ವಸಂತರಾಜ ಎನ್.ಕೆ
ಫ್ರಾನ್ಸ್ ನಲ್ಲಿ ದೊಡ್ಡ ಪ್ರಮಾಣದ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆಗಳು ಐತಿಹಾಸಿಕ ಹೋರಾಟ ಆಗಲೇ ನಾಲ್ಕನೇ ವಾರದಲ್ಲಿದೆ. ಶಾಲೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಕಾರ್ಮಿಕ ವರ್ಗದ ಪ್ರದೇಶಗಳ ಶಾಲೆಗಳಲ್ಲಿ ಗಂಭೀರ ಪರಿಸ್ಥಿತಿಯನ್ನು ಉಂಟು ಮಾಡಿರುವ – ಶಿಕ್ಷಕರು ಮತ್ತು ಶಿಕ್ಷಕೇತರ ಬೆಂಬಲ ಸಿಬ್ಬಂದಿಯ ಕೊರತೆ, ಕಿಕ್ಕಿರಿದ ತರಗತಿಗಳು ಮತ್ತು ಶಿಥಿಲಗೊಂಡ ಶಾಲಾ ಕಟ್ಟಡಗಳು –– ವಿರುದ್ಧ ತುರ್ತು ಕ್ರಮಗಳಿಗೆ ಒತ್ತಾಯಿಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ, ಫ್ರೆಂಚ್ ಅಧಿಕಾರಿಗಳು ವಿದ್ಯಾರ್ಥಿಗಳ ವಿರುದ್ಧ ಅಭೂತಪೂರ್ವ ಪೊಲೀಸ್ ಹಿಂಸಾಚಾರದ ಅಲೆಯನ್ನು ಹರಿಯ ಬಿಟ್ಟಿದ್ದಾರೆ. ಇದಕ್ಕೆ ಮೂಲಕಾರಣ ‘ಮಿತವ್ಯಯ’ದ ಹೆಸರಲ್ಲಿ ಸರಕಾರಗಳು ಶಿಕ್ಷಣ, ಪಿಂಚಣಿ ಮುಂತಾದ ಕಲ್ಯಾಣ ಕ್ರಮಗಳಲ್ಲಿ ಮಾಡುತ್ತಿರುವ ಭಾರೀ ಕಡಿತಗಳು. ಶಾಲಾ ವಿದ್ಯಾರ್ಥಿಗಳಿಗೆ ಯೂನಿಯನುಗಳು, ಎಡಪಂಥೀಯರ ಬೆಂಬಲ ದೊರಕಿದೆ. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಯುರೋಕೂಟದ ದೇಶಗಳಲ್ಲಿ ಆರ್ಥಿಕತೆ ತೀವ್ರವಾಗಿ ಹದಗೆಟ್ಟಿದ್ದು ‘ಮಿತವ್ಯಯ’ದ ನೀತಿಗಳ ವಿರುದ್ಧ ಆಕ್ರೋಶ ಸ್ಫೋಟಗೊಳ್ಳಲು ಸಿದ್ಧವಾಗಿದೆ. ಶಾಲಾ ವಿದ್ಯಾರ್ಥಿಗಳ ಐತಿಹಾಸಿಕ ಚಳುವಳಿ ಫ್ರಾನ್ಸ್, ಜರ್ಮನಿ ಮತ್ತು ಇತರ ಯುರೋ ಕೂಟದ ದೇಶಗಳಲ್ಲಿ ಭಾರೀ ರಾಜಕೀಯ ತುಮುಲದ ಮುನ್ನೆಚ್ಚರಿಕೆಯಂತಿದೆ. ಫ್ರೆಂಚ್
ಫ್ರಾನ್ಸ್ ನಲ್ಲಿ ದೊಡ್ಡ ಪ್ರಮಾಣದ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆಗಳು ಹಲವು ದಿನಗಳಿಂದ ನಡೆಯುತ್ತಿವೆ. ಈ ಐತಿಹಾಸಿಕ ಹೋರಾಟ ಕೆಲವು ಕಡೆ ಆರಂಭವಾಗಿ ಈಗ ದೇಶದ ತುಂಬಾ ವ್ಯಾಪಕವಾಗಿ ಹರಡಿದ್ದು ಆಗಲೇ ನಾಲ್ಕನೇ ವಾರದಲ್ಲಿದೆ. ಅಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಹಕ್ಕಿಗಾಗಿ ಮತ್ತು ಅನುದಾನಗಳಲ್ಲಿ ಭಾರೀ ಕಡಿತಗಳಿಂದ ಶಾಲಾ ಶಿಕ್ಷಣವನ್ನು