು
ಲಿಮೊಜೆ ಟೌನ್ ಹಾಲ್ ಸುಟ್ಟು ಹಾಕಿದ್ದು

ಕೆಲವು ಕಡೆ ಕೆಲವರು ಕೇಂದ್ರ ಮತ್ತು ಸ್ಥಳೀಯ ಸರಕಾರಗಳ ಕಚೇರಿಗಳ (ಪ್ರಭುತ್ವದ ಪ್ರತೀಕಗಳು) ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದರು. ಲಿಮೋಜಿ ಎಂಬ ಪಟ್ಟಣದ ಚಾರಿತ್ರಿಕ ಟೌನ್ ಹಾಲ್ ಕಟ್ಟಡವನ್ನು ಸುಟ್ಟು ಹಾಕಿ ಅದು ನೆಲಕ್ಕೆ ಉರುಳಿತು.

An historic 140-year-old town hall in Limoges, France, was set ablaze during nationwide protests on Saturday

ಇವು ಹೆಚ್ಚಾಗಿ ‘ಅರಾಜತಾವಾದಿ’ (ಅನಾರ್ಕಿಸ್ಟ್) ರಾಜಕೀಯ ಗುಂಪುಗಳ ಕೆಲಸ. ಇಂತಹ ಗುಂಪುಗಳು ಸಹ ಹೆಚ್ಚಾಗಿ ಭಾರೀ ಪ್ರತಿಭಟನೆಗಳ ಸಂದರ್ಭವನ್ನು ಬಳಸಿಕೊಳ್ಳುತ್ತವೆ. ಇಂತಹ ಸಂಘಟನೆಗಳ ಸದಸ್ಯರಲ್ಲೂ ಕೆಲವರು (ಎಲ್ಲರೂ ಅಲ್ಲ) ಕಪ್ಪು ಮುಸುಕು/ಓವರ್ ಕೋಟು ಧರಿಸಿರುತ್ತಾರೆ. ಇವರನ್ನು ಪ್ರತ್ಯೇಕಿಸುವುದು ಪ್ರತಿಭಟನಾಕಾರರಿಗೆ ಸುಲಭವಲ್ಲ.

