ಅ. 23ರಂದು ಹಾಸನದಲ್ಲಿ ‘ಪ್ರಜಾತಂತ್ರದ ನಡಿಗೆ’: ‘ಹಾಸನದಲ್ಲಿಯೂ ಜಂತರ್ ಮಂತರ್’ ಹೋರಾಟಕ್ಕೆ ಸಿದ್ಧತೆ

ಎಸ್‌ಐಆರ್‌ ರದ್ದು, ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹ | ಹೋರಾಟದ ಪೋಸ್ಟರ್‌, ಕರಪತ್ರ ಬಿಡುಗಡೆ
ಹಾಸನ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ರದ್ದುಪಡಿಸಿ, ಪ್ರಜಾಪ್ರಭುತ್ವ ಮತ್ತು ಮತದಾನದ ಹಕ್ಕುಗಳನ್ನು ರಕ್ಷಿಸಬೇಕೆಂದು ಆಗ್ರಹಿಸಿ ಅಕ್ಟೋಬರ್‌ 23ರಂದು ಹಾಸನದಲ್ಲಿ ‘ಪ್ರಜಾತಂತ್ರದ ನಡಿಗೆ–ಹಾಸನದಲ್ಲಿಯೂ ಜಂತರ್ ಮಂತರ್’ ಎಂಬ ಬೃಹತ್‌ ಹೋರಾಟ ಆಯೋಜಿಸಲಾಗಿದೆ. ಈ ಹೋರಾಟದ ಪೋಸ್ಟರ್‌ಗಳು ಮತ್ತು ಕರಪತ್ರಗಳನ್ನು ಸೋಮವಾರ ಹಾಸನದ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ಎದುರು ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಯಿತು.

ಅಕ್ಟೋಬರ್‌ 23ರ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಹಾಸನದ ಹೇಮಾವತಿ ಪ್ರತಿಮೆಯಿಂದ ಬೃಹತ್‌ ಮೆರವಣಿಗೆ ಆರಂಭವಾಗಲಿದೆ. ‘ಎಸ್‌ಐಆರ್‌ ವಿರುದ್ಧ ಜನತೆ–ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟ’ದ ನೇತೃತ್ವದಲ್ಲಿ ನಡೆಯಲಿರುವ ಈ ಹೋರಾಟದಲ್ಲಿ ದಲಿತ, ರೈತ, ಕಾರ್ಮಿಕ, ಮಹಿಳಾ, ಮುಸ್ಲಿಂ, ವಿದ್ಯಾರ್ಥಿ, ಯುವಜನ, ಪರಿಸರ, ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಘಟನೆಗಳು ಹಾಗೂ ಸಮಾನ ಮನಸ್ಕರು ಭಾಗವಹಿಸಲಿದ್ದಾರೆ.

ಮತದಾನದ ಹಕ್ಕು ರಕ್ಷಿಸಲು ಜನಾಂದೋಲನಕ್ಕೆ ಕರೆ

ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜನಸಾಮಾನ್ಯರ ಮತದಾನದ ಹಕ್ಕು ಗಂಭೀರ ಅಪಾಯ ಎದುರಿಸುತ್ತಿವೆ. ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಗೆ ಧಕ್ಕೆ ತರುತ್ತಿರುವ ಎಸ್‌ಐಆರ್‌ ಪ್ರಕ್ರಿಯೆ ಹಾಗೂ ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧ ದೇಶಾದ್ಯಂತ ಹೋರಾಟಗಳು ನಡೆಯುತ್ತಿವೆ ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.

ದೆಹಲಿಯಲ್ಲಿ 200ಕ್ಕೂ ಹೆಚ್ಚು ರೈತ, ಕಾರ್ಮಿಕ, ದಲಿತ, ಮಹಿಳಾ, ಆದಿವಾಸಿ, ಮುಸ್ಲಿಂ, ಅಲ್ಪಸಂಖ್ಯಾತ ಹಾಗೂ ವಿದ್ಯಾರ್ಥಿ–ಯುವಜನ ಸಂಘಟನೆಗಳು ಒಗ್ಗೂಡಿ ‘ಎಸ್‌ಐಆರ್‌ ವಿರುದ್ಧ ಜನತೆ’ ಎಂಬ ಅಖಿಲ ಭಾರತ ಹೋರಾಟದ ವೇದಿಕೆಯನ್ನು ರೂಪಿಸಿವೆ. ಈ ಹೋರಾಟದ ಭಾಗವಾಗಿ ಹಾಸನದಲ್ಲಿಯೂ ಜನರನ್ನು ದೊಡ್ಡ ಸಂಖ್ಯೆಯಲ್ಲಿ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ಮತ್ತು ಅರೆಸೇನಾ ಪಡೆಗಳು ದೌರ್ಜನ್ಯ ನಡೆಸಿವೆ ಎಂದು ಆರೋಪಿಸಿರುವ ಒಕ್ಕೂಟ, ಬಂಧಿತ ಎಲ್ಲ ಪ್ರತಿಭಟನಾಕಾರರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.