ದುರ್ಬಲಗೊಳಿಸುತ್ತಿರುವ ‘ಮಿತವ್ಯಯ’ ವೆಂದು ಕರೆಯಲಾಗುವ ಆರ್ಥಿಕ ನೀತಿಗಳ ವಿರುದ್ಧ ನಡೆಸುತ್ತಿವೆ. ಸುಮಾರು 1,800 ಪ್ರೌಢಶಾಲೆಗಳು ಅಕ್ಟೋಬರ್ 6ರಂದು ಮುಚ್ಚಿದ್ದವು. ವಿದ್ಯಾರ್ಥಿಗಳು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಅಕ್ಟೋಬರ್ 6ರಂದು ಅವರ ಹೋರಾಟಕ್ಕೆ ಕಾರ್ಮಿಕ ಸಂಘಗಳು, ಕುಟುಂಬಗಳು ಮತ್ತು ಪ್ರಗತಿಪರ ರಾಜಕಾರಣಿಗಳು ಬೆಂಬಲಿಸಿದ್ದಾರೆ. .ಅಂದು ದೇಶದಾದ್ಯಂತ 4.5 ಲಕ್ಷ ಕ್ಕೂ ಹೆಚ್ಚು ಜನರು ಪ್ರತಿಭಟನೆಗಳಲ್ಲಿ ಪಾಲ್ಗೊಂಡರು. 90% ಫ್ರೆಂಚ್ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಅದೇ ದಿನ ಸೌಹಾರ್ದ ಪ್ರತಿಭಟನೆಗಳನ್ನು ನಡೆಸಿದರು. ಇವೆಲ್ಲ ಈ ಮುಷ್ಕರವನ್ನು ಐತಿಹಾಸಿಕವಾಗಿಸುತ್ತಿದೆ.
ಫ್ರೆಂಚ್ ಶಾಲೆಗಳಲ್ಲಿನ ಗಂಭೀರ ಪರಿಸ್ಥಿತಿಯನ್ನು ಪರಿಹರಿಸಲು ತುರ್ತು ಕ್ರಮಗಳನ್ನು ಸರಕಾರ ತೆಗೆದುಕೊಳ್ಳಬೇಕು ಎನ್ನುವುದು ವಿದ್ಯಾರ್ಥಿಗಳ ಮುಖ್ಯ ಬೇಡಿಕೆ. ಶಾಲೆಗಳಲ್ಲಿ, – ವಿಶೇಷವಾಗಿ ಕಾರ್ಮಿಕ ವರ್ಗದ ಪ್ರದೇಶಗಳಲ್ಲಿ, ಶಿಕ್ಷಕರು ಮತ್ತು ಶಿಕ್ಷಕೇತರ ಬೆಂಬಲ ಸಿಬ್ಬಂದಿಯ ಕೊರತೆ, ಕಿಕ್ಕಿರಿದ ತರಗತಿಗಳು ಮತ್ತು ಶಿಥಿಲಗೊಂಡ ಶಾಲಾ ಕಟ್ಟಡಗಳು – ಈ ಸವಾಲುಗಳು ಶಾಲೆಗಳಲ್ಲಿ ಗಂಭೀರ ಪರಿಸ್ಥಿತಿಯನ್ನು ಉಂಟು ಮಾಡಿವೆ. ಪ್ರತಿಭಟನಾಕಾರ ಶಾಲಾ ವಿದ್ಯಾರ್ಥಿಗಳು ನಿಭಾಯಿಸಬಹುಧಾದ ಪಠ್ಯದ ವೇಳಾಪಟ್ಟಿಗಳು, ಕೈಗೆಟುಕುವ ಮತ್ತು ಗುಣಮಟ್ಟದ ಆಹಾರ ಮತ್ತು ಹಾಸ್ಟೆಲ್ ಹಾಗೂ ನ್ಯಾಯಯುತ ಸಮಾನ ಶಿಕ್ಷಣ ವ್ಯವಸ್ಥೆಗೆ ಒತ್ತಾಯಿಸುತ್ತಿದ್ದಾರೆ. ಫ್ರೆಂಚ್

ಪ್ರತಿಭಟನೆಗಳ ಮೂಲ ಕಾರಣ ‘ಮಿತವ್ಯಯ’
ಶಾಲೆಗಳಲ್ಲಿನ ಪರಿಸ್ಥಿತಿಯು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಹಲವಾರು ಆಡಳಿತಗಳು ಹಲವು ವರ್ಷಗಳಿಂದ ಹೇರಿದ ನವ-ಉದಾರವಾದಿ ನೀತಿಗಳಿಗೆ ನೇರವಾಗಿ ಸಂಬಂಧಿಸಿದೆ. ಅದೇ ನೀತಿಗಳ ಯೋಜಿತ ಮುಂದುವರಿಕೆ – ಮತ್ತು ಕಠಿಣಗೊಳಿಸುವಿಕೆ – ಬಗ್ಗೆ ವ್ಯಾಪಕ ಅಸಮಾಧಾನದ ಫಲವಾಗಿ ಈ ಚಳುವಳಿ ನಡೆಯುತ್ತಿದೆ.