ಫ್ರೆಂಚ್ ಪ್ರತಿಭಟನೆಯಲ್ಲಿ ಜನಸ್ತೋಮ
ಫ್ರೆಂಚ್ ಪ್ರತಿಭಟನೆಯಲ್ಲಿ ಜನಸ್ತೋಮ

ಈ ಲೂಟಿಗಳು, ವಾಣಿಜ್ಯ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶಗಳು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದ್ದು ನಿಜವಾದರೂ, ಪ್ರತಿಭಟನೆಯ ವ್ಯಾಪಕತೆ ಗಮನಿಸಿದರೆ ಇವು ನಗಣ್ಯವೇ ಆಗಿದ್ದವು. ಆದರೆ ಫ್ರೆಂಚ್ ಸರಕಾರ ಮತ್ತು ಪಾಶ್ಚಿಮಾತ್ಯ ಮಾಧ್ಯಮಗಳು ಇವನ್ನೇ ಅತಿಯಾಗಿ ಬಿಂಬಿಸಿ ಬಹುಪಾಲು ಶಾಂತಿಯುತವಾಗಿ ನಡೆದ ಪ್ರತಿಭಟನೆಯ ವ್ಯಾಪಕತೆ, ಜನಬೆಂಬಲವನ್ನು ಮರೆಮಾಚಲು, ನಿರ್ಲಕ್ಷಿಸಲು ಪ್ರಯತ್ನಿಸಿವೆ. ನಾಲ್ಕು ವಾರಗಳಿಂದ ನಡೆಯುತ್ತಿರುವ ಶಾಲಾವಿದ್ಯಾರ್ಥಿಗಳ ಪ್ರತಿಭಟನೆಗೆ ಯಾಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ? ಅದನ್ನು ಭಾರೀ ಹಿಂಸಾತ್ಮಕ ಕ್ರಮಗಳಿಂದ ದಮನ  ಮಾಡಲು ಏಕೆ ಪ್ರಯತ್ನಿಸಲಾಗಿದೆ? ಎಂಬ ಪ್ರಶ್ನೆಗಳನ್ನು ಕೇಳಿಲ್ಲ. ಫ್ರೆಂಚ್ ಎಡಪಂಥೀಯ ಪಕ್ಷಗಳನ್ನು ಬಿಟ್ಟರೆ ಆಳುವ ಮತ್ತು ಈಗ ಪ್ರಮುಖ ವಿರೋಧ ಪಕ್ಷದ ಸ್ಥಾನದಲ್ಲಿರುವ ನವನಾಜಿ ಉಗ್ರ ಬಲಪಂಥೀಯ ಪಕ್ಷಗಳು ಅದನೇ ಮಾಡಿವೆ. ಬದಲಿಗೆ ಪ್ರತಿಭಟನೆಗಳಿಗೆ ಎಡಪಂಥೀಯರನ್ನು ದೂಷಿಸಿವೆ ಮತ್ತು ಅವುಗಳನ್ನು ದೃಢವಾಗಿ (ಕ್ರೂರವಾಗಿ ಅಂತ ತಿಳಿದುಕೊಳ್ಳಬಹುದು) ಹತ್ತಿಕ್ಕುವಲ್ಲಿ ಸರಕಾರ ಸೋತಿದೆ ಎಂದು ಟೀಕಿಸಿವೆ. ಯು.ಎಸ್ ಅಧ್ಯಕ್ಷ ಟ್ರಂಪ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಲಸೆಗಾರರು ಫ್ರಾನ್ಸ್ ನ್ನು ನಾಶ ಮಾಡಲು ಹೊರಟಿದ್ದಾರೆ. ಅವರನ್ನು ದೃಢವಾಗಿ ಮಟ್ಟ ಹಾಕಬೇಕು ಎಂದು ಕರೆ ಕೊಟ್ಟಿದ್ದಾರೆ.