‘ಜಂತರ್ ಮಂತರ್’ ಕೇವಲ ದೆಹಲಿಯ ಒಂದು ಸ್ಥಳವಲ್ಲ; ಅದು ದೇಶದ ಜನರ ಹೋರಾಟದ ಸಂಕೇತವಾಗಿದೆ. ಜನರ ಪ್ರತಿಭಟನೆಯ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳಿಗೆ ಪ್ರತಿರೋಧವಾಗಿ “ಪ್ರತಿ ಊರು, ಪ್ರತಿ ಬೀದಿ, ಪ್ರತಿ ಮನೆಯೂ ಜಂತರ್ ಮಂತರ್!” ಎಂಬ ಘೋಷಣೆಯೊಂದಿಗೆ ಹಾಸನದಲ್ಲಿಯೂ ಹೋರಾಟವನ್ನು ಬಲಪಡಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ : ಮಹಿಳಾ ಸಚಿವರೇ ಇಲ್ಲದ ಸಂಪುಟಕ್ಕೆ ಸೌಮ್ಯಾ ರೆಡ್ಡಿ ಅಸಮಾಧಾನ: ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ!

ಒಕ್ಕೂಟದ ಪ್ರಮುಖ ಹಕ್ಕೊತ್ತಾಯಗಳು

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರನ್ನು ವಜಾಗೊಳಿಸಿ ಬಂಧಿಸಬೇಕು ಹಾಗೂ ಎಸ್‌ಐಆರ್‌ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂಬುದು ಒಕ್ಕೂಟದ ಪ್ರಮುಖ ಬೇಡಿಕೆಯಾಗಿದೆ. ಎಸ್‌ಐಆರ್‌ ಆಧರಿಸಿ ಯಾವುದೇ ಚುನಾವಣೆಗಳನ್ನು ನಡೆಸಬಾರದು ಮತ್ತು ಮತದಾರರ ಪಟ್ಟಿಯನ್ನು ಮರುಸಿದ್ಧಪಡಿಸಬೇಕು ಎಂದು ಆಗ್ರಹಿಸಲಾಗಿದೆ.

ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಸಾಮಾಜಿಕ ಪರಿಶೀಲನೆ ವಿಧಾನವನ್ನು ಅಳವಡಿಸಿ, ನೈಜ ಮತ್ತು ನಿಷ್ಪಕ್ಷಪಾತ ಪರಿಶೀಲನೆ ನಡೆಸಬೇಕು. 2023ರ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ರದ್ದುಗೊಳಿಸಿ, ಪ್ರಜಾಸತ್ತಾತ್ಮಕ ಮಾನದಂಡಗಳ ಆಧಾರದ ಮೇಲೆ ಸ್ವತಂತ್ರ ಚುನಾವಣಾ ಆಯೋಗವನ್ನು ರಚಿಸಬೇಕು ಹಾಗೂ ಆಯೋಗಕ್ಕೆ ನೀಡಿರುವ ವಿಶೇಷ ಅಧಿಕಾರಗಳನ್ನು ಹಿಂಪಡೆಯಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.

ಇದರ ಜೊತೆಗೆ, ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದಾದ್ಯಂತ ಜನರು ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಪ್ರಜಾಸತ್ತಾತ್ಮಕ ಹಕ್ಕನ್ನು ಮರುಸ್ಥಾಪಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದೆ.

ಹಲವು ಸಂಘಟನೆಗಳ ಮುಖಂಡರು ಭಾಗಿ

ಪೋಸ್ಟರ್‌ ಮತ್ತು ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ದಲಿತ ಮುಖಂಡರಾದ ಎಚ್‌.ಕೆ. ಸಂದೇಶ್‌, ಈರೇಶ್‌ ಇರೇಹಳ್ಳಿ, ಟಿ.ಆರ್‌. ವಿಜಯ್‌ ಕುಮಾರ್‌, ಮಲ್ಲಿಗೆವಾಳ್‌ ದ್ಯಾವಪ್ಪ, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌, ಅರವಿಂದ್‌, ಪ್ರಕಾಶ್‌, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್‌.ಆರ್‌. ನವೀನ್‌ ಕುಮಾರ್‌, ಮುಸ್ಲಿಂ ಸಂಘಟನೆಗಳ ಮುಖಂಡರಾದ ಮುಬಷಿರ್‌ ಅಹಮದ್‌, ಅನ್ಸರ್‌, ಜಾವಿದ್‌ ಹುಸೇನ್‌ ಸೇರಿದಂತೆ ಹಲವರು ಉಪಸ್ಥಿತರಿದ್ದು ಮಾತನಾಡಿದರು.

ಅಕ್ಟೋಬರ್‌ 23ರಂದು ನಡೆಯಲಿರುವ ಮೆರವಣಿಗೆಯಲ್ಲಿ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟಕ್ಕೆ ಬಲ ತುಂಬಬೇಕು ಎಂದು ಒಕ್ಕೂಟದ ಮುಖಂಡರು ಕರೆ ನೀಡಿದ್ದಾರೆ.

ಇದನ್ನೂ ನೋಡಿ : 19 ವರ್ಷ ದುಡಿದರೂ ಖಾಯಂ ಇಲ್ಲ! ನ್ಯಾಯ ಕೇಳಿದ ವಿಶೇಷಚೇತನರ ಮೇಲೆ ಪೊಲೀಸರ ದಬ್ಬಾಳಿಕೆ? Janashakthi Media

Donate Janashakthi Media

Leave a Reply

Your email address will not be published. Required fields are marked *