ದೇಶದ ಸಾರ್ವಜನಿಕ ಹಣಕಾಸು ಕೊರತೆಯು 2025 ರಲ್ಲಿ GDP ಯ 5.1% ತಲುಪಿತು, ಮತ್ತು ಸಾಲದ ಮೇಲೆ ಏರುತ್ತಿರುವ ಬಡ್ಡಿ ಹೊರೆಯು ಈ ಕೊರತೆಯನ್ನು ಇನ್ನಷ್ಟು ಬೆಳೆಸುತ್ತವೆ. 2025 ರಲ್ಲಿ, ಒಟ್ಟು ಬಡ್ಡಿ ಹೊರೆಯು ಸುಮಾರು 6600 ಕೋಟಿ ಯುರೋ ಆಗಿತ್ತು; ಇದು 2027 ರಲ್ಲಿ 9100 ಕೋಟಿ ಯುರೋ ಮತ್ತು 2030 ರಲ್ಲಿ ಸುಮಾರು 12 ಸಾವಿರ ಕೋಟಿ ತಲುಪುವ ನಿರೀಕ್ಷೆಯಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ಸಾರೆ.
ಆ ಕೊರತೆಯನ್ನು ಪರಿಹರಿಸುವ ಏಕೈಕ ಮಾರ್ಗ ಕಡಿತಗಳ ಮೂಲಕ ಎಂದು ಸರಕಾರಿ ಅರ್ಥಶಾಸ್ತ್ರಜ್ಞರು ಸೂಚಿಸಿದ್ದಾರೆ. ಪ್ರಸ್ತುತ ಮ್ಯಾಕ್ರಾನ್ ಸರಕಾರ ಪಿಂಚಣಿ ಮತ್ತು ಶಿಕ್ಷಣ ಮುಂತಾದ ಕಲ್ಯಾಣ ಯೋಜನೆಗಳಲ್ಲಿ ಭಾರೀ ಕಡಿತಗಳ ಮೂಲಕ ಅವುಗಳ ಮೇಲಿನ ದಾಳಿಗಳಿಂದ ಹಣಕಾಸು ಕೊರತೆಯನ್ನು ನಿರ್ವಹಿಸುವ ಪ್ರಯತ್ನದಲ್ಲಿದೆ.