ಫ್ರೆಂಚ್ ಪ್ರತಿಭಟನೆಯಲ್ಲಿ ಜನಸ್ತೋಮ
ಫ್ರೆಂಚ್ ಪ್ರತಿಭಟನೆಯಲ್ಲಿ ಜನಸ್ತೋಮ

ಭಾರತದ ಗೋದಿ ಮಾಧ್ಯಮಗಳು ಸಹ ಪಾಶ್ಚಿಮಾತ್ಯ ಮಾಧ್ಯಮಗಳ ‘ಕತೆ’ಯನ್ನೇ ಪ್ರತಿಫಲಿಸುತ್ತಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಸ್.ಐ.ಆರ್-ವಿರೋಧಿ ಚಳವಳಿಯನ್ನು ಸರಕಾರ ದೃಢವಾಗಿ (ಕ್ರೂರವಾಗಿ ಅಂತ ತಿಳಿದುಕೊಳ್ಳಬಹುದು) ಹತ್ತಿಕ್ಕದಿದ್ದರೆ ಫ್ರೆಂಚ್ ದಂಗೆಗಳು ಮತ್ತು ನೆರೆಯ ನೇಪಾಳ, ಬಾಂಗ್ಲಾದೇಶಗಳಂತೆ ‘ವಿದೇಶೀ ಶಕ್ತಿಗಳ ಕುಮ್ಮಕ್ಕಿನಿಂದ’ ಸರಕಾರ ಉರುಳಿಸುವ ಉದ್ದೇಶ ಸಾಧಿಸುವತ್ತ ಮುನ್ನಡೆಯುತ್ತವೆ ಎಂಬ ಸರಕಾರದ ‘ಕತೆ’ಯನ್ನು ಮಾರ್ದನಿಸುತ್ತಿವೆ. ಆದರೆ ಫ್ರೆಂಚ್ ಅಧ್ಯಕ್ಷ ಮತ್ತು ಸರಕಾರ, ಪ್ರತಿಭಟನೆಗಳು ಶಾಂತಿಯುತವಾಗಿದ್ದವು ಮತ್ತು ಕೆಲವು ನೈಜ ಸಮಸ್ಯೆಗಳ ಬಗ್ಗೆ ಜನತೆಯ  ಭಾವನೆಯನ್ನು ಪ್ರತಿಬಿಂಬಿಸುತ್ತಿವೆ. ಲೂಟಿ, ಹಿಂಸಾಚಾರ ನಡೆಸಿದ್ದು ಪ್ರತಿಭಟನಾಕಾರರಲ್ಲ. ಇತರ ಶಕ್ತಿಗಳು. ಇವನ್ನು ತಡೆಯುವಲ್ಲಿ ಸರಕಾರ ವಿಫಲವಾಗಿದೆ ಎಂದು ಒಪ್ಪಿಕೊಂಡಿದೆ. ವಾಸ್ತವದಲ್ಲಿ ಅಲ್ಲಿನ ಗೃಹ ಮಂತ್ರಿ ರಾಜೀನಾಮೆ ಕೊಟ್ಟಿದ್ದಾರೆ. ಅಧ್ಯಕ್ಷರು ಅದನ್ನು ಅಂಗೀಕರಿಸಿಲ್ಲ. ಆದರೆ ಲೂಟಿ, ಹಿಂಸಾಚಾರದ ನೆಪದಲ್ಲಿ ಹಲವು ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಫ್ರೆಂಚ್ ಪ್ರತಿಭಟನೆಯಲ್ಲಿ ಜನಸ್ತೋಮ
ಫ್ರೆಂಚ್ ಪ್ರತಿಭಟನೆಯಲ್ಲಿ ಜನಸ್ತೋಮ

ಈ ಚಾರಿತ್ರಿಕ ಪ್ರತಿಭಟನೆ ಶಾಲಾವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲಾರ್ಥ ಸಂಘಟಿಸಲಾಗಿದ್ದರೂ ನಿಜವಾಗಿಯೂ ಇದಕ್ಕೆ ಸಿಕ್ಕ ವ್ಯಾಪಕ ಪ್ರತಿಸ್ಪಂದನೆ, ಶಾಲಾ/ವಿ.ವಿ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಜನರು, ಕಾರ್ಮಿಕರು – ಹೀಗೆ ಜನತೆಯ ದೊಡ್ಡ ಜನವಿಭಾಗಗಳನ್ನು ಬಾಧಿಸುತ್ತಿರುವ ಜೀವನ ವೆಚ್ಚದ ಬಿಕ್ಕಟ್ಟಿನ ವಿರುದ್ಧ ಆಗಿತ್ತು.