ವಿದ್ಯಾರ್ಥಿಗಳ ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ, ಫ್ರೆಂಚ್ ಅಧಿಕಾರಿಗಳು ವಿದ್ಯಾರ್ಥಿಗಳ ವಿರುದ್ಧ ಅಭೂತಪೂರ್ವ ಪೊಲೀಸ್ ಹಿಂಸಾಚಾರದ ಅಲೆಯನ್ನು ಹರಿಯ ಬಿಟ್ಟಿದ್ದಾರೆ. ಸೆಪ್ಟೆಂಬರ್ 21 ಮತ್ತು ಅಕ್ಟೋಬರ್ 2 ರ ನಡುವೆ ಸುಮಾರು 5,000 ಬಂಧನಗಳನ್ನು ಆಂತರಿಕ ಸಚಿವಾಲಯ ದಾಖಲಿಸಿದೆ, ಬಂಧಿತರಲ್ಲಿ 85% ಅಪ್ರಾಪ್ತ ವಯಸ್ಕ ಮಕ್ಕಳಿದ್ದಾರೆ.. ಪೊಲೀಸರು ಮಕ್ಕಳ ಮೇಲೆ ರಬ್ಬರ್ ಬುಲೆಟ್ ಗಳು ಮತ್ತು ಚದುರಿಸುವ ಗ್ರೆನೇಡ್ ಗಳನ್ನು ಬಳಸಿದರು, ಇದು ಗಂಭೀರ ಗಾಯಗಳಿಗೆ ಕಾರಣವಾಗಿದೆ. ಹಲವು ಪ್ರತಿಭಟನಾಕಾರ ಶಾಲಾ ವಿದ್ಯಾರ್ಥಿಗಳು ಕೈಕಾಲು ಮತ್ತು ದೃಷ್ಟಿಯನ್ನು ಕಳೆದುಕೊಂಡಿದ್ದಾರೆ.
“ಕಳೆದ ವಾರ ವ್ಯಾಪಕವಾಗಿ ವರದಿಯಾದ ದೃಶ್ಯಾವಳಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳು ಪೊಲೀಸರಿಂದ ಅಶ್ರುವಾಯು, ದೊಣ್ಣೆಗಳು ಮತ್ತು ನಿಗ್ರಹ ತಂತ್ರಗಳ ಅಪಾಯಕಾರಿ ಬಳಕೆಯ ಬಗ್ಗೆ ಆತಂಕಕಾರಿ ಕಳವಳಗಳನ್ನು ಹುಟ್ಟುಹಾಕುತ್ತವೆ” ಎಂದು ಅಮ್ನೆಸ್ಟಿ ಇಂಟರ್ನ್ಯಾಶನಲ್ ಫ್ರಾನ್ಸ್ ವಕ್ತಾರರು ಹೇಳಿದ್ದಾರೆ ಪ್ರದರ್ಶನಗಳಿಗೆ ಪ್ರತಿಕ್ರಿಯೆಯು “ಅಗತ್ಯ ಮತ್ತು ಪ್ರಮಾಣಕ್ಕೆ’ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು, ಮತ್ತು “ಶಾಂತಿಯುತವಾಗಿ ತಮ್ಮ ಶಿಕ್ಷಣದ ಹಕ್ಕನ್ನು ಒತ್ತಾಯಿಸುತ್ತಿರುವ ಮಕ್ಕಳು ಮತ್ತು ಯುವಕರನ್ನು ಹೊಡೆಯುವ, ಅಶ್ರುವಾಯು ಬಿಡುವ, ಅಥವಾ ನಿರಂಕುಶವಾಗಿ ಬಂಧಿಸುವ ಬದಲು ರಕ್ಷಿಸಬೇಕು” ಎಂದು ಸಂಸ್ಥೆ ಒತ್ತಿಹೇಳಿತು. ಫ್ರೆಂಚ್
ಮಾನವ ಹಕ್ಕುಗಳ ಸಂಸ್ಥೆಗಳು ವಿದ್ಯಾರ್ಥಿಗಳ ವಿರುದ್ಧದ ಪ್ರಭುತ್ವ-ಅನುಮೋದಿತ ಹಿಂಸಾಚಾರವನ್ನು ಕೊನೆಗೊಳಿಸುವಂತೆ ಮನವಿ ಮಾಡಿದರೂ, ಯುರೋಪಿನ ಸ್ಥಾಪಿತ ರಾಜಕೀಯ ಶಕ್ತಿಗಳು ಮತ್ತು ಮಾಧ್ಯಮಗಳು ಇದರ ಬಗ್ಗೆ ಮೌನವಾಗಿದ್ದವು. ಸ್ಪಂದಿಸಿದವರ ಪ್ರತಿಕ್ರಿಯೆಗಳು ಸಹ ಬಹಳ ಸೌಮ್ಯವಾಗಿದ್ದವು.
ಇದನ್ನೂ ಓದಿ : ಸಂಡೆ ಬಜಾರ್ ಹೋರಾಟಕ್ಕೆ CITU ಜಯ; 95 ವ್ಯಾಪಾರಿಗಳಿಗೆ ನಗರಪಾಲಿಕೆ ಅನುಮತಿ

ವಿದ್ಯಾರ್ಥಿಗಳಿಗೆ ಯೂನಿಯನುಗಳು, ಎಡಪಂಥೀಯರ ಬೆಂಬಲ
ಎರಡನೇ ವಾರದಲ್ಲಿ ವಿದ್ಯಾರ್ಥಿ ಪ್ರದರ್ಶನಗಳಿಗೆ ತಮ್ಮ ಬೆಂಬಲವನ್ನು ವಿವಿಧ ಪ್ರಗತಿಪರ ಚಳವಳಿಗಳು ಚುರುಕುಗೊಳಿಸಿದವು, ಇದರ ಪರಿಣಾಮವಾಗಿ ಸಾವಿರಾರು ಕಾರ್ಮಿಕ ಸಂಘಗಳ ಸದಸ್ಯರು ಮತ್ತು ಡಜನ್ ಗಟ್ಟಲೆ ಚುನಾಯಿತ ಶಾಸಕರು, ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ತಡೆಗೋಡೆಯಾಗಿ ನಿಂತು ಯುವಕರನ್ನು ರಕ್ಷಿಸಿದರು. “ದೇಶದಾದ್ಯಂತ, ಯೂನಿಯನ್ ಸದಸ್ಯರು ಶಾಲಾ ವಿದ್ಯಾರ್ಥಿಗಳಿಗೆ ರಕ್ಷಣೆ ಮತ್ತು ಬೆಂಬಲ ನೀಡಲು ದೊಡ್ಡ ಸಂಖ್ಯೆಯಲ್ಲಿ ಹೊರಬಂದಿದ್ದಾರೆ” ಎಂದು ಮುಖ್ಯ ವಿದ್ಯಾರ್ಥಿ ಸಂಘಗಳಲ್ಲಿ ಒಂದಾದ ಯೂನಿಯನ್ ಸಿಂಡಿಕಲ್ ಲೈಸೀನ್ ಹೇಳಿದೆ..
“ಇಂದಿನ ಪ್ರೌಢಶಾಲೆ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಾಳಿನ ಕಾರ್ಮಿಕರು, ಮತ್ತು ಅವರು ಮಿತವ್ಯಯದ ನೀತಿಗಳ ಬೆಲೆಯನ್ನು ತೆರಬಾರದು” ಎಂದು ಫ್ರೆಂಚ್ ಕೇಂದ್ರೀಯ ಕಾರ್ಮಿಕ ಒಕ್ಕೂಟ (CGT) ಒತ್ತಿಹೇಳಿತು. “ಶಿಕ್ಷಕರ ಕೊರತೆ ಇದ್ದಾಗ, ತರಗತಿ ಕೊಠಡಿಗಳು ಕಿಕ್ಕಿರಿದಾಗ, ಕಟ್ಟಡಗಳು ಒಡೆದುಹೋಗುತ್ತಿರುವಾಗ, ಮತ್ತು ಯುವಕರು ತಮ್ಮ ಭವಿಷ್ಯದ ನಿರೀಕ್ಷೆಗಳು ಕುಗ್ಗುತ್ತಿರುವುದನ್ನು ಕಂಡು ಆಕ್ರೋಶಗೊಂಡಾಗ, ಉತ್ತರವು ದಮನವಾಗಿರಲು ಸಾಧ್ಯವಿಲ್ಲ.”