ಮುಂದಿನ ವರ್ಷ ಫ್ರಾನ್ಸಿನಲ್ಲಿ ಅಧ್ಯಕ್ಷೀಯ ಮತ್ತು ಪಾರ್ಲಿಮೆಂಟರಿ ಚುನಾವಣೆಗಳು ನಡೆಯಲಿದ್ದು, ಜನತೆಯ ದಂಗೆ ಎಂದು ಕರೆಯಬಹುದಾದ ಈ ವ್ಯಾಪಕ ಪ್ರತಿಭಟನೆಗಳು ಅದರ ಮೇಲೆ ತೀವ್ರ ಪರಿಣಾಮ ಬೀರಲಿವೆ. ಯುರೋಪಿನ ಎಲ್ಲೆಡೆಯಂತೆ ಫ್ರಾನ್ಸಿನಲ್ಲೂ ಈ ವರೆಗೆ ಬಹುತೇಕ ಸರಕಾರ ನಡೆಸುತ್ತಿದ್ದ ನಡುಪಂಥೀಯ, ನಡು-ಬಲಪಂಥೀಯ, ನಡು-ಎಡಪಂಥೀಯ, ಬಲಪಂಥೀಯ ಪಕ್ಷಗಳು/ಶಕ್ತಿಗಳು ಜನಮನ್ನಣೆ ಕಳೆದಕೊಂಡಿವೆ. ರಾಜಕೀಯ ಹಣಾಹಣಿ ಎಡಪಂಥೀಯ ಮತ್ತು ಉಗ್ರ ಬಲಪಂಥೀಯ ಶಕ್ತಿಗಳ ನಡುವೆ ನಡೆದಿದೆ. ಈ ಪ್ರತಿಭಟನೆಗಳು ಜನರ ಸಮಸ್ಯೆಗಳನ್ನು ಪ್ರತಿನಿಧಿಸುತ್ತಿದ್ದು, ಅವುಗಳನ್ನು ಬೆಂಬಲಿಸುವ ಬದಲು  ಅದನ್ನು ‘ಅರಾಜಕತೆ’ ಎಂದು ಟೀಕಿಸುವ ಮೂಲಕ ಉಗ್ರ ಬಲಪಂಥೀಯ ಶಕ್ತಿಗಳ ನಿಜ ಬಣ್ಣ ಬಯಲಾಗಿದೆ. ಜನತೆಯ ಆಕ್ರೋಶವನ್ನು ವಲಸೆಗಾರ-ವಿರೋಧದತ್ತ ತಿರುಗಿಸುವ ಈ ಶಕ್ತಿಗಳ ಆಟವನ್ನು ಜನತೆಯ ನಡುವೆ ಈ ಪ್ರತಿಭಟನೆ ಎಷ್ಟರ ಮಟ್ಟಿಗೆ ಬಯಲು ಮಾಡಿದೆ ಎಂಬುದರ ಮೇಲೆ ಈ ಹಣಾಹಣಿಯ ಮತ್ತು ಚುನಾವಣಾ ಫಲಿತಾಂಶ ನಿರ್ಧಾರವಾಗಲಿದೆ.

ಜೀವನ ವೆಚ್ಚದ ಬಿಕ್ಕಟ್ಟಿನ ವಿರುದ್ಧ ಯುರೋಪಿನ ಜರ್ಮನಿ, ಸ್ಪೈನ್, ಇಟಲಿ, ಬೆಲ್ಜಿಯಂ, ಅಲ್ಬೇನಿಯ ಮುಂತಾದ ಇತರ ದೇಶಗಳಲ್ಲೂ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದು ಇಂತಹ ರಾಜಕೀಯ ಹಣಾಹಣಿ ನಡೆದಿದೆ. ಆದರೆ ಎಡಪಂಥೀಯ ಶಕ್ತಿಗಳು ಇತರ ದೇಶಗಳಿಗೆ ಹೋಲಿಸಿದರೆ ಫ್ರಾನ್ಸಿನಲ್ಲಿ ಅತ್ಯಂತ ಬಲಶಾಲಿಯಾಗಿದ್ದು, ಇಲ್ಲಿನ ಫಲಿತಾಂಶ ಇಡೀ ಯುರೋಪಿನ ಮೇಲೆ ಪ್ರಭಾವ ಬೀರಲಿದೆ.

********************

ಇದನ್ನೂ ನೋಡಿ : SIR ಹೋರಾಟ | ಪ್ರಜಾಪ್ರಭುತ್ವಕ್ಕೆ ಬೀಗ ಹಾಕಿದ ಕೇಂದ್ರ! ತಡೆಗೋಡೆ ಭೇದಿಸಿ ಬೀದಿಗಿಳಿದ Gen Z

Donate Janashakthi Media

Leave a Reply

Your email address will not be published. Required fields are marked *