ಪ್ರಗತಿಪರ ರಾಜಕಾರಣಿಗಳು, ವಿಶೇಷವಾಗಿ ಲಾ ಫ್ರಾನ್ಸ್ ಇನ್ಸೌಮಿಸ್ (LFI) ನಿಂದ, ಸಹ ಪ್ರತಿಭಟನೆಗಳಿಗೆ ಸೇರಿದರು, ವಿದ್ಯಾರ್ಥಿಗಳಿಗೆ ದೈಹಿಕ ರಕ್ಷಣೆ ನೀಡಿದರು. LFI ಯ ಕ್ಲೆಮೆನ್ಸ್ ಗೆಟ್ಟೆ ಮತ್ತು ಇತರ ಹಲವಾರು ಸದಸ್ಯರ ತವರೂರಾದ ಕ್ರೆಟೈಲ್ನಿಂದ ಚಳುವಳಿ ಪ್ರಾರಂಭವಾದಾಗ, ಎಡ ಪಕ್ಷವು ಬೆಂಬಲ ನೀಡಿದ ಮೊದಲ ಪಕ್ಷಗಳಲ್ಲಿ ಒಂದಾಗಿತ್ತು – ಮತ್ತು ದಮನ ಬೆಳೆದಂತೆ ಅವರ ಬೆಂಬಲ ಮುಂದುವರೆಸಿತು. ಅತ್ಯಂತ ಗಮನಾರ್ಹ ಉದಾಹರಣೆಗಳಲ್ಲಿ ಒಂದು ಸೇಂಟ್-ಡೆನಿಸ್ ಮೇಯರ್ ಬ್ಯಾಲಿ ಬಗಾಯೊಕೊ, ಹೆಚ್ಚಿನ ಹಿಂಸಾಚಾರದಿಂದ ವಿದ್ಯಾರ್ಥಿಗಳನ್ನು ರಕ್ಷಿಸಿದ್ದು ಕಂಡು ಬಂದಿದೆ.
“ಕಾರ್ಮಿಕ ಒಕ್ಕೂಟಗಳು, ಯುವ ಚಳವಳಿ, ಮತ್ತು ಸಂಸದೀಯ ಎಡಪಂಥೀಯ ವಿರೋಧ ಪಕ್ಷದ ಒಟ್ಟುಗೂಡುವಿಕೆಯು ಪರಸ್ಪರ ರಕ್ಷಣೆಯ ಒಂದು ರೀತಿಯ ‘ಆಮೆ ರಚನೆ’ಯನ್ನು ರೂಪಿಸುತ್ತದೆ, ಇದು ವಿಶಾಲ ಸಾಮೂಹಿಕ ಚಲನೆಯನ್ನು ಸಾಧ್ಯವಾಗಿಸುತ್ತದೆ” ಎಂದು ಎಡಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಜೀನ್-ಲೂಕ್ ಮೆಲೆಂಚನ್ ಒತ್ತಿ ಹೇಳಿದರು.
ಗ್ರೀಸ್ ಸೇರಿದಂತೆ ಇತರ ಯುರೋಪಿಯನ್ ದೇಶಗಳ ಯುವ ಸಂಸ್ಥೆಗಳಿಂದ ಸೌಹಾರ್ದ ಬೆಂಬಲದ ಹೇಳಿಕೆಗಳು ಬಂದವು. “ಫ್ರೆಂಚ್ ಸರ್ಕಾರವು, ಉಳಿದ ಯುರೋ ಕೂಟದ ದೇಶಗಳಂತೆಯೇ, ವೇತನ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ವೆಚ್ಚದಲ್ಲಿ ಬಿಲಿಯನ್ ಗಟ್ಟಲೆ ಹಣವನ್ನು ಮಿಲಿಟರಿ ಉಪಕರಣಗಳಿಗೆ ಖರ್ಚು ಮಾಡುತ್ತಿರುವುದರಿಂದ, ಯುವಕರು ಶಿಕ್ಷಣ ವೆಚ್ಚದ ಕಡಿತಗಳಿಗೆ ದೊಡ್ಡ ಪ್ರಮಾಣದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ” ಎಂದು ಗ್ರೀಸ್ ನ ಕಮ್ಯುನಿಸ್ಟ್ ಯೂತ್ (KNE) ಒಂದು ಹೇಳಿಕೆಯಲ್ಲಿ ತಿಳಿಸಿದೆ, ಇದು ಇನ್ನಷ್ಟು ವಿದ್ಯಾರ್ಥಿ ಹೋರಾಟಗಳು ಬರಲಿವೆ ಎಂದು ಸೂಚಿಸುತ್ತದೆ. ಫ್ರೆಂಚ್

ಭಾರೀ ರಾಜಕೀಯ ತುಮುಲದ ಮುನ್ನೆಚ್ಚರಿಕೆ
ಈಗಾಗಲೇ ಇಂತಹ ವ್ಯಾಪಕ ವಿದ್ಯಾರ್ಥಿಗಳ ಚಳುವಳಿ ಬೆಲ್ಜಿಯಂ, ಇಟಲಿ, ಅಲ್ಬೇನಿಯಗಳಿಗೆ ಹರಡುತ್ತಿದೆ ಎಂದು ಇಲ್ಲಿ ಗಮನಿಸಬಹುದು. ಯುರೋಪಿನಲ್ಲಿ ಉಕ್ರೇನ್ ಯುದ್ಧ ಮತ್ತು ಅದಕ್ಕಾಗಿ ರಶ್ಯಾದ ಮೇಲೆ ಹೇರಿದ ನಿರ್ಬಂಧಗಳು ಯುರೋ ಕೂಟದ ಆರ್ಥಿಕ ವನ್ನು ಇನ್ನಷ್ಟು ಹದಗೆಡವಿದೆ. ಪ್ರಮುಖವಾಗಿ ರಶ್ಯಾದ ತೈಲ-ಗ್ಯಾಸ್ ಆಮದು ನಿಲ್ಲಿಸಿದ್ದು ವ್ಯಾಪಕ ತೈಲ-ವಿದ್ಯುತ್ ಕೊರತೆ/ಬೆಲೆಏರಿಕೆ ಹಾಗೂ ಆ ಮೂಲಕ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆಏರಿಕೆಗೆ ಕಾರಣವಾಗಿದೆ. ಯುರೋ ಕೂಟದ ತುಂಬಾ ಮತ್ತು ಪ್ರಮುಖ ಕೈಗಾರಿಕಾ ಶಕ್ತಿಗಳಾದ ಫ್ರಾನ್ಸ್, ಜರ್ಮನಿ, ಇಟಲಿಗಳಲ್ಲಿ ಅಪ-ಕೈಗಾರಿಕೀಕರಣಕ್ಕೆ ಹಾದಿ ಮಾಡಿದೆ. ರಾಜತಾಂತ್ರಿಕ ಮಾತುಕತೆಗಳ ಮೂಲಕ ಉಕ್ರೇನ್ ಯುದ್ಧವನ್ನು ನಿಲ್ಲಿಸಿ ಆರ್ಥಿಕ ಚೇತರಿಕೆಗೆ ಹಾದಿ ಮಾಡಿ ಕೊಡುವ ಬದಲು ಯುರೋ ಕೂಟದ ದೇಶಗಳ ಸರಕಾರಗಳು ಉಕ್ರೇನ್ ನ್ನು ಇನ್ನಷ್ಟು ದೀರ್ಘ ಯುದ್ಧಕ್ಕ ಉತ್ತೇಜಿಸುತ್ತಿದೆ. ನವ-ಉದಾರವಾದಿ ಆರ್ಥಿಕ ನೀತಿಗಳ ಭಾಗವಾಗಿ ಈಗಾಗಲೇ ಕಡಿತಕ್ಕೊಳಗಾದ ಕ್ಲಲ್ಯಾಣ ಯೋಜನೆಗಳನ್ನು ಇನ್ನಷ್ಟು ಭಾರೀ ಕ್ರೂರ ಕಡಿತಕ್ಕೊಳ ಪಡಿಸಲಾಗುತ್ತಿದೆ.
ಈ ಐತಿಹಾಸಿಕ ಶಾಲಾ ವಿದ್ಯಾರ್ಥಿಗಳ ಹಲವು ವಾರಗಳ ಪ್ರತಿಭಟನಾ ಹೋರಾಟ, ಫ್ರಾನ್ಸ್, ಜರ್ಮನಿ ಮತ್ತು ಇತರ ಯುರೋ ಕೂಟದ ದೇಶಗಳಲ್ಲಿ ಭಾರೀ ರಾಜಕೀಯ ತುಮುಲದ ಮುನ್ನೆಚ್ಚರಿಕೆಯಂತಿದೆ. ಫ್ರೆಂಚ್
***********
ಇದನ್ನೂ ನೋಡಿ : ಗುತ್ತಿಗೆ ಕಾರ್ಮಿಕರ ಶೋಷಣೆ: ಎಜೆನ್ಸಿ ಮಾಫೀಯಾಗೆ ಬಲಿಯಾಗುತ್ತಿರುವ ಕಾರ್ಮಿಕರ ಬದುಕು! Janashakthi Media
